ಮಂಗಳೂರು, ಜನವರಿ 23: ಮಂಗಳೂರು ಕೋಟೆಕಾರು ಬ್ಯಾಂಕ್ ದರೋಡೆಯಲ್ಲಿ ಶಾಮೀಲಾದ ಸ್ಥಳೀಯರಿಗೆ ರಾಜಕೀಯ ಬೆಂಬಲವಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬ್ಯಾಂಕ್ ದರೋಡೆಯಲ್ಲಿ ಸ್ಥಳೀಯರ ಕೈವಾಡವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಬಿಜೆಪಿ ಶಾಸಕ ಭರತ್ ಶೆಟ್ಟಿ ಗಂಭೀರ ಆರೋಪ ಮಾಡಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ನಮಗೆ ಮಾಹಿತಿ ಬಂದಿದೆ. ದರೋಡೆ ಪ್ರಕರಣದಲ್ಲಿ ಶೇಕಡಾ 100 ರಷ್ಟು ಸ್ಥಳೀಯರು ಇದ್ದಾರೆ. ದರೋಡೆಕೋರರನ್ನ ಬಂಧಿಸಿದ್ದಾರೆ ಆದರೆ ಪ್ಲಾನಿಂಗ್ ಮಾಡಿದವರನ್ನು, ಕುಮ್ಮಕ್ಕು ನೀಡಿದವರನ್ನು ಬಚಾವ್ ಮಾಡಲಾಗುತ್ತಿದೆ ಎಂದಿದ್ದಾರೆ.
ಸ್ಥಳೀಯರನ್ನು ಯಾರೋ ಬಚಾವ್ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಇದೆ. ನೈಜ ಆರೋಪಿಗಳನ್ನು ಬಯಲಿಗೆ ತನ್ನಿ. ದರೋಡೆಕೊರರಿಗೆ ರಾಜಕೀಯ ಬೆಂಬಲ ಇದೆ. ಅವರನ್ನು ರಕ್ಷಣೆ ಮಾಡುವ ಕಾರ್ಯ ನಡೆಯುತ್ತಿದೆ. ಬೇರೆ ಪ್ರಕರಣಗಳಲ್ಲಿ ಶಾಮೀಲಾದವರೂ ದರೋಡೆ ಪ್ರಕರಣದಲ್ಲಿದ್ದಾರೆ ಎಂದು ಭರತ್ ಶೆಟ್ಟಿ ಆರೋಪಿಸಿದ್ದಾರೆ.
ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ ಮಾಡಿದ ಮೂವರ ಬಂಧನ ಈಗಾಗಲೇ ಆಗಿದೆ. ಮುಂಬೈನ ಕಣ್ಣನ್ ಮಣಿ ಗುಂಡೇಟು ತಿಂದು ಪೊಲೀಸರ ವಶದಲ್ಲಿದ್ದರೆ, ಕಿಂಗ್ಪಿನ್ ತುಮಿಳುನಾಡಿನ ಮುರುಗನ್ ಡಿ ದೇವರ್, ಸಹಚರ ರಾಜೇಂದ್ರನ್ನನ್ನ ನಿನ್ನೆ ಮಂಗಳೂರಿಗೆ ಸ್ಥಳಾಂತರ ಮಾಡಲಾಗಿದೆ.
ನಿನ್ನೆ ತಮಿಳುನಾಡಿನ ತಿರುನನ್ವೇಲಿ ಜಿಲ್ಲೆಯ ಅಂಬಸಮುದ್ರಂ ಕೋರ್ಟ್ಗೆ ಆರೋಪಿಗಳನ್ನು ಹಾಜರುಪಡಿಸಲಾಗಿತ್ತು. ಈ ವೇಳೆ ಫಿಯೇಟ್ ಕಾರು, 2 ಪಿಸ್ತೂಲ್, 4 ಜೀವಂತ ಗುಂಡು, 3 ಲಕ್ಷ ನಗದು ಮತ್ತು 2 ಕೇಜಿ ಚಿನ್ನ ವಶಪಡಿಸಿಕೊಂಡಿದ್ದಾಗಿ ಪೊಲೀಸರು ಕೋರ್ಟ್ಗೆ ಮಾಹಿತಿ ನೀಡಿದ್ದರು. ಇಂದು ಮಂಗಳೂರು ಕೋರ್ಟ್ಗೆ ಹಾಜರುಪಡಿಸಿ ಮತ್ತೆ ಖಾಕಿ ವಶಕ್ಕೆ ಪಡೆಯಲಿದೆ. ಬಳಿಕ ಇಂದೇ ಕೋಟೆಕಾರು ಬ್ಯಾಂಕ್ನಲ್ಲಿ ಮಹಜರು ನಡೆಸೋ ಸಾಧ್ಯತೆಯಿದೆ. ಈ ಸಂದರ್ಭದಲ್ಲಿಯೇ ಗಂಭೀರ ಆರೋಪ ಕೇಳಿಬಂದಿದೆ.
ದರೋಡೆಯ ಮಾಸ್ಟರ್ ಪ್ಲಾನ್ ಮಾಡಿರೋ ಮುರುಗನ್ ದೇವರ್ ದರೋಡೆ ಇತಿಹಾಸವೇ ಭಯಾನಕವಾಗಿದೆ. ಈ ಹಿಂದೆಯೂ ಈತ ಕೋಟೆಕಾರು ಮಾದರಿಯಲ್ಲಿ ದರೋಡೆ ನಡೆಸಿದ್ದ ಮಾಹಿತಿ ಹೊರಬಿದ್ದಿದೆ. ಮುಂಬೈನ ನಟೋರಿಯಸ್ ಧಾರಾವಿ ಗ್ಯಾಂಗ್ನಲ್ಲಿಯೂ ಈತ ಸಕ್ರಿಯವಾಗಿದ್ದ.
ಇದನ್ನೂ ಓದಿ: ಕೋಟೆಕಾರು ಬ್ಯಾಂಕ್ ದರೋಡೆಕೋರನ ಕಾಲಿಗೆ ಪೊಲೀಸ್ ಗುಂಡು, ಕ್ರೈಮ್ ಸ್ಪಾಟ್ನಿಂದ ಟಿವಿ9 ವರದಿ
2016ರಲ್ಲಿ ನವಿ ಮುಂಬೈನ ಹಣಕಾಸು ಸಂಸ್ಥೆಯೊಂದಕ್ಕೆ ನುಗ್ಗಿ ಬರೋಬ್ಬರಿ 6 ಕೋಟಿ ರೂ. ಮೌಲ್ಯದ 20 ಕೆಜಿ ಚಿನ್ನಾಭರಣ ದರೋಡೆ ಮಾಡಿದ್ದ. ಅರ್ಪಿತ್ ರಾಜ್ ನಾಡಾರ್ ಮತ್ತು ಸುಬ್ರಹ್ಮಣ್ಯ ದೇವರ್ ಪ್ರಮುಖ ಆರೋಪಿಗಳಾಗಿದ್ದ ಈ ದರೋಡೆ ಕೇಸ್ನಲ್ಲಿ, ಮುರುಗನ್ ದೇವರ್ ಸೇರಿ ಒಟ್ಟು 7 ಕ್ರಿಮಿಗಳನ್ನ ಮುಂಬೈ ಪೊಲೀಸರು ಬಂಧಿಸಿದ್ದರು. ಆ ದರೋಡೆಯಲ್ಲೂ ಈ ಮುರುಗನ್ ತನ್ನ ಫಿಯೇಟ್ ಕಾರನ್ನೇ ಬಳಸಿ ಖದೀಮರನ್ನ ಪೊಲೀಸರಿಂದ ಪಾರು ಮಾಡಿದ್ದ. ಕೋಕಾ ಕಾಯ್ದೆಯಡಿ ಅರೆಸ್ಟ್ ಆಗಿ 2021ರ ಸೆಪ್ಟೆಂಬರ್ನಲ್ಲಿ ಮುಂಬೈ ಜೈಲಿನಿಂದ ಜಾಮೀನು ಮೇಲೆ ಬಿಡುಗಡೆಯಾಗಿದ್ದ. ಈ ಮುಂಬೈ ಜೈಲಿನಲ್ಲಿದ್ದಾಗಲೇ ಮಂಗಳೂರು ಮೂಲದ ಆರೋಪಿಯೋರ್ವನ ಸ್ನೇಹ ಸಂಪಾದಿಸಿದ್ದ ಮುರುಗನ್ ಆತ ನೀಡಿದ ಮಾಹಿತಿಯಂತೆಯೇ ಕೋಟೆಕಾರ್ ಬ್ಯಾಂಕ್ ದರೋಡೆಗೆ ಪ್ಲಾನ್ ಮಾಡಿದ್ದ ಅನ್ನೋದು ಈಗ ಬೆಳಕಿಗೆ ಬಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ