ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು(Praveen Nettar) ಕೊಲೆ ಪ್ರಕರಣದಲ್ಲಿ ಅನೇಕ ಬೆಚ್ಚಿಬೀಳಿಸುವ ಸಂಗತಿಗಳು ಹೊರ ಬೀಳುತ್ತಿವೆ. ಕೆಲ ದಿನಗಳ ಹಿಂದೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಲ್ಲಿಸಿದ್ದ ಚಾರ್ಜ್ಶೀಟ್ನಲ್ಲಿ ಅನೇಕ ವಿಚಾರಗಳನ್ನು ಪ್ರಸ್ತಾಪಿಸಲಾಗಿತ್ತು. ಸದ್ಯ ಈಗ ಈ ಪ್ರಕರಣದ ಪ್ರಮುಖ ಆರೋಪಿಗಳು ಸೌದಿ ಅರೇಬಿಯಾದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಮೊಹಮ್ಮದ್ ಶರೀಫ್, ಕೆ.ಎ.ಮಸೂದ್ ಎಂಬ ಇಬ್ಬರು ಪ್ರಮುಖ ಆರೋಪಿಗಳು ಸೌದಿ ಅರೇಬಿಯಾದಲ್ಲಿ ಕಂಡು ಬಂದಿದ್ದು ಮೊಹಮ್ಮದ್ ಮುಸ್ತಫಾ, ಎಂ.ಹೆಚ್.ತುಫೈಲ್, ಎಂ.ಆರ್.ಉಮರ್ ಫಾರೂಕ್, ಅಬೂಬಕರ್ ಸಿದ್ಧಿಕಿ ಎಂಬುವವರು ಅರಬ್ ದೇಶದಲ್ಲಿ ಪತ್ತೆಯಾಗಿದ್ದಾರೆ. ಸೌದಿಯಲ್ಲಿ ಆರೋಪಿಗಳನ್ನು ಬಂಧಿಸಲು ಎನ್‌ಐಎ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಆರೋಪಿಗಳು ಸೌದಿಯಲ್ಲಿ ಸೈಟ್ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ಈ 6 ಆರೋಪಿಗಳ ಸುಳಿವಿಗೆ ಒಟ್ಟು 24 ಲಕ್ಷ ಬಹುಮಾನ ಘೋಷಣೆ ಮಾಡಲಾಗಿತ್ತು.
ದಕ್ಷಿಣ ಕನ್ನಡ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿದ್ದ ಪ್ರವೀಣ್ ನೆಟ್ಟಾರು ಅವರನನ್ನು ಜುಲೈ 26 ರಂದು ಬೆಳ್ಳಾರೆಯಲ್ಲಿರವ ಅವರ ಕೋಳಿ ಅಂಗಡಿ ಬಳಿಯೇ ಹಂತಕರು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಇದು ಇಡೀ ರಾಜ್ಯಾದ್ಯಂತ ಕಾರ್ಯಕರ್ತರಲ್ಲಿ ಕಿಚ್ಚು ಹತ್ತಿಸಿತ್ತು. ಇದರ ಬಿಸಿಗೆ ಬಿಜೆಪಿ ರಾಜ್ಯ ಸರ್ಕಾರದ ಬುಡವೇ ಅಲುಗಾಡಿತ್ತು. ನಂತರ ಸರ್ಕಾರ ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಿತ್ತು.
ಪ್ರವೀಣ್ ಹತ್ಯೆಯಾಗಿದ್ದು ಮೂರನೇ ಯತ್ನದಲ್ಲಿ ಎನ್ನಲಾಗುತ್ತಿದೆ. ಪ್ರವೀಣ್ ಕೊಲೆಯಾಗೂ ಮೊದಲು ಎರಡು ಬಾರಿ ಹತ್ಯೆ ಯತ್ನ ನಡೆದಿತ್ತು. ಜು.23 ಮತ್ತು ಜು.24 ರಂದೇ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಜು.23 ರಂದು ಹತ್ಯೆ ಮಾಡಲು ಬೈಕ್ನಲ್ಲಿ ಬಂದಿದ್ದ ಹಂತಕರು ಅಂಗಡಿ ಬಳಿ ಜನ ನೋಡಿ ವಾಪಾಸ್ ಹೋಗಿದ್ದರು. ಜು.24 ರಂದು ಸಂಜೆ 4.30ಕ್ಕೆ ಕೊಲ್ಲಲು ಸಂಚು ರೂಪಿಸಿದ್ದು, ಅಂದು ಕೂಡ ವಿಫಲವಾಗಿತ್ತು. ಜುಲೈ 26 ರಂದು ಪಕ್ಕಾ ಪ್ಲಾನ್ ಮಾಡಿಕೊಂಡು ಜನರಿಲ್ಲದ ಕಡೆ ಬರುತ್ತಿದ್ದಂತೆ ಪ್ರವೀಣ್ ಮೇಲೆ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:52 am, Sat, 28 January 23