ಮಂಗಳೂರು, (ಜನವರಿ 23): ಮಸಾಜ್ ಪಾರ್ಲರ್ (Massage Parlor) ಮೇಲೆ ದಾಳಿ ನಡೆಸಿದ ಸಂಬಂಧ ರಾಮಸೇನೆ ಸಂಸ್ಥಾಪಕ ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಸಾದ್ ಅತ್ತಾವರ ನೇತೃತ್ವದ ಸಂಘಟನೆಯ ಹತ್ತು ಜನ ಕಾರ್ಯಕರ್ತರು ಬಿಜೈ ಕೆಎಸ್‍ಆರ್‌ಟಿಸಿ ಬಳಿಯ ಕಲರ್ಸ್ ಯೂನಿಸೆಕ್ಸ್ ಸೆಲೂನ್ ಮೇಲೆ ದಾಳಿ ನಡೆಸಿದ್ದರು. ಸೆಲೂನ್‍ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಕಾರ್ಯಕರ್ತರು ಆರೋಪಿಸಿದ್ದು, ಪೀಠೋಪಕರಣ ಧ್ವಂಸ ಮಾಡಿದ್ದರು. ಈ ಸಂಬಂಧ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿಸಿದ್ದು, ಬಳಿಕ ರಾಮಸೇನೆ ಸಂಘಟನೆ ಸಂಸ್ಥಾಪಕ ಪ್ರಸಾದ್ ಅತ್ತಾವರ್ ಹಾಗೂ 9ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಮಸಾಜ್ ಪಾರ್ಲರ್ ಮೇಲೆ ರಾಮಸೇನೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. BNS ಆಕ್ಟ್ 329(2), 324(5), 74, 351(3), 115(2), 109, 352, 190 ಅಡಿ ಪ್ರಕರಣ ದಾಖಲಾಗಿದ್ದು, ಒಟ್ಟು 14 ಅರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹರ್ಷ ರಾಜ್, ಮೋಹನ್ ದಾಸ್, ಪುರಂದರ, ಸಚಿನ್, ರವೀಶ್, ಸುಕೇಶ, ಅಂಕಿತ್, ಕಾಳಿ ಮುತ್ತು, ಅಭಿಲಾಷ್, ದೀಪಕ್ ವಿಘ್ನೇಶ್, ಶರಣ್ ರಾಜ್, ಪ್ರದೀಪ್ ಪೂಜಾರಿ, ಪ್ರಸಾದ್ ಅತ್ತಾವರ ಬಂಧಿತರು.
ಮಂಗಳೂರು ಹೊರವಲಯದ ಕುಡುಪು ಮನೆಯಲ್ಲಿದ್ದ ಅವರನ್ನು, ಅಲ್ಲಿಂದಲೇ ಪೊಲೀಸರು ಅವರನ್ನು ಎಳೆದೊಯ್ದಿದ್ದಾರೆ. ಇದಕ್ಕೂ ಮುನ್ನ ಪ್ರಸಾದ್ ಅತ್ತಾವರ ನೇತೃತ್ವದ ಸಂಘಟನೆಯ ಹತ್ತು ಜನ ಕಾರ್ಯಕರ್ತರು ಬಿಜೈ ಕೆಎಸ್‍ಆರ್‌ಟಿಸಿ ಬಳಿಯ ಕಲರ್ಸ್ ಯೂನಿಸೆಕ್ಸ್ ಸೆಲೂನ್ ಮೇಲೆ ದಾಳಿ ನಡೆಸಿದ್ದರು. ಸೆಲೂನ್‍ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಕಾರ್ಯಕರ್ತರು ಆರೋಪಿಸಿದ್ದರು. ದಾಳಿ ವೇಳೆ, ನಾಲ್ಕು ಜನ ಯುವತಿಯರು ಹಾಗೂ ಓರ್ವ ವ್ಯಕ್ತಿ ಸೆಲೂನ್‍ನಲ್ಲಿ ಇದ್ದರು. ಈ ವೇಳೆ ವ್ಯಕ್ತಿಯ ಮೇಲೆ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಅಲ್ಲದೇ ಪೀಠೋಪಕರಣ ಧ್ವಂಸ ಮಾಡಿದ್ದರು. ಬಳಿಕ ಕಾನೂನು ಸುವ್ಯವಸ್ಥೆ ಡಿಸಿಪಿ ಸಿದ್ದಾರ್ಥ್ ಗೋಯಲ್ ಅವರು ಮಸಾಜ್ ಪಾರ್ಲರ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಮಸಾಜ್ ಸೆಂಟರ್ ಮೇಲೆ ರಾಮಸೇನೆ ದಾಳಿಮಾಡಿ ಪೀಠೋಪಕರಣ ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದು, ರಾಮಸೇನೆ ಹೆಸರಿನಲ್ಲಿ ಗೂಂಡಾಗಿರಿ ಮಾಡುವ ಕೆಲಸ ಆಗ್ತಿದೆ. ದೇವರ ಹೆಸರು ಹೇಳಿಕೊಂಡು ಶ್ರೀರಾಮನಿಗೆ ಕಳಂಕ ತರುವ ಕೆಲಸ ಮಾಡಬೇಡಿ. ಯಾರಿಗೂ ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರವಿಲ್ಲ. ರಾಮಸೇನೆ ಹೆಸರಲ್ಲಿ ಇಂತಹ ದಾಂದಲೆ ಮಾಡುವುದು ಸರಿಯಲ್ಲ. ಏನಾದರೂ ಅಕ್ರಮ ನಡೆಯುತ್ತಿದ್ದರೆ ಪೊಲೀಸರ ಗಮನಕ್ಕೆ ತಂದು ದೂರು ನೀಡಬೇಕು ಎಂದಿದ್ದಾರೆ.
ಇವರೇ ನುಗ್ಗಿ ದಾಂಧಲೆ ಮಾಡಿ ಗೂಂಡಾಗಿರಿ ಮಾಡುವುದಲ್ಲ. ಕಾನೂನು ಸುವ್ಯವಸ್ಥೆಯನ್ನ ಎಲ್ಲರು ಪಾಲಿಸಬೇಕು. ಇಂತವರ ಮೇಲೆ ಕಟ್ಟುನಿಟ್ಟಾದ ಕ್ರಮಕ್ಕೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ದೇವರ ಹೆಸರು ಇಟ್ಟುಕೊಂಡು ಇಂತಹ ಕೃತ್ಯ ಮಾಡೋದು ರಾಮನಿಗೆ ಅಗೌರವ. ಹಿಂದೂ ಸಂಘಟನೆಗಳು ಕೂಡಾ ಇದನ್ನ ಖಂಡಿಸಬೇಕು. ನೈತಿಕ ಪೊಲೀಸ್ ಗಿರಿ ಮಾಡಿ ಕಾನೂನು ಕೈಗೆತ್ತಿಕೊಂಡರೆ ಅಂತವರ ವಿರುದ್ಧ ಕ್ರಮವಹಿಸುತ್ತೇವೆ. ಈ ರೀತಿ ಮಾಡಿಕೊಂಡು ಹೋದರೆ ಮುಂದೆ ಮಂಗಳೂರಿನ ಅಭಿವೃದ್ಧಿಗೆ ಹಿನ್ನೆಡೆಯಾಗಲಿದೆ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ ಆಗ್ತಿದೆ. ಕೆಲವು ಸಂಘಟನೆಗಳು ಗಲಾಟೆ ಮಾಡಿ ಗೊಂದಲ ಸೃಷ್ಠಿಸುವ ಮೂಲಕ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನ ಮಾಡ್ತಿದ್ದಾರೆ ಎಂದು ಹೇಳಿದರು.
Published On - 6:46 pm, Thu, 23 January 25