ಮಂಗಳೂರಿನಲ್ಲಿ ಅಲೆಗಳ ಅಬ್ಬರ, ಕಡಲಕೊರೆತ: ಉಚ್ಚಿಲ-ಬಟ್ಟಪಾಡಿ ರಸ್ತೆ ಸಂಪರ್ಕ ಕಡಿತ
ಬಟ್ಟಪಾಡಿಯಲ್ಲಿ ಕಡಲ ತೀರದಲ್ಲಿ ಅಲೆಗಳ ಅಬ್ಬರಕ್ಕೆ ರಸ್ತೆ ಕೊಚ್ಚಿಕೊಂಡು ಹೋಗಿದೆ.
ಮಂಗಳೂರು: ನಗರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಕಡಲಕೊರೆತದ (Sea Erosion) ಸಮಸ್ಯೆ ಹೆಚ್ಚಾಗಿದೆ. ಉಚ್ಚಿಲ, ಬಟ್ಟಪಾಡಿ, ಉಳ್ಳಾಲ ಸೇರಿದಂತೆ ಹಲವೆಡೆ ಕಡಲ ತೀರದಲ್ಲಿ ಅಲೆಗಳ ಅಬ್ಬರ ಕಾಣಿಸಿಕೊಂಡಿದೆ. ಬಟ್ಟಪಾಡಿಯಲ್ಲಿ ಕಡಲ ತೀರದಲ್ಲಿ ಅಲೆಗಳ ಅಬ್ಬರಕ್ಕೆ ರಸ್ತೆ ಕೊಚ್ಚಿಕೊಂಡು ಹೋಗಿದೆ. ರಸ್ತೆ ಸಂಪರ್ಕವನ್ನು ಸಂಪೂರ್ಣವಾಗಿ ಕಳೆದುಕೊಂಡಿರುವ ಬಟ್ಟಪಾಡಿ ಗ್ರಾಮವು ದ್ವೀಪದಂತೆ ಆಗಿದೆ. 30ಕ್ಕೂ ಅಧಿಕ ಮನೆಗಳಲ್ಲಿ ವಾಸವಿರುವವರು ಪರದಾಡುತ್ತಿದ್ದಾರೆ. ಸಮುದ್ರ ಸಮೀಪವಿರುವ ಮನೆಗಳಿಗೆ ಭಾರಿ ಗಾತ್ರದ ಅಲೆಗಳು ಅಪ್ಪಳಿಸುತ್ತಿವೆ. ಉಚ್ಚಿಲದ ಕೆಲ ಖಾಸಗಿ ಬೀಚ್ ರೆಸಾರ್ಟ್ಗಳ ತಡೆಗೋಡೆಗಳು ನೀರುಪಾಲಾಗಿವೆ.
ಈ ನಡುವೆ ಉಚ್ಚಿಲ-ಬಟ್ಟಪಾಡಿ ಮಧ್ಯದ ರಸ್ತೆ ಸಂಪರ್ಕ ಕಡಿತಗೊಂಡು ಗ್ರಾಮಸ್ಥರಿಗೆ ಸಂಕಷ್ಟ ಎದುರಾಗಿದೆ. ನಮ್ಮ ಸಮಸ್ಯೆ ಕೇಳಲು ಅಧಿಕಾರಿಗಳು, ಜನಪ್ರತಿನಿಧಿಗಳು ಬರುತ್ತಿಲ್ಲ. ಕಡಲ ತೀರದಲ್ಲಿ ಕಲ್ಲು ಹಾಕಿ ಕಡಲಕೊರತೆ ನಿಯಂತ್ರಿಸುವ ಕೆಲಸ ಮಾಡುತ್ತಿಲ್ಲ. ಸ್ಥಳೀಯ ಪಂಚಾಯಿತಿಯವರು ಬಲವಂತವಾಗಿ ಸಹಿ ಪಡೆದಿದ್ದಾರೆ. ಮನೆ ಖಾಲಿ ಮಾಡಿ ಸರ್ಕಾರಿ ಶಾಲೆಗೆ ಹೋಗಿ ಎನ್ನುತ್ತಿದ್ದಾರೆ. ಪ್ರಾಣಕ್ಕೆ ಅಪಾಯವಾದರೆ ನಾವು ಜವಾಬ್ದಾರರಲ್ಲ ಎಂದು ಸಹಿ ಪಡೆದಿದ್ದಾರೆ. ಸದ್ಯ ರಸ್ತೆ ಸಂಪರ್ಕ ಕೂಡ ಕಡಿತಗೊಂಡಿದ್ದು, ವಾಹನದಲ್ಲಿ ಹೋಗಲು ದಾರಿ ಇಲ್ಲದಂತಾಗಿದೆ. ಹಲವು ವರ್ಷಗಳಿಂದ ಟ್ಯಾಕ್ಸ್ ಕಟ್ಟಿ ನಾವು ಇಲ್ಲಿ ಇದ್ದೇವೆ. ಆದರೆ ಕಡಲ್ಕೊರೆತಕ್ಕೆ ನಮಗೆ ಸಮಸ್ಯೆ ಆದಾಗ ಯಾರೊಬ್ಬರೂ ನಮ್ಮ ಸಮಸ್ಯೆ ಕೇಳುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರವಾರ ಪಾರ್ಕ್ ಜಲಾವೃತ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರಿದಿದೆ. ನಿರಂತರ ಮಳೆಯಿಂದಾಗಿ ಕಾರವಾರದ ಬ್ರಾಹ್ಮಣಗಲ್ಲಿ ಪಾರ್ಕ್ ಜಲಾವೃತಗೊಂಡಿದೆ. ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು, ಜನರು ಆತಂಕಗೊಂಡಿದ್ದಾರೆ. ಜುಲೈ 3ರವರೆಗೂ ಜಿಲ್ಲೆಯಲ್ಲಿ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.
ಕರ್ನಾಟಕದಲ್ಲಿ ಭಾರಿ ಮಳೆ ಸಾಧ್ಯತೆ
ರಾಜ್ಯದಲ್ಲಿ ಮುಂದಿನ 48 ಗಂಟೆಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅರಬ್ಬಿ ಸಮುದ್ರದಲ್ಲಿ ಮೇಲ್ಮೆ ಸುಳಿಗಾಳಿ ಹಿನ್ನೆಲೆ, ಇನ್ನು 5 ದಿನ ರಾಜ್ಯದಲ್ಲಿ ಭಾರಿಮಳೆ ಸುರಿಯಲಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹೇಳಲಾಗಿದೆ. ಕರ್ನಾಟಕದ ಕರಾವಳಿಯಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡುಭಾಗದಲ್ಲಿ ಹೆಚ್ಚುಮಳೆಯಾಗುವ ಸಾಧ್ಯತೆ ಇದೆ. ರಾಜಧಾನಿ ಬೆಂಗಳೂರಿನಲ್ಲೂ ಗುರುವಾರದಿಂದಲೇ ಮಳೆ ಶುರುವಾಗಿದ್ದು, ಇಂದು ಕೂಡ ಮೋಡಕವಿದ ವಾತಾವರಣವಿದ್ದು, ಮಳೆ ಸುರಿಯುವ ಸಾಧ್ಯತೆ ಇದೆ.
Published On - 3:40 pm, Fri, 1 July 22