ಅಮಿತ್ ಶಾ ಕಾರ್ಯಕ್ರಮಕ್ಕೆ ಬಿಗಿ ಭದ್ರತೆ, 11 ಕೆಎಸ್ಆರ್ಪಿ ತುಕಡಿ, 1 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ: ಎಡಿಜಿಪಿ ಅಲೋಕ್
ವಿಧಾನಸಭಾ ಚುನಾವಣೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆ ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಭದ್ರತೆ ವಿಚಾರವಾಗಿ ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳೂರು: ಕರ್ನಾಟಕದ ಕರಾವಳಿಯ ಮತಪೆಟ್ಟಿಗೆ ಮೇಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹದ್ದಿನ ಕಣ್ಣಿಟ್ಟಿದ್ದಾರೆ. ಸರ್ಕಾರಿ ಕಾರ್ಯಕ್ರಮ ನೆಪದಲ್ಲಿ ಮತಬೇಟೆ ನಡೆಸಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ನಾಳೆ(ಫೆ. 11) ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಆಯೋಜಿಸಿರುವ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಮಿತ್ ಶಾ ಕಾರ್ಯಕ್ರಮಕ್ಕೆ ಬಿಗಿ ಭದ್ರತೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತಾಗಿ ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಪ್ರತಿಕ್ರಿಯೆ ನೀಡಿದ್ದು, ಸಚಿವ ಅಮಿತ್ ಶಾ ಮೊದಲು ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರಮಂಗಲಕ್ಕೆ ಭೇಟಿ ನೀಡಲಿದ್ದಾರೆ. ನಂತರ ವಿವೇಕಾನಂದ ಕಾಲೇಜು ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎಂದರು.
ನಂತರ ಮಂಗಳೂರಿನಲ್ಲಿ ಪಕ್ಷದ ಮುಖಂಡರ ಸಭೆಯಲ್ಲಿ ಶಾ ಭಾಗಿಯಾಗಲಿದ್ದು, ಮಂಗಳೂರು ನಗರ, ಪುತ್ತೂರು ತಾಲೂಕಿನಾದ್ಯಂತ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಪುತ್ತೂರಿನ ಕಾರ್ಯಕ್ರಮಗಳಿಗೆ ಡಿಐಜಿ ಚಂದ್ರಗುಪ್ತ ಮತ್ತು ಮಂಗಳೂರಿನ ಕಾರ್ಯಕ್ರಮಕ್ಕೆ ಆಯುಕ್ತ ಶಶಿಕುಮಾರ್ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದೆ. 11 ಕೆಎಸ್ಆರ್ಪಿ ತುಕಡಿ, 1 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಭದ್ರತೆಗಾಗಿ ಹೊರಜಿಲ್ಲೆಗಳಿಂದ ಪೊಲೀಸ್ ಅಧಿಕಾರಿಗಳನ್ನು ಕರೆಸಲಾಗಿದೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.
ಇದನ್ನೂ ಓದಿ: Amit Shah: ಪುತ್ತೂರು, ಮಂಗಳೂರಿಗೆ ಫೆ. 11ಕ್ಕೆ ಅಮಿತ್ ಶಾ ಭೇಟಿ; ಬಿಜೆಪಿ ಭದ್ರಕೋಟೆಯಲ್ಲಿ ಕೇಸರಿ ಕಹಳೆ
ಅಮಿತ್ ಶಾ ಮಂಗಳೂರು ಭೇಟಿ ವೇಳಾಪಟ್ಟಿ ಹೀಗಿದೆ
ಫೆಬ್ರುವರಿ 11, ಶನಿವಾರ ಮಧ್ಯಾಹ್ನ 2.15 ಕಣ್ಣೂರು ವಿಮಾನ ನಿಲ್ದಾಣಕ್ಕೆ ಅಮಿತ್ ಶಾ ಆಗಮಿಸಲಿದ್ದಾರೆ. ಮಧ್ಯಾಹ್ನ 2.45 ಕಣ್ಣೂರಿನಿಂದ ಬಿಎಸ್ಎಫ್ ಹೆಲಿಕಾಪ್ಟರ್ ಮೂಲಕ ಪುತ್ತೂರಿನ ಈಶ್ವರ ಮಂಗಲಕ್ಕೆ ಆಗಮನ. ಮಧ್ಯಾಹ್ನ 2.50 ಈಶ್ವರಮಂಗಲ ದೇವಸ್ಥಾನಕ್ಕೆ ಅಮಿತ್ ಶಾ ಭೇಟಿ ಮಧ್ಯಾಹ್ನ 3.35 ಹೆಲಿಕಾಪ್ಟರ್ ಮೂಲಕ ಈಶ್ವರ ಮಂಗಲದಿಂದ ಪುತ್ತೂರಿಗೆ ಆಗಮಿಸುತ್ತಾರೆ. ಮಧ್ಯಾಹ್ನ 3.40: ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವದ ಸಮಾರಂಭದಲ್ಲಿ ಭಾಗಿ ಸಂಜೆ 6.00: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಮಿತ್ ಶಾ ಆಗಮನ ಸಂಜೆ 6:15 ರಿಂದ 8:00 : ಏರ್ಪೋರ್ಟ್ ಸಮೀಪ ಬಿಜೆಪಿ ಪ್ರಮುಖರೊಂದಿಗೆ ಆಂತರಿಕ ಸಭೆ ರಾತ್ರಿ 8:15 ಮಂಗಳೂರು ಏರ್ಪೋರ್ಟ್ನಿಂದ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ.
ಇದನ್ನೂ ಓದಿ: ಫೆಬ್ರವರಿ 11ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಅಮಿತ್ ಶಾ ಭೇಟಿ ಹಿನ್ನಲೆ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ
ಅಮಿತ್ ಶಾ ಭೇಟಿ ಬಿಜೆಪಿಗೆ ಬೂಸ್ಟ್
ಇನ್ನು ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇದ್ದು, ಬಿಜೆಪಿ ಚಾಣಾಕ್ಯ ಅಮಿತ್ ಶಾ ಭೇಟಿ ಬಿಜೆಪಿಗೆ ಬೂಸ್ಟ್ ನೀಡುವುದಂತು ಸುಳ್ಳಲ್ಲ. ಈ ಹಿಂದೆ ಜನವರಿ 28 ರಂದು ಧಾರವಾಡದಲ್ಲಿ ಭರ್ಜರಿ ರೋಡ್ ಶೋ ನಡೆಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಬಗ್ಗೆ ಹರಿಹಾಯ್ದಿದ್ದರು. ಸಿದ್ದರಾಮಯ್ಯ ಸರ್ಕಾರ ಇದ್ದಾಗ ಕಾಂಗ್ರೆಸ್ ಹೈ ಕಮಾಂಡ್ ಕರ್ನಾಟಕವನ್ನ ಎಟಿಎಂ ಮಾಡಿಕೊಂಡಿತ್ತು ಎಂದು ಸಿದ್ದರಾಮಯ್ಯ ಸರ್ಕಾರ ವಿರುದ್ದ ಟೀಕೆ ಮಾಡಿದ್ದರು. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಬರುತ್ತಿದ್ದು ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೋಳ್ಳುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.