ಮಂಗಳೂರು: ಕಳ್ಳತನ ಕೇಸ್ ಆರೋಪಿ ಕಸ್ಟಡಿಯಲ್ಲೇ ಸಾವು, ಪ್ರಕರಣ ತನಿಖೆ ಕೈಗೆತ್ತಿಕೊಂಡ CID
ಸೆಲ್ನಲ್ಲಿದ್ದ ಇಬ್ಬರು ಆರೋಪಿಗಳ ಪೈಕಿ ರಾಜೇಶ್ಗೆ ಎದೆನೋವು ಕಾಣಿಸಿಕೊಂಡಿದೆ. ಪೊಲೀಸರು ತಕ್ಷಣ ಆತನನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಿಲಿಸಿದ್ದು, ತಪಾಸಣೆ ನಡೆಸಿದ ವೈದ್ಯರು ರಾಜೇಶ್ ಮೃತಪಟ್ಟಿರೋದಾಗಿ ಹೇಳಿದ್ದಾರೆ.
ಮಂಗಳೂರು: ಕಳ್ಳತನ ಕೇಸ್ನಲ್ಲಿ ಅರೆಸ್ಟ್ ಆದ ಆರೋಪಿ ಕಸ್ಟಡಿಯಲ್ಲೇ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದ್ದು ಈ ಪ್ರಕರಣ ಈಗ ಸಿಐಡಿಗೆ(CID) ಹೋಗಿದೆ. ಕುಡಿತಕ್ಕೆ ದಾಸರಾಗಿದ್ದ ಇಬ್ಬರು ಕಳ್ಳರು ತಮ್ಮ ಚಟ ಹೆಚ್ಚಾದಂತೆ ಮದ್ಯ ಖರೀದಿಗಾಗಿ ಕಳ್ಳತನಕ್ಕೆ ಇಳಿದಿದ್ದು ಈ ವೇಳೆ ಪೊಲೀಸರ ಕೈಗೆ ತಗಲಾಕಿಕೊಂಡಿದ್ರು. ಇಬ್ಬರ ಪೈಕಿ ಓರ್ವ ಪೊಲೀಸ್ ಕಸ್ಟಡಿಯಲ್ಲಿರೋವಾಗ್ಲೇ ಸಾವನ್ನಪ್ಪಿದ್ದಾನೆ. ಮಂಗಳೂರು ನಗರದ ಉರ್ವ ನಿವಾಸಿ ಆರೋಪಿ ರಾಜೇಶ್(32) ಮೃತ.
ಮಂಗಳೂರು ನಗರದ ಉರ್ವ ನಿವಾಸಿ ಮೃತ ಆರೋಪಿ ರಾಜೇಶ್, ಕುಡಿತಕ್ಕೆ ದಾಸನಾಗಿದ್ದ. ಈತ ದುಡ್ಡಿಗಾಗಿ ಕಳ್ಳತನಕ್ಕಿಳಿದಿದ್ದ. ಫೆಬ್ರವರಿ 18 ಶುಕ್ರವಾರ ಬೆಳಗ್ಗಿನ ಜಾವ 3.30ರ ವೇಳೆಗೆ ಸಹಚರನ ಜೊತೆ ನಗರದ ಜ್ಯೋತಿ ಸರ್ಕಲ್ ಬಳಿ ಕಳ್ಳತನಕ್ಕೆ ಯತ್ನಿಸಿದ್ದ. ಸ್ಮಾರ್ಟ್ ಸಿಟಿ ಕಾಮಗಾರಿಗೆ ತಂದಿಟ್ಟಿದ್ದ ಕಬ್ಬಿಣದ ಸರಳನ್ನ ಕದ್ದೊಯ್ಯಲು ಮುಂದಾಗಿದ್ದ. ಈ ವೇಳೆ ಗಸ್ತಲಿದ್ದ ಪೊಲೀಸರು ಇದನ್ನ ಗಮನಿಸಿದ್ದು, ಠಾಣೆಗೆ ಕರೆದೊಯ್ದು ಇಬ್ಬರನ್ನೂ ವಿಚಾರಣೆ ನಡೆಸಿದ್ದಾರೆ. ಆದ್ರೆ ದುರ್ದೈವ ಅಂದ್ರೆ ಪೊಲೀಸ್ ಕಸ್ಟಡಿಯಲ್ಲಿರೋವಾಗ್ಲೇ ರಾಜೇಶ್ ಸಾವನ್ನಪ್ಪಿದ್ದಾನೆ.
ಸೆಲ್ನಲ್ಲಿದ್ದ ಇಬ್ಬರು ಆರೋಪಿಗಳ ಪೈಕಿ ರಾಜೇಶ್ಗೆ ಎದೆನೋವು ಕಾಣಿಸಿಕೊಂಡಿದೆ. ಪೊಲೀಸರು ತಕ್ಷಣ ಆತನನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಿಲಿಸಿದ್ದು, ತಪಾಸಣೆ ನಡೆಸಿದ ವೈದ್ಯರು ರಾಜೇಶ್ ಮೃತಪಟ್ಟಿರೋದಾಗಿ ಹೇಳಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆಗೆ ಮಂಗಳೂರು ಕಮಿಷನರ್ ಎನ್.ಶಶಿಕುಮಾರ್ ಭೇಟಿ ನೀಡಿದ್ದು, ಘಟನೆಯ ಮಾಹಿತಿ ಪಡೆದಿದ್ದಾರೆ.
ಇನ್ನು ಪೊಲೀಸ್ ಕಸ್ಟಡಿಯಲ್ಲಿದ್ದ ರಾಜೇಶ್ ಸಾವನ್ನಪ್ಪಿರೋ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಹೇಗೆ ಸಾವು ಸಂಭವಿಸಿತು ಅನ್ನೋ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಮನವಿ ಮಾಡಿದ್ದು, ಬಂದರು ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಮೃತ ರಾಜೇಶ್ ಕುಟುಂಬಸ್ಥರ ಆರೋಪದ ಬಗ್ಗೆ ಪ್ರತಿಕ್ರಿಯಿಸಿರೋ ಪೊಲೀಸ್ ಆಯುಕ್ತ ಶಶಿಕುಮಾರ್, ಎಸಿಪಿ ಮಹೇಶ್ ಕುಮಾರ್ ನೇತ್ರತ್ವದಲ್ಲಿ ತನಿಖೆಗೆ ಆದೇಶಿಸಿರೋದಾಗಿ ತಿಳಿಸಿದ್ದಾರೆ.
ಇದರ ಜೊತೆಗೆ ಕೇಸ್ನಲ್ಲಿ ಸಿಐಡಿ ಎಂಟ್ರಿಯೂ ಆಗಿದ್ದು, ಬೆಂಗಳೂರಿನಿಂದ ಬಂದ ಅಧಿಕಾರಿಗಳ ತಂಡ ಕೇಸ್ ಬಗ್ಗೆ ತನಿಖೆಗೆ ಇಳಿದಿದೆ. ಹೀಗಾಗಿ ರಾಜೇಶ್ ಸಾವು ಸಂಭವಿಸಿದ್ದೇಗೆ ಅನ್ನೋದು ಸಂಪೂರ್ಣ ತನಿಖೆಯ ಬಳಿಕವೇ ಬಹಿರಂಗವಾಗಬೇಕಿದೆ.
ವರದಿ: ಪೃಥ್ವಿರಾಜ್ ಬೊಮ್ಮನಕೆರೆ, ಟಿವಿ9 ಮಂಗಳೂರು
ಇದನ್ನೂ ಓದಿ: ಸಚಿವ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಮುಂದುವರಿದ ಕಾಂಗ್ರೆಸ್ ನಾಯಕರ ಧರಣಿ