ಮಂಗಳೂರು: ವಿಟ್ಲದಲ್ಲಿ ಗ್ರಾನೈಟ್ ಸಾಗಿಸುತ್ತಿದ್ದ ಲಾರಿ ಕಟ್ಟಡಕ್ಕೆ ಡಿಕ್ಕಿ, ಓರ್ವ ಸಾವು, ಮೂವರು ಗಂಭೀರ
ಗ್ರಾನೈಟ್ ಚಪ್ಪಡಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿ ಕಟ್ಟಡವೊಂದಕ್ಕೆ ಢಿಕ್ಕಿ ಹೊಡೆದು ಓರ್ವ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪ ನಡೆದಿದೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಂಟ್ವಾಳ, ಅಕ್ಟೋಬರ್ 5: ಗ್ರಾನೈಟ್ ಚಪ್ಪಡಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿ ಕಟ್ಟಡವೊಂದಕ್ಕೆ ಡಿಕ್ಕಿ (Accident) ಹೊಡೆದು ಓರ್ವ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕರೋಪಾಡಿ ಗ್ರಾಮದ ಒಡಿಯೂರು ಎಂಬಲ್ಲಿ ಬುಧವಾರ ನಡೆದಿದೆ.
ಮೃತರನ್ನು ಬಿಹಾರ ಮೂಲದ ಕೂಲಿ ಕಾರ್ಮಿಕ ಶುಭಚಂದ್ರ ಘಾಟವರ್ (60) ಎಂದು ಗುರುತಿಸಲಾಗಿದೆ. ಬಿಹಾರ ಮೂಲದ ಪವನ್, ಕಲ್ಲಡ್ಕದ ಆದಂ ಮತ್ತು ಅವರ ಪುತ್ರ ಅರ್ಷದ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದನ್ನೂ ಓದಿ: ಮಂಗಳೂರು: ಮಳೆ ಬಂತೆಂದರೆ ಕಲ್ಲಡ್ಕ ಪೇಟೆ ಕೆಸರುಮಯ, ವಾಹನ ಸಂಚಾರಕ್ಕೆ ಪರದಾಟ
ಬೆಂಗಳೂರಿನಿಂದ ವಿಟ್ಲ ಸಮೀಪದ ಶಾಲೆಗೆ ಮಾರ್ಬಲ್ ಸ್ಲ್ಯಾಬ್‌ಗಳನ್ನು ಸಾಗಿಸುತ್ತಿದ್ದ ಟ್ರಕ್ ಶಾಲೆ ಸಮೀಪ ಇರುವಂತೆಯೇ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕಟ್ಟಡದ ಗೋಡೆಗೂ ಸಾಕಷ್ಟು ಹಾನಿಯಾಗಿದೆ.
ಹಿಂದೆ ತುಂಬಿದ್ದ ಮಾರ್ಬಲ್‌ಗಳು ಡ್ರೈವರ್‌ನ ಕ್ಯಾಬಿನ್‌ಗೆ ಜಾರಿದೆ. ಅಪಘಾತದ ಪರಿಣಾಮ ಎಷ್ಟು ತೀವ್ರವಾಗಿತ್ತು ಎಂದರೆ 100 ಮೀಟರ್‌ಗೂ ಹೆಚ್ಚು ಪ್ರದೇಶದಲ್ಲಿ ಮಾರ್ಬಲ್‌ಗಳು ಪುಡಿ ರೂಪದಲ್ಲಿ ಹರಡಿಕೊಂಡಿವೆ. ಗಾಯಾಳುಗಳ ಪೈಕಿ ಒಬ್ಬರ ಸೊಂಟಕ್ಕೆ ತೀವ್ರ ಗಾಯವಾಗಿದ್ದು, ಉಳಿದ ಇಬ್ಬರ ಕಾಲಿಗೆ ಗಂಭೀರ ಗಾಯಗಳಾಗಿವೆ. ಘಟನೆ ಸಂಬಂಧ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ