ಕರಾವಳಿಯಲ್ಲಿ ಕಾರ್ಣಿಕ ಮೆರೆದ ಕೊರಗಜ್ಜ: ಅನಾರೋಗ್ಯದಿಂದ ಗುಣಮುಖನಾದ ಮಗ, ಹರಕೆ ಸಲ್ಲಿಸಿದ ಉಕ್ರೇನ್ ಕುಟುಂಬ
ಜನ್ಮಾಷ್ಟಮಿಯ ಸಂದರ್ಭ ನಡೆದ ಕೊರಗಜ್ಜನ ಕೋಲದಲ್ಲಿ ಮಗನ ಅನಾರೋಗ್ಯಕ್ಕೆ ಪರಿಹಾರ ನೀಡುವಂತೆ ಉಕ್ರೇನ್ ದಂಪತಿ ಕೋರಿಕೊಂಡಿದ್ದರು. ಈ ವೇಳೆ ಕೊರಗಜ್ಜನಿಗೆ ಅಗೇಲು ಸೇವೆ ನೀಡುವುದಾಗಿ ಹರಕೆ ಹೇಳಿದ್ದರು.
ಮಂಗಳೂರು: ಚಿತ್ರರಂಗದಲ್ಲೇ ದೊಡ್ಡ ಮಟ್ಟಿಗೆ ಸದ್ದು ಮಾಡಿದ ಕಾಂತಾರ(Kantara) ಸಿನಿಮಾ ನಂತರ ಜನರಲ್ಲಿ ದೈವಾರಾಧನೆ(Tulunadu Daivaradhane) ಬಗೆಗಿನ ಆಸಕ್ತಿ ಹೆಚ್ಚಾಗಿದೆ. ದೈವಾರಾಧನೆ, ಭೂತಾರಾಧನೆಯನ್ನು ಜನ ಗೌರವಿಸಲು, ನಂಬಲು ಆರಂಭಿಸಿದ್ದಾರೆ. ಇದರ ನಡುವೆ ಮಗನ ಅನಾರೋಗ್ಯದ ಹಿನ್ನೆಲೆ ವಿದೇಶಿ ಕುಟುಂಬವೊಂದು ಕೊರಗಜ್ಜನಿಗೆ(Koragajja) ಹರಕೆ ಹೊತ್ತ ಘಟನೆ ನಡೆದಿದ್ದು ಕೊರಗಜ್ಜನ ಪವಾಡಕ್ಕೆ ಬೆರಗಾಗಿದೆ.
ಉಕ್ರೇನ್ ಪ್ರಜೆಗಳಾದ ಆಂಡ್ರ್ಯೋ ಮತ್ತು ಆತನ ಪತ್ನಿ ಎಲೆನಾ ತಮ್ಮ ಮಗ ಮ್ಯಾಕ್ಸಿಂಗಾಗಿ ಹರಕೆ ಹೊತ್ತಿದ್ದಾರೆ. ತುಳುನಾಡಿನ ಕಾರ್ಣಿಕ ಆರಾಧ್ಯ ದೈವ ಕೊರಗಜ್ಜನ ಕೋಲದಲ್ಲಿ ಉಕ್ರೇನ್ ನ ಕುಟುಂಬ ಮಗುವಿನ ಆರೋಗ್ಯಕ್ಕಾಗಿ ಹರಕೆ ಹೇಳಿದ್ದಾರೆ. ಆಂಡ್ರ್ಯೋ ದಂಪತಿಯ 6 ವರ್ಷದ ಮಗ ಮ್ಯಾಕ್ಸಿಂ, ಹೈ ಶುಗರ್ ನಿಂದ ಬಳಲುತ್ತಿದ್ದಾನೆ. ಮಗನ ಅನಾರೋಗ್ಯದ ಹಿನ್ನೆಲೆ 3 ತಿಂಗಳ ಹಿಂದೆ ಉಕ್ರೇನ್ ನಿಂದ ಭಾರತಕ್ಕೆ ಈ ಕುಟುಂಬ ಪ್ರವಾಸ ಕೈಗೊಂಡಿತ್ತು. ನಾಡಿ ನೋಡಿ ಔಷಧಿ ಕೊಡುವ ಮಂಗಳೂರಿನ ಭಕ್ತಿ ಭೂಷಣ್ ದಾಸ್ ಅವರನ್ನು ಈ ಕುಟುಂಬ ಭೇಟಿ ಮಾಡಿದೆ. ಸದ್ಯ ಈಗ 6 ವರ್ಷದ ಮ್ಯಾಕ್ಸಿಂ ಕಳೆದ ಮೂರು ತಿಂಗಳಿಂದ ಭಕ್ತಿ ಭೂಷಣ್ ದಾಸ್ ಅವರ ಮಂಗಳೂರು ಹೊರವಲಯದ ಬಂಟ್ವಾಳದ ಕುಮ್ಡೇಲು ಎಂಬಲ್ಲಿರುವ ಶ್ರೀ ರಾಧಾ ಸುರಭಿ ಗೋಶಾಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಗುವಿಗೆ ದೇಸಿ ದನದ ಜೊತೆಗೆ ವಿಹಾರ ಸಹಿತ ನಾಟಿ ಚಿಕಿತ್ಸೆ ನೀಡಲಾಗುತ್ತಿದೆ.
ಮಗುವಿನ ಅನಾರೋಗ್ಯ ದೂರ ಮಾಡುವುದಾಗಿ ನುಡಿದಿದ್ದ ಕೊರಗಜ್ಜ
ಜನ್ಮಾಷ್ಟಮಿಯ ಸಂದರ್ಭ ನಡೆದ ಕೊರಗಜ್ಜನ ಕೋಲದಲ್ಲಿ ಮಗನ ಅನಾರೋಗ್ಯಕ್ಕೆ ಪರಿಹಾರ ನೀಡುವಂತೆ ಉಕ್ರೇನ್ ದಂಪತಿ ಕೋರಿಕೊಂಡಿದ್ದರು. ಈ ವೇಳೆ ಕೊರಗಜ್ಜನಿಗೆ ಅಗೇಲು ಸೇವೆ ನೀಡುವುದಾಗಿ ಹರಕೆ ಹೇಳಿದ್ದರು. ಆಗ ಕೊರಗಜ್ಜ ಮಗನ ಅನಾರೋಗ್ಯ ದೂರ ಮಾಡುವ, ಕುಟುಂಬವನ್ನು ಕಾಪಾಡುವ ಅಭಯ ನೀಡಿತ್ತು. ಮಗ ಮ್ಯಾಕ್ಸಿಂ ಗುಣಮುಖನಾಗಿರುವ ಹಿನ್ನೆಲೆ ಉಕ್ರೇನ್ ಕುಟುಂಬ ಕೊರಗಜ್ಜನಿಗೆ ಅಗೇಲು ಸೇವೆ ನೀಡಿದ್ದಾರೆ. ಈ ಕುಟುಂಬ ಕೆಲವು ತಿಂಗಳುಗಳ ಬಳಿಕ ಮತ್ತೆ ಭಾರತಕ್ಕೆ ಮರಳಲಿದೆ.
ಅಗೇಲು ಸೇವೆ ಎಂದರೇನು?
ಹರಕೆ ಹೊತ್ತವರು ಕೊರಗಜ್ಜನಿಗೆ ಪ್ರಿಯವಾದ ಆಹಾರವನ್ನ ನೈವೇದ್ಯವಾಗಿ ನೀಡುವುದು. ಇದರಲ್ಲಿ ಉಪ್ಪಿನಕಾಯಿ, ರೊಟ್ಟಿ, ಅನ್ನ, ಚಕ್ಕುಲಿ, ವೀಳ್ಯದೆಲೆ, ಕುಚಲಕ್ಕಿ, ಪುರಿ ಇರಬೇಕು.
Published On - 12:55 pm, Mon, 14 November 22