ಉತ್ತರಾಧಿಕಾರಿ ಚರ್ಚೆ ಬೆನ್ನಲ್ಲೇ ದಲಿತ ಸಿಎಂ ದಾಳ: ಮುನಿಯಪ್ಪ ಸಿಎಂ ಆದ್ರೆ ಸ್ವಾಗತ ಎಂದ ಪರಮೇಶ್ವರ್

ಕರ್ನಾಟಕ ಕಾಂಗ್ರೆಸ್‌ನಲ್ಲಿ ಆಂತರಿಕ ಕಚ್ಚಾಟ ತೀವ್ರಗೊಳ್ಳುವ ಲಕ್ಷಣ ಕಾಣಿಸುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ಭೇಟಿ ನೀಡಿ ಹೈಕಮಾಂಡ್ ಭೇಟಿಗೆ ಮುಂದಾಗಿದ್ದಾರೆ. ಸಿದ್ದರಾಮಯ್ಯ ನಂತರ ಯಾರು ಸಿಎಂ ಎಂಬ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಗೃಹ ಸಚಿವ ಪರಮೇಶ್ವರ್ ‘ದಲಿತ ಸಿಎಂ’ ದಾಳ ಉರುಳಿಸಿದ್ದಾರೆ. ದಲಿತ ಸಿಎಂ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಸಹ ಪ್ರತಿಕ್ರಿಯಿಸಿದ್ದು, ಪಕ್ಷದಲ್ಲಿನ ಬೆಳವಣಿಗೆಗಳು ಕುತೂಹಲ ಮೂಡಿಸಿವೆ.

ಉತ್ತರಾಧಿಕಾರಿ ಚರ್ಚೆ ಬೆನ್ನಲ್ಲೇ ದಲಿತ ಸಿಎಂ ದಾಳ: ಮುನಿಯಪ್ಪ ಸಿಎಂ ಆದ್ರೆ ಸ್ವಾಗತ ಎಂದ ಪರಮೇಶ್ವರ್
ಸಾಂದರ್ಭಿಕ ಚಿತ್ರ
Updated By: Ganapathi Sharma

Updated on: Oct 27, 2025 | 2:07 PM

ಬೆಂಗಳೂರು, ಅಕ್ಟೋಬರ್ 27: ಕರ್ನಾಟಕ ಕಾಂಗ್ರೆಸ್​​ನಲ್ಲಿ (Congress) ಪಟ್ಟದ ಆಟ ಜೋರಾಗಿದೆ. ಕಾಂಗ್ರೆಸ್ ಮನೆಯೊಳಗಣ ಕ್ರಾಂತಿಯ ಕಿಚ್ಚು ದೆಹಲಿ ಅಂಗಳ ತಲುಪಿದೆ. ಭಾನುವಾರ ಮಧ್ಯಾಹ್ನ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ದೆಹಲಿಗೆ ಹೋಗಲ್ಲ, ಹೋಗಲ್ಲ ಎನ್ನುತ್ತಲೇ ರಾಜಧಾನಿಗೆ ದೌಡಾಯಿಸಿದ್ದಾರೆ. ಹೈಕಮಾಂಡ್ ನಾಯಕರ ಭೇಟಿಯಾಗಿ ಭಾನುವಾರವೇ ವಾಪಸ್ ಆಗುತ್ತಾರೆ ಎಂದು ಹೇಳಲಾಗಿತ್ತು. ಆದರೆ, ದೆಹಲಿಯಲ್ಲೇ ವಾಸ್ತವ್ಯ ಹೂಡಿರುವ ಡಿಕೆಶಿ, ಇಂದು ಹೈಕಮಾಂಡ್ ನಾಯಕರನ್ನ ಭೇಟಿ ಮಾಡುವ ಸಾಧ್ಯತೆ ಇದೆ. ಮತ್ತೊಂದೆಡೆ, ಕರ್ನಾಟಕದಲ್ಲಿ ಒಬ್ಬೊಬ್ಬರೇ ನಾಯಕರು ಒಂದೊಂದು ದಾಳ ಉರುಳಿಸತೊಡಗಿದ್ದಾರೆ.

ಸಿಎಂ ಸಿದ್ದರಾಮಯ್ಯ ನಂತರ ಉತ್ತರಾಧಿರಾರಿ ಯಾರು ಎಂಬ ಚರ್ಚೆ ಗರಿಗೆದರಿರುವ ಸಂದರ್ಭದಲ್ಲೇ ಗೃಹ ಸಚಿವ ಡಾ.ಜಿ ಪರಮೇಶ್ವರ್, ದಲಿತ ಸಿಎಂ ದಾಳ ಉರುಳಿಸಿದ್ದಾರೆ. ಕೆ.ಹೆಚ್ ಮುನಿಯಪ್ಪ ಸಮರ್ಥರಿದ್ದಾರೆ. ಅವರು ಅರ್ಹರಿದ್ದಾರೆ. ಮುನಿಯಪ್ಪ ಸಿಎಂ ಆದ್ರೆ ಸ್ವಾಗತಿಸುತ್ತೇನೆ. ನಮ್ಮ ವರ್ಗದವರು ಸಿಎಂ ಆಗುತ್ತಾರೆ ಎಂದು ಖುಷಿ ವಿಚಾರ ಎಂದಿದ್ದಾರೆ.

ಪರಮೇಶ್ವರ್ ಸಿಎಂ ಆಗಲಿ ಎಂದ ಘೋಷಣೆ!

ಈ ಮಧ್ಯೆ ಬೆಂಗಳೂರಿನ ಪರಮೇಶ್ವರ್ ನಿವಾಸದ ಮುಂದೆ ಅಭಿಮಾನಿಗಳು ಮುಂದಿನ ಸಿಎಂ ಘೋಷಣೆ ಕೂಗಿದ್ದಾರೆ. ಮುಂದಿನ ಸಿಎಂ ಪರಮೇಶ್ವರ್ ಅಂತಾ ಘೋಷಣೆ ಕೂಗಿದ್ದು, ಕ್ರಾಂತಿ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿದೆ.

ಸತೀಶ್ ಜಾರಕಿಹೊಳಿ ಹೇಳಿದ್ದೇನು?

ದಲಿತ ಸಿಎಂ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ, ಅವಕಾಶ ಸಿಕ್ಕರೆ ಒಳ್ಳೆಯದು. ನಾವು ಈಗಾಗಲೇ ನಮ್ಮ ಅಭಿಪ್ರಾಯ ಹೇಳಿದ್ದೇವೆ. ಅಂತಿಮವಾಗಿ ಯಾರನ್ನು ಮಾಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದಿದ್ದಾರೆ.

ಕ್ರಾಂತಿ ಕಾದು ನೋಡೋಣ, ಶಿಂಧೆ, ಪವಾರ್ ಯಾರಿಲ್ಲ ಎಂದ ಸತೀಶ್

ನವೆಂಬರ್ ಕ್ರಾಂತಿ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಇನ್ನೇನು ನವೆಂಬರ್ ಬರುತ್ತಿದೆ. ಕಾದು ನೋಡೋಣ ಎಂದಿದ್ದಾರೆ. ಕಾಂಗ್ರೆಸ್‌ನಲ್ಲಿ ಶಿಂಧೆ, ಪವಾರ್ ಯಾರು ಹುಟ್ಟಿಕೊಳ್ಳಲ್ಲ ಎಂದೂ ಹೇಳಿದ್ದಾರೆ.

ನವೆಂಬರ್ 11ಕ್ಕೆ ಮತ್ತೆ ದೆಹಲಿಗೆ ಡಿಕೆ ಶಿವಕುಮಾರ್ ಪ್ರಯಾಣ

ನವೆಂಬರ್ 15ಕ್ಕೆ ಸಿಎಂ ಸಿದ್ದರಾಮಯ್ಯ ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಇದಕ್ಕೂ ಮುನ್ನ ನವೆಂಬರ್ 11ಕ್ಕೆ ಮತ್ತೊಮ್ಮೆ ದೆಹಲಿಗೆ ಹಾರಲು ಡಿಕೆ ಶಿವಕುಮಾರ್ ಸಜ್ಜಾಗಿದ್ದಾರೆ. ಈಗಾಗಲೇ ದೆಹಲಿಯಲ್ಲಿರುವ ಡಿಕೆ ಶಿವಕುಮಾರ್, ನವೆಂಬರ್ 11ಕ್ಕೆ ರಾಹುಲ್ ಗಾಂಧಿ ಜೊತೆ ಪ್ರತ್ಯೇಕ ಮಾತುಕತೆ ನಡೆಸಲು ಸಮಯ ಕೇಳಿದ್ದಾರೆ. ಹಲವು ವಿಚಾರ ಪ್ರಸ್ತಾಪಿಸಲು ಉದ್ದೇಶಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಶೀಘ್ರದಲ್ಲೇ ಸಿಎಂ ದೆಹಲಿಗೆ, ಹೈಕಮಾಂಡ್ ಮುಂದೆ ಡಿಕೆ ಶಿವಕುಮಾರ್! ರೋಚಕ ಘಟ್ಟಕ್ಕೆ ಕಾಂಗ್ರೆಸ್ ಪಟ್ಟದ ಆಟ

ಅಧಿಕಾರ ಹಂಚಿಕೆ ಕುರಿತು ರಾಹುಲ್ ಗಾಂಧಿ ಜೊತೆ ಡಿಕೆ ಶಿವಕುಮಾರ್ ಚರ್ಚೆ ನಡೆಸುವ ಸಾಧ್ಯತೆ ಇದೆ. ಇದರ ಜೊತೆಗೆ ಮುಂದಿನ ರಾಜಕೀಯ ಭವಿಷ್ಯ ಕುರಿತು ಸಹ ಚರ್ಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿ ಪ್ರವಾಸ ಮಹತ್ವ ಪಡೆದುಕೊಂಡಿದೆ. ನವೆಂಬರ್ 11ಕ್ಕೆ ಬಿಹಾರದಲ್ಲಿ 2ನೇ ಹಂತದ ಮತದಾನ ಅಂತ್ಯವಾಗುತ್ತದೆ. ಹೀಗಾಗಿ ನವೆಂಬರ್ 11ರವರೆಗೂ ಮೌನದಿಂದ ಇರುವಂತೆ ತನ್ನ ಬೆಂಬಲಿಗರಿಗೆ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಸಿಎಂ ಹೈಕಮಾಂಡ್ ಭೇಟಿಗೂ ಮುನ್ನ ರಾಹುಲ್ ಭೇಟಿಗೆ ಡಿಕೆ ಶಿವಕುಮಾರ್ ಪ್ಲ್ಯಾನ್ ಮಾಡಿರುವುದು ಕಾಂಗ್ರೆಸ್ ಮನೆಯಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಸಚಿವರ ಜೊತೆ ಸಿಎಂ ಸಭೆ: ಏನಿದು ರಣತಂತ್ರ?

ಇತ್ತೀಚೆಗೆ ಸಚಿವರ ಜೊತೆ ಡಿನ್ನರ್ ಮೀಟಿಂಗ್ ನಡೆಸಿದ್ದ ಸಿಎಂ, ಇದೀಗ ಮತ್ತೊಂದು ಸಭೆಗೆ ಮುಂದಾಗಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಹೆಸರಲ್ಲಿ ಸಚಿವರಿಗೆ ಸಿಎಂ ಬುಲಾವ್ ನೀಡಿದ್ದಾರೆ. ಮಂಗಳವಾರ ಮೀಟಿಂಗ್ ಕರೆದಿರುವ ಸಿಎಂ ಸಿದ್ದರಾಮಯ್ಯ, ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಅಲ್ಲದೇ, ಅಹಿಂದ ನಾಯಕರು ಕೂಡ ಮತ್ತೊಂದು ಸುತ್ತಿನ ಸಭೆಗೆ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಎರಡ್ಮೂರು ದಿನದಲ್ಲಿ ಸತೀಶ್ ಜೊರಕಿಹೊಳಿ, ಪರಮೇಶ್ವರ್, ಹೆಚ್‌.ಸಿ ಮಹದೇವಪ್ಪ ಸಭೆ ಸೇರುವ ಸಾಧ್ಯತೆ ಇದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ