ನೆಲಮಂಗಲ ಬಳಿ ಭೀಕರ ಅಪಘಾತ: ಹೆದ್ದಾರಿಯಲ್ಲೇ ಕಮರಿಹೋಯ್ತು ಡ್ಯಾನ್ಸರ್ ಕನಸು; ಆಗಿದ್ದೇನು?
ಕೆಟ್ಟುನಿಂತ ಕಾರನ್ನು ಪರೀಕ್ಷಿಸುತ್ತಿದ್ದ ವೇಳೆ ಕ್ಯಾಂಟರ್ ಡಿಕ್ಕಿಯಾಗಿ ಡ್ಯಾನ್ಸರ್ ಓರ್ವ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಡಾಬಸ್ಪೇಟೆ ಬಳಿ ನಡೆದಿದೆ. ಅಪಘಾತ ಸಂಬಂಧ ಕ್ಯಾಂಟರ್ ಚಾಲಕನನ್ನು ಬಂಧಿಸಲಾಗಿದ್ದು, ನೃತ್ಯಗಾರನ ನೂರಾರು ಕನಸು ಹೆದ್ದಾರಿಯಲ್ಲೇ ಕಮರಿಹೋಗಿದೆ. ಅಪಘಾತದ ದೃಶ್ಯವನ್ನು ಗಮನಿಸಿದರೆ ಇದು ನಿಜಕ್ಕೂ ಅಪಘಾತವೋ ಅಥವಾ ಕೊಲೆಯೋ ಎಂಬ ಪ್ರಶ್ನೆ ಉದ್ಭವಿಸಿದ್ದು, ಆ ಬಗ್ಗೆಯೂ ತನಿಖೆ ನಡೆಯುತ್ತಿದೆ.

ನೆಲಮಂಗಲ, ನವೆಂಬರ್ 04: ಕ್ಯಾಂಟರ್ ಡಿಕ್ಕಿಯಾಗಿ ಖ್ಯಾತ ಡ್ಯಾನ್ಸರ್ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಡಾಬಸ್ಪೇಟೆ ಬಳಿಯ ಪೆಮ್ಮನಹಳ್ಳಿಯಲ್ಲಿ ನಡೆದಿದೆ. ಮೃತ ಡ್ಯಾನ್ಸರ್ ಅನ್ನು ಸುಧೀಂದ್ರ ಎಂದು ಗುರುತಿಸಲಾಗಿದೆ. ತಮ್ಮ ಕಾರು ಕೆಟ್ಟುನಿಂತ ಹಿನ್ನಲೆ ಹೆದ್ದಾರಿ ಪಕ್ಕ ಅದನ್ನು ನಿಲ್ಲಿಸಿ ಏನಾಗಿದೆ ಎಂದು ಪರೀಕ್ಷಿಸುತ್ತಿದ್ದ ಸುಧೀಂದ್ರಗೆ ಹಿಂದಿನಿಂದ ವೇಗವಾಗಿ ಬಂದ ಕ್ಯಾಂಟರ್ ಏಕಾಏಕಿ ಡಿಕ್ಕಿಯಾಗಿದೆ. ಗಂಭೀರವಾಗಿ ಗಾಯಗೊಂಡ ಅವರು ಮೃತಪಟ್ಟಿದ್ದು, ನೃತ್ಯಗಾರನ ನೂರಾರು ಕನಸು ಹೆದ್ದಾರಿಯಲ್ಲೇ ಕಮರಿಹೋಗಿದೆ.
ವೇಗವಾಗಿ ಬಂದು ಗುದ್ದಿದ ಕ್ಯಾಂಟರ್
ಅಪಘಾತದಲ್ಲಿ ಮೃತಪಟ್ಟ ಸುಧೀಂದ್ರ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ನಿವಾಸಿ. ಡ್ಯಾನ್ಸರ್ ಆಗಿ ನೂರಾರು ಯುವಕ- ಯುವತಿಯರಿಗೆ ಮತ್ತು ಮಕ್ಕಳಿಗೆ ತರಬೇತಿ ನೀಡುತ್ತಿದ್ದ ಇವರು, ಜೀವನ ನಿರ್ವಹಣೆಗೆ ಪ್ಲವರ್ ಡೆಕೊರೇಟರ್ ಆಗಿಯೂ ಕೆಲಸ ಮಾಡುತ್ತಿದ್ದರು. ತಮ್ಮ ಕೆಲಸ ಕಾರ್ಯಕ್ಕಾಗಿ ಅವರು ಹೊಸ ಕಾರು ಖರೀದಿಸಿದ್ದು, ಒಂದೇ ದಿನಕ್ಕೆ ಅದು ಹೆದ್ದಾರಿಯಲ್ಲಿ ಕೆಟ್ಟು ನಿಂತು ಅವರ ಜೀವವನ್ನೇ ಬಲಿ ಪಡೆದಿದೆ. ಘಟನೆ ಸಂಬಂಧ ನೆಲಮಂಗಲದ ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕ್ಯಾಂಟರ್ ಚಾಲಕನನ್ನ ಬಂಧಿಸಲಾಗಿದೆ.
ಇದನ್ನೂ ಓದಿ: ಹತ್ಯೆಯಾದವನ ಬರ್ತ್ಡೇ ದಿನವೇ ಹಂತಕರಿಗೆ ಜೀವಾವಧಿ ಶಿಕ್ಷೆ
ಅಪಘಾತವೋ? ಕೊಲೆಯೋ?
ಅಪಘಾತದ ದೃಶ್ಯವನ್ನು ಗಮನಿಸಿದರೆ ಇದು ನಿಜಕ್ಕೂ ಅಪಘಾತವೋ ಅಥವಾ ಕೊಲೆಯೋ ಎಂಬ ಪ್ರಶ್ನೆ ಉದ್ಭವಿಸಿದೆ. ಹೈವೇಯಲ್ಲಿ ಹೋಗುತ್ತಿದ್ದ ಕ್ಯಾಂಟರ್ ಏಕಾಏಕಿ ರಸ್ತೆ ಬದಿಗೆ ನುಗ್ಗಿರೋದು ಅನುಮಾನಗಳಿಗೆ ಕಾರಣ ಆಗಿದೆ. ಹೀಗಾಗಿ ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:41 pm, Tue, 4 November 25



