
ಹುಬ್ಬಳ್ಳಿ, ಸೆಪ್ಟೆಂಬರ್ 29: ರಾಜ್ಯದಲ್ಲಿ ಸಾರಿಗೆ ನಿಗಮಗಳು (KSRTC) ಬೇಡವಾದ ಕೆಲಸಗಳಿಗೆ ಕೋಟಿ ಕೋಟಿ ಹಣ ಖರ್ಚು ಮಾಡುತ್ತವೆ. ಆದ್ರೆ ಪ್ರತಿವರ್ಷ ಆಯುಧ ಪೂಜೆಗೆ ಹಣ ನೀಡಲು ಮಾತ್ರ ಚೌಕಾಸಿ ಮಾಡುತ್ತವೆ. ಈ ವರ್ಷ ಆಯುಧ ಪೂಜೆಗೆ ಪ್ರತಿ ಬಸ್ಗೆ ಕೇವಲ 150 ರೂಪಾಯಿ ನಿಗದಿ ಮಾಡಿವೆ. ಸಿಬ್ಬಂದಿ ದುಬಾರಿ ದುನಿಯಾದಲ್ಲಿ ಇದು ಯಾವುದಕ್ಕೂ ಸಾಲುವುದಿಲ್ಲ ಎನ್ನುತ್ತಿದ್ದಾರೆ. ಸಾರಿಗೆ ನಿಗಮಗಳು ಪ್ರತಿವರ್ಷ ನಡೆಯುವ ಆಯುಧ ಪೂಜೆಗೆ ಮಾತ್ರ ಕೇವಲ 150 ರೂ. ನಿಗದಿ ಮಾಡಿರುವುದು ಸಿಬ್ಬಂದಿಗಳ ಆಕ್ರೋಶಕ್ಕೆ ಕಾರಣವಾಗಿದೆ. ದುಬಾರಿ ದುನಿಯಾದಲ್ಲಿ ಹೂ, ಹಣ್ಣು, ತೆಂಗಿನಕಾಯಿ ಬೆಲೆ ಗಗನಕ್ಕೇರಿರುವಾಗ 150 ರೂ. ಯಾವುದಕ್ಕೂ ಸಾಲದಂತಾಗಿದೆ. ಪೂಜೆಯನ್ನು ಅದ್ದೂರಿಯಾಗಿ ನಡೆಸಲು ಚಾಲಕರು, ನಿರ್ವಾಹಕರು ತಮ್ಮ ಜೇಬಿನಿಂದಲೇ ಹಣ ಹಾಕುತ್ತಿದ್ದಾರೆ. ಕನಿಷ್ಠ 500 ರೂ. ನೀಡಬೇಕು ಎಂಬುದು ಸಿಬ್ಬಂದಿಗಳ ಒತ್ತಾಯ. ಆದರೂ ನಿಗಮಗಳಿಂದ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಹೀಗಾಗಿ ಪ್ರತಿ ವರ್ಷವೂ ಸಿಬ್ಬಂದಿಯೇ ಹೆಚ್ಚುವರಿ ವೆಚ್ಚ ಹೊತ್ತು ಪೂಜೆಯನ್ನು ಮಾಡುತ್ತಿದ್ದಾರೆ.
ಆಯುಧ ಪೂಜೆಗೆ ಇನ್ನೆರಡು ದಿನ ಮಾತ್ರ ಬಾಕಿಯಿದೆ. ನಾಡಿನೆಲ್ಲಡೆ ಈಗಾಗಲೇ ದಸರಾ ಹಬ್ಬದ ಸಂಭ್ರಮ ಜೋರಾಗಿದ್ದು, ಆಯುಧ ಪೂಜೆಗೆ ಸಿದ್ದತೆಗಳು ಆರಂಭವಾಗಿವೆ. ರಾಜ್ಯದ ಎಲ್ಲಾ ಸರ್ಕಾರಿ ಬಸ್ಗಳಿಗೂ ಅಂದು ಪೂಜೆ ನಡೆಯುತ್ತದೆ. ಡಿಪೋದಲ್ಲಿರುವ ಬಸ್ಗಳಿಗೆ ಡಿಪೋ ಸಿಬ್ಬಂದಿ ಪೂಜೆ ಸಲ್ಲಿಸಿದರೆ, ಸಂಚಾರದಲ್ಲಿರುವ ಬಸ್ಗಳಿಗೆ ಚಾಲಕರು ಮತ್ತು ನಿರ್ವಾಹಕರು ಪೂಜೆ ಸಲ್ಲಿಸುತ್ತಾರೆ. ಇನ್ನು ಪ್ರತಿ ಬಸ್ನ ಚಾಲಕರು ಮತ್ತು ನಿರ್ವಾಹಾಕರು,ತಾವು ಕೆಲಸ ಮಾಡುತ್ತಿರುವ ಬಸ್ಗಳಿಗೆ ಅಂದು ಅದ್ಧೂರಿ ಪೂಜೆ ಮಾಡುತ್ತಾರೆ. ತಮ್ಮ ಮನೆಯ ವಾಹನಗಳಂತೆ ಅವುಗಳಿಗೆ ಅಲಂಕಾರ ಮಾಡಿ, ಪೂಜೆ ಸಲ್ಲಿಸುತ್ತಾರೆ.
ಇನ್ನು ಪ್ರತಿಯೊಂದು ಸರ್ಕಾರಿ ಬಸ್ಗೂ ಪೂಜೆಗೆ ಪ್ರತಿವರ್ಷ ಹಣ ನೀಡಲಾಗುತ್ತದೆ. ಈ ವರ್ಷ ಪ್ರತಿ ಬಸ್ ಪೂಜೆಗಾಗಿ ಕೇವಲ 150 ರೂಪಾಯಿ ನೀಡಲಾಗುತ್ತಿದೆ. ಹುಬ್ಬಳ್ಳಿಯಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸೇರಿದಂತೆ ಉಳಿದೆಲ್ಲಾ ಸಾರಿಗೆ ಸಂಸ್ಥೆಯಲ್ಲಿ ಪ್ರತಿ ಬಸ್ ಪೂಜೆಗೆ 150 ರೂಪಾಯಿ ನಿಗದಿ ಮಾಡಲಾಗಿದೆ. ಇನ್ನು ಪ್ರಾದೇಶಿಕ ಬಸ್ ಡಿಪೋ ಒಂದಕ್ಕೆ ನಾಲ್ಕು ಸಾವಿರ ನಿಗದಿ ಮಾಡಿದ್ದರೆ, ವಿಭಾಗೀಯ ಡಿಪೋಕ್ಕೆ ಎರಡು ಸಾವಿರ ಹಣವನ್ನು ಪೂಜೆಗಾಗಿ ನಿಗದಿ ಮಾಡಲಾಗಿದೆ. ಆದರೆ ಸಾರಿಗೆ ನಿಗಮಗಳು ನೀಡುತ್ತಿರುವ ಪೂಜೆ ಹಣ ಯಾವುದಕ್ಕೂ ಸಾಲದಂತಾಗಿದೆ.
ಹಬ್ಬದ ಸಮಯದಲ್ಲಿ ಹೂ, ಹಣ್ಣಿನ ಬೆಲೆ ಗಗನಕ್ಕೆ ಮುಟ್ಟಿರುತ್ತದೆ. ಒಂದು ತೆಂಗಿನಕಾಯಿ ಬೆಲೆ ಐವತ್ತರಿಂದ ಆರವತ್ತು ರೂಪಾಯಿಯಿದೆ. ಒಂದು ಮಾರು ಸೇವಂತಿ ಹೂವಿನ ಬೆಲೆ ಕೂಡಾ ಎಂಬತ್ತರಿಂದ ನೂರು ರೂಪಾಯಿ ದಾಟಿದೆ. ಇಂತಹ ಸಮಯದಲ್ಲಿ ನಿಗಮಗಳು ಪೂಜೆಗೆ ಹಣ ನೀಡಲು ಚೌಕಾಸಿ ಮಾಡುತ್ತಿರುವುದು ಚಾಲಕರು ಮತ್ತು ನಿರ್ವಾಹಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ಕೇವಲ ಐವತ್ತು ರೂಪಾಯಿ ನೀಡಲಾಗುತ್ತಿತ್ತು. ಇದಕ್ಕೆ ತೀರ್ವ ಆಕ್ರೋಶ ವ್ಯಕ್ತವಾಗಿದ್ದರಿಂದ ಕಳೆದ ವರ್ಷದಿಂದ ನೂರಾ ಐವತ್ತು ರೂಪಾಯಿ ನೀಡಲಾಗುತ್ತಿದೆ. ಆದರೆ ಇದು ಕೂಡಾ ಸಾಲದು. ಕನಿಷ್ಟ 500 ರೂ.ಗಳಾದರೂ ನೀಡಬೇಕು ಎನ್ನುವುದು ಚಾಲಕರು ಮತ್ತು ನಿರ್ವಾಹಕರ ಬೇಡಿಕೆಯಾಗಿದೆ.
ಇನ್ನು ಬಹುತೇಕ ಚಾಲಕರು ಮತ್ತು ನಿರ್ವಾಹಕರು ನಿಗಮಗಳು ನೀಡುವ ಹಣ ಸಾಲದೇ ಇರುವುದರಿಂದ, ತಾವೇ ಹೆಚ್ಚಿನ ಹಣ ಹಾಕಿ ಪೂಜೆ ಮಾಡುತ್ತಾ ಬಂದಿದ್ದಾರೆ. ಈ ವರ್ಷ ಕೂಡಾ ಹಾಗೇ ಮಾಡುತ್ತೇವೆ ಅಂತಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯೇ ನೀಡಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಂ ಡಿ ಪ್ರಿಯಾಂಗಾ ಅವರು, ಸದ್ಯ ಹಣ ಹೆಚ್ಚು ಮಾಡುವ ಬಗ್ಗೆ ನಮಗೆ ಯಾವುದೇ ಬೇಡಿಕೆ ಬಂದಿಲ್ಲಾ. ಹಾಗೆ ಬಂದ್ರೆ ಪರಿಶೀಲನೆ ಮಾಡುವುದಾಗಿ ಹೇಳಿದ್ದಾರೆ.