ಏಳು ವರ್ಷದಲ್ಲಿ ಎಲ್ಲಿಯೂ ಗೊಬ್ಬರ ಕೊರತೆಯಾಗಿಲ್ಲ; ಕೊರತೆ ಇದ್ದ ಕಡೆ ಗೊಬ್ಬರ ಪೂರೈಸುತ್ತೇವೆ: ಭಗವಂತ
ಕೊರತೆ ಇದ್ದ ಕಡೆ ನಾವು ಗೊಬ್ಬರವನ್ನ ಪೂರೈಸುತ್ತೇವೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಭಗವಂತ ಖೂಬಾ ಹೇಳಿಕೆ ನೀಡಿದ್ದಾರೆ. ಕರ್ನಾಟಕದಲ್ಲಿ ರಾಸಾಯನಿಕ ಗೊಬ್ಬರ ಕೊರತೆ ವಿಚಾರವಾಗಿ ದಾವಣಗೆರೆಯಲ್ಲಿ ರಸಗೊಬ್ಬರ ಸಚಿವ ಖೂಬಾ ಸ್ಪಷ್ಟನೆ ನೀಡಿದ್ದಾರೆ.
ದಾವಣಗೆರೆ: ಏಳು ವರ್ಷದಲ್ಲಿ ಎಲ್ಲಿಯೂ ಗೊಬ್ಬರ ಕೊರತೆಯಾಗಿಲ್ಲ. ಈಗ ಮಧ್ಯವರ್ತಿಗಳ ಹಾವಳಿಯಿಂದ ಆತಂಕ ಸೃಷ್ಟಿಯಾಗಿದೆ. ಯೂರಿಯಾ, ಡಿಎಪಿ ಕೊರತೆ ಎಲ್ಲಿಯೂ ಇಲ್ಲ. ಮಳೆ ಹೆಚ್ಚು ಬೀಳುತ್ತಿರುವುದರಿಂದ ಹೆಚ್ಚುವರಿ ಕೇಳಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಚ್ಚುವರಿಯಾಗಿ ರಸಗೊಬ್ಬರ ಕೇಳಿದ್ದಾರೆ. ಕೊರತೆ ಇದ್ದ ಕಡೆ ನಾವು ಗೊಬ್ಬರವನ್ನ ಪೂರೈಸುತ್ತೇವೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಭಗವಂತ ಖೂಬಾ ಹೇಳಿಕೆ ನೀಡಿದ್ದಾರೆ. ಕರ್ನಾಟಕದಲ್ಲಿ ರಾಸಾಯನಿಕ ಗೊಬ್ಬರ ಕೊರತೆ ವಿಚಾರವಾಗಿ ದಾವಣಗೆರೆಯಲ್ಲಿ ರಸಗೊಬ್ಬರ ಸಚಿವ ಖೂಬಾ ಸ್ಪಷ್ಟನೆ ನೀಡಿದ್ದಾರೆ.
ಇದೇ ವೇಳೆ, ಕಾಂಗ್ರೆಸ್ ನಾಯಕ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಗ್ಗೆ ಉಗ್ರಪ್ಪ, ಸಲೀಂ ಮಾತುಕತೆ ವಿಚಾರವಾಗಿ ಭಗವಂತ ಖೂಬಾ ವ್ಯಂಗ್ಯವಾಡಿದ್ದಾರೆ. ಸಲೀಂ ಹಾಗೂ ವಿ.ಎಸ್.ಉಗ್ರಪ್ಪ ಸತ್ಯವನ್ನು ಬಾಯ್ಬಿಟ್ಟಿದ್ದಾರೆ. ಡಿಕೆಶಿ ಅಷ್ಟೇ ಅಲ್ಲ ಕಾಂಗ್ರೆಸ್ನ ಎಲ್ಲರ ಸಂಸ್ಕೃತಿ ಇದೇ ರೀತಿ ಇದೆ. ಇದು ಕಾಂಗ್ರೆಸ್ ಒಳಜಗಳದ ನಿದರ್ಶನ ಎಂದು ಖೂಬಾ ಹೇಳಿದ್ದಾರೆ.
ಡಿ.ಕೆ. ಶಿವಕುಮಾರ್ಗೆ ಸಿದ್ದರಾಮಯ್ಯರನ್ನ ಕಂಡರೆ ಆಗಲ್ಲ. ಸಿದ್ದರಾಮಯ್ಯಗೆ ಡಿ.ಕೆ. ಶಿವಕುಮಾರ್ನನ್ನ ಕಂಡರೆ ಆಗಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಅನೇಕ ಗುಂಪುಗಳಿವೆ. ಕಾಂಗ್ರೆಸ್ನಲ್ಲಿ ಆಪ್ತರ ಘರ್ಷಣೆ ನಡೆಯುತ್ತಲೇ ಇರುತ್ತದೆ. ಇನ್ನೂ ಹಲವು ಸತ್ಯಗಳು ಹೊರ ಬರಲಿವೆ ಕಾದುನೋಡಿ ಎಂದು ದಾವಣಗೆರೆಯಲ್ಲಿ ಭಗವಂತ ಖೂಬಾ ಕಾಂಗ್ರೆಸ್ ಕುರಿತು ಹೇಳಿಕೆ ನೀಡಿದ್ದಾರೆ.
ಯಾದಗಿರಿ: ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ರಸಗೊಬ್ಬರ ಪೂರೈಕೆಯಿಂದ ಸಮಸ್ಯೆ ಆಗಿತ್ತು ಯಾದಗಿರಿ ಜಿಲ್ಲೆಯಲ್ಲಿ 3.2 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಮಾಡಲಾಗಿತ್ತು. ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಹತ್ತಿ ಬಿತ್ತನೆ ಮಾಡಿದರೆ, 94 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಿದ್ದರು. ಭತ್ತದ ಬೆಳೆಗೆ ಕಾಲ ಕಾಲಕ್ಕೆ ಡಿಎಪಿ ರಸಗೊಬ್ಬರ ಹಾಕಲೇ ಬೇಕಾಗಿದೆ. ಆದರೆ ಜಿಲ್ಲೆಯಲ್ಲಿ ರಸಗೊಬ್ಬರ ಅಭಾವ ಎದ್ದು ಕಂಡಿತ್ತು.
ಸರ್ಕಾರದಿಂದ ಪೂರೈಕೆ ಆಗಬೇಕಾಗಿದ್ದ ರಸಗೊಬ್ಬರ ಇಲ್ಲಿಯವರೆಗೆ ಪೂರೈಕೆ ಆಗಿಲ್ಲ. ಇನ್ನು ಜಿಲ್ಲೆಗೆ ಒಟ್ಟು ಆಗಸ್ಟ್ ವರೆಗೆ 30 ಸಾವಿರ ಮೇಟ್ರಿಕ್ ಟನ್ ನಷ್ಟು ರಸಗೊಬ್ಬರ ಡಿಎಪಿ ಪೂರೈಕೆ ಆಗಬೇಕಿತ್ತು. ಆದರೆ ಆಗ ಆಗಿದ್ದು ಅರ್ಧದಷ್ಟು ಮಾತ್ರ. ತಿಂಗಳ ಹಿಂದೆ ಭತ್ತ ನಾಟಿ ಮಾಡಿದ್ದ ರೈತರಿಗೆ ಬೆಳೆ ಉಳಿಸಿಕೊಳ್ಳಬೇಕು ಜೊತೆಗೆ ಹೆಚ್ಚು ಇಳುವರಿ ಬರಬೇಕು ಅಂದರೆ ಕೂಡಲೆ ಡಿಎಪಿ ರಸಗೊಬ್ಬರ ಪೂರೈಕೆ ಮಾಡುವ ಅಗತ್ಯವಿತ್ತು.
ಜಿಲ್ಲೆಯ ಕೃಷಿ ಅಧಿಕಾರಿಗಳು ಸಹ ಸರ್ಕಾರಕ್ಕೆ ಡಿಎಪಿ ಪೂರೈಕೆ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಹೇಳುತ್ತಿದ್ದರು. ಆದರೆ ಲಾಕ್ಡೌನ್ ಸೇರಿದಂತೆ ನಾನಾ ಕಾರಣಗಳಿಂದ ಉತ್ಪಾದನೆ ಕಡಿಮೆ ಪ್ರಮಾಣದಲ್ಲಿ ಆಗಿದೆ. ಇದೆ ಕಾರಣದಿಂದ ಜಿಲ್ಲೆಗೆ ರಸಗೊಬ್ಬರ ಪೂರೈಕೆ ಆಗುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬಂದಿತ್ತು. ಈ ಬಗ್ಗೆ ಜಂಟಿ ಕೃಷಿ ನಿರ್ದೇಶಕರಿಗೆ ಕೇಳಿದರೆ ಆದಷ್ಟು ಬೇಗ ಅಂದರೆ ನಾಳೆ ನಾಡಿದ್ದರಲ್ಲಿ ಜಿಲ್ಲೆಗೆ ಡಿಎಪಿ ರಸಗೊಬ್ಬರ ಪೂರೈಕೆ ಆಗಲಿದೆ ಎಂದು ಹೇಳಿದ್ದರು. ಹೀಗೆ ರಾಜ್ಯದ ಕೆಲವೆಡೆ ರಸಗೊಬ್ಬರ ಸಮಸ್ಯೆ ಉಂಟಾಗಿತ್ತು.
ಇದನ್ನೂ ಓದಿ: ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ರಸಗೊಬ್ಬರ ಪೂರೈಕೆ; ಬೆಳೆ ಕಳೆದುಕೊಳ್ಳುವ ಆತಂಕದಲ್ಲಿ ಅನ್ನದಾತರು
ಇದನ್ನೂ ಓದಿ: ಕಾಂಗ್ರೆಸ್ ಪಕ್ಷದಿಂದ 6 ವರ್ಷಗಳ ಕಾಲ ಸಲೀಂ ಉಚ್ಚಾಟನೆ; ಶಿಸ್ತು ಸಮಿತಿಯಿಂದ ಕ್ರಮ
Published On - 8:19 pm, Wed, 13 October 21