ಹರಿಹರ ಪಂಚಮಸಾಲಿ ಮಠದಲ್ಲಿ ಮತ್ತೆ ಭಜನೆ, ಪೂಜೆ ಶುರು: ಟ್ರಸ್ಟ್​ ವಿರುದ್ಧ ಹೋರಾಟಕ್ಕೆ ಸಜ್ಜಾದ ವಚನಾನಂದ ಸ್ವಾಮೀಜಿ

Harihara Panchamasali Matha: ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಹನಗವಾಡಿ ಬಳಿ ಇರುವ ಪಂಚಮಸಾಲಿ ಮಠದಲ್ಲಿ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಆವರಿಸಿದ್ದ ಮೌನ ಮತ್ತು ಉದ್ವಿಗ್ನ ವಾತಾವರಣ ಈಗ ತಿಳಿಯಾಗುತ್ತಿದ್ದು, ಹೊಸ ಗಾಳಿ ಬೀಸತೊಡಗಿದೆ. ಮಠದಲ್ಲಿ ಇದೀಗ ಪೂಜಾ ಕೈಂಕರ್ಯಗಳು ಪುನರಾರಂಭಗೊಂಡಿವೆ.

ಹರಿಹರ ಪಂಚಮಸಾಲಿ ಮಠದಲ್ಲಿ ಮತ್ತೆ ಭಜನೆ, ಪೂಜೆ ಶುರು: ಟ್ರಸ್ಟ್​ ವಿರುದ್ಧ ಹೋರಾಟಕ್ಕೆ ಸಜ್ಜಾದ ವಚನಾನಂದ ಸ್ವಾಮೀಜಿ
ವಚನಾನಂದ ಸ್ವಾಮೀಜಿ
Image Credit source: tv9 kannada
Edited By:

Updated on: Jul 30, 2026 | 8:12 PM

ದಾವಣಗೆರೆ, ಜುಲೈ 30: ಪಂಚಮಸಾಲಿ ಮಠದಲ್ಲಿ ಈಗ ಹೊಸ ಗಾಳಿ ಬೀಸುತ್ತಿದೆ. ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಸ್ವಾಮೀಜಿಗೆ (Vachanananda Swamiji) ಜಾಮೀನು ಸಿಕ್ಕಿದೆ. ಇನ್ನೇನು ಸ್ವಾಮೀಜಿ ಜೈಲು ಸೇರುತ್ತಾರೆ ಎನ್ನುವಷ್ಟರಲ್ಲಿಯೇ ಕೋರ್ಟ್​ ನಿರೀಕ್ಷಣಾ ಜಾಮೀನು ನೀಡಿತ್ತು. ಒಂದು ಅರ್ಥದಲ್ಲಿ ಸ್ವಾಮೀಜಿ ನಿರಾಳರಾಗಿದ್ದಾರೆ. ಇದೀಗ  ಅಧಿಕೃತವಾಗಿ ಸ್ವಾಮೀಜಿ ಟ್ರಸ್ಟ್​ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದಾರೆ.

ಭಜನೆ, ಪೂಜೆ ಬದಲು ಪೊಲೀಸರ ಬೂಟಿನ ಸದ್ದು

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿ ಇರುವ ಪಂಚಮಸಾಲಿ ಮಠ ರಾಜ್ಯದ ಗಮನ ಸೆಳೆದಿತ್ತು. ಕಳೆದ ಮೂರು ನಾಲ್ಕು ತಿಂಗಳಿಂದ ಈ ಮಠದಲ್ಲಿ ಮೌನ ಆವರಿಸಿತ್ತು. ಕಾರಣ ಇಲ್ಲಿನ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಇನ್ನೊಂದು ಕಡೆ ಮಠದ ಟ್ರಸ್ಟಿನವರು ಸ್ವಾಮೀಜಿಯನ್ನ ಮಠದಿಂದ ಉಚ್ಛಾಟನೆ ಮಾಡಿದ್ದರು. ಹೀಗಾಗಿ ಮಠದ ಆವರಣದಲ್ಲಿ ಭಜನೆ, ಪೂಜೆ ಬದಲು ಪೊಲೀಸರ ಬೂಟಿನ ಸದ್ದು ಹೆಚ್ಚಾಗಿತ್ತು.

ಸಹಜ ಸ್ಥಿತಿಯತ್ತ ಮಠ: ಮಹಾಂತ ಗುರುಗಳ ಗದ್ದುಗೆ ವಿಶೇಷ ಪೂಜೆ

ಮಠದಲ್ಲಿ ಕೋಟ್ಯಂತರ ರೂ ಅವ್ಯವಹಾರ ಆಗಿದೆ ಎಂದು ‘ಲೆಕ್ಕ ಕೊಡಿ ಚಳುವಳಿ’ ಆರಂಭವಾಗಿತ್ತು. ಹೀಗೆ ಈ ಚಳುವಳಿ ಆರಂಭವಾಗುತ್ತಿದ್ದಂತೆ ವಚನಾನಂದ ಸ್ವಾಮೀಜಿಯನ್ನ ಮಠದಿಂದ ಉಚ್ಛಾಟನೆ ಮಾಡಲಾಗಿತ್ತು. ಆದರೆ ಸ್ವಾಮೀಜಿ ಮಠ ಬಿಟ್ಟು ಹೋಗಲಿಲ್ಲ. ಈ ಮಧ್ಯೆ ಪೋಕ್ಸೋ ಪ್ರಕರಣ ಕೂಡ ದಾಖಲಾಗಿತ್ತು. ಏಳು  ಬಾಲಕರು ಸಲ್ಲಿಸಿದ್ದ ಪೋಕ್ಸೋ ಪ್ರಕರಣದಲ್ಲಿ ಸ್ವಾಮೀಜಿಗೆ ಜಾಮೀನು ಸಿಕ್ಕಿದೆ. ಹೀಗಾಗಿ ಮತ್ತೆ ಮಠ ಸಹಜ ಸ್ಥಿತಿಗೆ ಬರುತ್ತಿದೆ. ಜೊತೆಗೆ ಮಠದಲ್ಲಿದ್ದ ಮಹಾಂತ ಗುರುಗಳ ಗದ್ದುಗೆ ವಿಶೇಷ ಪೂಜೆ ಮಾಡಲಾಗುತ್ತಿದೆ. ಇದೀಗ ಸ್ವಾಮೀಜಿ ಮತ್ತು ಭಕ್ತರಿಂದ ಮತ್ತೆ ‘ಲೆಕ್ಕ ಕೊಡಿ ಚಳುವಳಿ’ ಶುರುವಾಗಿದೆ.

ಟ್ರಸ್ಟ್​ ವಿರುದ್ಧ ಭಕ್ತರಲ್ಲಿ ಕಡಿಮೆಯಾಗದ ಆಕ್ರೋಶ 

ಪಂಚಮಸಾಲಿ ಮಠದಲ್ಲಿ ಕೋಟ್ಯಂತರ ರೂ ಹಣ ಅವ್ಯವಹಾರ ಆರೋಪ ಕೇಳಿಬಂದಿತ್ತು. ಅದಕ್ಕೆ ಸೂಕ್ತ ಲೆಕ್ಕ ಕೊಡಿ ಎಂದು ವಚನಾನಂದ ಸ್ವಾಮೀಜಿ ಮತ್ತು ಅವರ ಭಕ್ತರು ಪ್ರಶ್ನೆ ಮಾಡಿದ್ದರು. ಪಂಚಮಸಾಲಿ ಮಠದ ಟ್ರಸ್ಟ್​ ಸಭೆಯ ಕೆಲ ವಿಡಿಯೋ ವೈರಲ್ ಆಗಿದ್ದವು. ಕೋಟ್ಯಂತರ ರೂ ಅವ್ಯವಹಾರ ಆಗಿದೆ ಎಂದು ಟ್ರಸ್ಟಿಗಳೇ ಒಪ್ಪಿಕೊಂಡಿದ್ದರು. ಹೀಗಾಗಿ ಈ ಜಗಳ ತೀವ್ರ ಆಗುತ್ತಿದ್ದಂತೆ ಸ್ವಾಮೀಜಿಯನ್ನ ಉಚ್ಚಾಟನೆ ಮಾಡಲಾಗಿತ್ತು. ಹೀಗಾಗಿ ಒಂದು ಗುಂಪು ಸ್ವಾಮೀಜಿ ಪರ ಗಟ್ಟಿಯಾಗಿ ನಿಂತಿತ್ತು. ಇದರಿಂದ ಎರಡು ಗುಂಪುಗಳಾಗಿ ಸಂಘರ್ಷ ಶುರುವಾಗಿತ್ತು. ಇದೀಗ ಆ ಸಂಘರ್ಷ ಶಮನ ಆಗುತ್ತಿದೆ. ಆದರೆ ಸ್ವಾಮೀಜಿ ಪರ ಭಕ್ತರಲ್ಲಿ ಟ್ರಸ್ಟ್​ ವಿರುದ್ಧ ಆಕ್ರೋಶ ಮಾತ್ರ ಕಡಿಮೆ ಆಗಿಲ್ಲ.

ಇದನ್ನೂ ಓದಿ: ಪೋಕ್ಸೋ ಕೇಸ್​​: ದಾವಣಗೆರೆ ಜಿಲ್ಲಾ ವಿಶೇಷ ಕೋರ್ಟ್​​ನಿಂದ ವಚನಾನಂದ ಶ್ರೀಗೆ ಜಾಮೀನು ಮಂಜೂರು

ಹೀಗೆ ನಿರಂತರವಾಗಿ ಸಂಘರ್ಷದ ನೆಲವಾಗಿದ್ದ ಪಂಚಮಸಾಲಿ ಮಠದಲ್ಲಿ ಈಗ ಸಹಜ ವಾತಾವರಣ ಕಂಡು ಬರುತ್ತಿದೆ. ಆದರೆ ಟ್ರಸ್ಟಿನವರು ಮಾತ್ರ ಮಠ ಪ್ರವೇಶ ಮಾಡುತ್ತಿಲ್ಲ. ಸ್ವಾಮೀಜಿ ಪರ ಭಕ್ತರು ಮಠವನ್ನ ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಇಷ್ಟರಲ್ಲಿಯೇ ಒಂದು ದೊಡ್ಡ ಸಮಾರಂಭಕ್ಕೆ ಸಿದ್ಧತೆ ನಡೆಯಲಿದೆ ಎಂಬುವುದು ಸ್ವಾಮೀಜಿ ಪರ ಭಕ್ತರಿಂದ ಬಂದ ಮಾಹಿತಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More
Loading...
Unable to load recommendations.
Follow Us