ದಾವಣಗೆರೆ, ಮಾ.31: ಮೈತ್ರಿಯಾದರೂ ಬಿಜೆಪಿಯ ಮುಖಂಡರು ತಮ್ಮನ್ನು ಕಡೆಗಣಿಸಿದ್ದಾರೆ ಎಂದು ಜೆಡಿಎಸ್ (JDS) ಮುಖಂಡರು ಆರೋಪ ಮಾಡಿದ್ದರು. ಅಲ್ಲದೆ, ನಾನೊಂದು ತೀರಾ ನೀನೊಂದು ತೀರ ಎನ್ನುವಂತೆ ಎರಡೂ ಪಕ್ಷಗಳ ಮುಖಂಡರು ಇದ್ದರು. ಇದೀಗ ದಾವಣಗೆರೆಯಲ್ಲಿ (Davanagere) ಬಿಜೆಪಿ-ಜೆಡಿಎಸ್ ಮುಖಂಡರು ಮುನಿಸು ಮರೆತು ಒಂದಾಗಿದ್ದಾರೆ. ಬಿಜೆಪಿ (BJP) ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರನ್ನು ಬೆಂಬಲಿಸುವುದಾಗಿ ಜೆಡಿಎಸ್ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ (H.S. Shivashankar) ಹೇಳಿದ್ದಾರೆ.
ಇಂದು ಜೆಡಿಎಸ್ ಮಾಜಿ ಶಾಸಕ ಹೆಚ್ ಎಸ್ ಶಿವಶಂಕರ್ ನಿವಾಸಕ್ಕೆ ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರ್, ಮಾಜಿ ಸಚಿವ ಮುರುಗೇಶ್ ನಿರಾಣಿ, ಶಾಸಕ ಬಿಪಿ ಹರೀಶ್, ಜಿಲ್ಲಾಧ್ಯಕ್ಷ ರಾಜಶೇಖರ್ ಸೇರಿದಂತೆ ಹಲವು ಬಿಜೆಪಿ ನಾಯಕರು ಭೇಟಿ ನೀಡಿ ಸಭೆ ನಡೆಸಿದ್ದಾರೆ. ಅಲ್ಲದೆ, ಚುನಾವಣೆಯಲ್ಲಿ ಒಟ್ಟಾಗಿ ಹೋಗುವ ಭರವಸೆಯನ್ನು ಬಿಜೆಪಿ ನಾಯಕರು ನೀಡಿದ್ದಾರೆ.
ಇದನ್ನೂ ಓದಿ: ಅಡುಗೆ ಮಾಡುವುದಕ್ಕೆ ಲಾಯಕ್ಕು: ದಾವಣಗೆರೆ ಬಿಜೆಪಿ ಅಭ್ಯರ್ಥಿ ವಿರುದ್ಧ ಶಾಮನೂರು ಹೇಳಿಕೆಯನ್ನು ಖಂಡಿಸಿದ ಸೈನಾ ನೆಹ್ವಾಲ್
ಸಭೆ ಬಳಿಕ ಮಾತನಾಡಿ ಹೆಚ್ಎಸ್ ಶಿವಶಂಕರ್, ಜೆಡಿಎಸ್ ಹಾಗೂ ಬಿಜೆಪಿ ಒಂದಾಗಿ ಈ ಬಾರಿ ಅತ್ಯಾಧಿಕವಾದ ಮತಗಳಿಂದ ಗೆಲ್ಲಿಸುತ್ತೇವೆ. ನಮ್ಮ ಪಕ್ಷದ ಮುಖಂಡರು ಕೂಡ ಎನ್ಡಿಎ ಸರ್ಕಾರದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ. ನಮ್ಮ ನಾಯಕರು ಸೂಚನೆ ನೀಡಿದ ಹಿನ್ನಲೆ ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸುತ್ತೇವೆ. ಇಡೀ ಕ್ಷೇತ್ರ ಓಡಾಡಿ ಅತ್ಯಾಧಿಕ ಮತಗಳಿಂದ ಗೆಲ್ಲಿಸುತ್ತೇವೆ ಎಂದರು.
ಜೆಡಿಎಸ್ ಮುಖಂಡರ ಮುನಿಸು ಶಮನವಾದರೂ ದಾವಣಗೆರೆ ಜಿಲ್ಲೆಯ ಸ್ಥಳೀಯ ಬಿಜೆಪಿ ನಾಯಕರ ಮುನಿಸು ಶಮನವಾಗಿಲ್ಲ. ಸಿದ್ದೇಶ್ವರ ಪತ್ನಿ ಗಾಯತ್ರಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದ ಹಿನ್ನೆಲೆ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಮತ್ತು ಇವರ ಬೆಂಬಲಿಗ ನಾಯಕರು ಪಕ್ಷದ ವಿರುದ್ಧ ತೀವ್ರ ಮುನಿಸುಗೊಂಡಿದ್ದಾರೆ.
ಇದನ್ನೂ ಓದಿ: ದಾವಣಗೆರೆ ಬಿಜೆಪಿಯಲ್ಲಿನ ಭಿನ್ನಮತ ಶಮನ ಯತ್ನ ವಿಫಲ, ಕೋಪದಿಂದಲೇ ಹೋದ ಶಿಷ್ಯ ರೇಣುಕಾಚಾರ್ಯ
ರೇಣುಕಾಚಾರ್ಯ ನೇತೃತ್ವದ ರೆಬಲ್ ಬಣದ ಮುನಿಸು ಶಮನಕ್ಕೆ ಸ್ವತಃ ಗುರು ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಇತ್ತೀಚೆಗೆ ಸಭೆ ನಡೆಸಲಾಗಿದೆ. ಆದರೆ, ಈ ಸಭೆಯಲ್ಲಿ ರೇಣುಕಾಚಾರ್ಯ ಅವರ ಬಣಕ್ಕೆ ಹಿನ್ನಡೆಯಾಗಿದೆ. ಸಭೆಯ ಬಳಿಕ ಬಹುತೇಕ ರೆಬಲ್ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ಅಲ್ಲದೆ, ಮಾಜಿ ಸಚಿವ ಎಸ್ಎ ರವೀಂದ್ರನಾಥ ಅವರಿಗೆ ಜಿಲ್ಲೆಯ ಚುನಾವಣೆ ಉಸ್ತುವಾರಿಯನ್ನಾಗಿ ಯಡಿಯೂರಪ್ಪ ಅವರು ನೇಮಿಸಿದ್ದಾರೆ.
ಅದಾಗ್ಯೂ, ತಮ್ಮ ಶಿಷ್ಯ ರೇಣುಕಾಚಾರ್ಯ ಅವರ ಮುನಿಸು ಶಮನಗೊಳಿಸುವಲ್ಲಿ ಯಡಿಯೂರಪ್ಪ ಅವರು ವಿಫಲರಾಗಿದ್ದಾರೆ. ಸಭೆಯ ಬಳಿಕ ತೀವ್ರ ಬೇಸರದಿಂದ ಹೊರ ಬಂದ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರು ಮತ್ತೆ ಸಭೆ ಸೇರುವ ಸೂಚನೆ ನೀಡಿದ್ದಾರೆ. ಸಭೆ ಕುರಿತು ಯಾವುದೇ ಪ್ರಶ್ನೆಗೆ ಉತ್ತರ ನೀಡದೇ ಆಕ್ರೋಶದಿಂದಲೇ ತೆರಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ