ಅಡುಗೆ ಮಾಡುವುದಕ್ಕೆ ಲಾಯಕ್ಕು: ದಾವಣಗೆರೆ ಬಿಜೆಪಿ ಅಭ್ಯರ್ಥಿ ವಿರುದ್ಧ ಶಾಮನೂರು ಹೇಳಿಕೆಯನ್ನು ಖಂಡಿಸಿದ ಸೈನಾ ನೆಹ್ವಾಲ್
ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ವಿರುದ್ಧ ಮಾತನಾಡುವಾಗ, “ಮಹಿಳೆಯರು ಅಡುಗೆ ಮಾಡಲು ಲಾಯಕ್ಕು” ಎಂದು ಕಾಂಗ್ರೆಸ್ ಹಿರಿಯ ನಾಯಕ ಹೇಳಿಕೆ ನೀಡಿದ್ದು, ಇದೀಗ ಈ ಸುದ್ದಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದೆ. ಶಾಮನೂರು ಶಿವಶಂಕರಪ್ಪ ಅವರ ಈ ಹೇಳಿಕೆಯನ್ನು ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ, ಬಿಜೆಪಿ ನಾಯಕಿ ಸೈನಾ ನೆಹ್ವಾಲ್ ಖಂಡಿಸಿದ್ದಾರೆ.
ಬೆಂಗಳೂರು, (ಮಾರ್ಚ್ 30): ದಾವಣಗೆರೆಯಿಂದ (Davanagere) ಗೆದ್ದು ಮೋದಿಗೆ ಕಮಲ ಅರ್ಪಿಸುತ್ತೇನೆ ಅಂತಾರೆ. ಮೊದಲು ಜಿಲ್ಲೆಯ ಸಮಸ್ಯೆ ಬಗ್ಗೆ ತಿಳಿಯಲಿ. ‘ಮಾತನಾಡಲು ಬಾರದ ಇವರು ಅಡುಗೆ ಮಾಡೋದಕ್ಕೆ ಲಾಯಕ್ಕು’ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಪತ್ನಿ ದಾವಣಗೆರೆ ಬಿಜೆಪಿ (BJP) ಅಭ್ಯರ್ಥಿ ಗಾಯತ್ರಿ ವಿರುದ್ಧ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ಕಿಡಿಕಾರಿದ್ದು, ಇದೀಗ ಶಾಮನೂರು ಶಿವಶಂಕರಪ್ಪನವರ ಈ ಹೇಳಿಕೆಗೆ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ (saina nehwal) ಪ್ರತಿಕ್ರಿಯಿಸಿ ತಿರುಗೇಟು ನೀಡಿದ್ದಾರೆ.
ನೆಹ್ವಾಲ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ “ಸಮಾಜದಲ್ಲಿ ಮಹಿಳೆ ಅಬಲೆ ಅಲ್ಲ ಸಬಲೆ. ಪುರುಷರಂತೆ ಎಲ್ಲಾ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂದು ಕಾಂಗ್ರೆಸ್ ಅಭಿಯಾನವೊಂದನ್ನು ಆರಂಭಿಸಿತ್ತು. ಆದರೆ ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಮಹಿಳೆಯರ ಬಗ್ಗೆ ಅತ್ಯಂತ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ. ಇದು ಕಾಂಗ್ರೆಸ್ನ ನಿಜವಾದ ಮನಸ್ಥಿಯನ್ನು ತೋರಿಸುತ್ತದೆ’ ಎಂದು ಶಿವಶಂಕರಪ್ಪ ಹೇಳಿಕೆಯನ್ನು ಖಂಡಿಸಿದ್ದಾರೆ.
ಇದನ್ನೂ ಓದಿ: ಸಂಸದ ಜಿಎಂ ಸಿದ್ದೇಶ್ವರ್ ಪತ್ನಿ ಅಡುಗೆ ಮಾಡುವುದಕ್ಕೆ ಲಾಯಕ್ಕು: ಶಾಮನೂರು ಶಿವಶಂಕರಪ್ಪ
ಒಂದು ಕಡೆ ನಾವು ನಾರಿ ಶಕ್ತಿಗೆ ನಮನ ಸಲ್ಲಿಸುತ್ತೇವೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಹಿಳಾ ಮೀಸಲಾತಿ ಕಾಯ್ದೆಯನ್ನು ಪಾಸ್ ಮಾಡಲಾಗಿದೆ. ಮತ್ತೊಂದೆಡೆ ಈ ನಾರಿಶಕ್ತಿಗೆ ಅವಮಾನ ಮಾಡುವ ಕೆಲಸ ಆಗುತ್ತಿದೆ. ನಮ್ಮ ನಡುವೆ ಎಂತಹ ಜನರಿದ್ದಾರೆ ಎಂದು ಸೈನಾ ಆಕ್ರೋಶ ಹೊರಹಾಕಿದ್ದಾರೆ.
ಅಷ್ಟಕ್ಕೂ ಶಾಮನೂರು ಶಿವಶಂಕರಪ್ಪ ಹೇಳಿದ್ದೇನು?
ದಾವಣಗೆರೆ ಬಂಟರ ಭವನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಜನಪ್ರತಿನಿಧಿಗಳು, ಮುಖಂಡರ ಸಭೆಯಲ್ಲಿ ಮಾತನಾಡಿದ್ದ ಶಾಮನೂರು ಶಿವಶಂಕರಪ್ಪ, ಗಾಯತ್ರಿ ಸಿದ್ದೇಶ್ವರ್ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದರು. ಮಾತನಾಡಲು ಬಾರದ ಗಾಯತ್ರಿ ಸಿದ್ದೇಶ್ವರ್ ಅವರು ಅಡುಗೆ ಮಾಡುವುದಕ್ಕೆ ಲಾಯಕ್ಕು. ಸಾರ್ವಜನಿಕ ಸಭೆಗಳಲ್ಲಿ ಮಾತನಾಡುವ ಶಕ್ತಿ ಅವರಿಗಿಲ್ಲ. ಹೀಗಾಗಿ ನಮ್ಮ ಕಾಂಗ್ರೆಸ್ಸಿಗರ ‘ಕೈ’ ಮೇಲಿದೆ ಎಂಬುದನ್ನು ನಾವು ತೋರಿಸಬೇಕು ಎಂದು ಹೇಳಿದ್ದರು.
ತಿರುಗೇಟು ನೀಡಿದ್ದ ಗಾಯತ್ರಿ ಸಿದ್ದೇಶ್ವರ್
ಇನ್ನು ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಈ ಹೇಳಿಕೆಗೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಇಂದು ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಮುನ್ನುಗ್ಗುತ್ತಿದ್ದಾರೆ. ಆಗಸದಲ್ಲಿ ಹಾರುವ ಹಂತವನ್ನು ತಲುಪಿದ್ದಾರೆ. ಎಲ್ಲ ಕ್ಷೇತ್ರದಲ್ಲಿ ಅವರ ಕೊಡುಗೆ ಇದೆ. ಈ ವಿಚಾರ ಅಜ್ಜನಿಗೆ ಗೊತ್ತಿಲ್ಲವೆಂದು ಅನ್ನಿಸುತ್ತದೆ ಎಂದು ತಿರುಗೇಟು ನೀಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:20 pm, Sat, 30 March 24