ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದಲೇ ಅಮಿತ್ ಶಾ ಪ್ರಚಾರ; ಡಿಕೆ ಶಿವಕುಮಾರ್ ಪ್ರತಿಕ್ರಿಯೆ
ಡಿಕೆ ಬ್ರದರ್ಸ್ ಕೋಟೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದಲೇ ಬಿಜೆಪಿ ಚಾಣಕ್ಯ ಅಮಿತ್ ಶಾ ಅವರು ಪ್ರಚಾರ ಆರಂಭಿಸಲಿದ್ದಾರೆ. ಈ ಬಗ್ಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ನಮಗೆ ಇದೆಲ್ಲಾ ಹೊಸದಲ್ಲ ಎಂದಿದ್ದಾರೆ.
ಬೆಂಗಳೂರು, ಮಾ.30: ರಾಜ್ಯದಲ್ಲಿ ಲೋಕಸಭಾ ಚುನಾವಣೆ (Lok Sabha Elections) ಕಾವು ಹೆಚ್ಚಾಗುತ್ತಿದ್ದು, ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿ ಪ್ರಚಾರಗಳನ್ನು ಆರಂಭಿಸಿದ್ದಾರೆ. ಈ ನಡುವೆ ಬಿಜೆಪಿ (BJP) ಹೈಕಮಾಂಡ್ ನಾಯಕರು ಕರ್ನಾಟಕದಲ್ಲಿ ಅಖಾಡಕ್ಕಿಳಿಯಲು ಮುಂದಾಗಿದ್ದಾರೆ. ಡಿಕೆ ಬ್ರದರ್ಸ್ ಕೋಟೆ ಭೇದಿಸಲು ಬಿಜೆಪಿ ಚಾಣಕ್ಯ ಅಮಿತ್ ಶಾ (Amit Shah) ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದಲೇ ಪ್ರಚಾರ ಆರಂಭಿಸಲಿದ್ದಾರೆ. ಈ ಬಗ್ಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಮೋರ್ ಸ್ಟ್ರಾಂಗ್ ಮೋರ್ ಎನಿಮಿಸ್, ಮೋರ್ ಸ್ಟ್ರಾಂಗ್ ಮೋರ್ ಪವರ್ ಎಂದು ಹೇಳಿದ್ದಾರೆ. ಅಲ್ಲದೆ, ಅಮಿತ್ ಶಾ ಆದರೂ ಬರಲಿ ಪ್ರಧಾನಿ ಮೋದಿ ಆದರೂ ಬರಲಿ. ನಮಗೆ ಇದೆಲ್ಲಾ ಹೊಸದು ಅಲ್ಲ ಎಂದಿದ್ದಾರೆ.
ಹೆಚ್ಡಿ ದೇವೇಗೌಡ ಅವರನ್ನು ಎದುರಿಸಿದ್ದೇವೆ, ಗೌಡರ ಮಗ ಹೆಚ್ಡಿ ಕುಮಾರಸ್ವಾಮಿ ಅವರನ್ನ ಎದರಿಸಿದ್ದೇವೆ. ಗೌಡರ ಮೊಮ್ಮಗನನ್ನು ಎದುರಿಸಿದ್ದೇವೆ, ಸೊಸೆಯನ್ನೂ ಎದುರಿಸಿದ್ದೇವೆ. ಈಗ ಗೌಡರ ಅಳಿಯನನ್ನ ಎದುರಿಸುತ್ತೇವೆ ಎಂದರು.
ಕೋವಿಡ್ ಸಂದರ್ಭದಲ್ಲಿ ಹೆಣ ಹೊತ್ತರು, ಮಣ್ಣ ಮಾಡಿದವರು ಯಾರು ಇಲ್ಲ. ಈಗ ಮಾತಾಡುವವರು ಕೋವಿಡ್ನಲ್ಲಿ ಎಲ್ಲಿ ಹೋಗಿದ್ದರು? ಆಹಾರದ ಕಿಟ್, ಔಷದಿ ಕೊಡುವಾಗ ಯಾರು ಇರಲಿಲ್ಲ. ಆಗ ಕ್ಷೇತ್ರದಲ್ಲಿ ಇದ್ದದ್ದು ಕಾಂಗ್ರೆಸ್ ಮತ್ತು ಡಿಕೆ ಸುರೇಶ್ ಮಾತ್ರ ಎಂದರು.
ಇದನ್ನೂ ಓದಿ; ಮೋದಿ ಮಾತ್ರವಲ್ಲ, ಕರ್ನಾಟಕದಲ್ಲಿ ಪ್ರಚಾರದ ಕಿಚ್ಚು ಹೆಚ್ಚಿಸಲಿದ್ದಾರೆ ಯೋಗಿ, ಅಮಿತ್ ಶಾ: ಇಲ್ಲಿದೆ ವಿವರ
ರಾಜ್ಯದಲ್ಲಿ ಎಲ್ಲಾ 28 ಕ್ಷೇತ್ರಗಳನ್ನು ಗೆದ್ದುಕೊಳ್ಳುವ ಮೂಲಕ ಆಡಳಿತರೂಢ ಪಕ್ಷ ಕಾಂಗ್ರೆಸ್ಗೆ ಸೆಡ್ಡು ಹೊಡೆಯಲು ಬಿಜೆಪಿ-ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಇನ್ನೊಂದೆಡೆ, ಕಾಂಗ್ರೆಸ್ ಕೂಡ ಕನಿಷ್ಠ 20 ಕ್ಷೇತ್ರಗಳನ್ನು ಗೆದ್ದುಕೊಳ್ಳಲು ರಣತಂತ್ರ ರೂಪಿಸುತ್ತಿದೆ. ಈ ನಡುವೆ ರಾಜ್ಯದಲ್ಲಿ ಅಬ್ಬರದ ಪ್ರಚಾರ ಆರಂಭಗೊಂಡಿದೆ. ಬಿಜೆಪಿ ಹೈಕಮಾಂಡ್ ಘಟಾನುಘಟಿ ನಾಯಕರನ್ನು ಪ್ರಚಾರದ ಅಖಾಡಕ್ಕಿಳಿಸಲು ಮುಂದಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್, ಏಪ್ರಿಲ್ 2 ರಂದು ರಾಜ್ಯದಲ್ಲಿ ಅಮಿತ್ ಶಾ ಅವರು ಪ್ರಚಾರ ನಡೆಸಲಿದ್ದಾರೆ. ಚನ್ನಪಟ್ಟಣದಿಂದ ಅಂದು ಅಮಿತ್ ಶಾ ಅವರ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಬೆಳಗ್ಗೆ 9 ಗಂಟೆ ಸುಮಾರಿಗೆ ಬೆಂಗಳೂರಿಗೆ ಆಗಮಿಸಲಿರುವ ಅಮಿತ್ ಶಾ ಅವರು ಬಿಜೆಪಿ-ಜೆಡಿಎಸ್ ಮೈತ್ರಿಯ ಪ್ರಮುಖ ನಾಯಕರೊಂದಿಗೆ ಉಪಹಾರ ಸೇವಿಸಲಿದ್ದಾರೆ. ನಂತರ, ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಈ ಸಮಾವೇಶಕ್ಕೆ ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳ ಜನರು ಆಗಮಿಸಲಿದ್ದಾರೆ.
ಸಮಾವೇಶ ಮುಕ್ತಾಯದ ನಂತರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಲ್ಲಿ ಸಭೆ ಆಯೋಜಿಸಲಾಗಿದೆ. ಈ ಸಭೆಯಲ್ಲಿ ದಾವಣಗೆರೆ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಸೇರಿದಂತೆ ಒಟ್ಟು ಐದು ಕ್ಷೇತ್ರಗಳ ಪ್ರಮುಖರೊಂದಿಗೆ ಅಮಿತ್ ಶಾ ಅವರು ಚರ್ಚೆ ನಡೆಸಲಿದ್ದಾರೆ. ಸಂಜೆ 6 ಗಂಟೆಗೆ ಚನ್ನಪಟ್ಟಣದಲ್ಲಿ ಅಮಿತ್ ಶಾ ರೋಡ್ ಶೋ ನಡೆಯಲಿದೆ ಎಂದು ಸುನೀಲ್ ಕುಮಾರ್ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:14 pm, Sat, 30 March 24