ಶಾಸಕ ರೇಣುಕಾಚಾರ್ಯ ಸೋದರನ ಪುತ್ರ ಚಂದ್ರಶೇಖರ್‌ ಶವವಾಗಿ ಪತ್ತೆ: ನಾಪತ್ತೆಯಿಂದ ಇಲ್ಲಿಯವರೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 03, 2022 | 6:10 PM

ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ಶವ ಇಂದು (ನ. 03) ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಬಳಿ ತುಂಗಾ ಕಾಲುವೆಯಲ್ಲಿ ಪತ್ತೆಯಾಗಿದೆ.

ಶಾಸಕ ರೇಣುಕಾಚಾರ್ಯ ಸೋದರನ ಪುತ್ರ ಚಂದ್ರಶೇಖರ್‌ ಶವವಾಗಿ ಪತ್ತೆ: ನಾಪತ್ತೆಯಿಂದ ಇಲ್ಲಿಯವರೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ
ರೇಣುಕಾಚಾರ್ಯ ಸೋದರನ ಪುತ್ರ ಚಂದ್ರಶೇಖರ್‌ ಶವ ಪತ್ತೆ
Follow us on

ದಾವಣಗೆರೆ: ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ (mp renukacharya) ಅವರ ಸಹೋದರನ ಪುತ್ರ ಚಂದ್ರಶೇಖರ್ (MP Renukacharya Nephew) ಇಂದು (ನ. 03) ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಬಳಿ ತುಂಗಾ (Kadadakatte Thunga Canal) ಕಾಲುವೆಯಲ್ಲಿ ಶವ ಪತ್ತೆಯಾಗಿದೆ. ತುಂಗಾ ಕಾಲುವೆಯಲ್ಲಿ ಬಿಳಿ ಬಣ್ಣದ ಕಾರು ಪತ್ತೆಯಾಗಿದ್ದು, ಕ್ರೇನ್ ಬಳಸಿ ಕಾರನ್ನು ಮೇಲೆತ್ತಿದ್ದಾರೆ. ಬಳಿಕ ಕಾರಿನಲ್ಲಿ ಚಂದ್ರಶೇಖರ್ ಶವ ಸಹ ಪತ್ತೆಯಾಗಿದೆ. ಕಾರನ್ನು ಕಾಲುವೆಯಿಂದ ಮೇಲೆತ್ತಿದಾಗ  ಏರ್‌ಬ್ಯಾಗ್ ಓಪನ್ ಆಗಿರುವುದು ಕಂಡುಬಂದಿದೆ. ಇನ್ನು ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಚಂದ್ರಶೇಖರ್‌ ಮೃತದೇಹ ಪತ್ತೆಯಾಗಿದೆ. ಸೋದರನ ಪುತ್ರನ ಶವ ಕಂಡು ರೇಣುಕಾಚಾರ್ಯ ಆಕ್ರಂದನ ಮುಗಿಲುಮುಟ್ಟಿದೆ.

ಅಕ್ಟೋಬರ್ 30ರಂದು ನಾಪತ್ತೆ:

ರೇಣುಕಾಚಾರ್ಯ ಸಹೋದರ ಎಂ.ಪಿ.ರಮೇಶ್ ಪುತ್ರ ಚಂದ್ರಶೇಖರ್ ಭಾನುವಾರ (ಅಕ್ಟೋಬರ್ 30) ರಾತ್ರಿ 11.30 ರಿಂದ ನಾಪತ್ತೆಯಾಗಿದ್ದರು. ಭಾನುವಾರ ಸಂಜೆ ಚಿಕ್ಕಮಗಳೂರು ಜಿಲ್ಲೆಯ ಗೌರಿಗದ್ದೆಗೆ ಹೋಗಿ ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದ ಚಂದ್ರು ರಾತ್ರಿ ಊರಿಗೆ ವಾಪಸ್ ಆಗಿದ್ದ. ರಾತ್ರಿ 11 ಗಂಟೆ ಸುಮಾರಿಗೆ ದೆಹಲಿಯ ಸ್ನೇಹಿತರ ಜೊತೆ ಕೊನೆಯದಾಗಿ ಮಾತಾಡಿದ್ದಾನೆ‌. 11.30 ಕ್ಕೆ ಹೊನ್ನಾಳಿ ಪಟ್ಟಣದಲ್ಲಿ ಮೊಬೈಲ್ ಸ್ವಿಚ್ ಆಫ್ ಆಗಿದೆ. ಅಲ್ಲಿಂದ ಇಲ್ಲಿಯವರೆಗೆ ಸಿಗ್ನಲ್ ಟ್ರೇಸ್ ಆಗಿಲ್ಲ. ಅಲ್ಲದೆ ಶಿವಮೊಗ್ಗ ದಿಂದ ನ್ಯಾಮತಿ ತಾಲ್ಲೂಕಿನ ಸುರಹೊನ್ನೆಗೆ ಬಂದ ಸಿಸಿ ಕ್ಯಾಮರಾ ಪುಟೇಜ್ ಮಾತ್ರ ಸಿಕ್ಕಿತ್ತು.

ಆದರೆ ಸುರಹೊನ್ನೆಯಿಂದ ಹೊನ್ನಾಳಿ ಗೆ ಬಂದ ಮಾಹಿತಿ ಸಿಕ್ಕಿರಲಿಲ್ಲ. ಆದರೆ ಚಂದ್ರಶೇಖರ್ ಮೊಬೈಲ್ ಮಾತ್ರ ಹೊನ್ನಾಳಿ ಪಟ್ಟಣದ ಸರ್ಕಲ್​ನಲ್ಲಿ ಸ್ವಿಚ್ ಆಫ್ ಆಗಿತ್ತು. ಎಷ್ಟೇ ಹುಡುಕಿದರೂ ಚಂದ್ರಶೇಖರ್ ಸುಳಿವು ಸಿಗದಿದ್ದಕ್ಕೆ ಆತಂಕಗೊಂಡ ಕುಟುಂಬಸ್ಥರು ದಾವಣಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡಿರುವ ಪೊಲೀಸರು ಸಹ ಚಂದ್ರಶೇಖರ್​ಗಾಗಿ ತೀವ್ರ ಹುಡುಕಾಟ ನಡೆಸಿದ್ದರು.

ಆಧ್ಯಾತ್ಮಕ್ಕೆ ಹೆಚ್ಚು ಒತ್ತು ನೀಡುತ್ತಿದ್ದ ಚಂದ್ರಶೇಖರ್:

ಬಹಳ ಆಧ್ಯಾತ್ಮಿಕತೆಗೆ ಹೆಚ್ಚು ಒತ್ತು ನೀಡುತ್ತಿದ್ದ ಚಂದ್ರಶೇಖರ್ ಭಾನುವಾರ ಸಂಜೆ ಆರು ಗಂಟೆಗೆ ಶಿವಮೊಗ್ಗ ಜಿಲ್ಲೆಯ ಗೌರಿಗದ್ದೆಗೆ ಆಗಮಿಸಿದ್ದ. ವಿನಯ್ ಗುರುಜೀಯವರನ್ನು ಸ್ನೇಹಿತ್ ಕಿರಣ್​ರೊಂದಿಗೆ ಭೇಟಿ ಮಾಡಿ ಕೆಲವರಿಗೆ ಊಟ ಬಡಿಸಿದ್ದಾನೆ. ಅದಾದ ಬಳಿಕ ಶಿವಮೊಗ್ಗದಿಂದ ಹಿಂದಿರುಗಿದ ಚಂದ್ರು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿಗೆ ಎಂಟ್ರಿ ಆಗಿದ್ದೇ ಕೊನೆ ಇಲ್ಲಿತನಕ ಚಂದ್ರಶೇಖರ್ ಕಾರು ಸಮೇತ ನಾಪತ್ತೆಯಾಗಿದ್ದಾನೆ. ಇನ್ನು ಪೋಲಿಸರು ಕುಟುಂಬಸ್ಥರು ಕೂಡ ಸಾಕಷ್ಟು ಹುಡುಕಾಟ ನಡೆಸುತ್ತಿದ್ದು, ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಶಾಸಕ ರೇಣುಕಾಚಾರ್ಯ ಕಣ್ಣೀರಿಟ್ಟಿದ್ದರು.

ಪತ್ತೆಗೆ ನಾಲ್ಕು ತಂಡ ರಚನೆ:

ಇದೊಂದು ಹೈ ಪ್ರೊಫೈಲ್ ಕೇಸ್ ಆಗಿದ್ದರಿಂದ ಪೊಲೀಸರು ಅಲರ್ಟ್ ಆಗಿದ್ದು, ತನಿಖೆಗಾಗಿ ನಾಲ್ಕು ತಂಡ ರಚಿಸಲಾಗಿತ್ತು. ದಾವಣಗೆರೆ, ಶಿವಮೊಗ್ಗ ಪೊಲೀಸರು ತೀವ್ರ ಕಾರ್ಯಚರಣೆ ನಡೆಸಿದ್ದರು. ರೇಣುಕಾಚಾರ್ಯರವರ ಆಪ್ತ ಸಚಿನ್ ಎನ್ನುವರು ಕರೆ ಮಾಡಿ ಚಂದ್ರು ಅವನ ಕಾರಿನಲ್ಲಿ ಮೈಸೂರು ಕಡೆ ಹೋಗುತ್ತಿದ್ದಾನೆ. ಆತನ ಜೊತೆ ಮೂರು ಜನರು ಇದ್ದರು ಎಂದು ತಿಳಿಸಿದ ಕೂಡಲೆ ಎಸ್​ಪಿಗೆ ಕರೆ ಮಾಡಿ ಮಾಹಿತಿ ತಿಳಿಸಿದ ತಕ್ಷಣ ಎಸ್​ಪಿ ರಿಷ್ಯಂತ್ ಒಂದು ತಂಡವನ್ನು ಮೈಸೂರಿನ ಕಡೆಗೆ ಕಳುಹಿಸಿದ್ದರು. ಅಲ್ಲದೆ ರೇಣುಕಾಚಾರ್ಯ ಆಪ್ತರು ಕೂಡ ಮೈಸೂರಿನ ಕಡೆ ಹೋಗಿದ್ದರು.

ಚಂದ್ರಶೇಖರ್​ಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧ: ರೇಣುಕಾಚಾರ್ಯ 

ನಾಪತ್ತೆ ಕುರಿತಾಗಿ ರೇಣುಕಾಚಾರ್ಯ ಮಾತನಾಡಿದ್ದು, ನನ್ನ ಮಗನ ವ್ಯವಸ್ಥಿತ ಕಿಡ್ನಾಪ್ ಆಗಿದೆ. ನನ್ನ ಮಗನನ್ನ ಇಟ್ಟುಕೊಂಡು ಹಣಕ್ಕೆ ಬೇಡಿಕೆ ಇಟ್ಟರು ನಾನು ಅದನ್ನ ಪೂರೈಸಲು ಸಿದ್ದ. ಮೊಬೈಲ್ ಸ್ವಿಚ್ ಆಫ್ ಮಾಡಿಸಿದ್ದಾರೆ. ಇದು ವ್ಯವಸ್ಥಿತವಾಗಿ ಅಪಹರಣ ಮಾಡಲಾಗಿದೆ ಎಂದು ಶಂಕೆ ವ್ಯಕ್ತಪಡಿಸಿದರು. ಯಾವುದೇ ಬೇಡಿಕೆ ಇದ್ದರೂ ‌ತಿಳಿಸಿ. ಮಗ ಚಂದ್ರಶೇಖರ್​ಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧ. ಮಗನ ಬಗ್ಗೆ ಸುಳಿವು‌ ನೀಡಿದವರಿಗೆ ಬಹುಮಾನ ನೀಡುವೆ. ಸೂಕ್ಷ್ಮವಾಗಿ ಬಹುಮಾನ ನೀಡುವೆ. ಅಪಹರಿಸಿದವರು ಬೇಡಿಕೆ ಇದ್ರೆ ಹೇಳಲಿ ಎಂದರು. ಇನ್ನು ಸಹೋದರನ ಮಗನನ್ನು ನೆನೆದು, ಚಂದ್ರು ಎಲ್ಲಿದ್ದಿಯೋ ಬಾರೋ ಎಂದು ರೇಣುಕಾಚಾರ್ಯ ಬಿಕ್ಕಿಬಿಕ್ಕಿ ಅತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:54 pm, Thu, 3 November 22