ಚಲಿಸುತ್ತಿದ್ದ ಆಟೋ ಪಲ್ಟಿ, ಇಬ್ಬರು ಕೂಲಿಕಾರ್ಮಿಕರ ಸ್ಥಿತಿ ಗಂಭೀರ, ಹಲವರಿಗೆ ಗಾಯ
ಕೂಲಿ ಕಾರ್ಮಿಕರು ಚಲಿಸುತ್ತಿದ್ದ ಆಟೋ ಪಲ್ಟಿಯಾಗಿ ಹಲವರಿಗೆ ಗಾಯಗಳಾಗದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಲಾರಿ ಟೈರ್ ಸ್ಫೋಟಗೊಂಡು ಚಾಲಕ ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಹಾವೇರಿಯಲ್ಲಿ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಪತ್ತೆಯಾಗಿದೆ.

ದಾವಣಗೆರೆ: ಕೂಲಿ ಕಾರ್ಮಿಕರು ಚಲಿಸುತ್ತಿದ್ದ ಆಟೋ ಪಲ್ಟಿಯಾಗಿ (Auto overturned) ಹನ್ನೆರಡಕ್ಕೂ ಹೆಚ್ಚು ಕೂಲಿಕಾರ್ಮಿಕ ಮಹಿಳೆಯರಿಗೆ ಗಾಯಗಳಾದ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಬೆಣ್ಣಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ನಡೆದಿದೆ. ದುರ್ಘಟನೆಯಲ್ಲಿ ಗಾಯಗೊಂಡವರ ಪೈಕಿ ಇಬ್ಬರು ಮಹಿಳೆಯರ ಸ್ಥಿತಿ ಗಂಭೀರವಾಗಿದ್ದು, ಗಾಯಗೊಂಡ ಎಲ್ಲರಿಗೂ ಜಗಳೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಣಬೂರನಿಂದ ಚಿತ್ರದುರ್ಗ ಜಿಲ್ಲೆಯ ಚಿಕ್ಕಪ್ಪನಹಳ್ಳಿ ಗ್ರಾಮಕ್ಕೆ ಕೂಲಿ ಕೆಲಸಕ್ಕಾಗಿ ಹೋಗುತ್ತಿದ್ದಾಗ ಹೆದ್ದಾರಿಯಲ್ಲಿ ಅನಿರೀಕ್ಷಿತವಾಗಿ ಕಾರು ಎದುರಿಗೆ ಬಂದಾಗ ಅಪಘಾತ ತಪ್ಪಿಸಲು ಆಟೋ ಚಾಲಕ ಬದಿಗೆ ತೆಗೆದುಕೊಂಡಾಗ ಪಲ್ಟಿಯಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಗಳೂರು ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಪ್ರತ್ಯೆಕ ಅಪಘಾತಗಳಿಗೆ ಒಟ್ಟು ನಾಲ್ವರು ಬಲಿ
ತುಮಕೂರು: ಲಾರಿ ಟೈರ್ ಬ್ಲಾಸ್ಟ್ (Lorry Tyre Blast) ಆಗಿ ಚಾಲಕ ಸಾವನ್ನಪ್ಪಿದ ಘಟನೆ ತಿಪಟೂರು ತಾಲೂಕಿನ ಇಂಡಿಸ್ಕೆರೆ ಗ್ರಾಮದ ಬಳಿ ನಡೆದಿದೆ. ಹನುಮಂತರಾಯಪ್ಪ ಸಾವನ್ನಪ್ಪಿದ ಲಾರಿ ಚಾಲಕರಾಗಿದ್ದಾರೆ. ಲಾರಿ ಟೈರ್ ಬಿಸಿಯಾಗಿದೆಯೇ ಎಂದು ನೋಡಲು ಹೋದಾಗ ಏಕಾಏಕಿ ಬ್ಲಾಸ್ ಆಗಿದೆ. ಈ ವೇಳೆ ಟೈರ್ ಹೊಡೆತಕ್ಕೆ ಚಾಲಕ ಸಾವನ್ನಪ್ಪಿದ್ದಾರೆ. ಇನ್ನೊಂದೆಡೆ, ತಿಪಟೂರು ತಾಲೂಕಿನ ಬೊಮ್ಮೆನಹಳ್ಳಿ ಗೇಟ್ ಬಳಿ ಮತ್ತೊಂದು ದುರ್ಘಟನೆ ನಡೆದಿದೆ. ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಬೋರೆಗೌಡ (28) ಸಾವನ್ನಪ್ಪಿದ್ದಾರೆ.
ಜಿಲ್ಲೆಯ ಕುಣಿಗಲ್ ತಾಲೂಕಿನ ದೊಡ್ಡಮಾವತ್ತೂರು ಟೋಲ್ ಬಳಿ ಮತ್ತೊಂದು ಘಟನೆ ನಡೆದಿದೆ. ನಾಯಿ ಅಡ್ಡ ಬಂದ ಕಾರಣ ಬೈಕ್ ಬ್ರೇಕ್ ಹಾಕಿದಾಗ ಹಿಂಬದಿಯಲ್ಲಿ ಕುಳಿತಿದ್ದ ಕಲ್ಪನಾ (49) ಎಂಬವರು ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಇನ್ನೊಂದೆಡೆ ಚಿಕ್ಕನಾಯಕನಹಳ್ಳಿ ತಾಲೂಕಿನ ಮುದ್ದೇನಹಳ್ಳಿ ಗೇಟ್ ಬಳಿ ಪಾದಾಚಾರಿಯೊಬ್ಬರಿಗೆ ಓಮಿನಿ ಕಾರು ಡಿಕ್ಕಿಯಾದ ಘಟನೆ ನಡೆದಿದೆ. ರಸ್ತೆ ಬದಿ ನಡೆದುಕೊಂಡು ಹೋಗುವಾಗ ಓಮಿನಿ ಕಾರು ಡಿಕ್ಕಿಯಾಗಿ ವಿಜಯಕುಮಾರ ನಾಯ್ಕ ಸಾವನ್ನಪ್ಪಿದ್ದಾರೆ.
ಹಾವೇರಿ: ನದಿ ನೀರು ಪಾಲಾದ ಮೂವರು ಯುವಕರು; ಮೃತದೇಹಗಳು ಪತ್ತೆ
ಹಾವೇರಿ: ಈಜಲು ತೆರಳಿದ್ದಾಗ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಮೂವರು ಯುವಕರ ಮೃತದೇಹ ರಾಣೆಬೆನ್ನೂರ ತಾಲೂಕಿನ ಮುದೇನೂರ ಗ್ರಾಮದಲ್ಲಿ ಪತ್ತೆಯಾಗಿದೆ. ವಿಕಾಸ್ ಪಾಟೀಲ್ (20 ವರ್ಷ), ನವೀನ್ ಕುರಗುಂದ (20) ಮತ್ತು ನೆಪಾಳದ ಮೂಲದ ಪ್ರೇಮ್ ಬೋರಾ (25) ಮೃತದೇಹ ಪತ್ತೆಯಾಗಿದೆ. ನೀರುಪಾಲದ ಯುವಕರ ಪತ್ತೆಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ನಿರಂತರವಾಗಿ ಶೋಧಕಾರ್ಯ ನಡೆಸಿದ್ದರು. ಹೊಸ ವರ್ಷ ನಿಮಿತ್ತ ಜನವರಿ 1 ರಂದು ಪಾರ್ಟಿ ಮಾಡಲು ತುಂಗಭದ್ರಾ ನದಿಯ ಪಂಪಹೌಸ್ ಬಳಿ ಯುವಕರು ಹೋಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:37 am, Tue, 3 January 23




