ಎಲ್ಲರೂ ವೈದ್ಯರಲ್ಲಿ ದೈವ ಕಾಣಲು ಬಯಸಿದರೆ ಈ ವೈದ್ಯ ರೋಗಿಗಳೇ ತನಗೆ ದೇವರು ಅಂತಾರೆ! ಇವರಿಗೊಂದು ಸಲಾಂ ಹೇಳೋಣ
ಕಳೆದ 32 ವರ್ಷಗಳಿಂದ ಗ್ರಾಮೀಣ ಸೇವೆ ಮಾಡುತ್ತಿರುವ ಡಾ ಬಸವಂತಪ್ಪ ರೋಗಿಗಳಲ್ಲೇ ದೇವರನ್ನು ಕಂಡ ವೈದ್ಯ ಮಹಾಶಯ! ವೈದ್ಯ ವೃತ್ತಿ ಎನ್ನುವುದು ಜೀವಗಳನ್ನು ಬದುಕಿಸುವ ಪುಣ್ಯದ ವೃತ್ತಿ.
ವೈದ್ಯೋ ನಾರಾಯಣೋ ಹರಿಃ! ವೈದ್ಯರು ಅಂದ್ರೆ ಒಂದು ರೀತಿಯಲ್ಲಿ ಕಣ್ಣಿಗೆ ಕಾಣುವ ದೇವರು (God) ಅಂತಾನೇ ಹೇಳ್ತಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಈ ವ್ಯಾಖ್ಯಾನ ಬದಲಾಗಿದೆ. ಆಸ್ಪತ್ರೆ ಅಂಗಳದಲ್ಲಿ ಹೆಜ್ಜೆಯಿಟ್ಟರೆ ಸಾಕು ಶುರುವಾಗುತ್ತದೆ ಸುಲಿಗೆ. ಆದ್ರೆ ವೈದ್ಯರನ್ನ ಅನಾದಿಕಾಲದಿಂದಲೂ ದೇವರು ಅಂತಲೇ ನಂಬಿರುವ ನಾಡು ನಮ್ಮದು. ಕಾಲ ಬದಲಾದರೂ ಜನರ ನಂಬಿಕೆ ಅಚಲವಾಗಿದೆ. ಇದಕ್ಕೆ ಕೆಲವೇ ಮಂದಿ ನಮ್ಮ ಮಧ್ಯೆ ಇದ್ದು ಈ ನಾಣ್ಣುಡಿ ಮತ್ತು ತಮ್ಮ ಕಾಯಕಕ್ಕೆ ನ್ಯಾಯ ಒದಗಿಸುತ್ತಿದ್ದಾರೆ. ಇದಕ್ಕೆ ಹೇಳಿ ಮಾಡಿಸಿದ ವ್ಯಕ್ತಿ ಇಲ್ಲೊಬ್ಬರಿದ್ದಾರೆ. ಇಲ್ಲಿದೆ ಆ ಬಡವರ ಪಾಲಿನ (Poor Patients) ಭಾಗ್ಯಧಾತ ಡಾಕ್ಟರ್ ಸ್ಟೋರಿ. ದಾವಣಗೆರೆ ಅಂದ್ರೆ ವೈದ್ಯಕೀಯ ಶಿಕ್ಷಣಕ್ಕೆ ಹೇಳಿ ಮಾಡಿಸಿದ ಸ್ಥಳ. ವೈದ್ಯೋ ನಾರಾಯಣೋ ಹರಿಃ! ಎಂಬುದು ಕೆಲ ವೈದ್ಯರಿಗೆ ಅಕ್ಷರಶಃ ಹೊಂದುತ್ತದೆ. ಅಂತಹ ವೈದ್ಯರಲ್ಲಿ ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನ (Santhebennur) ಡಾ. ಬಸವಂತಪ್ಪ ಒಬ್ಬರು (Special Doctor Basavanthappa). ಇವರು ಬಡವರ ಪಾಲಿನ ಬಂಧು ಅಶ್ವಿನಿ ದೇವ ಅಂದರೆ ತಪ್ಪೇನೂ ಇಲ್ಲ. ಹೌದು. ಎರಡು ರೂಪಾಯಿ ವೈದ್ಯನಾದ ಚಿರಪರಿಚಿತ ವೈದ್ಯರನ್ನು ಇಲ್ಲಿನ ಜನ ಹೃದಯಪೂರ್ವಕವಾಗಿ ಸನ್ಮಾನಿಸಿದ್ದಾರೆ. ಡಾ. ಬಸವಂತಪ್ಪ ಅದಕ್ಕೆ ಅರ್ಹರೂ ಅಹ.
ಅವರ ಅಭಿಮಾನಿಗಳು ಸಂತೇಬೆನ್ನೂರು ನಾಗರಿಕರು ಇಂತಹ ವೈದ್ಯನ ದಶಕಗಳ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಪ್ರತಿಯೊಬ್ಬರಿಗೂ ಉತ್ತಮ ಸಾಧನೆಯ ಕನಸು, ಗುರಿ ಇರುತ್ತದೆ. ಆ ಗುರಿ ಮುಟ್ಟುವವರು ಕೆಲವೇ ಜನ. ಅದರಲ್ಲಿಯೂ ಎಂಬಿಬಿಎಸ್ ಮುಗಿಸಿ ವೈದ್ಯ ಪದವಿ ಬಂದ ತಕ್ಷಣ ನಗರ ಸೇರಿ ಹಣ ಸಂಪಾದನೆ ಮಾಡುವುದಕ್ಕೆ ಪಣ ತೊಡುವ ವೈದ್ಯರ ಮಧ್ಯೆ ಇವರು ವಿಭಿನ್ನವಾಗಿ ಕಾಣಿಸುತ್ತಾರೆ. ಹೊನ್ನೆ ಮರದ ಹಳ್ಳಿಯ ವೈದ್ಯ ಡಾ. ಬಸವಂತಪ್ಪ ಕಳೆದ 32 ವರ್ಷಗಳಿಂದ ತನ್ನ ವಿದ್ಯೆ ಮತ್ತು ಸೇವೆಯನ್ನು ತಮ್ಮ ಗ್ರಾಮದ ಸೇವೆಯಲ್ಲಿ ನಿರಂತರಾಗಿದ್ದಾರೆ. ಬಡ ರೋಗಿಗಳ ಪಾಲಿನ ಆರಾಧ್ಯ ದೈವ ಆಗಿದ್ದಾರೆ.
ನೀತಿಗೆರೆಯಲ್ಲಿ ಪಾಥಮಿಕ ಶಿಕ್ಷಣ, ಸಿರಿಗೆರೆಯಲ್ಲಿ ಹೈಸ್ಕೂಲು, ಶಿವಮೊಗ್ಗದಲ್ಲಿ ಪಿಯುಸಿ, ಮೈಸೂರಿನಲ್ಲಿ ಎಂ.ಬಿ.ಬಿ.ಎಸ್ ಮುಗಿಸಿ ಸಂತೆಬೆನ್ನೂರಿನಲ್ಲಿ ಸಿದ್ದೇಶ್ವರ್ ಕ್ಲಿನಿಕ್ ತೆರೆದು ತಮ್ಮ ವೃತ್ತಿ ಜೀವನ ಆರಂಭಿಸಿದರು. ರೋಗಿಗಳ ಪರೀಕ್ಷೆಗೆ 3 ರೂ. ಫೀಸ್‌ನೊಂದಿಗೆ ಪ್ರಾರಂಭ ಮಾಡಿದರು. ನಂತರದ ದಿನಗಳಲ್ಲಿ 5 ರೂ. 20 ರೂ.ಗಳು. ಈಗ ಅವರ ಸೇವಾಶುಲ್ಕ 30 ರೂಪಾಯಿಗೆ ಬಂದು ನಿಂತಿದೆ (consultation fee)!
ಇನ್ನು ಮಾತ್ರೆ ಕೊಳ್ಳಲಾರದ ಬಡವರಿಗೆ ಉಚಿತವಾಗಿ ಬರುವ ಸ್ಯಾಂಪಲ್ ಮಾತ್ರೆಗಳನ್ನು ಕೊಟ್ಟು ಬಡವರಿಗೆ ರೋಗ ಗುಣಪಡಿಸಿರುವ ಅದೆಷ್ಟೋ ಉದಾಹರಣೆಗಳಿವೆ. ಪ್ರತಿ ದಿನ ವೈದ್ಯರು ಬೆಳಗ್ಗೆ ಬಂದರೆ ರಾತ್ರಿಯೇ ಮನೆಗೆ ಹೊರಡುತ್ತಾರೆ. ಕೆಲವು ದಿನಗಳಲ್ಲಿ 80 ದಿಂದ 90 ರೋಗಿಗಳನ್ನು ನೋಡುತ್ತಾರೆ. ಇವರ ಈ ಸೇವಾ ಕಾರ್ಯಕ್ಕೆ ಪತ್ನಿ ಸುಜಾತ ಕೂಡ ಸಾಥ್ ನೀಡಿದ್ದಾರೆ.
ಕಳೆದ 32 ವರ್ಷಗಳಿಂದ ಗ್ರಾಮೀಣ ಸೇವೆ ಮಾಡುತ್ತಿರುವ ಡಾ ಬಸವಂತಪ್ಪ ರೋಗಿಗಳಲ್ಲೇ ದೇವರನ್ನು ಕಂಡ ವೈದ್ಯ ಮಹಾಶಯ! ವೈದ್ಯ ವೃತ್ತಿ ಎನ್ನುವುದು ಜೀವಗಳನ್ನು ಬದುಕಿಸುವ ಪುಣ್ಯದ ವೃತ್ತಿ. ಈ ಭಾಗದಲ್ಲಿ ಯಾವ ಹಳ್ಳಿಗೇ ಹೋದರೂ ನಮ್ಮ ಡಾಕ್ಟರು ಎಂದು ಜನರು ಹೇಳುವಾಗ ನನಗೆ ಹೆಮ್ಮೆ ಎನಿಸುತ್ತದೆ. ನನಗೆ ವೃತ್ತಿ ಜೀವನದಲ್ಲಿ ಸಂತೃಪ್ತಿ ಸಿಕ್ಕಿದೆ ಎನ್ನುತ್ತಾರೆ.
ಕೊರೊನಾ ಮಹಾಮಾರಿ ಕಾಲದಲ್ಲಿಯೂ ವೈದ್ಯ ಬಸವಂತಪ್ಪನವರು ಅವಿರತ ಸೇವೆ ಸಲ್ಲಿಸಿದ್ದಾರೆ. ಸುತ್ತಮುತ್ತ 40 ಹಳ್ಳಿಗಳಲ್ಲಿ ಅವರು ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ಅವರು ನಮ್ಮ ಊರಿನ ಹೆಮ್ಮೆಯ ಡಾಕ್ಟರ್ ಎಂದೇ ಪ್ರಸಿದ್ದಿ ಪಡೆದಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಇಂದು ಲಕ್ಷಾಂತರ ರೂಪಾಯಿ ಬಿಲ್ ಮಾಡಿ ಸತಾಯಿಸುವ ಪ್ರಕರಣಗಳೆ ಹೆಚ್ಚು. ಇಂತಹ ಸಮಾಜದಲ್ಲಿ ಬಸವಂತಪ್ಪ ಅವರಂತ ವೈದ್ಯರು ಅಪರೂಪವೇ ಸರಿ.
ವರದಿ: ಬಸವರಾಜ್ ದೊಡ್ಮನಿ, ಟಿವಿ9, ದಾವಣಗೆರೆ