ಮಾನವೀಯತೆಯ ಮಹಾ ಮಾತೆ: ಮನೆ ಮಾರಿ ಸೈನಿಕರ ನಿಧಿಗೆ 10 ಲಕ್ಷ ರೂ. ದೇಣಿಗೆ ನೀಡಿದ ಕ್ಯಾನ್ಸರ್ ಪೀಡಿತ ನಿವೃತ್ತ ಶಿಕ್ಷಕಿ ಕರಿಬಸಮ್ಮ

ದಾವಣಗೆರೆಯ ನಿವೃತ್ತ ಶಿಕ್ಷಕಿ ಹಾಗೂ ದಯಾಮರಣ ಹೋರಾಟಗಾರ್ತಿ ಕೆಬಿ ಕರಿಬಸಮ್ಮ ಸ್ವಂತ ಮನೆಯನ್ನು ಮಾರಿದ ಹಣ ಮತ್ತು ಪಿಂಚಣಿ ಉಳಿತಾಯ ಸೇರಿದಂತೆ ಒಟ್ಟು 10 ಲಕ್ಷ ರೂಪಾಯಿಗಳನ್ನು ದೇಶ ಕಾಯುವ ಸೈನಿಕರ ಕಲ್ಯಾಣ ನಿಧಿಗೆ ದೇಣಿಗೆಯಾಗಿ ನೀಡುವ ಮೂಲಕ ಅಪಾರ ದೇಶಪ್ರೇಮ ಮೆರೆದಿದ್ದಾರೆ.

ಮಾನವೀಯತೆಯ ಮಹಾ ಮಾತೆ: ಮನೆ ಮಾರಿ ಸೈನಿಕರ ನಿಧಿಗೆ 10 ಲಕ್ಷ ರೂ. ದೇಣಿಗೆ ನೀಡಿದ ಕ್ಯಾನ್ಸರ್ ಪೀಡಿತ ನಿವೃತ್ತ ಶಿಕ್ಷಕಿ ಕರಿಬಸಮ್ಮ
ದಾವಣಗೆರೆ ಜಿಲ್ಲಾಧಿಕಾರಿ ಜಿಎಂ ಗಂಗಾಧರಸ್ವಾಮಿಗೆ ಚೆಕ್ ಹಸ್ತಾಂತರಿಸಿದ ಕೆಬಿ ಕರಿಬಸಮ್ಮ
Image Credit source: tv9
Edited By:

Updated on: Jun 22, 2026 | 12:02 PM

ದಾವಣಗೆರೆ, ಜೂನ್ 22: ದೇಶ ಕಾಯುವ ಸೈನಿಕರ ಮೇಲಿನ ಗೌರವ ಮತ್ತು ದೇಶಪ್ರೇಮಕ್ಕೆ ಸಾಟಿಯಿಲ್ಲದಂತಹ ಹೃದಯಸ್ಪರ್ಶಿ ವಿದ್ಯಮಾನಕ್ಕೆ ದಾವಣಗೆರೆ (Davanagere) ಜಿಲ್ಲೆ ಸಾಕ್ಷಿಯಾಗಿದೆ. ಜಿಲ್ಲೆಯ ಹಿರಿಯ ನಿವಾಸಿ, ನಿವೃತ್ತ ಶಿಕ್ಷಕಿ ಹಾಗೂ ದಯಾಮರಣ ಹೋರಾಟಗಾರ್ತಿಯೂ ಆಗಿರುವ 86 ವರ್ಷ ವಯಸ್ಸಿನ ಕೆಬಿ ಕರಿಬಸಮ್ಮ ಅಜ್ಜಿ (KB Karibasamma) ತಮ್ಮ ಆಸ್ತಿಯನ್ನು ಸೈನಿಕರ ನಿಧಿಗೆ ಅರ್ಪಿಸಿದ್ದಾರೆ. ಭಾರತದ ಗಡಿ ಕಾಯುವ ಯೋಧರ ಕಲ್ಯಾಣಕ್ಕಾಗಿ ಬರೋಬ್ಬರಿ 10 ಲಕ್ಷ ರೂಪಾಯಿಗಳ ಧನಸಹಾಯದ ಚೆಕ್ ಅನ್ನು ಅವರು ದಾವಣಗೆರೆ ಜಿಲ್ಲಾಧಿಕಾರಿಗಳಾದ ಜಿ.ಎಂ. ಗಂಗಾಧರಸ್ವಾಮಿಗೆ ಹಸ್ತಾಂತರಿಸಿದ್ದಾರೆ.

ಮುಖ್ಯಾಂಶಗಳು

  • ಮನೆ ಮಾರಿದ ಹಣ ಸೈನಿಕರ ನಿಧಿಗೆ ಅರ್ಪಣೆ.
  • ಡಿಸಿಗೆ 10 ಲಕ್ಷ ರೂ. ಚೆಕ್ ನೀಡಿದ ಅಜ್ಜಿ.
  • ಕ್ಯಾನ್ಸರ್ ಇದ್ದರೂ ದೇಶಪ್ರೇಮ ಮೆರೆದ ನಿವೃತ್ತ ಶಿಕ್ಷಕಿ.

ಮನೆ ಮಾರಿದ ಹಣ, ಪಿಂಚಣಿಯೇ ದೇಣಿಗೆ

ಈ ವಿನೂತನ ಮತ್ತು ಆದರ್ಶಪ್ರಾಯ ಕಾರ್ಯದ ಕುರಿತು ಮಾತನಾಡಿರುವ ಕರಿಬಸಮ್ಮ ಅಜ್ಜಿ, ‘ನಾನು ಶಿಕ್ಷಕಿಯಾಗಿ ಸೇವೆ ಆರಂಭಿಸಿದ ದಿನದಿಂದಲೂ ದೇಶ ಕಾಯುವ ಸೈನಿಕರ ಬಗ್ಗೆ ನನ್ನಲ್ಲಿ ಅಪಾರ ಗೌರವ ಮತ್ತು ಪ್ರೀತಿ ಇತ್ತು. ಕೆಲ ವರ್ಷಗಳ ಹಿಂದೆ ಒಂದು ಪುಟ್ಟ ಮನೆ ಮಾಡಿಕೊಂಡಿದ್ದೆ. ಅದನ್ನು ಇತ್ತೀಚೆಗೆ 6 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿ ಆ ಹಣವನ್ನು ಬ್ಯಾಂಕ್‌ನಲ್ಲಿ ಇಟ್ಟಿದ್ದೆ. ಅದರೊಂದಿಗೆ ನನಗೆ ಬರುತ್ತಿದ್ದ ಶಿಕ್ಷಕ ವೃತ್ತಿಯ ಪಿಂಚಣಿ ಹಣವನ್ನೂ ಒಟ್ಟುಗೂಡಿಸಿ, ಈಗ ಒಟ್ಟು 10 ಲಕ್ಷ ರೂಪಾಯಿಗಳನ್ನು ಸೈನಿಕರ ನಿಧಿಗೆ ನೀಡಿದ್ದೇನೆ. ಈ ಹಣ ಸೈನಿಕರ ಕಲ್ಯಾಣಕ್ಕೆ ಬಳಕೆಯಾಗುತ್ತಿರುವುದು ನನಗೆ ಅಪಾರ ಸಂತೋಷ ತಂದಿದೆ’ ಎಂದು ಭಾವುಕರಾಗಿ ನುಡಿದಿದ್ದಾರೆ.

ಕ್ಯಾನ್ಸರ್ ನಡುವೆಯೂ ಮಾದರಿಯಾದ ಅಜ್ಜಿ

ಕರಿಬಸಮ್ಮ ಅಜ್ಜಿಯವರು ಪ್ರಸ್ತುತ ವಯೋಸಹಜ ಕಾಯಿಲೆಗಳಾದ ಬಿಪಿ, ಶುಗರ್ ಮಾತ್ರವಲ್ಲದೆ ಮಾರಕ ಕ್ಯಾನ್ಸರ್ ರೋಗದಿಂದಲೂ ಬಳಲುತ್ತಿದ್ದಾರೆ. ‘ನನಗೆ ಕ್ಯಾನ್ಸರ್ ಬಂದಿದೆ, ಯಾವಾಗ ಏನಾಗುತ್ತದೆಯೋ ಗೊತ್ತಿಲ್ಲ. ಆದರೆ ನಾನು ಬದುಕಿರುವಾಗಲೇ ದೇಶಕ್ಕಾಗಿ ಪ್ರಾಣ ಮುಡುಪಾಗಿಡುವ ಸೈನಿಕರಿಗೆ ಸಣ್ಣದೊಂದು ಅಳಿಲು ಸೇವೆ ಮಾಡಬೇಕು ಎಂಬ ಆಸೆಯಿತ್ತು, ಅದು ಇಂದು ಈಡೇರಿದೆ’ ಎಂದು ಅವರು ಹೆಮ್ಮೆಯಿಂದ ಹೇಳಿದ್ದಾರೆ.

ಕರಿಬಸಮ್ಮರನ್ನು ದಾವಣಗೆರೆ ಜಿಲ್ಲಾಧಿಕಾರಿ ಗೌರವಿಸಿದರು

ಕಾಯಿಲೆಯ ನೋವಿನ ನಡುವೆಯೂ ಸ್ವಾರ್ಥವಿಲ್ಲದೆ ಸೈನಿಕರ ನಿಧಿಗೆ ಕೋಟ್ಯಂತರ ರೂಪಾಯಿ ಬೆಲೆಬಾಳುವ ತಮ್ಮ ಆಸ್ತಿಯನ್ನು ಧಾರೆ ಎರೆದಿರುವ ಈ ಅಜ್ಜಿಯ ದೇಶಪ್ರೇಮಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಸಾರ್ವಜನಿಕರು ಮುಕ್ತಕಂಠದಿಂದ ಶ್ಲಾಘಿಸಿ, ನಮನ ಸಲ್ಲಿಸಿದ್ದಾರೆ.

ಯಾರು ಈ ಕರಿಬಸಮ್ಮ ಅಜ್ಜಿ?

ದಾವಣಗೆರೆಯ ಬಿ ಕರಿಬಸಮ್ಮ ಅಜ್ಜಿ ನಿವೃತ್ತ ಶಿಕ್ಷಕಿ. ಅದಕ್ಕಿಂತ ಹೆಚ್ಚಾಗಿ, ಮಾರಣಾಂತಿಕ ಕಾಯಿಲೆಗಳಿಂದ ನರಳುತ್ತಿರುವ ವೃದ್ಧರಿಗೆ ಘನತೆಯಿಂದ ಸಾಯುವ ಹಕ್ಕು (ದಯಾಮರಣದ ಹಕ್ಕು) ಸಿಗಬೇಕೆಂದು ದಶಕಗಳಿಂದ ಹೋರಾಟ ಮಾಡುತ್ತಿದ್ದಾರೆ. ಆ ಮೂಲಕವೇ ಸಮಾಜದಲ್ಲಿ ಚಿರಪರಿಚಿತರಾಗಿದ್ದಾರೆ. ಸದ್ಯ, ದಾವಣಗೆರೆಯ ವೃದ್ಧಾಶ್ರಮವೊಂದರಲ್ಲಿ ವಾಸ ಮಾಡುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:01 pm, Mon, 22 June 26

Follow Us