ಸೈಬರ್ ಅಪರಾಧ ಲೋಕದ ಅತಿದೊಡ್ಡ ವಂಚನೆ ಬಯಲಿಗೆಳೆದ ದಾವಣಗೆರೆ ಪೊಲೀಸ್! ವಂಚಕನ ಖಾತೆಯಲ್ಲಿ 1000 ಕೋಟಿ ರೂ.ಗೂ ಹೆಚ್ಚು ವಹಿವಾಟು
ರಾಜ್ಯದಲ್ಲೇ ಅತಿದೊಡ್ಡ ಎಂದು ಪರಿಗಣಿಸಬಹುದಾದಂಥ 1000 ಕೋಟಿ ರೂ. ಸೈಬರ್ ವಂಚನೆ ಪ್ರಕರಣವನ್ನು ದಾವಣಗೆರೆ ಪೊಲೀಸರು ಬಯಲಿಗೆಳೆದಿದ್ದಾರೆ. ಕರೆಂಟ್ ಅಕೌಂಟ್‌ಗಳನ್ನು ಮಾರಾಟ ಮಾಡಿ ಅಕ್ರಮ ಆನ್‌ಲೈನ್ ಗೇಮಿಂಗ್, ವಹಿವಾಟುಗಳಿಗೆ ಬಳಸುತ್ತಿದ್ದ ಜಾಲ ಇದಾಗಿದೆ. ದುಬೈ ಸೇರಿದಂತೆ ವಿದೇಶಗಳಿಂದಲೂ ಹಣ ಹರಿದುಬರುತ್ತಿತ್ತು ಎನ್ನಲಾಗಿದ್ದು, ಸದ್ಯ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ.

ದಾವಣಗೆರೆ, ಡಿಸೆಂಬರ್ 20: ದಾವಣಗೆರೆ (Davanagere) ಪೊಲೀಸರು ಬಯಲಿಗೆಳೆದಿದ್ದ ಸೈಬರ್ ವಂಚನೆ ಪ್ರಕರಣವೊಂದು ಇದೀಗ ರಾಜ್ಯದಲ್ಲೇ ಅತಿದೊಡ್ಡ ಸೈಬರ್ ಅಪರಾಧ (Cyber Crime) ಪ್ರಕರಣಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಆರಂಭದಲ್ಲಿ ಕೇವಲ 150 ಕೋಟಿ ರೂಪಾಯಿ ವಹಿವಾಟು ನಡೆದಿದೆ ಎಂದು ಅಂದಾಜಿಸಲಾಗಿದ್ದ ಈ ಪ್ರಕರಣದಲ್ಲಿ, ಇದೀಗ 1,000 ಕೋಟಿ ರೂಪಾಯಿಗೂ ಅಧಿಕ ಹಣ ವಹಿವಾಟು ನಡೆದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಪ್ರಕರಣದ ಗಂಭೀರತೆಯನ್ನು ಗಮನಿಸಿ ದಾವಣಗೆರೆ ಎಸ್‌ಪಿ ಉಮಾ ಪ್ರಶಾಂತ್ ಅವರು ಈ ಕೇಸ್ ಅನ್ನು ಸಿಐಡಿಗೆ ಹಸ್ತಾಂತರಿಸಿದ್ದಾರೆ.
ಏನಿದು ಬೃಹತ್ ಸೈಬರ್ ವಂಚನೆ ಪ್ರಕರಣ?
ಕಳೆದ ಎರಡು ತಿಂಗಳ ಹಿಂದೆ ದಾವಣಗೆರೆ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಮೋದ್ ಎಂಬ ವ್ಯಕ್ತಿ ದೂರು ದಾಖಲಿಸಿದ್ದರು. ಕನ್‌ಸ್ಟ್ರಕ್ಷನ್ ಉದ್ಯಮ ನಡೆಸುತ್ತಿದ್ದ ಪ್ರಮೋದ್, ತನ್ನ ಬ್ಯಾಂಕ್ ಖಾತೆಯಿಂದ 52 ಲಕ್ಷ ರೂಪಾಯಿ ಹಣ ಕಳೆದುಕೊಂಡಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು, ಪ್ರಮೋದ್ ಖಾತೆಯಿಂದಲೇ 150 ಕೋಟಿ ರೂಪಾಯಿ ವರ್ಗಾವಣೆ ಆಗಿರುವುದು ಪತ್ತೆಹಚ್ಚಿದರು.
ಸಂತ್ರಸ್ತನೇ ಆರೋಪಿಯಾದಾಗ!
ಆರಂಭದಲ್ಲಿ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದ, ಅಂದರೆ ಸಂತ್ರಸ್ತನಾಗಿದ್ದ ಪ್ರಮೋದ್, ತನಿಖೆ ಮುಂದುವರಿದಂತೆ ಪ್ರಕರಣದ ಪ್ರಮುಖ ಆರೋಪಿಯಾಗಿ ಗುರುತಿಸಲ್ಪಟ್ಟರು. ಪೊಲೀಸರು ಆತನನ್ನು ತೀವ್ರವಾಗಿ ವಿಚಾರಣೆ ನಡೆಸಿದಾಗ, ಆತನ ಖಾತೆಗೆ ಜಮೆಯಾಗಿದ್ದ ಹಣವೇ ಅನಾಮಧೇಯ ಮೂಲಗಳಿಂದ ಬಂದಿರುವುದು ಬೆಳಕಿಗೆ ಬಂದಿದೆ.
ಕರೆಂಟ್ ಅಕೌಂಟ್ ಮಾರಾಟ ದಂಧೆ ಬಯಲು
ತನಿಖೆ ವೇಳೆ ಯಾವುದೇ ಉದ್ಯಮ ಇಲ್ಲದಿದ್ದರೂ ಕರೆಂಟ್ ಅಕೌಂಟ್ ತೆರದು, ಅದನ್ನು ಬೇರೆಯವರಿಗೆ ಮಾರಾಟ ಮಾಡುತ್ತಿರುವ ದೊಡ್ಡ ಜಾಲ ಬಯಲಾಗಿದೆ. ದುಬೈ ಸೇರಿದಂತೆ ವಿದೇಶಗಳಿಂದ ಕೋಟಿ ಕೋಟಿ ರೂಪಾಯಿ ಹಣ ಈ ಕರೆಂಟ್ ಅಕೌಂಟ್‌ಗಳಿಗೆ ಜಮೆಯಾಗುತ್ತಿತ್ತು. ಆನ್‌ಲೈನ್ ಗೇಮಿಂಗ್, ಗ್ಯಾಂಬ್ಲಿಂಗ್, ಫೇಕ್ ಟ್ರೇಡಿಂಗ್ ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳಿಂದ ಈ ಹಣ ಹರಿದುಬರುತ್ತಿದ್ದ ಮಾಹಿತಿ ಸಿಕ್ಕಿದೆ.
ಪ್ರಮೋದ್ ತನ್ನ ಕರೆಂಟ್ ಅಕೌಂಟ್ ಅನ್ನು ಇತರರಿಗೆ ಬಳಕೆಗೆ ನೀಡಿದ್ದು, ಅದಕ್ಕಾಗಿ ಕಮಿಷನ್ ಪಡೆಯುತ್ತಿದ್ದ ಎನ್ನಲಾಗಿದೆ. ಆದರೆ ಜಮೆಯಾದ ಹಣಕ್ಕೆ ಕಮಿಷನ್ ನೀಡಿಲ್ಲ ಎಂದು ಆರೋಪಿಸಿ, ವಂಚಕರು ತನ್ನ ಖಾತೆಯಲ್ಲಿದ್ದ ಹಣ ಕದ್ದಿದ್ದಾರೆ ಎಂದು ಪ್ರಮೋದ್ ದೂರು ನೀಡಿದ್ದುದೂ ತನಿಖೆಯಲ್ಲಿ ಗೊತ್ತಾಗಿದೆ.
ಪ್ರಕರಣ ಸಂಬಂಧ ಹಾಸನ ಜಿಲ್ಲೆಯ ಬೇಲೂರು ಮೂಲದ ಅರ್ಫಾತ್ ಪಾಷಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅರ್ಫಾತ್ ಖಾತೆಯಲ್ಲಿ ಇದ್ದ 18 ಕೋಟಿ ರೂಪಾಯಿಯನ್ನು ಪೊಲೀಸರು ಮುಟ್ಟುಗೋಲ ಹಾಕಿಕೊಂಡಿದ್ದಾರೆ. ಅರ್ಫಾತ್ ಕಳೆದ ಎರಡು ತಿಂಗಳಲ್ಲಿ ಬೇರೆ ಬೇರೆ ಬ್ಯಾಂಕ್ ಖಾತೆಗಳಿಂದ 132 ಕೋಟಿ ರೂಪಾಯಿ ಹಣ ವಿತ್‌ಡ್ರಾ ಮಾಡಿಕೊಂಡಿದ್ದ ಎಂಬ ಅಚ್ಚರಿಯ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ. ಅರ್ಫಾತ್ ನೀಡಿದ ಮಾಹಿತಿಯ ಮೇರೆಗೆ ಗುಜರಾತ್‌ನ ಅಹಮದಾಬಾದ್ ಮೂಲದ ಸಂಜಯ್ ಕುಂದ್ ಎಂಬಾತನನ್ನು ಕೂಡ ಬಂಧಿಸಲಾಗಿದೆ.
1,000 ಕೋಟಿ ದಾಟಿದ ಅಕ್ರಮ ವಹಿವಾಟು: ಕೇಸ್ ಸಿಐಡಿಗೆ ವರ್ಗಾವಣೆ
ತನಿಖೆ ಮುಂದುವರಿದಂತೆ ಈ ಜಾಲದ ವಂಚನೆ ಪ್ರಕರಣಗಳು ರಾಜ್ಯಾದ್ಯಂತ ವಿಸ್ತರಿಸಿರುವುದು ಕಂಡುಬಂದಿದೆ. ಒಟ್ಟು ವಹಿವಾಟು ಮೊತ್ತ 1,000 ಕೋಟಿ ರೂಪಾಯಿಗೂ ಅಧಿಕವಾಗಿದೆ. ಪ್ರಕರಣದ ವ್ಯಾಪ್ತಿ ಹಲವು ರಾಜ್ಯಗಳಿಗೆ ವಿಸ್ತರಿಸಿರುವ ಹಿನ್ನೆಲೆ, ಹೆಚ್ಚಿನ ತನಿಖೆಗಾಗಿ ಈ ಕೇಸ್ ಅನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ: ಬೆಳಗಾವಿಯ ಅತಿ ದೊಡ್ಡ ಸೈಬರ್ ವಂಚನೆ ಗ್ಯಾಂಗ್ ಬಲೆಗೆ ಬಿದ್ದಿದ್ಹೇಗೆ? ಪೊಲೀಸರು ಹೇಳಿದ್ದೇನು? ಇಲ್ಲಿದೆ ವಿವರ
ಸೈಬರ್ ಅಪರಾಧ ಜಾಲದ ಕೊಂಡಿಗಳು ಇನ್ನೂ ಹೊರಬರಬೇಕಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕರಣದಲ್ಲಿ ಇನ್ನಷ್ಟು ಅಚ್ಚರಿಯ ಮಾಹಿತಿಗಳು ಬಯಲಾಗುವ ಸಾಧ್ಯತೆ ಇದೆ.



