ಕುತ್ತಿಗೆಗೆ ಬಾಯಿ ಹಾಕಿದರೆ ಗಂಡಾಂತರ ಕಟ್ಟಿಟ್ಟ ಬುತ್ತಿ! ದಾವಣಗೆರೆ ರೈತರ ಮಾಸ್ಟರ್ ಪ್ಲ್ಯಾನ್

ರೈತರು ಈಗ ಮಳಿ ಪಟ್ನಿ ಎಂಬ ಅಸ್ತ್ರಕ್ಕೆ ಮುಂದಾಗಿದ್ದಾರೆ. ಈ ಮಳಿ ಪಟ್ನಿ ಅಂದರೆ ಕಬ್ಬಿಣದ ಚೂಪಾದ ಮೊಳೆಗಳನ್ನ ತೆಗೆದುಕೊಂಡು ಎರಡರಿಂದ ಮೂರು ಲೈನ್ ಒಂದು ಬೆಲ್ಟ್​ಗೆ ವಿರುದ್ಧ ದಿಕ್ಕಿನಲ್ಲಿ ಹಾಕಲಾಗುತ್ತದೆ.

ಕುತ್ತಿಗೆಗೆ ಬಾಯಿ ಹಾಕಿದರೆ ಗಂಡಾಂತರ ಕಟ್ಟಿಟ್ಟ ಬುತ್ತಿ! ದಾವಣಗೆರೆ ರೈತರ ಮಾಸ್ಟರ್ ಪ್ಲ್ಯಾನ್
ನಾಯಿಯ ಕುತ್ತಿಗೆಗೆ ಮಳಿ ಪಟ್ನಿ ಹಾಕಿದ್ದಾರೆ
Follow us
TV9 Web
| Updated By: sandhya thejappa

Updated on: Aug 08, 2021 | 8:53 AM

ದಾವಣಗೆರೆ: ಎಲ್ಲದಕ್ಕೂ ಸರ್ಕಾರದ ಮೇಲೆ ಅಥವಾ ಅಧಿಕಾರಿಗಳ ವಿರುದ್ಧ ಮಾತಾಡುತ್ತಾ ಕುಳಿತರೆ ಆಗಲ್ಲ. ನಮ್ಮ ಕಷ್ಟಕ್ಕೆ ನಾವೇ ಪರಿಹಾರ ಕಂಡುಕೊಳ್ಳಬೇಕು ಅಂತ ಕೆಲವೊಂದಿಷ್ಟು ಜನರು ನಿರ್ಧರಿಸುತ್ತಾರೆ. ಹಾಗೇ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದು ಬಹಳಷ್ಟಿದೆ. ಇತ್ತೀಚೆಗೆ ರೈತಾಪಿ ಜನಕ್ಕೆ ಕಾಡು ಪ್ರಾಣಿಗಳ (Wild Animals) ಕಾಟ ಹೆಚ್ಚಾಗಿದೆ. ಕಾಡು ಪ್ರಾಣಿಗಳು ನಾಡಿಗೆ ಬಂದು ಜನ ಜಾನುವಾರುಗಳಿಗೆ ತೊಂದರೆ ಮಾಡುತ್ತಿವೆ. ಇದಕ್ಕೆ ತಾಜಾ ನಿದರ್ಶನ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಚಿರತೆ, ಕರಡಿ ಸೇರಿದಂತೆ ಕೆಲ ಪ್ರಾಣಿಗಳ ಕಾಟ ಹೆಚ್ಚಾಗಿದೆ. ನಡುರಾತ್ರಿಯಲ್ಲಿ ಮನೆಗಳ ಸುತ್ತ ಸುತ್ತಾಡುವ ಕಾಡು ಪ್ರಾಣಿಗಳು ಜಾನುವಾರುಗಳನ್ನ ತಿಂದು ಹೋಗುತ್ತಿವೆ. ಹತ್ತಾರು ಬಾರಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ರು ಯಾವುದೇ ಪ್ರಯೋಜನವಾಗುತ್ತಿಲ್ಲ.

ಇದೇ ಕಾರಣಕ್ಕೆ ಬರುತೇಕ ರೈತರು ಈಗ ಮಳಿ ಪಟ್ನಿ ಎಂಬ ಅಸ್ತ್ರಕ್ಕೆ ಮುಂದಾಗಿದ್ದಾರೆ. ಈ ಮಳಿ ಪಟ್ನಿ ಅಂದರೆ ಕಬ್ಬಿಣದ ಚೂಪಾದ ಮೊಳೆಗಳನ್ನ ತೆಗೆದುಕೊಂಡು ಎರಡರಿಂದ ಮೂರು ಲೈನ್ ಒಂದು ಬೆಲ್ಟ್​ಗೆ ವಿರುದ್ಧ ದಿಕ್ಕಿನಲ್ಲಿ ಹಾಕಲಾಗುತ್ತದೆ. ಸುತ್ತಲು ಮೊಳೆ ಇರುವ ಬೆಲ್ಟ್​ಗೆ ಮಳಿ ಪಟ್ನಿ ಎಂದು ಗ್ರಾಮೀಣ ಭಾಷೆಯಲ್ಲಿ ಹೇಳುತ್ತಾರೆ. ಇದನ್ನ ರೈತರೇ ಮನೆಯಲ್ಲಿ ತಯಾರಿಸುತ್ತಾರೆ. ಮಾರುಕಟ್ಟೆಯಿಂದ ಮೊಳೆ ಹಾಗೂ ಸ್ವಲ್ಪ ಅಗಲವಾದ ಬೆಲ್ಟ್ ತರುತ್ತಾರೆ. ಪ್ರಾಣಿಗಳ ಕುತ್ತಿಗೆ ಗಾತ್ರಕ್ಕೆ ಸಜ್ಜು ಮಾಡಿಕೊಳ್ಳುತ್ತಾರೆ. ಜೊತೆಗೆ ಸಾಕು ಪ್ರಾಣಿಗೆ ತೊಂದರೆ ಆಗದ ರೀತಿಯಲ್ಲಿ ನೋಡಿಕೊಳ್ಳುತ್ತಾರೆ.

ಹರಪನಹಳ್ಳಿ ತಾಲೂಕಿನ ಚಿಕ್ಕಮಜ್ಜಿಗೆರೆ ಗ್ರಾಮದ ಪೂಜಾರ್ ಕೋಟ್ರೇಶ್ ಎಂಬ ರೈತ ತಾನು ಸಾಕಿದ ನಾಯಿಯನ್ನು ಕಾಡು ಪ್ರಾಣಿಗಳಿಂದ ಬಚಾವ್ ಮಾಡಿದ್ದಾರೆ. ಯಾವುದೇ ಕಾಡು ಪ್ರಾಣಿ ಇನ್ನೊಂದು ಪ್ರಾಣಿ ಮೇಲೆ ದಾಳಿ ಮಾಡಬೇಕಾದರೆ ನೇರವಾಗಿ ಕುತ್ತಿಗೆಗೆ ದಾಳಿ ಮಾಡುತ್ತದೆ. ಕುತ್ತಿಗೆಗೆ ದಾಳಿ ಮಾಡಿ ಮೊದಲು ಆ ಪ್ರಾಣಿಯ ಜೀವ ತೆಗೆಯುತ್ತದೆ. ದಾಳಿಗೆ ಒಳಗಾದ ಪ್ರಾಣಿ ಸಾವನ್ನಪ್ಪಿದ್ದು ಖಚಿತವಾದ ಬಳಿಕ ತಿನ್ನಲು ಶುರು ಮಾಡುತ್ತದೆ. ಇದು ಕಾಡು ಪ್ರಾಣಿಗಳ ಚಾಳಿ. ಇದನ್ನೆ ಗಮನದಲ್ಲಿಟ್ಟುಕೊಂಡು ಮಳಿ ಪಟ್ನಿ ಸಿದ್ಧಮಾಡುತ್ತಾರೆ. ಚೂಪಾದ ಮೊಳೆಯಿಂದ ಸಜ್ಜಾದ ಬೆಲ್ಟ್ ನಾಯಿಯ ಕುತ್ತಿಗೆ ಹಾಕಲಾಗುತ್ತದೆ. ಕತ್ತಲೆಯಲ್ಲಿ ಇದು ಕಾಡು ಪ್ರಾಣಿಗಳಿಗೆ ಕಾಣಿಸಲ್ಲ. ನೇರವಾಗಿ ಸಾಕು ಪ್ರಾಣಿಗಳ (Pet) ಕುತ್ತಿಗೆಗೆ ದಾಳಿ ಮಾಡುತ್ತದೆ. ದಾಳಿ ಮಾಡಿದಾಗ ಕಾಡು ಪ್ರಾಣಿಗಳ ಬಾಯಿಯನ್ನ ಮಳಿ ಪಟ್ನಿ ಹರಿದು ಬಿಡುತ್ತದೆ.

ಇದನ್ನೂ ಓದಿ

ಈ ಬಾರಿ 7 ದಿನದ ಲಾಕ್​ಡೌನ್; ಆಗಸ್ಟ್​​ ಅಂತ್ಯ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಬೆಂಗಳೂರಿಗೆ ಬೀಗ ಬೀಳುವ ಸಾಧ್ಯತೆ

Tokyo Olympics 2020 Closing Ceremony: ಟೋಕಿಯೋ ಒಲಿಂಪಿಕ್ಸ್ ಮಹಾಕೂಟಕ್ಕೆ ಇಂದು ತೆರೆ: ಎಷ್ಟು ಗಂಟೆಗೆ?, ಹೇಗೆ ಲೈವ್ ವೀಕ್ಷಿಸುವುದು?

(Davangere farmers master plans to protect the pet from wild animals)