ಈ ಬಾರಿ 7 ದಿನದ ಲಾಕ್‌ಡೌನ್; ಆಗಸ್ಟ್ ಅಂತ್ಯ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಬೆಂಗಳೂರಿಗೆ ಬೀಗ ಬೀಳುವ ಸಾಧ್ಯತೆ
ಸದ್ಯಕ್ಕೆ ಸರ್ಕಾರ ಯಾವುದೇ ಲಾಕ್‌ಡೌನ್ ಆದೇಶ ಮಾಡಿಲ್ಲ. ಆದರೆ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ತಜ್ಞರು, ಬಿಬಿಎಂಪಿ ಅಧಿಕಾರಿಗಳು ಲಾಕ್‌ಡೌನ್ ಮಾಡೋದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಪಾಸಿಟಿವಿಟಿ ಪ್ರಮಾಣ ಶೇ. 0.67ರಷ್ಟು ಇದ್ದು, ಮುಂದಿನ ಒಂದು ವಾರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.
ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕು ಉಲ್ಬಣಿಸುತ್ತಿರುವ ಕಾರಣ ಮತ್ತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಅನಿವಾರ್ಯತೆ ಎದುರಾಗುತ್ತಿದೆ. ಆದರೆ, ಈ ಬಾರಿ ಏಕಾಏಕಿ ಲಾಕ್‌ಡೌನ್ (Karnataka Lockdown) ಮಾಡದಿರಲು ಸರ್ಕಾರ ನಿರ್ಧರಿಸಿದಂತೆ ಕಾಣುತ್ತಿದ್ದು, ಹಂತ ಹಂತವಾಗಿ ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಂಡು ಪರಿಸ್ಥಿತಿ ಮೀತಿ ಮೀರುವಂತಿದ್ದಾಗ ಲಾಕ್‌ಡೌನ್ (Lockdown) ಹೇರುವ ಸಾಧ್ಯತೆ ಇದೆ. ಸದ್ಯ ಬೆಂಗಳೂರಿನಲ್ಲಿ (Bengaluru) ಪ್ರತಿನಿತ್ಯ ಪತ್ತೆಯಾಗುವ ಸೋಂಕಿತರ ಪ್ರಮಾಣ 300ರಿಂದ400ರ ಆಸುಪಾಸಿನಲ್ಲಿದ್ದು, ಅದು ಒಂದು ಸಾವಿರಕ್ಕೆ ಏರಿಕೆಯಾದಲ್ಲಿ 7 ದಿನ ಲಾಕ್‌ಡೌನ್ ಜಾರಿಯಾಗುವುದು ಬಹುತೇಕ ಖಚಿತವಾಗಿದೆ. ಈಗಿನ ಲೆಕ್ಕಾಚಾರದ ಪ್ರಕಾರ ಬೆಂಗಳೂರಿನಲ್ಲಿ ಆಗಸ್ಟ್ ತಿಂಗಳ ಅಂತ್ಯಕ್ಕೆ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಲಾಕ್‌ಡೌನ್ ಜಾರಿಯಾಗುವ ಸಾಧ್ಯತೆ ದಟ್ಟವಾಗಿದೆ.
ಪ್ರಸ್ತುತ ಬೆಂಗಳೂರಿನಲ್ಲಿ ಪಾಸಿಟಿವಿಟಿ ಪ್ರಮಾಣ (Corona Positivity Rate) ಶೇ. 0.67ರಷ್ಟು ಇದ್ದು, ಪ್ರತಿದಿನ 300 ರಿಂದ 400 ಜನ ಸೋಂಕಿಗೆ ತುತ್ತಾಗುತ್ತಿದ್ದಾರೆ. ಒಂದೊಮ್ಮೆ ನಿತ್ಯದ ಸೋಂಕಿನ ಪ್ರಮಾಣ 1 ಸಾವಿರದ ಗಡಿ ದಾಟಿದರೆ ಲಾಕ್‌ಡೌನ್ ಅನಿವಾರ್ಯವಾಗಲಿದೆ. ಏಕೆಂದರೆ, ತಜ್ಞರ ಲೆಕ್ಕಾಚಾರದ ಪ್ರಕಾರ ಸೋಂಕಿತರ ಪ್ರಮಾಣ ಒಂದು ಸಾವಿರದಿಂದ ಎರಡು ಸಾವಿರಕ್ಕೆ ಏರಿಕೆಯಾಗಲು ಕೇವಲ 15 ದಿನ ಮಾತ್ರ ತೆಗೆದುಕೊಳ್ಳಲಿದ್ದು, ಜನರ ಓಡಾಟಕ್ಕೆ ನಿರ್ಬಂಧ ವಿಧಿಸದೇ ಇದ್ದಲ್ಲಿ ಪರಿಸ್ಥಿತಿ ಕೈಮೀರುವ ಅಪಾಯವಿದೆ.
ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದ್ದಂತೆಯೇ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸೋಂಕಿನ ಪ್ರಮಾಣ ಇದೇ ರೀತಿ ಏರುಗತಿಯಲ್ಲಿ ಸಾಗಿದರೆ ಮೂರನೇ ಅಲೆ ನಿಶ್ಚಿತ ಎನ್ನಲಾಗಿದೆ. ಆದರೆ, ಮೂರನೇ ಅಲೆ ಎದುರಿಸುವ ಶಕ್ತಿ ಸಾರ್ವಜನಿಕರಿಗಾಗಲೀ ಸರ್ಕಾರಕ್ಕಾಗಲೀ ಇಲ್ಲವೆಂಬಂತಾಗಿದ್ದು, ಮುಂದೆ ಪರಿಸ್ಥಿತಿಗೆ ಅನುಗುಣವಾಗಿ ಲಾಕ್‌ಡೌನ್ ಮಾಡಬೇಕಿದೆ.
ಸದ್ಯ ಉಲ್ಬಣಗೊಂಡಿರುವ ಸೋಂಕು ತಡೆಹಿಡಿಯಲು ಲಾಕ್‌ಡೌನ್ ಅನಿವಾರ್ಯ ಎನ್ನಲಾಗುತ್ತಿದೆಯಾದರೂ ಈವರೆಗೆ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಲಾಕ್‌ಡೌನ್ ಮಾಡಿದರೂ ಮೊದಲು ಒಟ್ಟು ಏಳು ದಿನಗಳ ಕಾಲ ಮಾಡುವ ಚಿಂತನೆಯಿದ್ದು, ಕೊರೊನಾ ಚೈನ್ಲಿಂಕ್ ಬ್ರೇಕ್ ಮಾಡಲು ಏಳು ದಿನ ಬೇಕು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಲಾಕ್‌ಡೌನ್ ಜಾರಿಯಾದರೆ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡಬೇಕು. ಬೆಳಗ್ಗೆ 6 ರಿಂದ ಬೆಳಗ್ಗೆ 11 ಗಂಟೆವರೆಗೂ ಹಣ್ಣು, ತರಕಾರಿ, ಮಾಂಸ ಖರೀದಿಗೆ ಅವಕಾಶ ನೀಡಬೇಕು. ಉಳಿದಂತೆ ಬಸ್ ಓಡಾಟ, ವಾಹನಗಳ ಓಡಾಟ ಸಂಪೂರ್ಣ ಬಂದ್ ಮಾಡಬೇಕು. ರೈಲುಗಳ ಓಡಾಟದ ಬಗ್ಗೆ ಅಂತಿಮ ಹಂತದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.
ತಾಂತ್ರಿಕ ಸಲಹಾ ಸಮಿತಿ ಕೊಟ್ಟಿರುವ ವರದಿ ಏನು? ಸದ್ಯಕ್ಕೆ ಸರ್ಕಾರ ಯಾವುದೇ ಲಾಕ್‌ಡೌನ್ ಆದೇಶ ಮಾಡಿಲ್ಲ. ಆದರೆ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ತಜ್ಞರು, ಬಿಬಿಎಂಪಿ ಅಧಿಕಾರಿಗಳು ಲಾಕ್‌ಡೌನ್ ಮಾಡೋದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಪಾಸಿಟಿವಿಟಿ ಪ್ರಮಾಣ ಶೇ. 0.67ರಷ್ಟು ಇದ್ದು, ಮುಂದಿನ ಒಂದು ವಾರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಒಂದೊಮ್ಮೆ ಪಾಸಿಟಿವಿಟಿ ಪ್ರಮಾಣ ಶೇ. 2 ಕ್ಕೆ ಏರಿಕೆಯಾದರೆ ತಜ್ಞರ ಶಿಫಾರಸು ಜಾರಿ ಮಾಡಬೇಕು ಎನ್ನಲಾಗಿದೆ.
ತಜ್ಞರ ಶಿಫಾರಸು ಏನು? ಪಾಸಿಟಿವಿಟಿ ರೇಟ್ ಶೇ. 2 ಇರುವ ಪ್ರದೇಶವನ್ನ ಮತ್ತೆ ಲಾಕ್ ಮಾಡಲು ಶಿಫಾರಸು ಮಾಡಲಾಗಿದೆ. ಆ ಜಿಲ್ಲೆಗಳಲ್ಲಿ ಬಾರ್, ಪಬ್, ಜಿಮ್, ಯೋಗಾ ಸೆಂಟರ್, ಸಿನಿಮಾ ಹಾಲ್, ದೇವಸ್ಥಾನ, ಕ್ಲಬ್ ಹೌಸ್ಗಳನ್ನು ಮುಚ್ಚಲು ಸಲಹೆ ನೀಡಲಾಗಿದೆ. ಜುಲೈ 30 ರಂದು ನಡೆದ ತಾಂತ್ರಿಕ ಸಲಹಾ ಸಮಿತಿಯ ಸಭೆಯಲ್ಲಿ ತಜ್ಞರು ಈ ನಿರ್ಧಾರಗಳನ್ನು ಪ್ರಕಟ ಮಾಡಲಾಗಿದೆ. ಬಸ್ಗಳ ಓಡಾಟ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೂ ಇರಲಿ ನೈಟ್ಕರ್ಫ್ಯೂ ಸಂಜೆ 7 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೂ ಜಾರಿ ಮಾಡಬೇಕು. ವಿಕೇಂಡ್ ಕರ್ಫ್ಯೂ ಶುಕ್ರವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆ ತನಕ ಇರಬೇಕು ಎಂದಿದ್ದಾರೆ. ಜತೆಗೆ, ಈ ಬಗ್ಗೆ ಸಲಹೆ ನೀಡಿರುವ ಬಿಬಿಎಂಪಿ, ಸೀಲ್ ಡೌನ್ ಮಾಡುವ ಮೂಲಕ ಸೋಂಕು ತಡೆಯಲು ಸಲಹೆ ನೀಡಿದೆ. ಕಟ್ಟುನಿಟ್ಟಿನ ಕರ್ಫ್ಯೂ ಜಾರಿಗೆ ಸೂಚನೆ ನೀಡಿರುವ ತಜ್ಞರು. ವಿಕೇಂಡ್ ಕರ್ಫ್ಯೂ ಜತೆಗೆ ಕ್ವಾರಂಟೈನ್ ಅಸ್ತ್ರ ಪ್ರಯೋಗಿಸಲು ಸಲಹೆ ನೀಡಿದ್ದಾರೆ. ಹೊರ ರಾಜ್ಯದಿಂದ ಬರುವ ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯ ಮಾಡಲು ಸೂಚನೆ ಕೊಟ್ಟಿದ್ದು, ಹೋಮ್ ಐಸೋಲೇಶನ್ ಕಡಿಮೆ ಮಾಡಿ ಟ್ರಯಾಸ್ ಸೆಂಟರ್ಗೆ ಕರೆತರಲು ತಿಳಿಸಿದ್ದಾರೆ.
(Karnataka Lockdown spike in covid 19 cases may lead to impose lockdown by August end or September here is Bengaluru Lockdown details)
ಇದನ್ನೂ ಓದಿ: ‘ಇಂದಿನಿಂದ ನಾನು ಯಾವುದೇ ಸಮಾರಂಭದಲ್ಲಿ ಭಾಗಿಯಾಗಲ್ಲ; ಕೊರೊನಾ ತಡೆಗೆ ಸ್ವಯಂ ನಿರ್ಬಂಧ ವಿಧಿಸಿಕೊಳ್ಳಿ’
ವಾರಾಂತ್ಯ ಕರ್ಫ್ಯೂಗೆ ಸಹಕಾರ ನೀಡಲು ಒಪ್ಪಿದ ಮೈಸೂರಿಗರು; ಅಪಾಯಕ್ಕೆ ಮೈಯೊಡ್ಡಿ ನಿಂತಿದೆ ಬೆಂಗಳೂರು