
ದಾವಣಗೆರೆ, ಮೇ 04: ಆ ಬಾಲಕಿ ಚಿಕ್ಕ ವಯಸ್ಸಿನಲ್ಲೇ ಮಹಾಮಾರಿ ಕ್ಯಾನ್ಸರ್‌ನಿಂದ ಬಳಲಿದ್ದಳು. ಆದರೆ ಜೀವನದಲ್ಲಿ ಹಠ ಎಂಬುದು ಮಾತ್ರ ಕಡಿಮೆ ಆಗಿರಲಿಲ್ಲ. ಕ್ಯಾನ್ಸರ್ (Cancer) ಕಾರಣಕ್ಕೆ ಒಂದು ವರ್ಷ ಶಾಲೆಗೆ ಗೈರು ಕೂಡ ಆಗಿದ್ದಳು. ಹೀಗಿರುವಾಗಲೇ ವಿದ್ಯಾರ್ಥಿಗಳ ಜೀವನದ ಮಹತ್ವದ ಘಟ್ಟವಾದ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆ ಆಗಮಿಸಿತ್ತು. ಅನಾರೋಗ್ಯದ ನಡುವೆಯೂ ಧೈರ್ಯದಿಂದ ಹೋಗಿ ಪರೀಕ್ಷೆ ಬರೆದಿದ್ದ ಬಾಲಕಿ, ಶೇ. 93.44 ಅಂಕ ಗಳಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ.
ದಾವಣಗೆರೆ ನಗರದ ನಿಟ್ಟುವಳ್ಳಿಯ ಪಿಎಂ ಶ್ರೀ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಬಿ. ಶಾಂತಾ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 93.44 ಅಂಕ ಗಳಿಸಿದ್ದಾಳೆ. ಕ್ಯಾನ್ಸರ್ ಕಾಟದ ನಡುವೆ ಸಹ ವಿಶಿಷ್ಟ ದರ್ಜೆಯಲ್ಲಿ ತೇರ್ಗಡೆಗೊಳ್ಳುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾಳೆ.
ಇದನ್ನೂ ಓದಿ: ಹದಿನಾರರ ಪೋರ ಚಿರಂತ್ ಹೊನ್ನಾವರ ಸಾಧನೆಗೆ ಮೂಳೆ ಕ್ಯಾನ್ಸರ್ ಅಡ್ಡಿಯಾಗಲಿಲ್ಲ, ಹತ್ತನೇ ತರಗತಿಯಲ್ಲಿ 92% ಮಾರ್ಕ್ಸ್!
ದಾವಣಗೆರೆ ನಗರದನಿಟ್ಟುವಳ್ಳಿ ಬಸವರಾಜಪ್ಪ ಮತ್ತು ಆಶಾ ದಂಪತಿಯ ಮೊದಲ ಪುತ್ರಿ ಬಿ. ಶಾಂತಾ ಕನ್ನಡ ವಿಷಯದಲ್ಲಿ 122, ಇಂಗ್ಲಿಷ್‌ನಲ್ಲಿ 85, ಹಿಂದಿಯಲ್ಲಿ 90, ಸಮಾಜದಲ್ಲಿ 94, ವಿಜ್ಞಾನದಲ್ಲಿ 99 ಮತ್ತು ಗಣಿತದಲ್ಲಿ 94, ಒಟ್ಟು 584 ಅಂಕ ಗಳಿಸಿದ್ದಾರೆ. ವಿಶಿಷ್ಟ ದರ್ಜೆಯಲ್ಲಿ ತೇರ್ಗಡೆಯಾಗುವ ಮೂಲಕ ಉತ್ತಮ ಸಾಧನೆ ಮಾಡಿದ್ದಾಳೆ.
ಇನ್ನು ಚಿಕ್ಕ ವಯಸ್ಸಿನಲ್ಲಿ ಕ್ಯಾನ್ಸರ್‌ಗೆ ತುತ್ತಾಗಿದ್ದ ಬಿ. ಶಾಂತಾ ತಮ್ಮ ಮನೆಯವರು, ವಿಶೇಷವಾಗಿ ಶಿಕ್ಷಕರು ಮತ್ತು ಸಮಾಜದವರ ಸಹಕಾರದಿಂದ ಸದ್ಯ ಮಹಾಮಾರಿ ಕ್ಯಾನ್ಸರ್ ಗೆದ್ದಿದ್ದಾಳೆ. ಬಿ. ಶಾಂತಾ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಶಿಕ್ಷಣ ಮುಂದುರೆಸಲಿದ್ದು, ಭವಿಷ್ಯದಲ್ಲಿ ಕೆಎಎಸ್ ಇಲ್ಲವೇ ಐಎಎಸ್ ಮಾಡಿ, ಸಮಾಜ ಸೇವೆ ಮಾಡುವ ಅಭಿಲಾಷೆ ಹೊಂದಿದ್ದಾಳೆ. ಆ ಮೂಲಕ ಸಮಾಜದಲ್ಲಿ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ನೆರವಾಗುವ ಇಚ್ಛೆ ಶಾಂತಾ ಅವರದ್ದಾಗಿದೆ.
ಕ್ಯಾನ್ಸರ್‌ಗೆ ಸವಾಲ್ ಹಾಕಿ ವಿದ್ಯಾರ್ಥಿ ಚಿರಂತನ್ ಗೆದ್ದಿದ್ದಾನೆ. ಬೆಂಗಳೂರಿನ ನಾಗರಾಬಾವಿಯ ಈ ಚಿರಂತನ್ಗೆ, ಬರ್ತ್ಡೇ ದಿನ ಕೈಯಲ್ಲಿ ನೋವು ಕಂಡಿತ್ತು. ಪರೀಕ್ಷೆ ಮಾಡಿದಾಗ ಬೋನ್ ಕ್ಯಾನ್ಸರ್ ಇರೋದು ಧೃಡಪಟ್ಟಿತ್ತು. ಸರ್ಜರಿ ಮಾಡಿದರೂ 6 ಕಿಮೋ ತೆರಪಿ ಆಗಿತ್ತು. ಆಸ್ಪತ್ರೆಯಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡ್ತಿದ್ರೂ ಚಿರಂತನ್ಗೆ ಓದುವ ಛಲವಿತ್ತು. ಯಾವ ಟ್ಯೂಷನ್ಗೆ ಹೋಗದೆ ಚಿರಂತನ್, ICSC 10ನೇ ಕ್ಲಾಸ್ನಲ್ಲಿ 92 ಪರ್ಸೆಂಟ್ ಪಡೆದಿದ್ದಾನೆ. ಮುಂದೆ LLB ಮಾಡಿ, ಐಪಿಎಸ್ ಆಗುವ ಕನಸು ಹೊಂದಿದ್ದಾನೆ.
ಇದನ್ನೂ ಓದಿ: SSLC ಫಲಿತಾಂಶ: 6ಕ್ಕೆ 6 ವಿಷಯದಲ್ಲಿ ಫೇಲ್ ಆಗಿದ್ರೂ ಕೇಕ್ ತಿನ್ನಿಸಿ ಆತ್ಮಸ್ಥೈರ್ಯ ತುಂಬಿದ ಪೋಷಕರು!
ಮೇ 26ರಿಂದ ಜೂನ್ 2ರವರೆಗೆ ಎಸ್‌ಎಸ್‌ಎಲ್‌ಸಿ ಎರಡನೇ ಪರೀಕ್ಷೆ ನಡೆಯಲಿದೆ. ಇದ್ರಲ್ಲೂ ಪಾಸ್ ಆಗದಿದ್ದರೆ ಜೂನ್ 23-ಜೂನ್ 30ರಂದು ನಡೆಯುವ ಮೂರನೇ ಪರೀಕ್ಷೆಯ ಬಾಗಿಲು ಕೂಡ ತೆರೆದಿದೆ. ಹಾಗಂತ ನಿರ್ಲಕ್ಷ್ಯ ಬೇಡ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:38 pm, Sun, 4 May 25