ವಿದ್ಯುತ್ ತಂತಿ ತಗುಲಿ ಗಾಯಗೊಂಡ ಬಾಲಕ: ದೂರು ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು
ಇತ್ತೀಚಿಗೆ ಬೆಂಗಳೂರಿನಲ್ಲಿ ವಿದ್ಯುತ್ ತಂತಿ ತಗುಲಿ ತಾಯಿ-ಮಗು ಮೃತಪಟ್ಟಿದ್ದರು. ಇದಾದ ಬೆನ್ನಲ್ಲೇ ಇದೀಗ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಜೊಸಜೋಗಾ ಗ್ರಾಮದಲ್ಲಿ ಇದೆರೀತಿ ಘಟನೆ ನಡೆದಿದೆ. ವಿದ್ಯುತ್ ತಂತಿ ತಗುಲಿ ಬಾಲಕ ತೀವ್ರವಾಗಿ ಗಾಯಗೊಂಡಿದ್ದಾನೆ.
ದಾವಣಗೆರೆ, ಡಿಸೆಂಬರ್ 15: ವಿದ್ಯುತ್ ತಂತಿ (Electric wire) ತಗುಲಿ ಬಾಲಕ ತೀವ್ರವಾಗಿ ಗಾಯಗೊಂಡಿರುವ ಘಟನೆ ನ್ಯಾಮತಿ ತಾಲೂಕಿನ ಜೊಸಜೋಗಾ ಗ್ರಾಮದಲ್ಲಿ ನಡೆದಿದೆ. ದೀಪಕ್ ನಾಯಕ್ (11) ಗಾಯಗೊಂಡ ಬಾಲಕ. ಪ್ರಕರಣ ಸಂಬಂಧ ಬೇಸ್ಕಾಂ (BESCOM) ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿಕೊಳ್ಳದೇ ನ್ಯಾಮತಿ ಠಾಣೆ ಪೊಲೀಸರು (Police) ಸತಾಯಿಸುತ್ತಿರುವ ಆರೋಪ ಕೇಳಿಬಂದಿದೆ.
ದೀಪಕ್ ನಾಯಕ್ ಭಾನುವಾರ (ಡಿಸೆಂಬರ್ 3) ಆತನ ದೊಡ್ಡಪ್ಪನ ಜೊತೆ ಟ್ರಾಕ್ಟರ್ನಲ್ಲಿ ಜಮೀನಿಗೆ ಹೋಗಿದ್ದನು. ಈ ವೇಳೆ ಕಂಬದಿಂದ ತುಂಡಾಗಿ ಜೋತು ಬಿದ್ದಿದ್ದ ವಿದ್ಯುತ್ ತಂತಿ ತಗುಲಿದೆ. ಇದರಿಂದ ಗಾಯಗೊಂಡ ಬಾಲಕನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಮೀನಿನಲ್ಲಿ ಜೋತು ಬಿದ್ದ ವಿದ್ಯುತ್ ತಂತಿ ಬಗ್ಗೆ ಬೆಸ್ಕಾಂ ಅಧಿಕಾರಿಗಳಿಗೆ ಹತ್ತಾರು ಸಲ ಮಾಹಿತಿ ನೀಡಿತ್ತು. ಆದರೂ ಕೂಡ ಅಧಿಕಾರಿಗಳು ತೆರವುಗೊಳಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಾಲಕ ಗಾಯಗೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಬೆಸ್ಕಾಂ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿಕೊಂಡು ಸೂಕ್ತ ಕ್ರಮಕೈಗೊಳ್ಳುವಂತೆ ಬಾಲಕನ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ದಾವಣಗೆರೆ: ಪಂಪ್ಸೆಟ್ಗೆ ಅಳವಡಿಸಿದ್ದ ವಿದ್ಯುತ್ ತಂತಿ ತುಳಿದು ಮಹಿಳೆ ಸಾವು
ವಿದ್ಯುತ್ ತಂತಿ ತುಳಿದು ತಾಯಿ ಮಗು ಸಾವು
ಇತ್ತೀಚಿಗೆ ಬೆಂಗಳೂರಿನ ಕಾಡುಗೋಡಿಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ತಾಯಿ ಮತ್ತು ಮೃತಪಟ್ಟಿದ್ದರು. ಸೌಂದರ್ಯ (23) ಮತ್ತು ಒಂಬತ್ತು ತಿಂಗಳ ಮಗು ಸುವಿಕ್ಷಾ ಲಿಯಾ ಭಾನುವಾರ (ನವೆಂಬರ್ 19) ರಂದು ಬೆಳಿಗ್ಗೆ 5.30 ರ ಸುಮಾರಿಗೆ ತಮಿಳುನಾಡಿನಿಂದ ಬೆಂಗಳೂರಿನ ವೈಟ್ಫೀಲ್ಡ್ನ ಕಾಡುಗೋಡಿಗೆ ಬಂದಿಳಿದಿದ್ದರು. ತಾಯಿ ಸೌಂದರ್ಯ ಮಗುವಿನೊಂದಿಗೆ ಪಾದಾಚಾರಿ ಮಾರ್ಗದಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಪಾದಚಾರಿ ಮಾರ್ಗದಲ್ಲಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದೆ ತುಳಿದಿದ್ದಾರೆ.
ಇದರಿಂದ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತಿ ಸಂತೋಷ್ ಕುಮಾರ್ ಅವರು, ಪತ್ನಿ ಮತ್ತು ಮಗುವನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಘಟನಾ ಸ್ಥಳದಲ್ಲಿ ಅವರ ಲಗೇಜ್-ಟ್ರಾಲಿ ಬ್ಯಾಗ್ ಮತ್ತು ಇತರ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:09 am, Fri, 15 December 23