ದಾವಣಗೆರೆ ಚಿತ್ರಗಾರ ಗಲ್ಲಿಯಲ್ಲಿ ಶತಮಾನಗಳಿಂದ ಗಣೇಶ ವಿಗ್ರಹ ಮಾರಾಟ; ನಟಿ ಗಿರಿಜಾ ಲೋಕೇಶ್ ಇಲ್ಲಿಂದಲೇ ಖರೀದಿಸುತ್ತಿದ್ದರು!
ಇತ್ತೀಚಿಗೆ ಕಾಲ ಬದಲಾಗಿದ್ದು, ಈ ಕುಟುಂಬದ ಕಾಲೇಜು ತೆರಳುವ ಯುವತಿಯರು ಸಹ ಗಣೇಶ ಮೂರ್ತಿ ಮಾಡುತ್ತಾರೆ. ಇಲ್ಲಿನ ಪ್ರಸಿದ್ಧ ಗಣೇಶ ಮೂರ್ತಿ ಬಗ್ಗೆ ಕೇಳಿ ನಟಿ ಗಿರಿಜಾ ಲೋಕೇಶ್ ಕೂಡ ಇಲ್ಲಿಂದಲೇ ಗಣೇಶನ ಮೂರ್ತಿ ಖರೀದಿಸುತ್ತಿದ್ದರು.
ದಾವಣಗೆರೆ: ಕೆಲ ಸಂಪ್ರದಾಯ ಮತ್ತು ಸಂಸ್ಕೃತಿಗೆ ಪ್ರಸಿದ್ಧವಾದ ಸ್ಥಳ ಅಂದರೆ ಅದು ದಾವಣಗೆರೆ. ಇಂತಹ ಬೆಣ್ಣೆ ನಗರಿಯಲ್ಲಿ ಇರುವ ಚಿತ್ರಗಾರ ಗಲ್ಲಿ ತನ್ನದೇ ಆದ ಜನಪ್ರೀಯತೆ ಪಡೆದಿದೆ. ವೀರ ಮದಕರಿ ನಾಯಕ ವೃತ್ತದಿಂದ ದುರ್ಗಾಂಭಿಕಾ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಈ ಚಿತ್ರಗಾರ ಗಲ್ಲಿ ಇದೆ. ಇಲ್ಲಿನ ಬಹುತೇಕರು ಶತಮಾನಗಳಿಂದ ಗಣೇಶ ಮೂರ್ತಿ ಮಾಡುತ್ತಿದ್ದಾರೆ.
ವಿಶೇಷ ಶೈಲಿಯಲ್ಲಿ ಮೂರ್ತಿಗಳಿಗೆ ಈ ಸ್ಥಳ ಪ್ರಸಿದ್ಧ. ಮೇಲಾಗಿ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಮಹಿಳೆಯರೇ ಗಣೇಶನ ಮೂರ್ತಿ ಸಿದ್ಧ ಪಡಿಸುತ್ತಾರೆ. ಇತ್ತೀಚಿಗೆ ಕಾಲ ಬದಲಾಗಿದ್ದು, ಈ ಕುಟುಂಬದ ಕಾಲೇಜು ತೆರಳುವ ಯುವತಿಯರು ಸಹ ಗಣೇಶ ಮೂರ್ತಿ ಮಾಡುತ್ತಾರೆ. ಇಲ್ಲಿನ ಪ್ರಸಿದ್ಧ ಗಣೇಶ ಮೂರ್ತಿ ಬಗ್ಗೆ ಕೇಳಿ ನಟಿ ಗಿರಿಜಾ ಲೋಕೇಶ್ ಕೂಡ ಇಲ್ಲಿಂದಲೇ ಗಣೇಶನ ಮೂರ್ತಿ ಖರೀದಿಸುತ್ತಿದ್ದರು.
ಗಿರಿಜಾ ಲೋಕೇಶ್ ಅವರು ವಿವಿಧ ನಾಟಕ ಕಂಪನಿಗಳಿಲ್ಲಿ ಅಭಿನಯಕ್ಕಾಗಿ ಹಲವಾರು ದಿನಗಳ ಕಾಲ ಇಲ್ಲಿಯೇ ಇರುತ್ತಿದ್ದರು. ಚಿತ್ರಗಾರ ಗಲ್ಲಿಯ ಬಗ್ಗೆ ಅವರಿಗೆ ಮಾಹಿತಿ ಇತ್ತು. ಹೀಗಾಗಿ ಭೇಟಿ ನೀಡಿ ಆಕರ್ಷಕ ಮೂರ್ತಿಗಳನ್ನು ಖರೀದಿಸಿಕೊಂಡು ಹೋಗುತ್ತಿದ್ದರು. ಪ್ರತಿ ವರ್ಷ ಸಾವಿರಾರು ಮೂರ್ತಿಗಳು ಈ ಗಲ್ಲಿಯಲ್ಲಿ ಸಜ್ಜಾಗುತ್ತಿವೆ.
ಕಳೆದ ವರ್ಷದಿಂದ ಕೊರೊನಾ ಕಂಟಕ ಶುರುವಾಗಿದ್ದೆ ತಡ, ಇಲ್ಲಿನ 30ಕ್ಕೂ ಹೆಚ್ಚು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದವು. ಈ ವರ್ಷ ಸ್ವಲ್ಪ ಚೇತರಿಕೆ ಕಂಡು ಬಂದಿವೆ. ಕೆಲ ಹಿರಿಯ ತಲೆಗಳು ಇಂತಹ ಅದ್ಭುತ ಕಲೆಗಳನ್ನು ತಮ್ಮ ಕುಟುಂಬದ ಸದಸ್ಯರಿಗೆ ಕಲಿಸಿದ್ದಾರೆ. ವರ್ಷದ ಆರು ತಿಂಗಳ ಕಾಲ ಗಣೇಶನ ಮೂರ್ತಿಗಳನ್ನೇ ಇಲ್ಲಿ ಮಾಡುತ್ತಾರೆ. ಇದೇ ಅವರ ಜೀವನ ನಿರ್ವಹಣೆ ಆಸರೆ.
ದಾವಣಗೆರೆ ಅಂದರೆ ಕುಸ್ತಿಗೆ ಪ್ರಸಿದ್ಧವಾದ ಸ್ಥಳ. ಗಲ್ಲಿಗೊಂದು ಗರಡಿ ಮನೆಗಳಿವೆ. ಈ ಕುಸ್ತಿ ಗರಡಿ ಮನೆಗಳಿಗೆ ವಿಶೇಷವಾದ ಕಪ್ಪು ಮಿಶ್ರಿತ ಕೆಂಪು ಮಣ್ಣು ಬಳಕೆ ಮಾಡುತ್ತಾರೆ. ಇದು ಬಂದಿದ್ದು ರಾಜ್ಯದ ಬೇರೆ ಬೇರೆ ಕಡೆಯಿಂದ. ಪೈಲ್ವಾನರಿಗೆ ಹೇಳಿ ಮಾಡಿಸಿದ ಮಣ್ಣು. ಇಂತಹ ಮಣ್ಣು ಹುಡುಕಿ ತಂದಿದ್ದು, ಇದೇ ಚಿತ್ರಗಾರ ಗಲ್ಲಿ ಗಣೇಶ ಮೂರ್ತಿ ತಯಾರಿಸುವ ಕೆಲ ಕುಟುಂಬಗಳು. ಹೀಗೆ ಇಂತಹ ಮಣ್ಣಿಗೆ ಶತಮಾನಗಳ ಇತಿಹಾಸವಿದೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ಹರಹರ ತಾಲೂಕಿನ ಗಂಗನರಸಿ ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳಿಂದ ಇಂತಹ ಮಣ್ಣು ತಂದು ಪರಿಸರ ಸ್ನೇಹಿ ಗಣೇಶ ಮಾಡುವುದು ಚಿತ್ರಗಾರ ಗಲ್ಲಿಯ ವಿಶೇಷ ಎಂದು ಮೂರ್ತಿ ತಯಾರಕಿ ವಿದ್ಯಾ ಗಣೇಶ್ ತಿಳಿಸಿದ್ದಾರೆ.
ವರದಿ: ಬಸವರಾಜ ದೊಡ್ಮನಿ
ಇದನ್ನೂ ಓದಿ:
Ganesha Chaturthi 2021: ಗಣಪತಿಯ ವಾಹನವಾದ ಇಲಿ; ಮೂಷಿಕ ಗಣೇಶನ ಹೊತ್ತು ಸವಾರಿ ಮಾಡಿದ ಹಿಂದಿದೆ ಒಂದು ಅಪರೂಪದ ಕಥೆ
ಪರಿಸರ ಸ್ನೇಹಿ ಗಣೇಶ ವಿಗ್ರಹಗಳು; ಧಾರವಾಡದ ಕಲಾವಿದ ಕುಟುಂಬದ ಅದ್ಭುತ ಕಾರ್ಯ