
ದಾವಣಗೆರೆ, ಜೂ.6: ಜಿಲ್ಲೆಯ ಹರಿಹರ ತಾಲ್ಲೂಕಿನ ಹನಗವಾಡಿ ಬಳಿಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಗಡಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ಸೋಮಣ್ಣ ಬೇವಿನಮರದ ಅವರು ಹರಿಹರ ಪಂಚಮಸಾಲಿ ಮಠದ ಆಡಳಿತ ಮಂಡಳಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮಠಕ್ಕೆ ಸೇರಿದ ಸುಮಾರು ಒಂದೂವರೆ ಕೆಜಿ ಚಿನ್ನಾಭರಣಗಳ ಲೆಕ್ಕವೇ ನಾಪತ್ತೆಯಾಗಿದ್ದು, ಟ್ರಸ್ಟಿಗಳು ಈ ಸತ್ಯವನ್ನು ಮುಚ್ಚಿಟ್ಟಿದ್ದಾರೆ ಎಂದು ಅವರು ದೂರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೋಮಣ್ಣ ಬೇವಿನಮರದ, “2008ರ ಫೆಬ್ರವರಿ 18ರಂದು ಹರಿಹರದ ಪಂಚಮಸಾಲಿ ಮಠ ಸ್ಥಾಪನೆಯಾಗಿತ್ತು. ಆ ದಿನ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಮಠದ ಶ್ರೀಗಳಿಗೆ ಚಿನ್ನದ ಉಂಗುರ, ಚಿನ್ನದ ಕಡಗ ಹಾಗೂ ಭವ್ಯವಾದ ಚಿನ್ನದ ಕಿರೀಟ ಸೇರಿದಂತೆ ಸುಮಾರು ಒಂದೂವರೆ ಕೆಜಿ ಚಿನ್ನಾಭರಣಗಳನ್ನು ದಾನವಾಗಿ ನೀಡಿದ್ದರು. ಇತ್ತೀಚೆಗೆ ನಾವು ರಾಜ್ಯ ಹಾಗೂ ಹೊರರಾಜ್ಯಗಳ ವಿವಿಧ ಭಾಗಗಳಿಗೆ ಪ್ರವಾಸ ಕೈಗೊಂಡಾಗ ಅಂದು ದಾನ ನೀಡಿದ್ದ ಭಕ್ತರು ಈ ವಿಷಯವನ್ನು ನಮ್ಮ ಗಮನಕ್ಕೆ ತಂದಿದ್ದಾರೆ. ಸ್ವಾಮೀಜಿಯವರಿಗೆ ನೀಡಲಾಗಿದ್ದ ಈ ಎಲ್ಲ ಆಭರಣಗಳನ್ನು ಸದ್ಯ ಮಠದ ಟ್ರಸ್ಟ್‌ನವರೇ ತಮ್ಮ ವಶದಲ್ಲಿ ಇಟ್ಟುಕೊಂಡಿದ್ದಾರೆ” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ವಚನಾನಂದ ಶ್ರೀಗಳಿಗೆ ಹೆಚ್ಚಿದ ಬಂಧನದ ಭೀತಿ: ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಕೋರ್ಟ್‌ಗೆ ಹರಿಹರ ಪೊಲೀಸರ ಅರ್ಜಿ!
ಮಠದ ಆಸ್ತಿ ವಿವರಗಳ ಕುರಿತು ಅಸಮಾಧಾನ ಹೊರಹಾಕಿದ ಅವರು, “ಈಗಾಗಲೇ ಪಂಚಮಸಾಲಿ ಮಠದ ಆಂತರಿಕ ವಿಚಾರವಾಗಿ ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ ಪ್ರಮುಖ ಸಭೆಗಳು ನಡೆದಿವೆ. ಟ್ರಸ್ಟ್‌ನವರು ಸದ್ಯ ಕೇವಲ 27 ಕೋಟಿ ರೂಪಾಯಿಗಳ ನಗದು ಲೆಕ್ಕವನ್ನು ಮಾತ್ರ ಸಮಾಜದ ಮುಂದೆ ಇಟ್ಟಿದ್ದಾರೆ. ಆದರೆ, ಈ ಬಂಗಾರದ ವಿಚಾರವನ್ನು ಸಂಪೂರ್ಣವಾಗಿ ಮುಚ್ಚಿಟ್ಟಿದ್ದಾರೆ. ಮಠದ ಹೆಸರಿನಲ್ಲಿರುವ ಒಟ್ಟು ಬೆಳ್ಳಿ, ಬಂಗಾರ ಎಷ್ಟು? ಮಠಕ್ಕೆ ಸೇರಿದ ಜಮೀನು ಎಲ್ಲೆಲ್ಲಿದೆ? ಈ ಎಲ್ಲ ಅಧಿಕೃತ ದಾಖಲೆಗಳನ್ನು ಟ್ರಸ್ಟ್‌ನವರು ತಕ್ಷಣವೇ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು” ಎಂದು ಆಗ್ರಹಿಸಿದ್ದಾರೆ. ಈ ಸ್ಪೋಟಕ ಹೇಳಿಕೆಯು ಪಂಚಮಸಾಲಿ ಸಮುದಾಯ ಹಾಗೂ ಧಾರ್ಮಿಕ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:40 pm, Sat, 6 June 26