ಪಕ್ಷಕ್ಕೆ ಲೀಡ್ ಕೊಡಿಸದೇ ಇರುವ ಸಚಿವರು ರಾಜೀನಾಮೆ ಕೊಡಬೇಕು; ಸ್ವಪಕ್ಷದ ಸಚಿವರ ವಿರುದ್ಧವೇ​​​​ ಶಾಸಕ ಶಿವಗಂಗಾ ಬಸವರಾಜ್ ಆಕ್ರೋಶ

| Updated By: ಆಯೇಷಾ ಬಾನು

Updated on: Jun 10, 2024 | 1:25 PM

ಪಂಚ ಗ್ಯಾರೆಂಟಿಗಳ ಮೂಲಕ ರಾಜ್ಯವನ್ನು ಗೆದ್ದ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಕೇವಲ 09 ಸ್ಥಾನ ಮಾತ್ರ ಪಡೆದುಕೊಂಡಿದೆ. ಈ ಬಗ್ಗೆ ಆಕ್ರೋಶ ಹೊರ ಹಾಕಿರುವ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಅವರು ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಪಕ್ಷಕ್ಕೆ ಲೀಡ್ ಕೊಡಿಸದೇ ಇರುವ ಸಚಿವರು ರಾಜೀನಾಮೆ ಕೊಡಬೇಕು ಎಂದಿದ್ದಾರೆ.

ಪಕ್ಷಕ್ಕೆ ಲೀಡ್ ಕೊಡಿಸದೇ ಇರುವ ಸಚಿವರು ರಾಜೀನಾಮೆ ಕೊಡಬೇಕು; ಸ್ವಪಕ್ಷದ ಸಚಿವರ ವಿರುದ್ಧವೇ​​​​ ಶಾಸಕ ಶಿವಗಂಗಾ ಬಸವರಾಜ್ ಆಕ್ರೋಶ
ಶಿವಗಂಗಾ ಬಸವರಾಜ್
Follow us on

ದಾವಣಗೆರೆ, ಜೂನ್.10: ಲೋಕಸಭಾ ಚುನಾವಣೆಯಲ್ಲಿ (Lok Sabha Election) ಅಭ್ಯರ್ಥಿಗೆ ಲೀಡ್ ಕೊಡಿಸದೇ ಇರುವ ಸಚಿವರ ರಾಜೀನಾಮೆಗೆ ಶಾಸಕ ಶಿವಗಂಗಾ ಬಸವರಾಜ್ (Shivaganga Basavaraj) ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ಗೆ (Congress) ಹಿನ್ನಡೆ ಆಗಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಅವರು ತಮ್ಮದೇ ಪಕ್ಷದ ಸಚಿವರ ರಾಜೀನಾಮೆಗೆ ಡಿಮ್ಯಾಂಡ್ ಮಾಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಯಾವ ಸಚಿವರು ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಲೀಡ್ ಕಡಿಮೆ‌ ಕೊಡಿಸಿದ್ದಾರೋ ಅಂತವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ. ಸಚಿವ ಸ್ಥಾನವನ್ನು ವಜಾಗೊಳಿಸಿ ಹೊಸಬರಿಗೆ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ. ದಾವಣಗೆರೆಯಲ್ಲಿ ಸ್ವ ಪಕ್ಷದ ಸಚಿವರ ವಿರುದ್ದ ಕ್ರಮಕ್ಕೆ ಶಾಸಕ ಶಿವಗಂಗಾ ಬಸವರಾಜ್ ಆಗ್ರಹಿಸಿದ್ದಾರೆ. ರಾಹುಲ್ ಗಾಂಧಿಯವರು ಹಾಗೂ ಹಿರಿಯ ನಾಯಕರು ಇಂತಹ ಸಚಿವರ ವಿರುದ್ದ ಕ್ರಮ‌ಕೈಗೊಳ್ಳಬೇಕು. ನಮಗೆ ಪಕ್ಷ ಮುಖ್ಯ ಹೊರತು ವ್ಯಕ್ತಿ ಮುಖ್ಯವಲ್ಲ. ಅದ್ದರಿಂದ ಕ್ರಮ ಕೈಗೊಳ್ಳಬೇಕು. ಇಷ್ಟೊಂದು ಗ್ಯಾರೆಂಟಿ ನೀಡಿದರೂ ಕೂಡ ಹೆಚ್ಚು ಸೀಟ್ ಬಂದಿಲ್ಲ. ಯಾರು ಲೀಡ್ ಕೊಡಿಸಲು ಸಾಧ್ಯವಾಗಲಿಲ್ಲವೋ ಅಂತ ಸಚಿವರನ್ನು ತೆಗೆದು ಹೊಸಬರಿಗೆ ಟಿಕೆಟ್ ಕೊಡಬೇಕು. ಶಾಸಕರು, ಕಾರ್ಯಕರ್ತರು ಹಗಲು ಇರುಳು ಕೆಲಸ ಮಾಡಿ ಆಯಾ ಕ್ಷೇತ್ರಗಳಲ್ಲಿ ಲೀಡ್ ಕೊಡಿಸಿದ್ದೇವೆ. ಆದರೆ ಸಚಿವರುಗಳು ಅಭ್ಯರ್ಥಿಗಳನ್ನು ಗೆಲ್ಲಿಸೋದು ಇರಲಿ ಅವರ ಕ್ಷೇತ್ರಗಳಲ್ಲಿ ಲೀಡ್ ಕೊಡಿಸಿಲ್ಲ ಎಂದು ಸ್ವಪಕ್ಷದ ಸಚಿವರ ವಿರುದ್ಧವೇ​​​​ ಶಾಸಕ ಶಿವಗಂಗಾ ಬಸವರಾಜ್ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಮೂರನೇ ಬಾರಿಗೆ ದೇಶದ ನೇತೃತ್ವ ವಹಿಸಿರುವ ಪ್ರಧಾನಿ ಮೋದಿ ಜೊತೆ ಮತ್ತೊಮ್ಮೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಸೌಭಾಗ್ಯ: ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

ಲೋಕಸಭೆಯಲ್ಲಿ ಸೋಲು.. ಮಾಹಿತಿ ಸಂಗ್ರಹಕ್ಕೆ ಮುಂದಾದ ಸಿಎಂ

ಲೋಕಸಭೆ ಚುನಾವಣೆಯಲ್ಲಿ ಸೋಲಿನಿಂದ ಕಂಗೆಟ್ಟಿರೋ ಕಾಂಗ್ರೆಸ್‌ಗೆ ಚೇತರಿಸಿಕೊಳ್ಳದೇ ತಲೆನೋವಾಗಿದೆ. 20 ಸ್ಥಾನದಲ್ಲಿ ಗೆಲ್ತೀವಿ ಅಂತಿದ್ದ ಕಾಂಗ್ರೆಸ್​ ನಾಯಕರ ನಿರೀಕ್ಷೆ ಹುಸಿಯಾಗಿದೆ. ಕೇವಲ 9 ಸ್ಥಾನ ಗೆದ್ದ ಕೈ ನಾಯಕರಿಗೆ ಸೋಲಿನ ಆಘಾತವಾಗಿದೆ. ಇದ್ರ ಬೆನ್ನಲ್ಲೇ ರಾಜ್ಯ ನಾಯಕರ ಮೇಲೆ ಕೇಂದ್ರ ನಾಯಕರು ಒತ್ತಡದ ಮೇಲೆ ಒತ್ತಡ ಹಾಕ್ತಿದ್ದಾರೆ. ಮೊನ್ನೆಯಷ್ಟೇ ಸಚಿವರು, ಶಾಸಕರು ಜೊತೆ ಸಭೆ ಮಾಡಿದ್ದ ರಾಹುಲ್​ ಗಾಂಧಿ ಅಸಮಾಧಾನ ಹೊರಹಾಕಿದ್ರು. 18 ಸಚಿವರ ಬಗ್ಗೆ ವರದಿ ಕೇಳಿದ್ರು. ಇದಿಷ್ಟೇ ಅಲ್ಲ, ಕಾಂಗ್ರೆಸ್​ನಲ್ಲೇ ಕೆಲ ಶಾಸಕರು ಗ್ಯಾರಂಟಿ ಯೋಜನೆಯೇ ಕೈ ಹಿಡಿದಿಲ್ಲ, ಬಂದ್ ಮಾಡ್ಬೇಕು ಅಂತೆಲ್ಲಾ ಮಾತನಾಡಿದ್ರು. ಹೀಗಾಗಿ ಅಲರ್ಟ್ ಆಗಿರೋ ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕರ ಸಭೆ ಕರೆದಿದ್ದಾರೆ.

ಬೆಂಗಳೂರಿನ ಕಾಂಗ್ರೆಸ್ ಶಾಸಕರಿಗೆ ಬುಲಾವ್​ ಕೊಟ್ಟಿದ್ದಾರೆ. ಶಾಸಕರ ಜೊತೆ ಸಭೆ ನಡೆಸೋ ಮೂಲಕ ಫಲಿತಾಂಶದ ಮಾಹಿತಿ ಸಂಗ್ರಹಕ್ಕೆ ಸಿದ್ಧತೆ ನಡೆಸಿದ್ದಾರೆ. ಇದಿಷ್ಟೇ ಅಲ್ಲ, ಬಿಬಿಎಂಪಿ ಚುನಾವಣೆಯ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ. ಸಂಜೆ 5 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಡಿಸಿಎಂ ಡಿಕೆ.ಶಿವಕುಮಾರ್ ಕೂಡ ಭಾಗಿಯಾಗಲಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ