ದಾವಣಗೆರೆ: ಸದಾ ಒಂದಿಲ್ಲೊಂದು ಕಾರಣಕ್ಕೆ ಪ್ರಚಲಿತದಲ್ಲಿರುವ ಶಾಸಕ ಎಂ.ಪಿ. ರೇಣುಕಾಚಾರ್ಯ ರಾಜಕೀಯ ವಲಯದಾಚೆಗೆ ಸ್ವಕ್ಷೇತ್ರಕ್ಕೆ ಭೇಟಿ ನೀಡಿ ಜನರೊಂದಿಗಿದ್ದಾಗಲೂ ಏನಾದರೂ ಸುದ್ದಿಯಾಗುತ್ತಲೇ ಇರುತ್ತದೆ. ಸದ್ಯ ಹೊನ್ನಾಳಿ ತಾಲೂಕಿನ ಕುಂಬಳೂರು ಗ್ರಾಮಕ್ಕೆ ತೆರಳಿದ ಶಾಸಕ ಎಂ.ಪಿ.ರೇಣುಕಾಚಾರ್ಯಗೆ ಕೂಲಿ ಕಾರ್ಮಿಕರು ಹೂ ಮಳೆ ಸುರಿದು ಅಭಿನಂದಿಸಿದ್ದಾರೆ. ಹೊನ್ನಾಳಿ ತಾಲೂಕಿನ ಕುಂಬಳೂರು ಗ್ರಾಮಕ್ಕೆ ಉದ್ಯೋಗ ಖಾತ್ರಿ ಯೋಜನೆ ನೋಡಲು ಬಂದ ಶಾಸಕರಿಗೆ ಕೂಲಿ ಕಾರ್ಮಿಕರು ಹೂ ಮಳೆ ಸುರಿಸಿದ್ದಾರೆ.
ಕುಂಬಳೂರು ಗ್ರಾಮದಲ್ಲಿ ಸುಮಾರು ₹40 ಲಕ್ಷ ವೆಚ್ಚದಲ್ಲಿ ಉದ್ಯೋಗ ಖಾತ್ರಿ ಯೋಜನೆ ಮೂಲಕ ಗ್ರಾಮದ ಹಿರೇಕೆರೆ ಹೂಳೆತ್ತುವ ಕಾಮಗಾರಿ ನಡೆಯುತ್ತಿದ್ದು, 329 ಜನರಿಗೆ ಅದರಿಂದ ಉದ್ಯೋಗ ಸಿಕ್ಕಂತಾಗಿದೆ. ಈ ಹಿನ್ನೆಲೆಯಲ್ಲಿ ಕೆರೆ ವೀಕ್ಷಣೆಗೆ ಬಂದ ಶಾಸಕ ರೇಣುಕಾಚಾರ್ಯ ಕೆರೆ ಕಾಮಗಾರಿ ವೀಕ್ಷಿಸಿ ಸ್ವತಃ ಕೂಲಿ ಕೆಲಸ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಕಾರ್ಮಿಕರ ಒಡಗೂಡಿ ಹಾರೆ ಹಿಡಿದು ಮಣ್ಣು ಅಗೆದ ರೇಣುಕಾಚಾರ್ಯ ಕೂಲಿಯಾಳುಗಳಿಗೆ ಬೆಂಬಲ ಸೂಚಿಸಿದ್ದಾರೆ. ಈ ವೇಳೆ ಉದ್ಯೋಗ ಖಾತ್ರಿ ಮೂಲಕ ದುಡಿಯುವ ಕೈಗಳಿಗೆ ಕೆಲಸ ನೀಡಿದ ಶಾಸಕರಿಗೆ ಅಭಿನಂದನೆ ಸಲ್ಲಿಸಿದ ಗ್ರಾಮಸ್ಥರು ಖುಷಿಯಿಂದ ಹೂವಿನ ಮಳೆಯನ್ನೇ ಸುರಿಸಿದ್ದು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆಯ ಮಕ್ಕಳ ಬುಲೆಟ್ ಓಡಿಸಿದ ರೇಣುಕಾಚಾರ್ಯ
ಯಾರಾದರೂ ಹೊಸ ವಾಹನ ತಂದರೆ ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡಿಸುವುದು ಮಾಮೂಲು. ಆದರೆ ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಇದು ಸ್ವಲ್ಪ ವಿಭಿನ್ನ. ಇಲ್ಲಿನ ಜನ ದೇವಸ್ಥಾನದ ಬದಲಿಗೆ ಶಾಸಕ ರೇಣುಕಾಚಾರ್ಯ ಅವರ ಮನೆಗೆ ಬರುತ್ತಾರೆ. ಕಾರಣ ಶಾಸಕ ರೇಣುಕಾಚಾರ್ಯ ಜಂಗಮ ಎಂಬ ಒಂದು ಕಾರಣವೂ ಇರಬಹುದು.
ಇಂದು ಸಹ ಇಂಥದ್ದೇ ಒಂದು ಘಟನೆ ನಡೆದಿದೆ. ಹೊನ್ನಾಳಿ ತಾಲ್ಲೂಕು ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಪದ್ಮ ರಂಗನಾಥ ಅವರು ತಮ್ಮ ಪುತ್ರನಿಗೆ ಬುಲೆಟ್ ಕೊಡಿಸಿದ್ದರು. ಆದರೆ, ಖರೀದಿಸಿದ್ದ ಬುಲೆಟ್ ಪೂಜೆಗೆ ದೇವಸ್ಥಾನಕ್ಕೆ ಹೋಗುವ ಬದಲು ನೇರವಾಗಿ ಶಾಸಕ ರೇಣುಕಾಚಾರ್ಯ ಅವರ ಮನೆಗೆ ಬಂದಿದೆ. ನಂತರ ಹೊಸ ಬುಲೆಟ್ ಸವಾರಿ ಮಾಡಿದ ಶಾಸಕ ರೇಣುಕಾಚಾರ್ಯ ಹೊನ್ನಾಳಿ ಪಟ್ಟಣದಲ್ಲಿ ಒಂದು ಸುತ್ತು ಬಂದು ಬುಲೆಟ್ ಮಾಲೀಕರನ್ನು ಖುಷಿಪಡಿಸಿದ್ದಾರೆ.
ಇದನ್ನೂಓದಿ:
ಸ್ವಾತಂತ್ರ್ಯದ ಅಮೃತ ಮಹೋತ್ಸವ; ಶಾಸಕ ಎಂ.ಪಿ. ರೇಣುಕಾಚಾರ್ಯ, ಅಧಿಕಾರಿಗಳಿಂದ ಕಾಲ್ನಡಿಗೆ, ಸೈಕಲ್ ಜಾಥಾ