
ದಾವಣಗೆರೆ, ಏಪ್ರಿಲ್ 22: ಹರಿಹರ ಪಂಚಮಸಾಲಿ ಪೀಠದಲ್ಲಿ ಟ್ರಸ್ಟ್ ಹಾಗೂ ವಚನಾನಂದ ಸ್ವಾಮೀಜಿ ನಡುವಿನ ಸಂಘರ್ಷ ಮತ್ತೊಂದು ಹಂತ ತಲುಪಿದೆ. ಉಚ್ಛಾಟನೆ ಮಾಡಲಾಗಿದ್ದರೂ ಪಂಚಮಸಾಲಿ ಪೀಠದಲ್ಲಿ ಬಸವ ಜಯಂತಿ ಆಚರಣೆಗೆ ನಿರ್ಧಾರ ಹಿನ್ನೆಲೆ ಈ ಬಗ್ಗೆ ದಾವಣಗೆರೆ ಡಿಸಿ, ಎಸ್ಪಿಗೆ ಮಠದ ಟ್ರಸ್ಟ್ನಿಂದ ಲಿಖಿತ ದೂರು ನೀಡಲಾಗಿದೆ. ಏ.13ರಂದು ಮಠದಿಂದ ವಚನಾನಂದಶ್ರೀ ಉಚ್ಚಾಟನೆ ಮಾಡಲಾಗಿದೆಯಾದರೂ ಅವರು ಮಠದಲ್ಲಿಯೇ ಇದ್ದಾರೆ. ಅಲ್ಲದೇ ಏ.24ರಂದು ಬಸವ ಜಯಂತಿ ಆಚರಿಸಲು ಮುಂದಾಗಿದ್ದಾರೆ. ಬಸವ ಜಯಂತಿ ಮಾಡುವ ನೈತಿಕತೆ ವಚನಾನಂದ ಸ್ವಾಮೀಜಿಗೆ ಇಲ್ಲ ಎಂದು ಆರೋಪಿಸಲಾಗಿದೆ.
ಮಠದಲ್ಲಿ ಏನಾದರೂ ಅಹಿತಕರ ಘಟನೆ ನಡೆದರೆ ಉಸ್ತುವಾರಿ ಡಾ.ರಾಜಕುಮಾರ ಮತ್ತು ಲೆಕ್ಕ ಕೊಡಿ ಅಭಿಯಾನದ ಅಧ್ಯಕ್ಷ ಸಿರಿಗೆರೆ ಪರಮೇಶ್ವರ ಗೌಡ ಕಾರಣ. ಹೀಗಾಗಿ ಮಠದಲ್ಲಿ ಬಸವ ಜಯಂತಿ ಆಚರಣೆಗೆ ಅವಕಾಶ ನೀಡದಂತೆ ಆಗ್ರಹಿಸಿ ಪಂಚಮಸಾಲಿ ಗುರುಪೀಠದ ಟ್ರಸ್ಟ್ನ ಪ್ರಧಾನ ಧರ್ಮದರ್ಶಿ ಉಮಾಪತಿ,ಕಾರ್ಯದರ್ಶಿ ಜ್ಯೋತಿ ಪ್ರಕಾಶ್ರಿಂದ ಡಿಸಿ ಮತ್ತು ಎಸ್ಪಿಗೆ ದೂರು ನೀಡಲಾಗಿದೆ. ಮತ್ತೊಂದೆಡೆ ಪೀಠದಿಂದ ಉಚ್ಛಾಟಿತ ವಚನಾನಂದ ಶ್ರೀಗಳಿಗೂ ಟ್ರಸ್ಟ್ ಈ ಬಗ್ಗೆ ಪತ್ರ ಮುಖೇನ ಎಚ್ಚರಿಸಿದೆ.
ಇದನ್ನೂ ಓದಿ: ಉಚ್ಛಾಟಿತ ವಚನಾನಂದ ಶ್ರೀಗೆ ಮತ್ತೊಂದು ಸಂಕಷ್ಟ, ಧ್ಯಾನದ ಮೊರೆ ಹೋದ ಸ್ವಾಮೀಜಿ
ಏಪ್ರಿಲ್ 24ರಂದು ಶ್ರೀಪೀಠದಲ್ಲಿ ಶ್ರೀ ಬಸವ ಜಯಂತಿಯನ್ನು ಮತ್ತು ಬೃಹತ್ ರಾಜ್ಯ ಸಮಾವೇಶ ಅದ್ದೂರಿಯಲ್ಲಿ ಆಚರಣೆ ಮಾಡುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಪ್ರಕಟಿಸಿರುವುದನ್ನ ಗಮನಿಸಿದ್ದೇವೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕರೆ ನೀಡುತ್ತಿರುವುದು ಕೂಡ ಕಂಡುಬಂದಿದೆ. ಆದರೆ ಈಗಾಗಲೇ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ದಿಂದ ಪದಚ್ಯುತಿ (ಉಚ್ಛಾಟನೆ) ಮಾಡಲಾಗಿರುತ್ತದೆ. ಗೌರವಪೂರ್ವಕವಾಗಿ ಮಠವನ್ನ ತ್ಯಜಿಸಲು ಹೇಳಿದ್ದೇವೆ ಆದರೆ ತಾವು ಇಲ್ಲಿವರೆಗೂ ನಮ್ಮ ವಿರುದ್ಧವೇ ಬಾಯಿಗೆ ಬಂದಂತೆ ಮಾತನಾಡುತ್ತಾ ಚಾರಿತ್ರವಧೆ ಮಾಡುತ್ತಾ ಬಂದಿದ್ದೀರಿ. ಉಚ್ಛಾಟನೆಗೊಂಡಿರುವ ತಾವು ಕಾರ್ಯಕ್ರಮಗಳನ್ನು ಶ್ರೀಪೀಠದಲ್ಲಿ ಮಾಡಲು ಯಾವುದೇ ನೈತಿಕ ಹಕ್ಕು ಇರುವುದಿಲ್ಲ. ಆದ ಕಾರಣ ಯಾವುದೇ ಸಭೆ ಸಮಾರಂಭ ಪತ್ರಿಕಾಗೋಷ್ಠಿ ಮಾಡಬಾರದೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಾ, ಶ್ರೀಪೀಠದಲ್ಲಿ ಯಾವುದೇ ಅಹಿತಕರ ಘಟನೆ, ಗಲಾಟೆ, ಶ್ರೀಪೀಠದ ಆಸ್ತಿಗೆ ಹಾನಿಯದಲ್ಲಿ ತಾವುಗಳು, ಶ್ರೀಪೀಠದ ಅನಮಾತುನಲ್ಲಿರುವ ಆಡಳಿತಾಧಿಕಾರಿ ಡಾ.ರಾಜ್ ಕುಮಾರ್ ಮತ್ತು ಜಿ. ಪರಮೇಶ್ ಗೌಡ್ರು ಹೊಳೆಸಿರಿಗೆರಿ ನೇರವಾಗಿ ಹೊಣೆಯಾಗಿರುತ್ತೀರಿ ಎಂದು ತಮಗೆ ತಿಳಿಯಬಯಸುತ್ತೇವೆ ಎಂದು ಟ್ರಸ್ಟ್ ಹೇಳಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.