ಮದುವೆಯಾದ 45 ದಿನಕ್ಕೆ ಲವರ್ ಜೊತೆ ಯುವತಿ ಎಸ್ಕೇಪ್: ಪತಿ, ಸೋದರ ಮಾವ ಸೂಸೈಡ್
ದಾವಣಗೆರೆ ಗುಮ್ಮನೂರಿನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮದುವೆಯಾದ 45 ದಿನಕ್ಕೆ ನವವಿವಾಹಿತ ಪತ್ನಿಯಿಂದ ಕಿರುಕುಳ ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಯ ವರ್ತನೆಯೇ ಸಾವಿಗೆ ಕಾರಣ ಎಂದು ಡೆತ್ ನೋಟ್ ಬರೆದಿದ್ದಾರೆ. ಇತ್ತ, ಸೊಸೆ ಬೇರೊಬ್ಬನ ಜೊತೆ ಓಡಿಹೋದ ಅವಮಾನ ತಾಳಲಾರದೆ ಮುಂದೆ ನಿಂತು ಮದುವೆ ಮಾಡಿಸಿದ್ದ ಆಕೆಯ ಸಹೋದರ ಮಾವ ರುದ್ರೇಶ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ.

ದಾವಣಗೆರೆ, ಜನವರಿ 27: ಮದುವೆಯಾದ 45 ದಿನಕ್ಕೆ ನವವಿವಾಹಿತ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ದಾವಣಗೆರೆ ತಾಲೂಕಿನ ಗುಮ್ಮನೂರಿನಲ್ಲಿ ನಡೆದಿದೆ. ಹರೀಶ್(30) ಮೃತ ದುರ್ದೈವಿಯಾಗಿದ್ದು, ನನ್ನ ಸಾವಿಗೆ ಪತ್ನಿಯ ವರ್ತನೆಯ ಕಾರಣ ಎಂದು 2 ಪುಟಗಳ ಡೆತ್ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. ದುರ್ದೈವ ಅಂದರೆ ಹರೀಶ್ ಸಾವಿನ ಬೆನ್ನಲ್ಲೇ ಮುಂದೆ ನಿಂತು ಮದುವೆ ಮಾಡಿಸಿದ ತಪ್ಪಿಗೆ ಯುವತಿಯ ಸೋದರ ಮಾವ ರುದ್ರೇಶ್ ಸಹ ಅತ್ಮಹತ್ಯೆಗೆ ಶರಣಾಗಿದ್ದಾರೆ.
ಹರೀಶ್ ಡೆತ್ನೋಟ್ನಲ್ಲಿ ಏನಿದೆ?
ಪತ್ನಿ ಅನಗತ್ಯ ಕಿರುಕುಳ ನೀಡುತ್ತಿದ್ದಾಳೆ. ಬೇರೆ ಯುವಕನೊಂದಿಗೆ ಓಡಿ ಹೋಗಿ ನಾನು ಹಿಂಸೆ ನೀಡುತ್ತಿರುವೆ ಎಂದು ಆರೋಪಿಸಿದ್ದಾಳೆ. ಪತ್ನಿ ಹಾಗೂ ಸಂಬಂಧಿಕರಿಂದ ತನಗೆ ಜೀವ ಬೆದರಿಕೆ ಇತ್ತು. ಇದೇ ಕಾರಣಕ್ಕೆ ಬೇಸತ್ತು ಆತ್ಮಹತ್ಯೆ ಶರಣಾಗುತ್ತಿದ್ದೇನೆ ಎಂದು ಡೆತ್ ನೋಟ್ನಲ್ಲಿ ಹರೀಶ್ ಉಲ್ಲೇಖಿಸಿದ್ದಾರೆ. ಪತ್ನಿ ಹಾಗೂ ಆಕೆ ತಂದೆ, ತಾಯಿ, ಚಿಕ್ಕಪ್ಪನಿಗೆ ಜೀವಾವಧಿ ಶಿಕ್ಷೆ ಆಗಬೇಕು. ಆಸ್ತಿಗಿಂತ ಮಾನ ಮುಖ್ಯವಾಗಿರುವ ಕಾರಣ ಈ ನಿರ್ಧಾರ ಕೈಗೊಳ್ಳುತ್ತಿದ್ದೇನೆ. ತನ್ನನ್ನು ಕ್ಷಮಿಸಿ ಎಂದು ಕುಟುಂಬ ಸದಸ್ಯರಿಗೆ ಹರೀಶ್ ಕ್ಷಮೆಯನ್ನೂ ಕೇಳಿದ್ದು, ಪತ್ನಿಯ ಕಡೆಯವರು ನೀಡಿದ ಹಿಂಸೆಗೆ ತನ್ನ ತಂದೆ ತಾಯಿ ಮನೆ ಬಿಡುವ ಯೋಚನೆ ಕೂಡ ಮಾಡಿದ್ದರು ಎಂದು ಆರೋಪಿಸಿದ್ದಾರೆ. ಸ್ಥಳಕ್ಕೆ ದಾವಣಗೆರೆ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಸಿಎಂ ಹೆಸರು ಹೇಳ್ಕೊಂಡು ದಂಪತಿಗೆ ಕಾಂಗ್ರೆಸ್ ಮುಖಂಡನ ಧಮ್ಕಿ, ಹಲ್ಲೆ; ಪ್ರಧಾನಿ ಮೋದಿ, ರಾಷ್ಟ್ರಪತಿಗೆ ದೂರು
ಇನ್ನು ಇತ್ತ ಹರೀಶ್ ಆತ್ಮಹತ್ಯೆಗೆ ಶರಣಾದ ವಿಚಾರ ತಿಳಿಯುತ್ತಿದ್ದಂತೆ ಮುಂದೆ ನಿಂತು ಇವರ ಮದುವೆ ಮಾಡಿಸಿದ್ದ ಯುವತಿಯ ಸಹೋದರ ಮಾವ ರುದ್ರೇಶ್ ಕೂಡ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ರುದ್ರೇಶ್ ದಾವಣಗೆರೆಯ ಅನೆಕೊಂಡದ ನಿವಾಸಿಯಾಗಿದ್ದು, 4 ದಿನದ ಹಿಂದೆ ಕುಮಾರ್ ಎಂಬಾತನ ಜತೆ ಹರೀಶ್ ಪತ್ನಿ ಓಡಿಹೋಗಿದ್ದಳು. ಇದರಿಂದ ಅವಮಾನ ತಾಳಲಾರದೆ ರುದ್ರೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಯುವತಿಯ ಹುಚ್ಚಾಟಕ್ಕೆ ಇಬ್ಬರ ಪ್ರಾಣ ಹೋಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.