ಕೊನೆಗೂ ಬೈಎಲೆಕ್ಷನ್ ಸಮರ ಮುಕ್ತಾಯವಾಗಿದೆ. ರಾಜರಾಜೇಶ್ವರಿ ನಗರ ಹಾಗೂ ಶಿರಾ ಈ ಎರಡೂ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಗೆ ಮತದಾನ ನಡೆದಿದೆ. ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಿನ್ನೆ ನಡೆದ ಮತದಾನ ಕುತೂಹಲ ಹುಟ್ಟಿಸಿದೆ. ಈಗ ಮತದಾನದ ಮರುದಿನ ಪಕ್ಷಗಳು ಯಾವ ಲೆಕ್ಕಾಚಾರದಲ್ಲಿ ತೊಡಗಿವೆ ಅನ್ನೋದರ ಒಂದು ವರದಿ ಇಲ್ಲಿದೆ.
ಆಡಳಿತಾರೂಡ ಬಿಜೆಪಿ ಲೆಕ್ಕಾಚಾರ:
ಬಿಜೆಪಿ ನಾಯಕರ ಪ್ರಕಾರ ಆರ್.ಆರ್. ನಗರದಲ್ಲಿ ಪಕ್ಷದ ಅಭ್ಯರ್ಥಿ ಮುನಿರತ್ನ ಗೆಲ್ಲುವುದು ಖಚಿತ. ಕಾರಣವೇನೆಂದರೆ ಅವರು ಮಾಡಿರುವ ಕೆಲಸ. ಬಿಜೆಪಿ ಹೇಳುವ ಪ್ರಕಾರ ಕಾಂಗ್ರೆಸ್ನ ಎಲ್ಲಾ ನಗರಪಾಲಿಕೆ ಸದಸ್ಯರು ಮತ್ತು ಅವರ ಬೆಂಬಲಿಗರು ಪಕ್ಷ ಸೇರಿದ್ದರಿಂದ ಈ ಬಾರಿ ಚುನಾವಣೆ ಮತ್ತಷ್ಟು ಸಲೀಸಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುನಿರತ್ನ ಅವರಿಗೆ ಮಂತ್ರಿ ಮಾಡುತ್ತೇನೆ ಎಂದು ಭರವಸೆ ಕೊಟ್ಟಿರುವ ಹಿನ್ನೆಲೆಯಲ್ಲಿ ಅವರ ಬೆಂಬಲಿಗರಿಗೆ ಉತ್ಸಾಹ ಹುಟ್ಟಿದೆ. ಈ ವಿಚಾರವನ್ನು ತಳ್ಳಿಹಾಕಲಾಗದು. ಇನ್ನು ಶಿರಾ ವಿಚಾರಕ್ಕೆ ಬಂದಾಗ ಪಕ್ಷದ ನಾಯಕರು ತುಂಬಾ ಆತ್ಮವಿಶ್ವಾಸದಲ್ಲಿದ್ದಾರೆ. ತ್ರಿಕೋನ ಸ್ಪರ್ಧೆಯಲ್ಲಿ ಪಕ್ಷದ ಅಭ್ಯರ್ಥಿ ಡಾ. ರಾಜೇಶ್ ಗೌಡ ಅವರಿಗೆ ಅನುಕೂಲವಾಗುವ ಲಕ್ಷಣ ಇದೆ ಎಂಬ ವಿಶ್ವಾಸ ಪಕ್ಷದ ನಾಯಕರದ್ದು.
ಕಾಂಗ್ರೆಸ್ ಪಕ್ಷದ ಅಭಿಪ್ರಾಯ:
ಬಹಳ ಕುತೂಹಲಕಾರಿ ಅಂಶವನ್ನು ಪಕ್ಷದ ನಾಯಕರು ಖಾಸಗಿಯಾಗಿ ಹಂಚಿಕೊಂಡಿದ್ದಾರೆ. ನಾಯಕರ ಪ್ರಕಾರ ಪಕ್ಷದ ಅಭ್ಯರ್ಥಿ ಟಿ.ಬಿ. ಜಯಚಂದ್ರ ಅವರಿಗೆ ತುಂಬಾ ಕಠಿಣ ಸವಾಲು ಇದೆ. ಯಾಕೆಂದರೆ, ಬಿಜೆಪಿ ಈ ಚುನಾವಣೆಯನ್ನು ತ್ರಿಕೋನ ಸ್ಪರ್ಧೆ ಮಾಡಿರುವ ಹಿನ್ನೆಲೆಯಲ್ಲಿ ಒಕ್ಕಲಿಗರನ್ನು ಹೊರತು ಪಡಿಸಿ ಉಳಿದ ಜನಾಂಗದ ಮತಗಳು ಕಾಂಗ್ರೆಸ್ಗೆ ಬರುವ ಸಾಧ್ಯತೆ ಸ್ವಲ್ಪ ಕಡಿಮೆ ಇದೆ. ಆದರೆ, ನಾಯಕರುಗಳು ಆರ್.ಆರ್.ನಗರದ ಕುರಿತಾಗಿ ಆತ್ಮವಿಶ್ವಾಸದಲ್ಲಿದ್ದಾರೆ. ಕಾರಣವೇನೆಂದರೆ, ಒಕ್ಕಲಿಗರು ಪಕ್ಷದ ಅಭ್ಯರ್ಥಿ ಕುಸುಮಾ ಅವರನ್ನು ಆಶೀರ್ವದಿಸಿದ್ದು. ಇಲ್ಲಿ, ಪಕ್ಷದ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಜಾಸ್ತಿ ಎಂದು ಹೇಳುತ್ತಾರೆ.
ಜೆಡಿಎಸ್ ನಾಯಕರುಗಳ ಪ್ರಕಾರ ಪಕ್ಷಕ್ಕೆ ಶಿರಾದಲ್ಲಿ ಗೆಲ್ಲುವ ವಿಶ್ವಾಸ ಇದೆ. ದಕ್ಷಿಣ ಕರ್ನಾಟಕದ ಒಕ್ಕಲಿಗ ಕ್ಷೇತ್ರದಲ್ಲಿ ಜನ ದೇವೇಗೌಡರ ಕೈ ಬಿಡುವ ಸಾಧ್ಯತೆ ತುಂಬಾ ಕಡಿಮೆ. ಹಾಗಾಗಿ ಪಕ್ಷ ಶಿರಾದಲ್ಲಿ ಗೆಲ್ಲಬಹುದು ಎಂಬ ವಿಶ್ವಾಸದಲ್ಲಿ ಪಕ್ಷದ ನಾಯಕರು ಇದ್ದಾರೆ. ಆದರೆ, ಆರ್.ಆರ್.ನಗರಕ್ಕೆ ಬಂದರೆ ಪಕ್ಷದ ನಾಯಕರು ಅಷ್ಟೇನು ತಲೆಕೆಡಿಸಿಕೊಂಡಷ್ಟು ಕಾಣುತ್ತಿಲ್ಲ.
ಹಾಗಾದರೆ ಏನು ಆಗಬಹುದು?
ಶಿರಾ ಮತ್ತು ಆರ್.ಆರ್.ನಗರ ಉಪಚುನಾವಣೆಯ ಮತದಾನ ಮುಗಿದ ಮರುದಿನ ರಾಜ್ಯದ ರಾಜಕೀಯ ಮೊಗಸಾಲೆಯಲ್ಲಿ ಗೆಲುವು ಸೋಲಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಅದರ ಜೊತೆಗೆ ಜನರಲ್ಲಿ ಒಂದು ಕುತೂಹಲ ಇದೆ. ಈ ಫಲಿತಾಂಶ ಕರ್ನಾಟಕದ ರಾಜಕೀಯದ ಮೇಲೆ ಹೇಗೆ ಪರಿಣಾಮ ಬೀರಬಹುದು?
ಬಿಜೆಪಿ ಶಿರಾದಲ್ಲಿ ವಿಜಯ ಪತಾಕೆ ಹಾರಿಸಲು ಹವಣಿಸಿದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಯಾವುದೇ ಕಾರಣಕ್ಕೂ ಅಲ್ಲಿ ಬಿಜೆಪಿ ಕಾಲಿಡಬಾರದು ಎಂಬ ತಂತ್ರಗಾರಿಕೆ ಮಾಡಿದ್ದಾರೆ. ಒಮ್ಮೆ ತ್ರಿಕೋನ ಸ್ಪರ್ಧೆ ಏರ್ಪಟ್ಟರೆ ಬಿಜೆಪಿಗೆ ಲಾಭವಾಗಬಹುದು ಎಂಬುದು ಆ ಪಕ್ಷ ನಾಯಕರ ಲೆಕ್ಕಾಚಾರ. ಇನ್ನೊಂದು ಮೂಲದ ಪ್ರಕಾರ, ಎರಡೂ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಜೊತೆ ಒಳ ಒಪ್ಪಂದವಾಗಿದೆ ಹಾಗಾಗಿ ಬಿಜೆಪಿ ಗೆಲ್ಲುವ ಸಾಧ್ಯತೆ ಇದೆ ಎಂದು. ಆದರೆ, ಜೆಡಿಎಸ್ ಪಕ್ಷದ ನಾಯಕರು ಇದನ್ನು ಸ್ಪಷ್ಟವಾಗಿ ಅಲ್ಲಗಳೆಯುತ್ತಾರೆ. ದಕ್ಷಿಣ ಕರ್ನಾಟಕದ ಗ್ರಾಮೀಣ ಭಾಗದಲ್ಲಿರುವ ಮತ್ತು ಒಕ್ಕಲಿಗ ಸಮಾಜದ ಮತ ಇರುವ ಕ್ಷೇತ್ರಗಳಲ್ಲಿ ಬಿಜೆಪಿ ಜಾಗ ಬಿಟ್ಟು ಕೊಟ್ಟರೆ, ಅದು ಆತ್ಮಾಹುತಿಯಾಗುತ್ತದೆ ಎಂಬುದು ಪಕ್ಷದ ನಾಯಕರುಗಳು ಖಾಸಗಿಯಾಗಿ ಹೇಳುವ ವಿಚಾರ.
ಹಾಗಾಗಿ, ಶಿರಾದಲ್ಲಿ ಒಳ ಒಪ್ಪಂದ ಆಗಿದೆ ಎನ್ನುವ ಮಾತಿನಲ್ಲಿ ಯಾವ ಹುರುಳಿಲ್ಲ. ಎರಡನೆಯದಾಗಿ, ಬಿಜೆಪಿ ಶಿರಾದಲ್ಲಿ ಒಕ್ಕಲಿಗ ಸಮಾಜದ ಮತಗಳನ್ನು ಬಿಟ್ಟು ಬೇರೆ ಮತ ಸೆಳೆಯಲು ಯಾವ ಕೂಟ ನೀತಿ ಬೇಕೋ ಅದನ್ನು ಮಾಡಿರುವ ಲಕ್ಷಣ ಕಾಣುತ್ತಿದೆ. ಆದರೆ, ಕಾಂಗ್ರೆಸ್ನ ಜಯಚಂದ್ರ ಹಳೆ ಹುಲಿ. ಅವರು ಅಷ್ಟು ಸುಲಭವಾಗಿ ಬಿಟ್ಟು ಕೊಡುವ ಸಾಧ್ಯತೆ ಕಡಿಮೆ.
ಚುನಾವಣಾ ಪ್ರಚಾರದ ಮಧ್ಯೆ ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಚರ್ಚೆ ಆರಂಭಿಸಿದ್ದನ್ನು ಮತದಾರರು ಗಮನಿಸಿದ್ದು ಸುಳ್ಳಲ್ಲ. ಇದು ಗೆಲ್ಲುವ ಪಕ್ಷದ ತಂತ್ರ ಖಂಡಿತ ಅಲ್ಲ ಎಂದಷ್ಟೇ ಹೇಳಬಹುದು. ಇದು ಖಂಡಿತವಾಗಿ ವಿರೋಧ ಪಕ್ಷಕ್ಕೆ ಮುಳುವಾಗುವ ಸಾಧ್ಯತೆ ಜಾಸ್ತಿ. ಈ ಚರ್ಚೆ ಒಂದು ವಿಚಾರವನ್ನು ಹೊರಗೆಳೆದಿದೆ. ಅದು ಏನೆಂದರೆ, ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಪಕ್ಷದ ಒಳಗೆ ಬಹಳ ವಿರೋಧಿಗಳಿದ್ದಾರೆ ಮತ್ತು ಅವರಿಗೆ ಪಕ್ಷದ ಒಳಗೆ ಮೇಲುಗೈ ಸಾಧಿಸಲು ಈ ನಾಯಕರುಗಳೇ ಬಿಡುವ ಲಕ್ಷಣ ಕಾಣುತ್ತಿಲ್ಲ ಎಂಬುವುದು.
ಇದೇನಾದರೂ ಮತದಾರರ ಆಯ್ಕೆಯಲ್ಲಿಯೂ ಪ್ರತಿಫಲಿಸಿದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸ್ಥಾನ ಸುರಕ್ಷಿತ. ಮತ್ತು ಅಧಿಕೃತ ವಿರೋಧ ಪಕ್ಷ ಕಾಂಗ್ರೆಸ್ನಲ್ಲಿ ಮುಂದಿನ ದಿನಗಳಲ್ಲಿ ಕಿತ್ತಾಟ ಜೋರಾಗುವ ಲಕ್ಷಣವಿದೆ. ಇದಕ್ಕೆ ಸರಿಯಾಗಿ ಬಿಹಾರ ಚುನಾವಣೆಯಲ್ಲಿ ಏನಾದರೂ ವಿರೋಧ ಪಕ್ಷ ಮತ್ತೆ ಎಡವಿದರೆ, ಗಾಂಧಿ ಕುಟುಂಬದ ರಾಜಕೀಯ ಮತ್ತಷ್ಟು ದುರ್ಬಲಗೊಳ್ಳುವುದು ನಿಶ್ಚಿತ. ಆಗ ಇದರ ಪ್ರಭಾವ ಕರ್ನಾಟಕದ ಮೇಲೆ ನೇರ ಪರಿಣಾಮ ಬೀರದಿದ್ದರೂ, ಇಲ್ಲಿ ನಡೆಯುವ ಕಾಂಗ್ರೆಸ್ ನಾಯಕರುಗಳ ಜಟಾಪಟಿಯನ್ನು ನಿಲ್ಲಿಸುವ ಶಕ್ತಿ ಕಾಂಗ್ರೆಸ್ ಹೈಕಮಾಂಡಿಗೆ ಇಲ್ಲವಾಗಬಹುದು. ಆಗ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತಷ್ಟು ದುರ್ಬಲವಾಗುವ ಸಾಧ್ಯತೆ ಇದೆ.
ಅದೇ ರೀತಿ, ಬಿಜೆಪಿ ಒಂದು ಗೆದ್ದು ಮತ್ತೊಂದು ಕ್ಷೇತ್ರದಲ್ಲಿ ಸೋತರೆ, ಯಡಿಯೂರಪ್ಪ ಅವರ ವಿರುದ್ಧ ಮಸಲತ್ತು ಮಾಡುವವರ ತಂಡ ತಮ್ಮ ಕೂಟ ನೀತಿಯನ್ನು ಮುಂದುವರಿಸಬಹುದು. ಅದಕ್ಕೆ ಜಯ ಸಿಗುತ್ತೆ ಎಂದು ಈಗಲೇ ಹೇಳುವುದು ಕಷ್ಟ. ಒಮ್ಮೆ ಎರಡೂ ಕ್ಷೇತ್ರ ಸೋತರೆ ಅವರಿಗೆ ಈ ಉಪಚುನಾವಣೆಯೇ ಮುಳುವಾಗುವ ಸಾಧ್ಯತೆ ಹೆಚ್ಚು. ಅದಕ್ಕೆ ಬದಲಾಗಿ ಒಂದೊಮ್ಮೆ, ಎರಡೂ ಕ್ಷೇತ್ರ ಗೆದ್ದರೆ ಅವರನ್ನು ಮೂರು ವರ್ಷ ಯಾರು ಮುಟ್ಟಲಾಗದಷ್ಟು ಅವರ ಖುರ್ಚಿ ಭದ್ರವಾಗುವುದು ನಿಜ.