ಅಂತ್ಯಕ್ರಿಯೆ ಹೊತ್ತಲ್ಲಿ ಬಂತು ಪಾಸಿಟಿವ್, ಸಂಬಂಧಿಕರೆಲ್ಲಾ ಕಾಲ್ಕಿತ್ತ ಮೇಲೆ ನೆಗೆಟಿವ್ ರಿಪೋರ್ಟ್; ಅಧಿಕಾರಿಗಳ ಯಡವಟ್ಟಿಗೆ ಜನ ಹೈರಾಣು
ವ್ಯಕ್ತಿಯ ಮೂಗು ಮತ್ತು ಗಂಟಲು ದ್ರವವನ್ನು ಕೇವಲ ಒಮ್ಮೆ ಮಾತ್ರ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತಾದರೂ ವರದಿ ಮಾತ್ರ ಮೂರು ಬಾರಿ ಬಂದಿದೆ. ಮೊದಲಿಗೆ ನೆಗೆಟಿವ್, ಆಮೇಲೆ ಪಾಸಿಟಿವ್, ಮತ್ತೆ ನೆಗೆಟಿವ್ ವರದಿ ಬಂದಿರುವುದು ಸಹಜವಾಗಿಯೇ ಎಲ್ಲರಲ್ಲೂ ಗೊಂದಲ ಸೃಷ್ಟಿಸಿದೆ. ಆರೋಗ್ಯ ಇಲಾಖೆ ಅಧಿಕಾರಿಗಳ ಯಡವಟ್ಟಿಗೆ ಗ್ರಾಮಸ್ಥರೆಲ್ಲರಲ್ಲೂ ಆತಂಕ ಹೆಚ್ಚಾಗಿದೆ.
ಯಾದಗಿರಿ: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಸೋಂಕಿತರ ಸಂಖ್ಯೆಯಲ್ಲೂ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಹಲವೆಡೆ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸುವುದಕ್ಕೂ ಪರದಾಟ ಶುರುವಾಗಿದೆ. ಈ ನಡುವೆ ಯಾದಗಿರಿಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮಾಡಿದ ಯಡವಟ್ಟಿನಿಂದಾಗಿ ಮೃತ ವ್ಯಕ್ತಿಯ ಅಂತ್ಯಕ್ರಿಯೆಗೆ ತೆರಳಿದವರೆಲ್ಲರೂ ಸ್ಥಳದಿಂದ ಕಾಲ್ಕಿತ್ತ ಘಟನೆ ನಡೆದಿದೆ. ಕೊವಿಡ್ ನೆಗೆಟಿವ್ ಇದ್ದು, ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ ವೇಳೆಗೆ ಆತನಿಗೆ ಪಾಸಿಟಿವ್ ಇದೆ ಎಂದು ವರದಿ ಬಂದಿರುವುದಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಗಾಬರಿಪಡಿಸಿದ ಪರಿಣಾಮ ಶವ ಸಂಸ್ಕಾರಕ್ಕೆ ಬಂದವರು ಭಯಭೀತರಾಗಿ ಪರಾರಿಯಾಗಿದ್ದಾರೆ.
ಜಿಲ್ಲೆಯ ಶಹಾಪುರ ತಾಲ್ಲೂಕಿನ ರಸ್ತಾಪುರ ಗ್ರಾಮದ 75 ವರ್ಷದ ವ್ಯಕ್ತಿಯೊಬ್ಬರು ಅನಾರೋಗ್ಯ ಹಿನ್ನೆಲೆ ಏಪ್ರಿಲ್ 18ರಂದು ಶಹಾಪುರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ದಾಖಲಾದ ದಿನವೆ ಅವರಿಗೆ ಕೊವಿಡ್ ಟೆಸ್ಟ್ ಮಾಡಿಸಲಾಗಿದ್ದು ನೆಗೆಟಿವ್ ವರದಿ ಬಂದಿದೆ. ಕೊರೊನಾ ನೆಗೆಟಿವ್ ಇದ್ದ ಕಾರಣ ವೈದ್ಯರೂ ಚಿಕಿತ್ಸೆ ನೀಡಿದ್ದಾರೆ. ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಆ ವ್ಯಕ್ತಿ ಏಪ್ರಿಲ್ 19ರಂದು ಮೃತಪಟ್ಟಿದ್ದಾರೆ.
ಕೊವಿಡ್ ನೆಗೆಟಿವ್ ಇದ್ದ ಕಾರಣ ಮೃತ ವ್ಯಕ್ತಿಯ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಅದರಂತೆಯೇ ಶವ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡ ಕುಟುಂಬದವರು ಸಂಬಂಧಿಕರಿಗೆಲ್ಲಾ ವಿಷಯ ತಿಳಿಸಿದ್ದು, ಏಪ್ರಿಲ್ 20ರಂದು ಅಂತ್ಯ ಸಂಸ್ಕಾರ ನಡೆಸುವುದಕ್ಕೆ ತಯಾರಾಗಿದ್ದರು. ಆದರೆ, ಇನ್ನೇನು ಅಂತ್ಯಕ್ರಿಯೆ ಮಾಡಬೇಕು ಎನ್ನುವಷ್ಟರಲ್ಲಿ ಏಕಾಏಕಿ ಸ್ಥಳಕ್ಕೆ ದೌಡಾಯಿಸಿದ ಆರೋಗ್ಯ ಅಧಿಕಾರಿಗಳು ಮೃತ ವ್ಯಕ್ತಿಯ ಕೊವಿಡ್ ವರದಿಯಲ್ಲಿ ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದಾರೆ. ಯಾವಾಗ ಮೃತರಿಗೆ ಪಾಸಿಟಿವ್ ಎಂಬ ಸುದ್ದಿ ಹೊರಗೆ ಬಿತ್ತೋ ಶವ ಸಂಸ್ಕಾರಕ್ಕೆ ಬಂದವರೆಲ್ಲಾ ಗಾಬರಿಗೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ನಂತರ ಬೇರೆ ದಾರಿಯಿಲ್ಲದೇ ಕೊರೊನಾ ನಿಯಮಾವಳಿಗಳನ್ನು ಪಾಲಿಸಿ ನಾಲ್ಕು ಮಂದಿ ಕುಟುಂಬಸ್ಥರು ಸೇರಿ ಅಂತ್ಯಕ್ರಿಯೆ ಮಾಡಿದ್ದಾರೆ. ಅತ್ತ ಶವ ಸಂಸ್ಕಾರಕ್ಕೆ ಬಂದು ಹೆದರಿ ವಾಪಾಸಾದವರೆಲ್ಲರೂ ತಮಗೆಲ್ಲಿ ಪಾಸಿಟಿವ್ ಕಾಣಿಸಿಕೊಳ್ಳುತ್ತದೆಯೋ ಎಂಬ ಚಿಂತೆಗೆ ಬಿದ್ದಿದ್ದಾರೆ. ಆದರೆ, ಅಂತ್ಯಕ್ರಿಯೆ ಸಂಪೂರ್ಣ ಮುಗಿದ ಬಳಿಕ ಮತ್ತೆ ಸ್ಥಳಕ್ಕೆ ಬಂದ ಆರೋಗ್ಯ ಅಧಿಕಾರಿಗಳು, ಇಲ್ಲ ಮೃತರ ಕೊರೊನಾ ವರದಿ ಈಗ ನೆಗೆಟಿವ್ ಬಂದಿದೆ ಎಂದು ಹೇಳಿದ್ದಾರೆ. ಇತ್ತ ಕುಟುಂಬಸ್ಥರು ಮೂರುಮೂರು ಬಾರಿ ಬಂದ ವರದಿಯಲ್ಲಿ ಯಾವುದನ್ನು ನಂಬಬೇಕು, ಯಾವುದನ್ನು ಬಿಡಬೇಕು ಎಂದು ತಿಳಿಯಲಾಗದೇ ಹೈರಾಣಾಗಿದ್ದಾರೆ.
ವಿಪರ್ಯಾಸವೆಂದರೆ, ವ್ಯಕ್ತಿಯ ಮೂಗು ಮತ್ತು ಗಂಟಲು ದ್ರವವನ್ನು ಕೇವಲ ಒಮ್ಮೆ ಮಾತ್ರ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತಾದರೂ ವರದಿ ಮಾತ್ರ ಮೂರು ಬಾರಿ ಬಂದಿದೆ. ಮೊದಲಿಗೆ ನೆಗೆಟಿವ್, ಆಮೇಲೆ ಪಾಸಿಟಿವ್, ಮತ್ತೆ ನೆಗೆಟಿವ್ ವರದಿ ಬಂದಿರುವುದು ಸಹಜವಾಗಿಯೇ ಎಲ್ಲರಲ್ಲೂ ಗೊಂದಲ ಸೃಷ್ಟಿಸಿದೆ. ಆರೋಗ್ಯ ಇಲಾಖೆ ಅಧಿಕಾರಿಗಳ ಹೀಗೆ ಮಾಡಿರುವ ಯಡವಟ್ಟಿಗೆ ಗ್ರಾಮಸ್ಥರೆಲ್ಲರಲ್ಲೂ ಆತಂಕ ಹೆಚ್ಚಾಗಿದೆ. ಕುಟುಂಬಸ್ಥರು ಕೂಡ ಭಯದಲ್ಲೇ ಅಂತ್ಯಕ್ರಿಯೆ ನೆರವೇರಿಸಿಕೊಂಡು ಈಗ ಯಾವ ವರದಿಯನ್ನು ನಂಬಬೇಕು ಎಂದು ತಿಳಿಯದೇ ಕಂಗಾಲಾಗಿದ್ದಾರೆ.
ಇದನ್ನೂ ಓದಿ: ಬೆಳಗಾವಿಯ ಕಾಡಂಚಿನ ಗ್ರಾಮದಲ್ಲಿ ಅರ್ಧಕ್ಕರ್ಧ ಜನರಿಗೆ ಕೊರೊನಾ ಪಾಸಿಟಿವ್: ಇಡೀ ಊರನ್ನೇ ಸೀಲ್ಡೌನ್ ಮಾಡಿದ ಅಧಿಕಾರಿಗಳು
ಕೊರೊನಾ ಮೂರನೇ ಬಾರಿಗೆ ರೂಪಾಂತರ; ಅಕ್ಟೋಬರ್ನಲ್ಲೇ ಸುಳಿವಿದ್ದರೂ ಮೈಮರೆತುಬಿಟ್ಟಿತಾ ಭಾರತ?