ಧಾರವಾಡ: ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಜಾರಿಗೆ ತರಲಾಗಿದ್ದ ಲಾಕ್ಡೌನ್ ಅನ್ನು ನಿಧಾನವಾಗಿ ಹಿಂಪಡೆಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ವಿವಾಹ ಮತ್ತು ಇನ್ನಿತರ ಸಮಾರಂಭದ ಮೇಲೆ ಹೇರಲಾಗಿದ್ದ ನಿಷೇಧವೂ ಕೂಡ ಇದೀಗ ತೆರವುಗೊಂಡಿದೆ. ಹೀಗಾಗಿ ಅನೇಕ ಕಡೆಗಳಲ್ಲಿ ಸಂಬಂಧ ನಿಶ್ಚಿತವಾಗಿ ಮದುವೆಗಾಗಿ ಕಾದು ಕೂತಿದ್ದ ಜೋಡಿಗಳು ಇದೀಗ ಸಪ್ತಪದಿ ತುಳಿಯುತ್ತಿದ್ದಾರೆ. ಇಂಥ ಅನೇಕ ಮದುವೆಗಳ ನಡುವೆ ಧಾರವಾಡದಲ್ಲಿ ನಡೆದ ಅಪರೂಪದ ಮದುವೆಯೊಂದು ಎಲ್ಲರ ಗಮನ ಸೆಳೆದಿದೆ.
ಧಾರವಾಡ ನಗರದ ಸತ್ತೂರು ಬಡಾವಣೆಯ ಕುಮಾರ ಎನ್ನುವ ಯುವಕನಿಗೆ ಹುಟ್ಟಿನಿಂದಲೂ ಕಿವಿ ಕೇಳುವುದಿಲ್ಲ. ಈ ಹಿನ್ನೆಲೆಯಲ್ಲಿ ಮಾತು ಕೂಡ ಬಾರದಂತಾಗಿ ಹೋಗಿತ್ತು. ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುವ ಕುಮಾರನಿಗೆ ಅವನಂತೆಯೇ ಇರುವ ಯುವತಿಯನ್ನು ಹುಡುಕುತ್ತಿದ್ದರು. ಈ ಸಂದರ್ಭದಲ್ಲಿ ಧಾರವಾಡ ನಗರದ ಸಾರಸ್ವತಪುರ ಬಡಾವಣೆಯ ಶ್ವೇತಾ ಎನ್ನುವ ಯುವತಿಯ ಬಗ್ಗೆ ತಿಳಿದಿದೆ. ಈ ಯುವತಿಗೂ ಮಾತು ಬಾರದು, ಕಿವಿಯೂ ಕೇಳದು. ಈ ವಿಚಾರ ತಿಳಿದ ಕುಟುಂಬಸ್ಥರು ಈ ಬಗ್ಗೆ ಇಬ್ಬರನ್ನೂ ವಿಚಾರಿಸಿದ್ದು, ಆಗ ಇಬ್ಬರಿಗೂ ಈ ಸಂಬಂಧ ಒಪ್ಪಿಗೆಯಾಯಿತು. ಈ ಹಿನ್ನೆಲೆಯಲ್ಲಿ ಸೋಮವಾರ ಸಂಪ್ರದಾಯಬದ್ಧವಾಗಿ ಮದುವೆ ಮಾಡಲು ನಿಶ್ಚಯಿಸಲಾಯಿತು.
ಹಾರ ಬದಲಿಸಿದಂತೆ ಮಾಸ್ಕ್ ಬದಲಾಯಿಸಿದ ವಧು-ವರರು
ಮದುವೆಯಲ್ಲಿ ವಧು-ವರರು ಪರಸ್ಪರ ಹಾರವನ್ನು ಹಾಕುವುದು ಸಂಪ್ರದಾಯ. ಇಲ್ಲಿ ಹಾರ ಹಾಕುವುದರೊಂದಿಗೆ ಕೊರೊನಾ ಹಿನ್ನೆಲೆಯಲ್ಲಿ ಮಾಸ್ಕ್ ಅನ್ನು ಕೂಡ ಪರಸ್ಪರ ಹಾಕಿದ್ದಾರೆ. ಇನ್ನು ಕುಮಾರ-ಶ್ವೇತಾ ಇಬ್ಬರೂ ಕೈಗೆ ಮೆಹಂದಿಯನ್ನು ಹಾಕಿಕೊಂಡಿದ್ದು, ಮದುವೆ ಕಾರ್ಯಕ್ರಮದ ಮಧ್ಯೆ ಇಬ್ಬರೂ ಪರಸ್ಪರ ತಮ್ಮದೇ ಆದ ಭಾಷೆಯಲ್ಲಿ ಸಂಭಾಷಿಸುತ್ತಿದ್ದುದು ಕೂಡ ಎಲ್ಲರ ಗಮನ ಸೆಳೆಯುತ್ತಿತ್ತು.
ಕುಮಾರ ಕಾರ್ಖಾನೆ ನೌಕರ, ಶ್ವೇತಾ ಕಸೂತಿ ಬಲ್ಲ ಯುವತಿ
ಮನೆಗೆ ಹಿರಿಯ ಮಗನಾಗಿರುವ ಕುಮಾರನಿಗೆ ಬಾಲ್ಯದಿಂದಲೂ ಕಿವಿಯೂ ಕೇಳದು, ಮಾತು ಸಹ ಬರೋದಿಲ್ಲ. ಪೋಷಕರು ಈತನ ಬಗ್ಗೆ ಚಿಂತೆ ಮಾಡುತ್ತಿರುವಾಗಲೇ ಎಲ್ಲರಿಗೂ ಅಚ್ಚರಿಯಾಗುವಂತೆ ಕುಮಾರ ಕಾರ್ಖಾನೆಯೊಂದರಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಾನೆ. ಇಡೀ ಮನೆಯ ಜವಾಬ್ದಾರಿಯನ್ನು ನಿಭಾಯಿಸುವ ಮಟ್ಟಕ್ಕೆ ಬೆಳೆಯುತ್ತಾನೆ. ಹೀಗಾಗಿ ಮನೆಯವರಿಗೆ ಕುಮಾರ ಅಂದರೆ ಅಷ್ಟೊಂದು ಪ್ರೀತಿ. ಇನ್ನು ಶ್ವೇತಾ ಕೂಡ ತುಂಬಾನೇ ಬುದ್ಧಿವಂತೆ. ಮನೆಯಲ್ಲೇ ಇದ್ದು ಕಸೂತಿ ಕಲೆಯಿಂದಲೇ ಎಲ್ಲರ ಗಮನ ಸೆಳೆದ ಶ್ವೇತಾ ಮನೆಯವರಿಗೆ ಅಚ್ಚುಮೆಚ್ಚು. ಈಕೆ ಕಿವಿ ಕೇಳದ ಮತ್ತು ಮಾತು ಬಾರದವರ ಸಂವೇದನೆಯ ಭಾಷೆಯನ್ನೂ ಕಲಿತಿದ್ದಾಳೆ. ಹೀಗಾಗಿ ಗುರು-ಹಿರಿಯರೆಲ್ಲ ಒಂದು ತಿಂಗಳ ಹಿಂದೆಯೇ ಮದುವೆ ನಿಶ್ಚಯ ಮಾಡಿಕೊಂಡಿದ್ದರು. ಇದೀಗ ಅನ್ಲಾಕ್ ಪ್ರಕ್ರಿಯೆ ಆರಂಭವಾಗಿ, ಜಿಲ್ಲಾಡಳಿತದ ಅನುಮತಿ ಸಿಗುತ್ತಿದ್ದಂತೆಯೇ 40 ಜನರ ಮಿತಿಯೊಳಗೆ ಕೊರೊನಾ ನಿಯಮ ಪಾಲಿಸಿ ಮದುವೆ ಮಾಡಲಾಯಿತು.
ಎರಡೂ ಮನೆಗಳಲ್ಲಿ ಇಬ್ಬರ ಬಗ್ಗೆ ಆತಂಕವಿತ್ತು. ಆದರೆ ಎಲ್ಲರಂತೆ ಇವರಿಗೂ ಮದುವೆಯಾಗಬೇಕು ಎನ್ನುವ ಬಯಕೆ ಇತ್ತು. ಆದರೆ ಅಂಗವೈಕಲ್ಯ ಇವರ ಆಸೆಗೆ ತಣ್ಣೀರು ಎರಚುತ್ತಲೇ ಇತ್ತು. ಈ ಹಿನ್ನೆಲೆಯಲ್ಲಿ ಸಾರಸ್ವತಪುರದಲ್ಲಿ ಓರ್ವ ಯುವತಿ ಇದ್ದು, ಆಕೆಗೂ ಮಾತು ಬಾರದು ಎನ್ನುವುದು ಗೊತ್ತಾಗಿ, ಆಕೆಯ ಮನೆಗೆ ಹೋಗಿ ಕೇಳಿದೆವು. ಅವರ ಮನೆಯವರು ಒಪ್ಪಿಕೊಂಡರು ಮತ್ತು ಶ್ವೇತಾ ಕೂಡ ಈ ಮದುವೆಗೆ ಒಪ್ಪಿದಳು. ಈ ಹಿನ್ನೆಲೆಯಲ್ಲಿ ಇದೀಗ ಇಬ್ಬರ ಮದುವೆಯನ್ನು ಮಾಡಲಾಗಿದೆ ಎಂದು ವರನ ಸಂಬಂಧಿ ಶಿವಾನಂದ ತಿಳಿಸಿದ್ದಾರೆ.
ಇದನ್ನೂ ಓದಿ:
ಸಪ್ತಪದಿಯ ಆರನೇ ಹೆಜ್ಜೆ ಇಡುತ್ತಿದ್ದಂತೆ ಮದುವೆಯೇ ಬೇಡವೆಂದ ವಧು; ಪರಿಪರಿಯಾಗಿ ಮನವೊಲಿಸಿದರೂ ವಿವಾಹಕ್ಕೆ ಒಪ್ಪಲೇ ಇಲ್ಲ
Published On - 1:07 pm, Tue, 29 June 21