ಬೆಂಗಳೂರು, ನವೆಂಬರ್ 18: ಕೆಇಎ ಸಂಸ್ಥೆಯಿಂದ ಪಿಎಸ್ಐ ಪರೀಕ್ಷೆ ನಡೆಸಲು ನಿರ್ಧಾರ ಮಾಡಿದ್ದೇವೆ ಎಂದು ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ (Dr G Parameshwar) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆದೇಶ ಬಂದಿದೆ. ಇಂಡಿಪೆಂಡೆಂಟ್ ಏಜೆಸ್ಸಿಯಿಂದ ಆಗಲಿದೆ. 545 ಪಿಎಸ್ಐ ಹುದ್ದೆಗಳ ಪರೀಕ್ಷೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಆದಷ್ಟು ಬೇಗನೆ ಪರೀಕ್ಷೆ ಆಗಲಿದೆ ಎಂದು ಹೇಳಿದ್ದಾರೆ.
ಪಿಎಸ್ಐ ಕೇಸ್ ಮಾತ್ರವಲ್ಲದೆ ಅವರು ಅನೇಕ ಕೇಸ್‌ಗಳಲ್ಲಿಯೂ ಸಹ ಇದ್ದಾರೆ ಎನ್ನುವ ಮಾಹಿತಿ ಇದೆ. ಹೀಗಾಗಿ ಎಲ್ಲಾ ವಿಚಾರಗಳನ್ನು ಬಹಿರಂಗ ಮಾಡುವುದಕ್ಕೆ ಆಗುವುದಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ತನಿಖೆ ಮಾಡುವುದಕ್ಕೆ ಆದೇಶ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಆರ್ಡಿ ಪಾಟೀಲ್ನ ಮತ್ತೊಂದು ಕರ್ಮಕಾಂಡ ಬಯಲು: 402 ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮವೆಸಗಲು ಪ್ಲ್ಯಾನ್
ಆರ್.ಡಿ ಪಾಟೀಲ್ನ ಮತ್ತೊಂದು ಕರ್ಮಕಾಂಡ ಇತ್ತೀಚೆಗೆ ಬಟಾ ಬಯಲಾಗಿತ್ತು. 545 ಪಿಎಸ್ಐ ನೇಮಕಾತಿ ಬಳಿಕ 402 ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮವೆಸಗುವುದಕ್ಕೆ ಪ್ಲ್ಯಾನ್ ಮಾಡಲಾಗಿತ್ತು. ಕಳೆದ ಫೆಬ್ರವರಿಯಲ್ಲಿ ನಡೆಯಬೇಕಿದ್ದ 402 ಪಿಎಸ್ಐ ಹುದ್ದೆಗಳ ನೇಮಕಾತಿ, 402 ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಲು ಆರ್ಡಿ ಪಾಟೀಲ್ ಅಕೌಂಟ್ಗೆ ಕೋಟ್ಯಾಂತರ ಹಣ ಹರಿದು ಬಂದಿತ್ತು.
545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಯಲ್ಲಿ ಹಗರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ. ಕಿಂಗ್ ಪಿನ್ ರುದ್ರಗೌಡ ಪಾಟೀಲ್ ಮತ್ತು ಮಹಾಂತೇಶ್ ಪಾಟೀಲ್ಗೆ ಕಲಬುರಗಿ ಹೈಕೋರ್ಟ್ ಪೀಠದಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಪ್ರಕರಣದಲ್ಲಿ ಕಿಂಗ್ ಪಿನ್ ರುದ್ರಗೌಡ ಪಾಟೀಲ್ನ್ನು ಇದೀಗ ಕೆಇಎ ಪರೀಕ್ಷೆಯಲ್ಲಿ ಅಕ್ರಮ ಹಿನ್ನೆಲೆ ಅರೆಸ್ಟ್ ಮಾಡಲಾಗಿದೆ.
ವಿರೋಧ ಪಕ್ಷದ ನಾಯಕರಾಗಿ ಆರ್.ಅಶೋಕ್ ಆಯ್ಕೆ ವಿಚಾರವಾಗಿ ಮಾತನಾಡಿದ ಅವರು, ಅದು ಬಿಜೆಪಿ ಆಂತರಿಕ ವಿಚಾರ, ಹೀಗಾಗಿ ಅದು ನಮಗೆ ಮುಖ್ಯವಲ್ಲ. ವಿಪಕ್ಷ ನಾಯಕರಾದವರು ಎಚ್ಚರಿಸಿಬಹುದು, ಸಲಹೆ ಕೊಡಬಹುದು. ಅದು ವಿಪಕ್ಷ ನಾಯಕ ಅಶೋಕ್ ಮತ್ತು ಅವರ ಪಕ್ಷದವರಿಗೆ ಬಿಟ್ಟಿದ್ದು. ವಿಪಕ್ಷ ನಾಯಕರಾದ ಆರ್.ಅಶೋಕ್ಗೆ ನಾನು ಸಹ ಅಭಿನಂದಿಸುತ್ತೇನೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:41 pm, Sat, 18 November 23