ಎಸ್​ಸಿ, ಎಸ್​ಟಿ, ಬಿಪಿಎಲ್ ಕುಟುಂಬಗಳಿಗೆ ‘ಪವರ್’ ಹೆಚ್ಚಳ: ಉಚಿತ ವಿದ್ಯುತ್ ಪ್ರಮಾಣ ಏರಿಕೆ, ಸರ್ಕಾರದ ನಿರ್ಧಾರ

ಎಸ್​ಸಿ, ಎಸ್​ಟಿ, ಬಿಪಿಎಲ್ ಕುಟುಂಬಗಳಿಗೆ 'ಪವರ್' ಹೆಚ್ಚಳ: ಉಚಿತ ವಿದ್ಯುತ್ ಪ್ರಮಾಣ ಏರಿಕೆ, ಸರ್ಕಾರದ ನಿರ್ಧಾರ
ಸಾಂದರ್ಭಿಕ ಚಿತ್ರ

ರಾಜ್ಯ ಸರ್ಕಾರದಿಂದ ನೀಡಲಾಗುತ್ತಿದ್ದ ಉಚಿತ ವಿದ್ಯುತ್ ಪ್ರಮಾಣವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಇದರಿಂದ ಇಂಧನ ಇಲಾಖೆಗೆ ವಾರ್ಷಿಕ 979 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ.

TV9kannada Web Team

| Edited By: Rakesh Nayak

May 13, 2022 | 7:30 PM

ಎಸ್​ಸಿ, ಎಸ್​ಟಿ ಹಾಗೂ ಬಿಪಿಎಲ್ ಕುಟುಂಬಗಳಿಗೆ ನೀಡುತ್ತಿದ್ದ ಉಚಿತ ವಿದ್ಯುತ್ ಪ್ರಮಾಣದಲ್ಲಿ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಅದರಂತೆ ಹಾಲಿ ಉಚಿತವಾಗಿ ನೀಡುತ್ತಿದ್ದ 40 ಯುನಿಟ್ ವಿದ್ಯುತ್ ಅನ್ನು 75 ಯುನಿಟ್​ಗೆ ಹೆಚ್ಚಿಸಲಾಗುತ್ತದೆ. ಇದರಿಂದಾಗಿ ಇಂಧನ ಇಲಾಖೆಗೆ (Energy Department) ವಾರ್ಷಿಕ 979 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ. ಈ ಯೋಜನೆಯ ಲಾಭ ಫಲಾನುಭವಿಗಳಿಗೆ ಮೇ ತಿಂಗಳಿನಿಂದಲೇ ಲಭ್ಯವಾಗಲಿದೆ. ಇದಕ್ಕೆ ಸಂಬಂಧಟ್ಟ ಕಡತ ಇಂಧನ ಇಲಾಖೆಯಿಂದ ಹಣಕಾಸು ಇಲಾಖೆ(Finance Department)ಗೆ ರವಾನೆಯಾಗಿದ್ದು, ಇನ್ನೆರಡು ದಿನದಲ್ಲಿ ಅಧಿಕೃತ ಆದೇಶ ಪ್ರಕಟಗೊಳ್ಳುವ ಸಾಧ್ಯತೆ ಇದೆ.

ಮಾಜಿ ಉಪ ಪ್ರಧಾನಿ ದಿ. ಬಾಬು ಜಗಜೀವನ್ ರಾಮ್ ಅವರ 115ನೇ ಜಯಂತಿ ಪ್ರಯುಕ್ತ ಏಪ್ರಿಲ್ 5ರಂದು ನಡೆದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಗ್ರಾಮೀಣ ಪ್ರದೇಶದ ಭಾಗ್ಯ ಜ್ಯೋತಿ ಹಾಗೂ ಕುಟೀರ ಜ್ಯೋತಿ ಯೋಜನೆ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಟ ಜಾತಿ ಹಾಗೂ ಪಂಗಡದ ಕುಟುಂಬಗಳಿಗೆ ಹಾಲಿ ಉಚಿತವಾಗಿ ನೀಡುತ್ತಿದ್ದ 40 ಯುನಿಟ್ ವಿದ್ಯುತ್ ಅನ್ನು 75 ಯುನಿಟ್ ಹೆಚ್ಚಿಸಲಾಗುವುದು ಎಂದು ಘೋಷಿಸಿದ್ದರು.

ಅದರಂತೆ, ಸಮಾಜ ಕಲ್ಯಾಣ ಇಲಾಖೆಯಿಂದ ಇಂಧನ ಇಲಾಖೆಗೆ ಕಡತ ರವಾನೆಯಾಗಿತ್ತು. ಇದಕ್ಕೆ ಕೂಡಲೆ ಸ್ಪಂದಿಸಿದ ಇಂಧನ ಸಚಿವ ವಿ.ಸುನೀಲ್ ಕುಮಾರ್, ಉಚಿತ ವಿದ್ಯುತ್ ಪ್ರಮಾಣ ಹೆಚ್ಚಳಕ್ಕೆ ಸೂಚಿಸಿದ್ದರು. ಅದರಂತೆ, ತುರ್ತು ಕ್ರಮ ಕೈಗೊಂಡಿರುವ ಇಲಾಖೆ ಕೇವಲ ಒಂದು ತಿಂಗಳ ಅವಧಿಯಲ್ಲೇ ವಿದ್ಯುತ್ ಪ್ರಮಾಣ ಹೆಚ್ಚಳದ ನಿರ್ಧಾರ ಕೈಗೊಂಡಿದೆ. ರಾಜ್ಯದಲ್ಲಿ 75 ಯುನಿಟ್ ಒಳಗೆ ವಿದ್ಯುತ್ ಬಳಸುವ ಗೃಹ ಬಳಕೆದಾರರು 1,46,65,910 ರಷ್ಟಿದ್ದು, ಈ ಪೈಕಿ 39,26,065 ರಷ್ಟು ಮಂದಿ ಭಾಗ್ಯ ಜ್ಯೋತಿ ಹಾಗೂ ಕುಟೀರ ಜ್ಯೋತಿ ವ್ಯಾಪ್ತಿಗೆ ಬರುವ ಪರಿಶಿಷ್ಟ ಜಾತಿ ಹಾಗೂ ಪಂಗಡದ ಬಳಕೆದಾರರಾಗಿದ್ದಾರೆ. ಈ ಗ್ರಾಹಕರು ವಾರ್ಷಿಕ 1,356,92 ಮಿಲಿಯನ್ ಯುನಿಟ್ ಬಳಕೆ ಮಾಡುತ್ತಾರೆ.

ಒಟ್ಟಾರೆಯಾಗಿ ಈ ಯೋಜನೆಯ ಫಲಾನುಭವಿಗಳನ್ನೂ ಒಳಗೊಂಡಂತೆ ಪರಿಶಿಷ್ಟ ಜಾತಿಯ ಗ್ರಾಹಕರಿಗೆ 694.15 ಕೋಟಿ ರೂ., ಪರಿಶಿಷ್ಟ ಪಂಗಡದ ಗ್ರಾಹಕರಿಗೆ 285.42 ಕೋಟಿ ರೂ. ಸೇರಿದಂತೆ 979 ಕೋಟಿ ರೂ. ಅನ್ನು ಸಬ್ಸಿಡಿ ರೂಪದಲ್ಲಿ ಇಂಧನ ಇಲಾಖೆ ನೀಡಲಿದೆ. ಈ ಹಿನ್ನೆಲೆಯಲ್ಲಿ ಇಂಧನ ಇಲಾಖೆ ನಿಯಮಾವಳಿ ರೂಪಿಸಿ ಆರ್ಥಿಕ ಇಲಾಖೆಗೆ ಕಳುಹಿಸಿಕೊಟ್ಟಿದೆ. ಒಟ್ಟಾರೆಯಾಗಿ ಈ ಸಬ್ಸಿಡಿ ಯೋಜನೆಗೆ 979 ಕೋಟಿ ರೂ. ಹೆಚ್ಚುವರಿ ಸಹಾಯಧನ ಅಗತ್ಯವಾಗಿದ್ದು, 75 ಯುನಿಟ್​ವರೆಗೆ ಮಾತ್ರ ಉಚಿತ ವಿದ್ಯುತ್ ನೀಡಲಾಗುತ್ತದೆ.

Follow us on

Related Stories

Most Read Stories

Click on your DTH Provider to Add TV9 Kannada