ಬೆಂಗಳೂರು, ಜೂನ್ 6: ಬಿಜೆಪಿ (BJP) ದಾಖಲಿಸಿರುವ ಮಾನನಷ್ಟ ಮೊಕದ್ದಮೆಯ (Defamation Case) ವಿಚಾರಣೆಗಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಶುಕ್ರವಾರ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ಹಾಜರಾಗಲಿದ್ದಾರೆ. ಜೂನ್ 1 ರಂದು ನಡೆದ ವಿಚಾರಣೆಗೆ ರಾಹುಲ್ ಗಾಂಧಿ ಹಾಜರಾಗಿರಲಿಲ್ಲ. ಆ ದಿನ ವಿಚಾರಣೆಗೆ ಹಾಜರಾಗದೇ ಇರುವುದಕ್ಕೆ ವಿನಾಯಿತಿ ನೀಡಿದ್ದ ನ್ಯಾಯಾಲಯ, ಜೂನ್ 7 ರಂದು ಹಾಜರಾಗಬೇಕು ಎಂದು ಸೂಚನೆ ನೀಡಿತ್ತು.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ಗೆ ಜೂನ್ 1ರಂದು ಜಾಮೀನು ಮಂಜೂರು ಮಾಡಿದ್ದ ವಿಶೇಷ ನ್ಯಾಯಾಲಯವು ಜೂನ್ 7 ರಂದು ರಾಹುಲ್ ಗಾಂಧಿಯನ್ನು ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿತ್ತು. ರಾಹುಲ್ ಗಾಂಧಿ ಪ್ರಕರಣದಲ್ಲಿ ನಾಲ್ಕನೇ ಆರೋಪಿಯಾಗಿದ್ದಾರೆ. ಕೆಪಿಸಿ, ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮೊದಲ ಮೂವರು ಆರೋಪಿಗಳಾಗಿದ್ದಾರೆ.
2023 ರ ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವು ಅಂದಿನ ಆಡಳಿತಾರೂಢ ಬಿಜೆಪಿಯನ್ನು ಭ್ರಷ್ಟ ಎಂದು ಲೇಬಲ್ ಮಾಡುವ ಜಾಹೀರಾತುಗಳನ್ನು ಪ್ರಕಟಿಸಿತ್ತು. 40 ಪರ್ಸೆಂಟ್ ಕಮಿಷನ್ ಆರೋಪದ ಜಾಹೋರಾತುಗಳನ್ನು ಪ್ರಕಟಿಸಿತ್ತು. ಇದರ ವಿರುದ್ಧ ಬಿಜೆಪಿಯ ಕರ್ನಾಟಕ ಘಟಕ ಮಾನನಷ್ಟ ಮೊಕದ್ದಮೆ ದಾಖಲಿಸಿತ್ತು. ಈ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಖುದ್ದು ಹಾಜರಾಗುವಂತೆ ನ್ಯಾಯಾಲಯ ಸೂಚಿಸಿತ್ತು.
2023 ರ ಮೇ 5 ರಂದು ಕಾಂಗ್ರೆಸ್ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ನೀಡಿತ್ತು. ಅದರಲ್ಲಿ, ಬಿಜೆಪಿ ಸರ್ಕಾರ ಕೋವಿಡ್ ಕಿಟ್ ಟೆಂಡರ್ ಡೀಲ್‌ಗಳಲ್ಲಿ ಶೇಕಡಾ 75, ಪಿಡಬ್ಲ್ಯೂಡಿ ಟೆಂಡರ್‌ಗಳಿಗೆ ಶೇಕಡಾ 40, ಧಾರ್ಮಿಕ ಸಂಸ್ಥೆಗಳಿಗೆ ಅನುದಾನ ಮತ್ತು ಇತರ ವ್ಯವಹಾರಗಳಿಗೆ ಶೇಕಡಾ 30 ರಷ್ಟು ಕಮಿಷನ್ ಪಡೆದಿದೆ ಎಂದು ಆರೋಪಿಸಿತ್ತು. ಈ ಬಗ್ಗೆ ಆರೋಪಿಸಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್ ಕೇಶವ ಪ್ರಸಾದ್ ಅವರು 2023 ರ ಮೇ 8 ರಂದು ನ್ಯಾಯಾಲಯಕ್ಕೆ ಸಲ್ಲಿಸಿದ ಖಾಸಗಿ ದೂರಿನ ಆಧಾರದ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಕೈಗೆತ್ತಿಕೊಳ್ಳಲಾಗಿತ್ತು.
ಇದನ್ನೂ ಓದಿ: ಬಿಜೆಪಿ ವಿರುದ್ಧ ಅಪಪ್ರಚಾರ ಕೇಸ್: ಸಿಎಂ, ಡಿಸಿಎಂಗೆ ಜಾಮೀನು ನೀಡಿದ 42ನೇ ಎಸಿಎಂಎಂ ಕೋರ್ಟ್
ವಿಶೇಷ ನ್ಯಾಯಾಲಯವು 2024 ರ ಮಾರ್ಚ್ 11 ರಂದು ಕಾಂಗ್ರೆಸ್ ನಾಯಕರಿಗೆ ಸಮನ್ಸ್ ಜಾರಿ ಮಾಡಿತ್ತು. ಆರಂಭದಲ್ಲಿ ರಾಹುಲ್ ಗಾಂಧಿ ಅವರು ವಕೀಲರ ಮೂಲಕ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಲೋಕಸಭೆ ಚುನಾವಣೆಯ ಕಾರಣದಿಂದ ಹಾಜರಾಗಲು ಸಾಧ್ಯವಿಲ್ಲ ಮತ್ತು ಜೂನ್‌ನಲ್ಲಿ ವಿಚಾರಣೆಗೆ ಹಾಜರಾಗಲು ಅನುಮತಿ ನೀಡುವಂತೆ ಕೋರಿದ್ದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:56 am, Thu, 6 June 24