ಮನ್ ಕಿ ಬಾತ್ನಲ್ಲಿ ಮೋದಿ ಉಲ್ಲೇಖಿಸಿದ ಬೆಂಗಳೂರು ಎಂಜಿನಿಯರ್ ಕಪಿಲ್ ಶರ್ಮಾ ಯಾರು?: ಇಲ್ಲಿದೆ ಮಾಹಿತಿ
ತಮ್ಮ 127ನೇ ಮನ್ ಕಿ ಬಾತ್ನಲ್ಲಿ ನರೇಂದ್ರ ಮೋದಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದು, ಬೆಂಗಳೂರಿನ ಎಂಜಿನಿಯರ್ ಒಬ್ಬರ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಗಿಡಗಳನ್ನು ನೆಡುವುದರಿಂದ ಆರಂಭವಾದ ಅವರ ಪರಿಸರ ಪ್ರೀತಿ, ಕೆರೆಗಳ ಪುನರುಜ್ಜೀವನದವರೆಗೆ ಬಂದಿರುವ ಬಗ್ಗೆ ಪ್ರಧಾನಿಗಳು ಉಲ್ಲೇಖಿಸಿದ್ದಾರೆ. ಅಷ್ಟಕ್ಕೂ ಆ ಎಂಜಿನಿಯರ್ ಯಾರು? ಇಲ್ಲಿದೆ ಡಿಟೇಲ್ಸ್.

ಬೆಂಗಳೂರು, ಅಕ್ಟೋಬರ್ 26: ತಮ್ಮ 127ನೇ ಮನ್ ಕಿ ಬಾತ್ನಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದು, ಬೆಂಗಳೂರಿನ ಎಂಜಿನಿಯರ್ ಒಬ್ಬರ ಪರಿಸರ ಪ್ರೀತಿಯನ್ನೂ ಶ್ಲಾಘಿಸಿದ್ದಾರೆ. ವಾರಾಂತ್ಯದಲ್ಲಿ ಗಿಡಗಳನ್ನು ನೆಡಲು ಆರಂಭಿಸಿದ ಅವರ ಕಾರ್ಯ ಈಗ ಕೆರೆಗಳ ಪುನರುಜ್ಜೀವನದವರೆಗೆ ಬಂದು ನಿಂತಿದೆ ಎಂದು ಹೇಳಿದ್ದಾರೆ. ಪ್ರಧಾನಿಗಳು ಹೇಳಿರುವ ಆ ಎಂಜಿನಿಯರ್ ಬೇರೆ ಯಾರೂ ಅಲ್ಲ. 18 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದ ಛತ್ತೀಸ್‌ಗಢದ ಸಾಫ್ಟ್‌ವೇರ್ ಎಂಜಿನಿಯರ್ ಕಪಿಲ್ ಶರ್ಮಾ.
ಯಾರು ಈ ಕಪಿಲ್ ಶರ್ಮಾ?
ಛತೀಸ್ಗಢ ಮೂಲದ ಎಂಜಿನಯರ್ ಕಪಿಲ್ ಶರ್ಮಾ ಓರ್ವ ಪರಿಸರಪ್ರಿಯ. ಬೆಂಗಳೂರು ನಗರದಲ್ಲಿ ಹಸಿರಿನ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ತಾಪಮಾನ ಏರಿಕೆಯಾಗುತ್ತಿದೆ ಎಂದು ಮನಗಂಡ ಅವರು, ಈ ಸಮಸ್ಯೆಗೆ ಏನಾದರೂ ಮಾಡಬೇಕೆಂದು ನಿರ್ಧರಿಸಿದ್ದರು. ವಾರಾಂತ್ಯದ ಸಮಯದಲ್ಲಿ ಗಿಡ ನೆಡುವುದನ್ನು 2007ರಲ್ಲಿ ಆರಂಭಿಸಿ, ತಮ್ಮ ಮನೆಯ ಸಮೀಪ ಮತ್ತು ಕಚೇರಿಗೆ ಹೋಗುವ ದಾರಿಯಲ್ಲಿ ನೂರಾರು ಸಸಿಗಳನ್ನು ನೆಟ್ಟಿದ್ದಾರೆ. ಅವರ ಈ ನಿರ್ಧಾರದಿಂದ ಇಂದು ನಗರದಾದ್ಯಂತ ಅದೆಷ್ಟೋ ಗಿಡಗಳು ಹೆಮ್ಮರವಾಗಿ ಬೆಳೆದಿವೆ. ಜನರಿಗೆ ನೆರಳು, ಶುದ್ಧ ಗಾಳಿ ನೀಡುತ್ತಿವೆ.
ಇದನ್ನೂ ಓದಿ: ಪ್ಲಾಸ್ಟಿಕ್ ತಂದುಕೊಡಿ, ಹೊಟ್ಟೆ ತುಂಬಾ ಊಟ ಮಾಡಿ, ಛತ್ತೀಸ್‌ಗಢದ ವಿಶೇಷ ಕೆಫೆ ಬಗ್ಗೆ ಮೋದಿ ಪ್ರಸ್ತಾಪ
ಕೇವಲ ಬೆರಳೆಣಿಕೆಯ ಗಿಡಗಳನ್ನು ನೆಟ್ಟರೆ ಸಾಲಲ್ಲ ಎಂದು ಅರಿತಿದ್ದ ಕಪಿಲ್, ನಗರ ಮತ್ತು ಸುತ್ತಮುತ್ತ ಹೆಚ್ಚು ಹೆಚ್ಚು ಮರಗಳನ್ನು ನೆಡಲು ದೃಢನಿಶ್ಚಯ ಮಾಡಿದ್ದರು. ಆದ್ದರಿಂದ ಅವರು 2007ರಲ್ಲಿ ತಮ್ಮ ಪ್ರಯತ್ನಗಳಿಗೆ ಹೆಚ್ಚು ವೇಗ ನೀಡಲು ‘ಸೇ ಟ್ರೀಸ್’ ಎಂಬ ಸಂಘಟನೆಯನ್ನೂ ಪ್ರಾರಂಭಿಸಿದ್ದಾರೆ. ಆರಂಭದಲ್ಲಿ ಒಬ್ಬಂಟಿಯಾಗಿ ಗಿಡ ನೆಡುತ್ತಿದ್ದ ಇವರಿಗೆ ಕೆಲವೇ ಸಮಯದಲ್ಲಿ ಒಂದಿಷ್ಟು ಸಮಾನ ಮನಸ್ಕರು ಕೈಜೋಡಿಸಿದ್ದಾರೆ. ಈ ತಂಡ ನಗರಾದ್ಯಂತ ಸಸಿ ನೆಡುವ ಅಭಿಯಾನಗಳನ್ನ ನಡೆಸಿದೆ. ಸಸಿಗಳನ್ನು ಎಲ್ಲೆಂದರಲ್ಲಿ ನೆಡದೆ, ಅದು ಬದುಕಿ ಮರವಾಗಬಹುದಾದಂತಹ ಸ್ಥಳವನ್ನೇ ಆಯ್ಕೆ ಮಾಡಿ ಈ ತಂಡ ಗಿಡಗಳನ್ನು ನೆಡುವ ಕೆಲಸ ಮಾಡುತ್ತದೆ. ಆ ಬಳಿಕವೂ ಗಿಡಗಳ ಕಾಳಜಿಯನ್ನು ‘ಸೇ ಟ್ರೀಸ್’ ತಂಡ ವಹಿಸಲಿದೆ. ಬೀದಿ ಪ್ರಾಣಿಗಳು ಸಸಿಗಳನ್ನು ನಾಶಮಾಡದಂತೆ ಸುತ್ತಲೂ ಮುಳ್ಳಿನ ಬೇಲಿಗಳನ್ನೂ ತಂಡ ನಿರ್ಮಿಸುತ್ತೆ. ಇದರಿಂದ ಸಸಿಗಳ ಬದುಕುಳಿಯುವ ಪ್ರಮಾಣ ಹೆಚ್ಚು ಎಂಬುದು ಕಪಿಲ್ ಶರ್ಮಾ ಅಭಿಪ್ರಾಯ.
ಕೆರೆಗಳ ಪುನರುಜ್ಜೀವನ
ಗಿಡಗಳನ್ನು ನೆಡುವ ಕಾರ್ಯದ ಜೊತೆಗೆ ಜಲ ಮೂಲಗಳನ್ನು ಉಳಿಸುವ ಕಡೆಗೂ ಕಪಿಲ್ ಶರ್ಮಾ ಗಮನ ನೀಡಿದ್ದಾರೆ. ನಗರದಲ್ಲಿ ಸರಿಯಾದ ನಿರ್ವಹಣೆ ಇಲ್ಲದೆ ಬತ್ತಿ ಹೋಗಿದ್ದ ಅಥವಾ ಯೋಗ್ಯವಲ್ಲದ ಕೆರೆಗಳನ್ನು ಪುನರುಜ್ಜೀವನಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಕಪಿಲ್ ಶರ್ಮಾ ಅವರ ತಂಡವು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 40 ಬಾವಿಗಳು ಮತ್ತು ಆರು ಕೆರೆಗಳನ್ನು ಪುನರುಜ್ಜೀವನಗೊಳಿಸಿದೆ. ಗಮನಾರ್ಹವಾಗಿ, ಅವರು ಈ ಕಾರ್ಯಾಚರಣೆಯಲ್ಲಿ ನಿಗಮಗಳು ಮತ್ತು ಸ್ಥಳೀಯ ನಿವಾಸಿಗಳನ್ನು ಸಹ ತೊಡಗಿಸಿಕೊಂಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




