ಸಂಚಲನ ಸೃಷ್ಟಿಸಿದ ಸೌಜನ್ಯ ಕೊಲೆ ಪ್ರಕರಣ; ಪೊಲೀಸರ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಗರಂ
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದ ಹೊರವಲಯದ ಕಾಲುವೆಯಲ್ಲಿ ಯುವತಿಯೊಬ್ಬಳ ಶವ ಪತ್ತೆಯಾಗಿದ್ದು, ಪ್ರಕರಣ ಹೊಸ ಸಂಚಲನ ಸೃಷ್ಟಿಸಿದೆ. ಯುವತಿಯನ್ನು ಕಾರಿನಲ್ಲಿ ಅಪಹರಿಸಿ, ಕೊಲೆ ಮಾಡಿ, ಕಾಲುವೆಗೆ ಎಸೆದಿದ್ದಾರೆಂದು ಯುವತಿಯ ತಂದೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರ ನಿರ್ಲಕ್ಷ್ಯ ಗ್ರಾಮಸ್ಥರ ಕೋಪಕ್ಕೆ ಗುರಿಯಾಗಿದೆ. ಈ ಹಿನ್ನೆಲೆ ಗ್ರಾಮಸ್ಥರು ಪ್ರತಿಭಟನೆಗೆ ಇಳಿದಿದ್ದಾರೆ.

ಯಾದಗಿರಿ, ಅಕ್ಟೋಬರ್ 26: ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದ ಹೊರವಲಯದ ಕಾಲುವೆಯಲ್ಲಿ ಯುವತಿಯೊಬ್ಬಳ ಶವ (Dead Body) ಪತ್ತೆಯಾಗಿದ್ದು, ಪ್ರಕರಣ ಹೊಸ ಸಂಚಲನ ಸೃಷ್ಟಿಸಿದೆ. ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದ ನಿವಾಸಿಯಾಗಿದ್ದ ಸೌಜನ್ಯ (18) ಕಳೆದ ಕೆಲ ದಿನಗಳಿಂದ ಕಾಣೆಯಾಗಿದ್ದಳು. ಕಾರಿನಲ್ಲಿ ಬಂದು ಅಪಹರಿಸಿ ಕೊಲೆ ಮಾಡಿ ಕಾಲುವೆಯಲ್ಲಿ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ.
ಮಗಳನ್ನು ಅಪಹರಿಸಿ, ಕೊಲೆ ಮಾಡಲಾಗಿದೆ ಎಂದು ದೂರು ನೀಡಿರುವ ಶರಣಪ್ಪ
ಯುವತಿಯನ್ನು ಚಿರು, ಪಾಂಡಾ ಹಾಗೂ ರಾಜೇಶ್ ಎಂಬ ಮೂವರು ಯುವಕರು ಅಪಹರಿಸಿ, ಕೊಲೆ ಮಾಡಿದ್ದಲ್ಲದೆ, ಮೃತ ದೇಹವನ್ನು ಕಾಲುವೆಗೆ ಎಸೆದು ಹೋಗಿದ್ದಾರೆಂದು ಆಕೆಯ ತಂದೆ ಶರಣಪ್ಪ ಆರೋಪಿಸಿದ್ದರು. ಈ ಕುರಿತು ಕೊಡೇಕಲ್ ಠಾಣೆಗೆ ದೂರು ನೀಡಿದ್ದರು. ಆದರೆ, ಪೊಲೀಸರು ತಕ್ಷಣ FIR ದಾಖಲಿಸದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕಾಣೆಯಾದ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದರೆ ಮಗಳು ಇಂದು ಬದುಕುತ್ತಿದ್ದಳು,” ಎಂದು ಶರಣಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ 4 ಮಕ್ಕಳ ತಾಯಿ ಸಲ್ಮಾ ಕೊಲೆ ಪ್ರಕರಣಕ್ಕೆ ಹೊಸ ತಿರುವು; ದುಷ್ಕರ್ಮಿಗಳ ಕೊಲೆ ಸಂಚು ಹೇಗಿತ್ತು ಗೊತ್ತಾ?
ಆರೋಪಿಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಗ್ರಾಮಸ್ಥರು ಗರಂ
ಘಟನೆಯ ಬಳಿಕವೂ ಆರೋಪಿಗಳ ವಿರುದ್ಧ ಯಾವುದೇ ಕ್ರಮಕೈಗೊಳ್ಳದ ಕಾರಣ ರೊಚ್ಚಿಗೆದ್ದ ಗ್ರಾಮಸ್ಥರು ಪೊಲೀಸರ ವಾಹನ ತಡೆದು ಪ್ರತಿಭಟನೆಗೆ ಮುಂದಾಗಿದ್ದರು. ನಮ್ಮ ಊರಿನ ಮಗಳ ಸಾವಿಗೆ ನ್ಯಾಯ ಕೊಡಬೇಕೆಂದು ಪಟ್ಟು ಹಿಡಿದು ಕೂತ ಸ್ಥಳಿಯರಿಗೆ ಬಿಜೆಪಿ ಮುಖಂಡ ಬಬ್ಲುಗೌಡ ಸಹ ಸಾಥ್ ನೀಡಿದ್ದು, ಸೌಜನ್ಯ ಸಾವಿನ ಹಿಂದೆ ಯಾವುದೇ ಪ್ರಭಾವಿಗಳು ಇದ್ದರೂ ಅವರಿಗೂ ಶಿಕ್ಷೆ ಆಗಬೇಕು, ನ್ಯಾಯ ಸಿಗುವವರೆಗೂ ಕೊಡೇಕಲ್ ನಿದ್ದೆ ಮಾಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಕೊಡೇಕಲ್ ಪೊಲೀಸರು ಇದೀಗ ಎಲ್ಲಾ ಆಯಾಮದಲ್ಲಿ ತನಿಖೆ ಆರಂಭಿಸಿದ್ದು, ಆರೋಪಿಗಳ ಬಂಧನಕ್ಕಾಗಿ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:26 pm, Sun, 26 October 25



