ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿವೆ; ಸಂಸದ ಅನಂತಕುಮಾರ್ ಹೆಗಡೆಗೆ ಬಿಜೆಪಿ ಕಾರ್ಯಕರ್ತರ ಕ್ಲಾಸ್
ಖಾನಾಪುರ ಪಟ್ಟಣದಲ್ಲಿ ಬಿಜೆಪಿ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕಾರ್ಯಕರ್ತರು ಅಸಮಾಧಾನ ಹೊರ ಹಾಕಿದ್ದಾರೆ. ಕ್ಷೇತ್ರದಲ್ಲಿನ ಸಮಸ್ಯೆಗಳ ಪಟ್ಟಿಯನ್ನೇ ಸಂಸದರ ಮುಂದಿಟ್ಟು ಅಸಮಾಧಾನ ಹೊರ ಹಾಕಿದ್ದಾರೆ. ಕಾರ್ಯಕರ್ತರಿಗೆ ನಿಮ್ಮ ಕಡೆಯಿಂದ ಉತ್ತಮ ಸ್ಪಂದನೆ ಸಿಗುತ್ತಿಲ್ಲ. ಅನಂತ್ ಕುಮಾರ್ ಹೆಗಡೆ ಎಲ್ಲಿದ್ದಾರೆ ಅಂತಾ ಜನ ಪ್ರಶ್ನೆ ಮಾಡ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಬೆಳಗಾವಿ, ಜ.18: ಸಂಸದ ಅನಂತ್ ಕುಮಾರ್ ಹೆಗಡೆ (Ananth Kumar Hegde) ವಿರುದ್ಧ ಬಿಜೆಪಿ ಕಾರ್ಯಕರ್ತರು (BJP Workers) ಅಸಮಾಧಾನ ಹೊರ ಹಾಕಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ನಡೆದ ಸಭೆಯಲ್ಲಿ ಅನಂತ್ ಕುಮಾರ್ ಹೆಗಡೆಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಕಾರ್ಯಕರ್ತರ ಕೈಗೆ ನೀವು ಸಿಕ್ಕಿಲ್ಲ. ನಿಮ್ಮ ಪಿಎಗಳು ಕೂಡ ಸರಿಯಾಗಿ ಸ್ಪಂದಿಸಿಲ್ಲ, ಹೇಗೆ ಮಾಡಬೇಕು. ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಕೂಡ ಕುಂಠಿತಗೊಂಡಿವೆ. ಖಾನಾಪುರದಲ್ಲಿ ಸಂಸದರ ಕಾರ್ಯಾಲಯ ಓಪನ್ ಮಾಡಿ ಎಂದು ಒತ್ತಾಯಿಸಿದ್ದಾರೆ.
ಖಾನಾಪುರ ಪಟ್ಟಣದಲ್ಲಿ ಬಿಜೆಪಿ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕಾರ್ಯಕರ್ತರು ಅಸಮಾಧಾನ ಹೊರ ಹಾಕಿದ್ದಾರೆ. ಕ್ಷೇತ್ರದಲ್ಲಿನ ಸಮಸ್ಯೆಗಳ ಪಟ್ಟಿಯನ್ನೇ ಸಂಸದರ ಮುಂದಿಟ್ಟು ಅಸಮಾಧಾನ ಹೊರ ಹಾಕಿದ್ದಾರೆ. ಖಾನಾಪುರ ತಾಲೂಕಿನ ಜನ ಬೆಳಗಾವಿಗೆ ಹೋದ್ರೆ ಕಾರವಾರಕ್ಕೆ ಹೋಗಿ ಅಂತಾರೆ. ಕಾರವಾರಕ್ಕೆ ಹೋದ್ರೆ ನೀವು ಬೆಳಗಾವಿ ಜಿಲ್ಲೆಯವರು ಅಲ್ಲಿಗೆ ಹೋಗಿ ಅಂತಾರೆ. ಖಾನಾಪುರ ತಾಲೂಕಿನ ಜನ ನಡುವಿನಲ್ಲಿ ಸಿಕ್ಕಿ ಒದ್ದಾಡುತ್ತಿದ್ದಾರೆ. ಐದು ಬಾರಿ ಸಂಸದರಾಗಿದ್ದೀರಿ ಖಾನಾಪುರದಲ್ಲಿ ಕೇಂದ್ರ ಸರ್ಕಾರದ ಯೋಜನೆ ಏನೂ ಗೊತ್ತಿಲ್ಲ. ಕಾರ್ಯಕರ್ತರಿಗೆ ನಿಮ್ಮ ಕಡೆಯಿಂದ ಉತ್ತಮ ಸ್ಪಂದನೆ ಸಿಗುತ್ತಿಲ್ಲ. ಅನಂತ್ ಕುಮಾರ್ ಹೆಗಡೆ ಎಲ್ಲಿದ್ದಾರೆ ಅಂತಾ ಜನ ಪ್ರಶ್ನೆ ಮಾಡ್ತಿದ್ದಾರೆ. 200 ಕಿ.ಮೀ ನಿಮ್ಮನ್ನ ಭೇಟಿಯಾಗಲು ಬಂದ್ರೂ ಸಿಗುವುದಿಲ್ಲ ಎಂದು ಸಂಸದ ಅನಂತ್ ಕುಮಾರ್ ಹೆಗಡೆಗೆ ಬಿಜೆಪಿ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು.
ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಚುನಾವಣೆಯಲ್ಲಿ ಗೆಲ್ಲಿಸಬೇಕಿದೆ
ಇನ್ನು ಮತ್ತೊಂದೆಡೆ ಸಭೆಯಲ್ಲಿ ಮಾತನಾಡಿದ ಅನಂತ್ ಕುಮಾರ್ ಹೆಗಡೆ, ಚುನಾವಣೆ ಬಗ್ಗೆ ಮುಂದೆ ಏನಾಗುತ್ತೆ ಅನ್ನೋದು ನನಗೆ ಗೊತ್ತಿಲ್ಲ. ಸ್ಪರ್ಧಿಸ್ತೇನೆ ಅಂತಾ ಬಂದಿಲ್ಲ, BJP ಗೆಲ್ಲಿಸಿ ಅಂತಾ ಹೇಳಲು ಬಂದಿದ್ದೇನೆ. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಚುನಾವಣೆಯಲ್ಲಿ ಗೆಲ್ಲಿಸಬೇಕಿದೆ. ಖಾನಾಪುರದಲ್ಲಿ ಸಂಸದರ ಕಚೇರಿ ತೆರೆಯಲು ಯೋಚನೆ ಮಾಡಿದ್ದೇವೆ. ಆದ್ರೆ ಅಧಿಕಾರಿಗಳ ಸಭೆ ಕರೆಯಲು ಕೂಡ ನಮಗೆ ಅಧಿಕಾರ ಇಲ್ಲ ಎಂದು ಸಂಸದ ಅನಂತಕುಮಾರ್ ಹೆಗಡೆ ಹಿಂದಿಯಲ್ಲಿ ಭಾಷಣ ಮಾಡಿದರು. ಈ ವೇಳೆ ಕನ್ನಡದಲ್ಲಿ ಮಾತನಾಡಿ ಎಂದು ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದು, ಎಲ್ಲರೂ ಹಿಂದಿ, ಮರಾಠಿಯಲ್ಲಿ ಮಾತಾಡಿದ್ರೆ ಹೇಗೆ ಅಂತಾ ಪ್ರಶ್ನೆ ಮಾಡಿದರು. ಆಗ ಅನಂತ್ ಕುಮಾರ್ ಅವರು, ನಾನು ಮೀಸಳ್ ಭಾಜಿ ರೀತಿ ಮಾತಾಡ್ತೀನಿ. ಕಿತ್ತೂರು, ಖಾನಾಪುರ 2 ವಿಧಾನಸಭಾ ಕ್ಷೇತ್ರ ಕಾರವಾರಗೆ ಬಿಟ್ಟು ಕೊಡಿ. ಸಾಕಷ್ಟು ಬಾರಿ ನಾವು ಕೇಳಿದರೂ ಬೆಳಗಾವಿಯರು ಬಿಟ್ಟು ಕೊಟ್ಟಿಲ್ಲ ಎಂದರು.
ನನ್ನ ಆರೋಗ್ಯ ಸರಿ ಇಲ್ಲದ ಕಾರಣ ಖಾನಾಪುರಕ್ಕೆ ಬರಲು ಆಗಿರಲಿಲ್ಲ
ಖಾನಾಪುರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿರಲಿಲ್ಲ. ಕಳೆದ ಬಾರಿ ಚುನಾವಣೆಯಲ್ಲಿ ಮೊದಲ ಬಾರಿ ಕಾಂಗ್ರೆಸ್ ಗೆದ್ದಿತು. MES ಗೆದ್ದಿದ್ರೆ ನಮ್ಮ ಸಹೋದರ ಗೆದ್ದಿದ್ದಾರೆ ಅಂದುಕೊಳ್ಳಬಹುದಿತ್ತು ಎನ್ನುವ ಮೂಲಕ ಎಂಇಎಸ್ ಪುಂಡರನ್ನು ಸಂಸದ ಹೆಗಡೆ ಸಹೋದರರು ಎಂದು ವರ್ತಿಸಿದ್ದಾರೆ. ಅಲ್ಲದೆ ಈ ಬಾರಿ ಮತ್ತೆ ಖಾನಾಪುರ ಕ್ಷೇತ್ರದಲ್ಲಿ BJP ಅಭ್ಯರ್ಥಿ ಗೆಲ್ಲಿಸಿದ್ದೀರಿ. ಕಳೆದ ಎರಡು ವರ್ಷದಿಂದ ಖಾನಾಪುರಕ್ಕೆ ಬರಲು ಆಗಿರಲಿಲ್ಲ. ನನ್ನ ಆರೋಗ್ಯ ಸರಿ ಇಲ್ಲದ ಕಾರಣ ಖಾನಾಪುರಕ್ಕೆ ಬರಲು ಆಗಿರಲಿಲ್ಲ. ಈ ಸಂದರ್ಭದಲ್ಲಿ ನಾನು ನಿಮಗೆ ಅಷ್ಟೇ ಅಲ್ಲ ಬೇರೆ ಯಾರಿಗೂ ಸಿಕ್ಕಿಲ್ಲ. ಭೇಟಿಗೆ ಯಾರಾದ್ರೂ ಬಂದ್ರೆ ರಾಜಕಾರಣ ಬಗ್ಗೆ ಮಾತಾಬೇಡಿ ಅಂತಿದ್ದೆ. ಒಳ್ಳೇ ಅಭ್ಯರ್ಥಿ ಹೆಸರೇಳಿ ಅವರನ್ನೇ ಚುನಾವಣೆಗೆ ನಿಲ್ಲಿಸೋಣ ಅಂತಿದ್ದೆ. ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಎಲ್ಲಿಯೂ ಹೋಗಲ್ಲ ಅಂದಿದ್ದೆ. ಎಲ್ಲರ ಮುಂದೆ ನಾನು ಸ್ಪರ್ಧೆ ಮಾಡುವುದಿಲ್ಲ ಅಂತಾ ಹೇಳಿದ್ದೆ ಎಂದು ಅನಂತ್ ಕುಮಾರ್ ಹೆಗಡೆ ತಿಳಿಸಿದ್ದಾರೆ.
ರಾಮ ಆಯ್ಕೆ ಮಾಡಿಕೊಂಡಿದ್ದು ಮೋದಿ ಕೈಯಲ್ಲಿ ಪ್ರತಿಷ್ಠಾಪಿಸಲು
ಮೋದಿಯನ್ನು ಮತ್ತೆ ಗೆಲ್ಲಿಸಬೇಕೆಂಬುದು ದೇವರ ನಿರ್ಣಯವಾಗಿದೆ. ಅಡ್ವಾಣಿ, ವಾಜಪೇಯಿ ರಾಮ ಮಂದಿರಕ್ಕಾಗಿ ಯಾತ್ರೆ ಮಾಡಿದ್ರು. ಅಂದು ಯಾತ್ರೆಯಲ್ಲಿ ಕೋಟ್ಯಂತರ ಜನ ಭಾಗಿಯಾಗಿದ್ದರು. ಆದರೆ ರಾಮ ಆಯ್ಕೆ ಮಾಡಿಕೊಂಡಿದ್ದು ಮೋದಿ ಕೈಯಲ್ಲಿ ಪ್ರತಿಷ್ಠಾಪಿಸಲು. ಇದು ದೇವರ ನಿರ್ಣಯ. ಮೋದಿಯನ್ನು ಮತ್ತೆ ಗೆಲ್ಲಿಸಬೇಕು ಇದು ಕೂಡ ದೇವರ ನಿರ್ಣಯ. ಕಳೆದ ಎಂಪಿ ಚುನಾವಣೆಯಲ್ಲಿ ಹೆಚ್ಚಿನ ಲೀಡ್ನಲ್ಲಿ ನನ್ನನ್ನು ಗೆಲ್ಲಿಸಿದ್ರಿ. ಈ ಬಾರಿಯೂ ನನ್ನನ್ನು ಹೆಚ್ಚು ಮತಗಳಿಂದ ಗೆಲ್ಲಿಸಬೇಕು ಎಂದು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಹೇಳಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:04 pm, Thu, 18 January 24