ಹುಬ್ಬಳ್ಳಿ, ಆಗಸ್ಟ್ 24: ಹುಬ್ಬಳ್ಳಿ (Hubballi) ತಾಲೂಕಿನ ಕಿರೆಸೂರು ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಕೊಪ್ಪಳ (Koppal) ತಾಲೂಕಿನ ಮಂಗಳಾಪುರ ಗ್ರಾಮದ ನಿವಾಸಿಗಳಾದ ಜಾಫರ್ಸಾಬ್ (60), ಮೊಹ್ಮದ್ ಮುಸ್ತಫಾ (36), ಶೋಹೆಬ್ (6) ಮೃತ ದುರ್ದೈವಿಗಳು. ಅಪಘಾತದಲ್ಲಿ ಗಂಭೀರ ಗಾಯಗೊಂಡ ಮೂವರನ್ನು ಧಾರವಾಡದ ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಜಾಪರಸಾಬ್ ಓಮಿನ್ ಕಾರ್ನಲ್ಲಿ ಕುಟುಂಬದವರ ಜೊತೆ ಶುಕ್ರವಾರ ಪಾರ್ಶವಾಯು ಔಷಧಿ ತರಲು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಳಗಾ ಗ್ರಾಮದಲ್ಲಿನ ಸೇಂಟ್ ಮೇರಿ ಆಸ್ಪತ್ರೆಗೆ ಹೋಗಿದ್ದರು. ಔಷಧಿ ಪಡೆದು ಮರಳಿ ಊರಿಗೆ ಹೋಗುತ್ತಿದ್ದ ವೇಳೆ ರಾತ್ರಿ 10 ಗಂಟೆ ಸಮಾರಿಗೆ ಲಾರಿ ಮತ್ತು ಕಾರಿನ ಮಧ್ಯೆ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡವರನ್ನು ಧಾರವಾಡದ ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ನೇಹಾಳಂತೆ ಕೊಲೆ: ಬೆದರಿಸಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಅಬ್ಬಾಸ್
ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಮೂವರು ಅಂತರರಾಜ್ಯ ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಹಳೇ ಹುಬ್ಬಳ್ಳಿಯ ತಿಮ್ಮಸಾಗರ ರಸ್ತೆಯ ಪಾಳು ಬಿದ್ದ ಕಟ್ಟಡವೊಂದರಲ್ಲಿ ವಾಸವಾಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ದೊರೆಯುತ್ತಿದ್ದಂತೆ ದಾಳಿ ಮಾಡಿದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಪಿಐ ನೇತೃತ್ವದ ತಂಡ, ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ರಾಜಸ್ಥಾನ ಮೂಲದ ವಿಕಾಸ್ ಬಿಷ್ಣೊಯ್, ಜೈಸಾರಾಮ್ ಚೌದರಿ, ರಾಮರಾಮ ಬಿಷ್ಣೊಯ್ ಬಂಧಿತ ಆರೋಪಿಗಳು. ಬಂಧಿತರಿಂದ 23,500 ಮೌಲ್ಯದ 46 ಗ್ರಾಂ ಅಫೀಮು ವಶಕ್ಕೆ ಪಡೆದುಕೊಳ್ಳಲಾಗಿದೆ. ಒಂದು ದ್ವಿಚಕ್ರ ವಾಹನ, ಮೂರು ಮೊಬೈಲ್ಗಳು ಸೇರಿದಂತೆ ಒಟ್ಟು 1,29,500 ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ, ತನಿಖೆ ಮುಂದುವರೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:30 am, Sat, 24 August 24