ಧಾರವಾಡ, ಆ.22: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರ ಹೆಸರು ಕೇಳಿ ಬಂದಿದ್ದು, ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ತನಿಖೆ ಎದುರಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ(Arvind Bellad) ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಜೊತೆಗೆ ರಾಜ್ಯದಲ್ಲಿ ಅತ್ಯಂತ ಭ್ರಷ್ಟ ಸರ್ಕಾರವಿದೆ. ಸುಮಾರು 700-800 ಸೈಟ್‌ಗಳನ್ನು ಸಿಎಂ ಅವರು ತಮಗೆ ಬೇಕಾದವರಿಗೆ ಹಂಚಿಕೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಾದ ಬಹುದೊಡ್ಡ ಹಗರಣ ಇದಾಗಿದೆ. ಈ ಬಗ್ಗೆ ತನಿಖೆ ನಡೆಸಲು ರಾಜ್ಯಪಾಲರು ಆದೇಶಿಸಿದರೆ, ಕಾಂಗ್ರೆಸ್‌ನವರು ರಾಜ್ಯಪಾಲರನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ. ಕೂಡಲೇ ಸಿಎಂ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ತನಿಖೆ ಎದುರಿಸಲಿ ಎಂದು ಶಾಸಕ ಅರವಿಂದ ಬೆಲ್ಲದ ಒತ್ತಾಯಿಸಿದರು. ಈ ಮಧ್ಯೆ ಸರ್ಕಾರದ ಅದೊಂದು ಆದೇಶ ವಿಪಕ್ಷದ ಕೈಗೆ ಅಸ್ತ್ರವಾಗಿದೆ.
ಇದೇ ವೇಳೆ ಪ್ರವಾಸೋದ್ಯಮ ಇಲಾಖೆಯಿಂದ ಹೊರಡಿಸಲಾದ ಸುತ್ತೋಲೆಯೊಂದು ಬಿಜೆಪಿ ಕೈಗೆ ಅಸ್ತ್ರವಾಗಿ ಪರಿಣಮಿಸಿದೆ. ಪ್ರತಿಭಟನೆ ವೇಳೆ ಈ ಹೊಸ ಅಸ್ತ್ರದ ಬಗ್ಗೆ ಪ್ರಸ್ತಾಪಿಸಿದ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್, ‘ಭ್ರಷ್ಟ ಕಾಂಗ್ರೆಸ್ ಸರಕಾರ ಮುಸ್ಲಿಮರನ್ನು ಓಲೈಸುತ್ತಿದೆ. ಸಿದ್ದರಾಮಯ್ಯ ಸರಕಾರ ಇದೀಗ ಹಿಂದೂಗಳಿಗೆ ಘಾಸಿಯಾಗುವಂಥ ನಿರ್ಧಾರ ತೆಗೆದುಕೊಂಡಿದೆ ಎಂದು ಆರೋಪಿಸಿದರು. ನಮ್ಮ ದೇಶದಲ್ಲಿ ಯಾತ್ರೆಗೆ ವಿಶೇಷ ಮಹತ್ವ ಇದೆ. ಧಾರ್ಮಿಕ ಸ್ಥಳಗಳಿಗೆ ಯಾತ್ರೆಗೆ ಅನ್ಯೋನ್ಯ ಸಂಬಂಧವಿದೆ. ನಮ್ಮಲ್ಲಿ ಪ್ರವಾಸವೆಂದರೆ ಧಾರ್ಮಿಕ ಕ್ಷೇತ್ರಗಳಿಗೆ ಹೋಗುವುದು.
ಇದನ್ನೂ ಓದಿ:ಮುಡಾ ಹಗರಣ ಬೆಳಕಿಗೆ ಬಂದ ಮೇಲೆ ಸಿಎಂ ಪತ್ನಿ ಬರೆದ ಪತ್ರ ತಿರುಚಿದ್ರಾ ಅಧಿಕಾರಿಗಳು? ಅನುಮಾನಕ್ಕೆ ಇದೆ ಕಾರಣ
ಶೇ. 95 ರಷ್ಟು ಜನರು ಧಾರ್ಮಿಕ ಪ್ರವಾಸಕ್ಕೆ ಹೋಗುತ್ತಾರೆ. ಧಾರ್ಮಿಕ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಬೇಕು. ಇದು ಬ್ರಿಟಿಷರ ಕಾಲದಿಂದಲೂ ಇದೆ. ಆದರೆ, ಇದೀಗ ಸರಕಾರದ ಹೊಸ ಆದೇಶ ಮಾಡಿದೆ. ಪ್ರವಾಸಿ ತಾಣಗಳಾಗಿರೋ ಹಿಂದೂ ದೇವಾಲಯಗಳನ್ನು ಅಭಿವೃದ್ಧಿ ಮಾಡದಂತೆ ಆದೇಶ ನೀಡಿದೆ. ಸುತ್ತೋಲೆ ಮೂಲಕ ಪ್ರವಾಸೋದ್ಯಮ ಇಲಾಖೆಗೆ ಆದೇಶಿಸಿದೆ. ಆ ಮೂಲಕ ಹಿಂದೂಗಳಿಗೆ ಮರ್ಮಾಘಾತ ಎಸಗಿದೆ. ಇದನ್ನು ಸಿಎಂ ಸಿದ್ದರಾಮಯ್ಯ, ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ್ ಸೇರಿ ಈ ಕೆಲಸ ಮಾಡಿದ್ದಾರೆ. ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ. ಹಿಂದೂಗಳೆಲ್ಲ ರಸ್ತೆಗಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಡಾ ಹಗರಣ ಬೆಳಕಿಗೆ ಬಂದ ನಂತರ ಮತ್ತೆ ಅನೇಕ ಇಂಥ ವಿವಾದಗಳನ್ನು ಹುಟ್ಟುಹಾಕುವ ಮೂಲಕ ಸಿದ್ದರಾಮಯ್ಯ ಸರಕಾರ ತಾನೇ ಸಂಕಷ್ಟಗಳನ್ನು ಮೇಲೆ ಎಳೆದುಕೊಳ್ಳುತ್ತಿದೆ. ಈ ಹೊಸ ವಿವಾದದ ಸುತ್ತೋಲೆಯ ಅಸ್ತ್ರವನ್ನು ಬಿಜೆಪಿ ಹೇಗೆ ಬಳಸಿಕೊಳ್ಳುತ್ತೆ ಎನ್ನುವುದನ್ನ ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ