Dharwad News: ಕಳಪೆ ಬಿತ್ತನೆ ಬೀಜ ನೀಡಿ ರೈತರಿಗೆ ಮೋಸ; ಕೂಡಲೇ ಕಂಪನಿ ವಿರುದ್ದ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ
ರಾಜ್ಯದಲ್ಲಿ ಜುಲೈ ತಿಂಗಳಲ್ಲಿ ಸುರಿದ ಮಳೆಗೆ ರೈತರು ಹೈರಾಣಾಗಿದ್ದು, ಬರ ಮತ್ತು ಮಳೆಗೆ ರೈತ ಸಮೂಹ ಕಂಗಾಲಾಗಿದೆ. ಈ ಮದ್ಯೆ ಧಾರವಾಡ ಜಿಲ್ಲೆಯಲ್ಲಿ ರೈತರಿಗೆ ಮತ್ತೊಂದು ಸಮಸ್ಯೆ ತಲೆದೋರಿದೆ. ಹೌದು ಅಲ್ಪ ಸ್ವಲ್ಪ ಮಳೆಯಾದ ಕಾರಣ, ರೈತರು ಬಿತ್ತನೆ ಮಾಡಿದ್ದರು. ಆದ್ರೆ, ಬಿತ್ತನೆ ಮಾಡಿದ ಬೀಜ ಮೊಳಕೆ ಒಡೆದಿಲ್ಲ.
ಧಾರವಾಡ, ಜು.30: ಜಿಲ್ಲೆಯ ಕುಂದಗೋಳ(Kundgol) ತಾಲೂಕಿನಲ್ಲಿ ರೈತರು ಕಳಪೆ ಬೀಜದಿಂದ ಕಂಗಾಲಾಗಿದ್ದಾರೆ. ತಾಲೂಕಿನ ಚಾಕಲಬ್ಬಿ, ಸಂಶಿ, ಹೊಸಳ್ಳಿ ಭಾಗದಲ್ಲಿ ರೈತರು ಮಳೆಯಾದ ಕಾರಣ ಹತ್ತಿ ಬಿತ್ತನೆ ಮಾಡಿದ್ದರು. ಹೌದು, ಮೂಲತಃ ಔರಂಗಾಬಾದ್ನಲ್ಲಿರುವ ಆರ್.ಜೆ ಬಯೋಟೆಕ್ ಲಿಮಿಟೆಡ್ನ ಆರ್..ಜೆ.ಎಚ್.ಎಚ್.11 ಬಿಜಿ ತುಕಾರಂ ಎಂಬ ಹೆಸರಿನ ಹತ್ತಿ ಬಿತ್ತನೆ ಮಾಡಿದ್ದರು. ಆದ್ರೆ, ಹತ್ತಿ ಬೀಜ ಇನ್ನೂ ಮೊಳಕೆ ಒಡೆದಿಲ್ಲ. ಭೂಮಿಯಲ್ಲಿಯೇ ಕಮರಿ ಹೋಗಿದೆ. ನೂರಾರು ಎಕರೆ ಜಮೀನಿನಲ್ಲಿ ಭಿತ್ತನೆ ಮಾಡಿದ ಬೀಜಗಳು ಮೊಳಕೆ ಒಡೆಯದೆ ಜಮೀನು ಖಾಲಿ ಬಿದ್ದಿದೆ.
ಇನ್ನು ಕಳೆದ ತಿಂಗಳು ಅಲ್ಪ ಸ್ವಲ್ಪ ಮಳೆಯಾದ ಕಾರಣ ರೈತರು ಬಿತ್ತಿದ ಬಿತ್ತನೆ ಬೀಜ ಮೂಳಕೆ ಬರುತ್ತೆ ಎಂದು ರೈತರು ಕಾಯುತ್ತಿದ್ದರು. ಆದ್ರೆ, ಮಳೆಯಾದರೂ ಇನ್ನೂ ಬೀಜ ಮೊಳಕೆ ಒಡೆದಿಲ್ಲ. ಸುಮಾರು 400 ರಿಂದ 500 ಜನ ರೈತರು ಇದೇ ಕಂಪನಿಯ ಹತ್ತಿ ಬೀಜ ಖರೀದಿ ಮಾಡಿ ಬಿತ್ತನೆ ಮಾಡಿದ್ರು. ಇದೀಗ ಬೀಜ ಮೊಳಕೆ ಒಡೆಯದೇ ಇರುವುದರಿಂದ ಕಂಪನಿ ವಿರುದ್ದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಬೀಜ ನೀಡಿದ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಕಳಪೆ ಮೊಟ್ಟೆ ಪೂರೈಕೆ ಮಾಡಿದವರನ್ನು ಕಪ್ಪು ಪಟ್ಟಿಗೆ ಸೇರಿಸಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೂಚನೆ
850 ರೂನಂತೆ ಬಿತ್ತನೆ ಬೀಜದ ಪಾಕೇಟ್ ಖರೀದಿ
ಕುಂದಗೋಳ ಭಾಗದಲ್ಲಿ ಅನೇಕ ರೈತರು ತುಕಾರಂ ಕಂಪನಿಯ ಬೀಜ ಬಿತ್ತನೆ ಮಾಡಿದ್ದಾರೆ. ನೂರಾರು ಎಕರೆಯಲ್ಲಿ ಶೇಕಡಾ 50 ರಷ್ಟು ಮೊಳಕೆ ಒಡೆದಿಲ್ಲ. ಸುಮಾರು 850 ರೂ ನಂತೆ ಒಂದು ಪಾಕೇಟ್ ಖರೀದಿ ಮಾಡಿದ್ದರು. ಚಾಕಲಬ್ಬಿ ಗ್ರಾಮದಲ್ಲಿಯೇ ಸುಮಾರು 60 ಎಕರೆ ಭಿತ್ತನೆ ಮಾಡಿದ್ದಾರೆ. ಇನ್ನು ಹೊಸ ಬೀಜದ ಕಂಪನಿ ಎಂದು ರೈತರಿಗೆ ನಂಬಿಸಿದ್ದರಂತೆ. ಹೀಗಾಗಿ ರೈತರು ತುಕಾರಂ ಕಂಪನಿಯ ಬೀಜ ಖರೀದಿ ಮಾಡಿ ಬಿತ್ತನೆ ಮಾಡಿದ್ದರು. ಇದೀಗ ಅನ್ನದಾತ ಇತ್ತ ಬೆಳೆಯೂ ಇಲ್ಲ, ಹಣವೂ ಹೋಯಿತು. ನಮಗೆ ಹಣ ಕೊಡಿಸಿ ಎಂದು ಕಂಪನಿಯವರ ಬಳಿ ಅಲೆದಾಡುತ್ತಿದ್ದಾರೆ. ಕಂಪನಿಯವರು ನಿಮಗೆ ವಾಪಸ್ ಬೀಜ ಕೊಡ್ತೀನಿ ಎಂದು ಹಾರಿಕೆಯ ಉತ್ತರ ಕೊಟ್ಟಿದ್ದಾರೆ.
ಆದರೆ, ಇದುವರೆಗೂ ವಾಪಸ್ ಕಂಪನಿಯವರು ರೈತರ ಬಳಿ ಬಂದಿಲ್ಲ. ನಮಗೆ ಬೀಜ ಬೇಡ ನಮ್ಮ ಹಣ ನಮಗೆ ಕೊಡಿಸಿ ಎಂದು ರೈತರು ಕೃಷಿ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ಗೆ ಮನವಿ ಕೊಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು ರೈತರಿಗೆ ಮೋಸ ಮಾಡಿದ್ರೆ, ಅವರ ಮೇಲೆ ಕ್ರಿಮಿನಲ್ ಕೇಸ್ ಹಾಕ್ತೀವಿ ಎಂದಿದ್ದಾರೆ. ಒಟ್ಟಾರೆ ಬರ ಮತ್ತು ಮಳೆಯಿಂದ ಕಂಗಾಲಾದ ರೈತ ಇದೀಗ ಮತ್ತೊಂದು ಸಮಸ್ಯೆ ಎದುರಿಸುತ್ತಿದ್ದಾನೆ. ಸಾಲ ಸೋಲ ಮಾಡಿ ಬಿತ್ತನೆ ಮಾಡಿದ ಬೀಜ, ಮಣ್ಣಲ್ಲಿ ಕಮರಿ ಹೋಗಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ