ಹುಬ್ಬಳ್ಳಿ ಸುಪಾರಿ: ಚೈನ್, ವಾಚ್ ಬಿಚ್ಚಿಕೊಂಡು ಕುರಿ-ಕೋಳಿ ಕೊಟ್ಟಂತೆ ಮಗನ ಹತ್ಯೆಗೈಯಲು ಮೌಲ್ವಿ ಕೈಗೆ ಕೊಟ್ಟುಬಂದ ಕ್ರೂರಿ ತಂದೆ
ಮಕ್ಕಳು ತಪ್ಪು ದಾರಿ ತುಳಿದಾಗ ಹೆತ್ತವರು ಬೈದು ಬುದ್ಧಿವಾದ ಹೇಳುತ್ತಾರೆ. ಇನ್ನು ಅದಕ್ಕೂ ಮಣಿಯದಿದ್ದಾಗ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಕಪಾಳಕ್ಕೆ ನಾಲ್ಕು ಹೊಡೆದು ಬುದ್ಧಿ ಕಲಿಸುವುದನ್ನು ನಾನು ನೋಡಿದ್ದೇವೆ. ಕೇಳಿದ್ದೇವೆ ಕೂಡ. ಆದ್ರೆ. ಹುಬ್ಬಳ್ಳಿಯ ಈ ಉದ್ಯಮಿ ತನ್ನ ಪುತ್ರ ದಾರಿ ತಪ್ಪಿದ್ದಾನೆ ಎಂದು ಈ ನಿರ್ಧಾರ ತೆಗೆದುಕೊಂಡಿದ್ದು ಮಾತ್ರ ಘನಘೋರ.
ಹುಬ್ಬಳ್ಳಿ: ಹುಬ್ಬಳ್ಳಿಯ ಖ್ಯಾತ ಉದ್ಯಮಿಯೊಬ್ಬರ (hubblli businessman) ಪುತ್ರನ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ನಾಪತ್ತೆಯಾಗಿದ್ದ ಉದ್ಯಮಿ ಭರತ್ ಜೈನ್ ಮಗ ಅಖಿಲ್ ಜೈನ್ (30) ಮೃತದೇಹ ತೋಟದ ಮನೆಯಲ್ಲೇ ಪತ್ತೆಯಾಗಿದೆ. ಮಗ ಅಖಿಲ್ ಜೈನ್ ಹತ್ಯೆಗೆ ಸುಪಾರಿ(supari) ಕೊಟ್ಟಿದ್ದೆ ತಂದೆ ಭರತ್ ಜೈನ್ ಎನ್ನುವುದು ಪೊಲೀಸ್ (Police) ತನಿಖೆಯಲ್ಲಿ ಆಘಾತಕಾರಿ ಮಾಹಿತಿ ಬಟಾಬಯಲಾಗಿದೆ.
ಇದನ್ನೂ ಓದಿ: 28 ವರ್ಷಗಳ ದಾಂಪತ್ಯ ಅಂತ್ಯ: ಆಸ್ತಿಗಾಗಿ ಗಂಡನ ಕೊಂದು ನಾಟಕ ಮಾಡಿದ್ದವಳು, ಈಗ ಅಂದರ್ ಆಗಿದ್ದಾಳೆ!
10 ಲಕ್ಷ ರೂ.ಗೆ ಸುಪಾರಿ
ತಂದೆಯೇ ಮಗನನ್ನು ಕೊಲೆ ಮಾಡಿಸಿದ ವಿಚಾರ, ನಾಗರಿಕ ಸಮಾಜವೇ ಬೆಚ್ಚಿ ಬೀಳುವಂತೆ ಮಾಡಿದೆ. ಹೆತ್ತು-ಹೊತ್ತು ಸಾಕಿ ಸಲುಹಿದ ಕೋಟ್ಯಾಧಿಪತಿ ತಂದೆ ತನ್ನ ಏಕಮಾತ್ರ ಪುತ್ರನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾನೆ ಎಂದು ಯಾರು ನಂಬಲು ಸಾದ್ಯವಿಲ್ಲ ಆದ್ರೇ ಇದು ಸತ್ಯ.. ಪೊಲೀಸ್ ವಿಚಾರಣೆ ವೇಳೆ ಸ್ವತಃ ಅಖಿಲ್ ಜೈನ್ ತಂದೆ ಭರತ್ ಜೈನ್ ಬಾಯ್ಬಿಟ್ಟಿದ್ದಾನೆ. ಮಗ ಅಖಿಲ್ ಜೈನ್ ವ್ಯಕ್ತಿತ್ವ ಸರಿ ಇರಲಿಲ್ಲ ಎನ್ನುವುದು ತಂದೆ ಭರತ್ ಅವರ ಆರೋಪ. ಅಪ್ಪ ಹೇಳಿದ ಹಾಗೆ, ಅಖಿಲ್‌ನಿಗೆ ಕುಡಿತದ ಚಟವಿತ್ತು. ದುಡ್ಡು ಹಾಳು ಮಾಡುತ್ತಿದ್ದ, ತನ್ನ ಕೆಲಸದಲ್ಲಿ ಸಾಥ್ ನೀಡುತ್ತಿರಲಿಲ್ಲ. ಹಣಕ್ಕಾಗಿ ಮನೆಯಲ್ಲಿ ಜಗಳ ಕಾಯುತ್ತಿದ್ದನಂತೆ. ಅದೇ ಕಾರಣಕ್ಕೆ 10 ಲಕ್ಷ ರೂ.ಗೆ ಸುಪಾರಿ ಕೊಟ್ಟ ಕೊಲೆಮಾಡಿಸಿದೆ ಅಂತ ಒಪ್ಪಿಕೊಂಡಿದ್ದಾನೆ.
ಅಪ್ಪನ ಕಟ್ಟು ಕಥೆ ಹೇಗಿತ್ತು ಎಂಥಾ ನೀಚ ಅಂದ್ರೆ, ಕಳೆದ ಶನಿವಾರ ಡಿಸೆಂಬರ್. 3ರಂದು ದೊಡ್ಡ ಹೈಡ್ರಾಮವನ್ನೇ ಸೃಷ್ಟಿಸಿದ್ದ. ಹುಬ್ಬಳ್ಳಿ ಕೇಶ್ವಾಪುರದ ಅರಿಹಂತ ಕಾಲೋನಿಯಲ್ಲಿ ನೆಲೆಸಿರುವ ಭರತ್ ತನ್ನ ಸಂಬಂಧಿಕರನ್ನ ಕರೆಯಿಸಿ, ನನ್ನ ಮಗ ಅಖಿಲ್ ದೇವರಗುಡಿ ಹಾಳದ ಬಳಿಯ ಗುಡ್ಡದ ಮೇಲಿಂದ ಬೀಳುತ್ತೇನೆಂದು ವಿಡಿಯೋ ಕಾಲ್ ಮಾಡಿ ಹೇಳಿದ್ದಾನೆ. ಬಿದ್ದಂತೆಯೂ ವಿಡಿಯೋ ಕೂಡ ಕಾಣಿಸಿದೆ ಎಂದು ಕಥೆ ಕಟ್ಟಿದ್ದಾನೆ. ನೆರೆಹೊರೆಯವರ ಸಲಹೆ ಪಡೆದವರಂತೆ ನಟಿಸಿದ್ದ, ಆದ್ರೇ ಈತನ ಡ್ರಾಮಾ ಕೆಲ ಹೊತ್ತಲೇ ಭರತ್ ಗೆ ಮುಳುಗು ನೀರು ತರಲಿದೆ ಎಂಬ ಸಣ್ಣ ಸುಳಿವು ಇರಲಿಲ್ಲ. ಹೇಳಿ ಕೇಳಿ ಭರತ್ ಹುಬ್ಬಳ್ಳಿ ಮಟ್ಟಿಗೆ ಫೇಮಸ್ ಉದ್ಯಮಿ. ಬ್ಯುಸಿನೆಸ್ ಸ್ಕೂಲ್, ಆಭರಣ ವ್ಯಾಪಾರ, ರಿಯಲ್ ಎಸ್ಟೇಟ್ ವ್ಯವಹಾರ, ಅಂತಲೇ ಮಾಡಿಕೊಂಡಿದ್ದ ಕೋಟ್ಯಾಧಿಪತಿ. ಖ್ಯಾತ ಉದ್ಯಮಿ ಪುತ್ರ ನಾಪತ್ತೆಯಾಗಿದ್ದಾನೆ ಅಂದಕೂಡಲೇ ನಾಪತ್ತೆ ಪ್ರಕರಣ ದಾಖಲಾಗಿತ್ತು. ಭರತ್ ಸಹೋದರ ಮನೋಜ್ ಜೈನ್ ಕೇಶ್ವಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದ.
ಇದನ್ನೂ ಓದಿ: ಹೆಂಡತಿಯನ್ನು ಕೊಂದು ಡ್ರಮ್ನಲ್ಲಿ 1 ವರ್ಷ ಶವ ಬಚ್ಚಿಟ್ಟ ಗಂಡ!; ಆಂಧ್ರದಲ್ಲೊಂದು ಭಯಾನಕ ಘಟನೆ
ನಾಪತ್ತೆ ಪ್ರಕರಣದ ದೂರಿನಲ್ಲಿ ಏನಿತು ಗೊತ್ತಾ..?
ಕೆಲಸದ ನಿಮಿತ್ತ ಡಿಸೆಂಬರ್ ಒಂದರಂದು ಭರತ್ ಜೈನ್ ತನ್ನ ಪುತ್ರನೊಂದಿಗೆ ಕಾರಿನಲ್ಲಿ ಕಲಘಟಗಿ ಬಳಿಯ ದೇವಿಕೋಪ್ಪ ಬಳಿಯ ತೋಟದ ಮನೆಗೆ ಹೋಗಿದ್ದೆ. ಆತನ ಸ್ನೇಹಿತರು ಬರ್ತಾರೆ ನಾನು ಇಲ್ಲಿಯೇ ಉಳಿದುಕೊಳ್ಳುವುದಾಗಿ ಹೇಳಿದಕ್ಕೆ ಪುತ್ರನನ್ನು ಅಲ್ಲಿಯೇ ಬಿಟ್ಟು ನಾನು ಮನೆಗೆ ಮರಳಿದೆ. ಆದ್ರೆ, ಎರಡು ದಿನವಾದ್ರು ಮಗ ಮನೆಗೆ ಬರಲಿಲ್ಲ. ಡಿಸೆಂಬರ್ 3ರ ಸಂಜೆ ನನ್ನ ಮಗ ಅಖೀಲ್ ದೇವರಗುಡಿ ಹಾಳದ ಬಳಿಯ ಗುಡ್ಡದ ಮೇಲಿಂದ ಬೀಳುತ್ತೇನೆಂದು ವಿಡಿಯೋ ಕಾಲ್ ಮಾಡಿ ಹೇಳಿದ್ದಾನೆ. ಬಿದ್ದಂತೆಯೂ ವಿಡಿಯೋ ಕೂಡ ಕಾಣಿಸಿದ್ದ ಎಂದು ಕೇಶ್ವಾಪುರ ಪೋಲಿಸರ ಕಿವಿಯಲ್ಲಿ ಲಾಲ್‌ಬಾಗ್ ಹೂ ಇಟ್ಟು ದೂರು ನೀಡಿದ್ದಾನೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೊಂದು ಹೈಪ್ರೋಫೈಲ್ ಕೇಸ್ ಆಗಿದ್ದರಿಂದ ತನಿಖೆಯ ಇಂಚಿಂಚು ಮಾಹಿತಿ ಕಲೆಹಾಕಲು ಶುರುಮಾಡಿದ್ದರು. ಭರತ್ ನೀಡಿದ ದ್ವಂದ್ವ ಹೇಳಿಕೆಯನ್ನು ಕೇಶ್ವಾಪುರ ಠಾಣೆಯ ಇನ್ಸ್ಪೆಕ್ಟರ್ ಜಗದೀಶ ಹಂಚಿನಾಳ, ಪೊಲೀಸ್ ಗಣ್ಣಿನಿಂದ ನೋಡಲು ಶುರುಮಾಡ್ತಾರೆ. ಭರತ್ ನೀಡಿದ ಹೇಳಿಕೆಯಂತೆ ಅಖಿಲನ ಮೊಬೈಲ್ ಕೊನೆ ಲೊಕೇಶನ್ ದೇವರಗುಡಿಹಾಳದಲ್ಲಿಯೇ ಬಂದಿದೆ. ದೇವರಗುಡಿಹಾಳ ಬಳಿ ಅಖಿಲ್ ಶವಕ್ಕಾಗಿ ಪೊಲೀಸರು ತಡಕಾಡಿದ್ದಾರೆ. ಆದರೆ, ಶವ ಸಿಕ್ಕಿಲ್ಲ.
ಬಳಿಕ ಭರತ್ ಕರೆಗಳ ಮಾಹಿತಿ ಕಲೆಹಾಕಿದಾಗ ಭರತ್ ಗೆ ಪುತ್ರನಿಂದ ವಿಡಿಯೋ ಕಾಲ್ ಬಂದಿದ್ದು ಸುಳ್ಳು ಅನ್ನೊದು ಗೊತ್ತಾಗಿದೆ. ಇದಾದ ಬಳಿಕ ಭರತ್ ತನ್ನ ಪುತ್ರನೊಂದಿಗೆ ಕಾರಿನಲ್ಲಿ ತೆರಳುವಾಗ, ಮತ್ತೋರ್ವ ವ್ಯಕ್ತಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದು ಗೊತ್ತಾಗುತ್ತೆ. ಅಲ್ಲಿಯವರೆಗೆ ಸುಮ್ಮನಿದ್ದ ಇನ್ಸ್ಪೆಕ್ಟರ್ ಜಗದೀಶ್ ಹಂಚಿನಾಳ, ಪೊಲೀಸ್ ಭಾಷೆಯಲ್ಲಿ ಭರತನನ್ನೇ ವಿಚಾರಣೆಗೆ ಒಳಪಡಿಸಿದಾಗ ಅಸಲಿಯತ್ತು ಬಯಲಿಗೆ ಬಂದಿದೆ. ತಾನೇ ಮಗನ ಕೊಲೆ ಮಾಡಿಸಿದ್ದು ಎಂದು ಭರತ್ ಬಾಯ್ಬಿಟ್ಟಿದ್ದಾನೆ.
ಕುರಿ-ಕೋಳಿ ಕೊಟ್ಟಂತೆ ಮಗನನ್ನು ಹಂತಕರ ಕೈಗೆ ಒಪ್ಪಿಸಿದ ತಂದೆ
ಮಗನ ಉಪಟಳ ಹೆಚ್ಚಾಗಿದೆ ಎನ್ನುವ ಕಾರಣಕ್ಕೆ ಸ್ಥಳೀಯ ಹಂತಕರಿಗೆ ಭರತ ಜೈನ್ ಸುಪಾರಿ ನೀಡಿದ್ದನಂತೆ. ಸುಮಾರು 10 ಲಕ್ಷ ರೂ. ನೀಡಿ ಮಗನನ್ನು ಕೊಲ್ಲುವಂತೆ ಸಲಾವುದ್ದೀನ್ ಮೌಲ್ವಿಗೆ ಸೂಚಿಸಿದ್ದಾನೆ. ಅವತ್ತು ಡಿಸೆಂಬರ್ ಒಂದು..ಮದ್ಯಾಹ್ನ ಊಟಕ್ಕೆ ಕೂತಿದ್ದ ಮಗನಿಗೆ ರೀಯಲ್ ಎಸ್ಟೇಟ್ ಸಂಬಂಧಪಟ್ಟಂತೆ ಕೆಲಸ ಇದೆ ಕಲಘಟಗಿಗೆ ಹೋಗ್ಬೇಕು ರೆಡಿಯಾಗು ಎಂದು ಹೇಳಿದ್ದಾನೆ.
ಪಾಪಿ ತಂದೆ ಭರತ್ ಊಟ ಅರ್ಧಕ್ಕೆ ಬಿಟ್ಟು ಮಗ ಅವನದ್ದೇ ಕಾರಿನಲ್ಲಿ ತಂದೆ ಮತ್ತು ಸುಫಾರಿ ಕಿಲ್ಲರ್ ಸಲೀಂ ಸಲಾವುದ್ದೀನ್ ಕರೆದುಕೊಂಡು ಕಲಘಟಗಿ ಕಡೆಗೆ ಹೋಗಿದ್ದಾರೆ. ಹಂತಕನನ್ನ ಪಕ್ಕದಲ್ಲೇ ಕೂರಿಸಿಕೊಂಡು ಕಲಘಟಗಿ ಬಿಟ್ಟು ಮುಂದೆ ದೇವಿಕೊಪ್ಪದ ಬಳಿ ತೆರಳುತ್ತಿದ್ದಂತೆಯೇ,ರಸ್ತೆ ಪಕ್ಕದಲ್ಲೇ ಕಾರು ನಿಲ್ಲಿಸಿದ್ದಾರೆ. ಅಲ್ಲಿ ಕಾಣುವ ಶೆಡ್ಡು ರಿಪೇರಿ ಮಾಡಿ ಚೆನ್ನಾಗಿ ಪಿಓಪಿ ಮಾಡಿಸಿಕೊಡಬೇಕು ಅಂತಾ ಹಂತಕ ಸಲೀಮ್ ಹೇಳಿದ್ದಾನೆ. ಕಬ್ಬಿನ ಗದ್ದೆ ಒಳಗೆ ಬನ್ನಿ ಇನ್ನೂ ಏನೋ ಮಾತನಾಡುವುದು ಇದೆ ಅಂತ ಚಿಕ್ಕ ರೂಮಿನ ಕಡೆಗೆ ಕರೆದುಕೊಂಡು ಹೋಗಿದ್ದಾರೆ. ಇಲ್ಲಿ ಅಖೀಲ್ ಹೋಗುತ್ತಿದ್ದಂತೆ ಮೋದಲೇ ಹೋಂಚು ಹಾಕಿ ಕಾಯ್ತಾ ಕೂತಿದ್ದ ಹಂತಕರ ಗ್ಯಾಂಗ್,ಅಖೀಲ್ ನನ್ನು ಏಕಾಏಕಿ ದಾಳಿ ಮಾಡಿದ್ದು, ಬಾಯಿಗೆ ಬಟ್ಟೆ ತುರುಕಿ ಕೈ ಕಟ್ಟಿದ್ದಾರೆ. ಅಲ್ಲೇ ಇದ್ದ ಭರತ್, ಮಗ ಕಿರುಚಾಡುವುದು, ಒದ್ದಾಡುವುದನ್ನು ನೋಡುತ್ತಲೇ ಕುಳಿತ್ತಿದ್ದಾನೆ.
ಮಗ ಇನ್ನೇನು ಸತ್ತೇ ಹೋಗುತ್ತಾನೆ. ಮತ್ತೆ ವಾಪಸ್ ಬರಲ್ಲ. ನಾನು ಅವರನ್ನ ನೋಡಲು ಆಗಲ್ಲ ಎಂದು ತಿಳಿದಿದ್ದರೂ ಪಾಪಿ ತಂದೆಗೆ ಮನಸ್ಸು ಕರಗಿಲ್ಲ. ಬದಲಾಗಿ ಪುತ್ರನ ಕೈಯಲ್ಲಿದ್ದ ಬೆಲೆ ಬಾಳುವ ವಾಚು, ಬಂಗಾರದ ಉಂಗುರು, ಮತ್ತು ಕೊರಳಲ್ಲಿದ್ದ ಚೈನು ಕಿತ್ತುಕೊಂಡಿದ್ದಾನೆ. ಬಳಿಕ ಕೆಲಸ ಮುಗಿಸಿ ಬಂದು ಪೇಮೆಂಟ್ ತೆಗೆದುಕೊಂಡು ಹೋಗಿ ಎಂದು ಹೇಳಿ ಕುರಿ, ಕೋಳಿ ಕೊಟ್ಟಂತೆ ಮಗನನ್ನು ಹಂತಕರ ಕೈಗೆ ಒಪ್ಪಿಸಿ ಅಲ್ಲಿಂದ ಒಬ್ಬನೇ ಮನೆಗೆ ವಾಪಸ್ ಆಗಿದ್ದಾನೆ.
ಬಳಿಕ ಹಂತಕರು ಅಖೀಲ್‌ನನ್ನು ಉಸಿರುಗಟ್ಟಿಸಿ ಸಾಯಿಸಿ ಅಲ್ಲೇ ಕಬ್ಬಿನ ಗದ್ದೆಯ ಪಕ್ಕದಲ್ಲಿ ಮೃತ ದೇಹವನ್ನು ಉಪ್ಪು ಮತ್ತು ಕರ್ಪೂರ ಹಾಕಿ ಸಮಾದಿ ಮಾಡಿದ್ದಾರೆ. ಮೃತ ದೇಹವನ್ನು ಗುಂಡಿಯಲ್ಲಿ ಮುಚ್ಚುವ ಮುನ್ನ ಒಂದು ಫೋಟೋ ತೆಗೆದು ತಂದೆ ಕಳುಹಿಸಿದ್ದಾರೆ. ತಕ್ಷಣ ಅಲ್ಲಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಅವತ್ತೆ ಹುಬ್ಬಳ್ಳಿಗೆ ಹೋದ ಸಲೀಮ್ ಆ್ಯಂಡ್ ಗ್ಯಾಂಗ್ ಪೇಮೆಂಟ್ ಪಡೆದುಕೊಂಡಿದೆ.
ಸಾಕ್ಷೃ ನುಡಿದ ಮೊಬೈಲ್ ಫೋನ್
ಮಗನ ಕೊಲೆ ಮಾಡಿಸಲು ಭರತ್ ಒಂದು ವರ್ಷದ ಹಿಂದೆಯೇ ಸ್ಕೆಚ್ ಹಾಕಿದ್ದ. ಸೂಕ್ತ ಸಮಯಕ್ಕಾಗಿ ಹೊಂಚು ಹಾಕಿ ಕುಳಿತಿದ್ದ. ಸ್ಥಳೀಯ ಹಂತಕರಿಗೆ ಆಗಾಗ ಕರೆ ಮಾಡುತ್ತಿದ್ದ. ಹಳೆ ಹುಬ್ಬಳ್ಳಿಯ ಸಲಾವುದ್ದೀನ್ ಮೌಲ್ವಿಗೆ ಸುಪಾರಿ ನೀಡಿದ್ದು ಇದಕ್ಕೆ ಭರತ್ ಜೈನ್ ಮೊಬೈಲ್ ಫೋನ್ ಸಾಕ್ಷೃ ನುಡಿದಿದೆ. ಅಷ್ಟೇ ಅಲ್ಲದೇ ತಂದೆಯ ಸಮ್ಮುಖದಲ್ಲಿ ತನ್ನ ಪುತ್ರನನ್ನು ಭರತ್ ಹಂತಕ ಕೈಗೆ ಒಪ್ಪಿಸಿದ್ದ, ಸಾಲದಕ್ಕೆ ಆತನ ಮೈಮೇಲಿದ್ದ ಚಿನ್ನದ ಉಂಗುರ, ಚೈನ್, ಹಾಗೂ ಕೈಯಲ್ಲಿದ್ದ ವಾಚ್ ಬಿಚ್ಚಿಕೊಂಡು ಮನೆಗೆ ಬಂದು ತಣ್ಣಗೆ ಮಲಗಿದ್ದ. ಇದಾದ ಬಳಿಕ ಅಂದ್ರೆ ಡಿಸೆಂಬರ್ ಒಂದರ ರಾತ್ರಿಯೇ ಅಖಿಲ್ ಹಂತಕರ ಕೈಯಲ್ಲಿ ಕೊಲೆಯಾಗಿದ್ದ ಅನ್ನೊದು ತನಿಖೆಯಿಂದ ಬಯಲಾಗಿದೆ..
ಡಿಸೆಂಬರ್ 3ರಂದು ಭರತ್ ತನ್ನ ಮಗ ಅಖೀಲ್ ಕಾಣೆಯಾದ ಬಗ್ಗೆ ದೂರು ನೀಡಲು ಕೇಶ್ವಾಪುರ ಪೋಲಿಸ್ ಠಾಣೆಗೆ ಬಂದಿದ್ದಾನೆ. ಅವನು ದೃಶ್ಯಂ ಸ್ಟೋರಿ ಹೇಳುತ್ತಿದ್ದಂತೇಯೇ ಪೋಲಿಸರಿಗೆ ಅನುಮಾನ ಬಂದಿದೆ..ಹೈಪ್ರೋಫೈಲ್ ಕೇಸ್ ಆಗಿದ್ರಿಂದ ತಕ್ಷಣ ಪೋಲಿಸ್ ಆಯುಕ್ತರಿಗೆ ಇನ್ಸ್ಪೆಕ್ಟರ್ಜಗದೀಶ್ ಹಂಚಿನಾಳ ಮಾಹಿತಿ ನೀಡಿದ್ದಾರೆ. ಅಷ್ಟೋತ್ತಿಗಾಲೇ ಆ ಕೇಸ್ ಬಗ್ಗೆ ಮಾಹಿತಿ ಪಡೆದುಕೊಂಡಿದ್ದ ಪೋಲಿಸ್ ಆಯುಕ್ತ ಲಾಭುರಾಮ್ 5 ವಿಶೇಷ ತಂಡಗಳನ್ನು ರಚನೆ ಮಾಡಿ ತನಿಖೆಗೆ ಆದೇಶ ನೀಡಿದ್ದರು.
ಎಸಿಪಿ ವಿನೋದ್ ಮುಕ್ತೇದಾರ ನೇತೃತ್ವದ ತಂಡ ಹಗಲು ರಾತ್ರಿ ಮೃತದೇಹ ಹುಡುಕುವುದಕ್ಕೆ ಶುರುಮಾಡಿತ್ತು. ಇನ್ಸ್ಪೆಕ್ಟರ್ಗಳಾದ ಜಗದೀಶ್ ಹಂಚಿನಾಳ, ಆನಂದ ಓಣಕುದರಿ, ಜಿ.ಎಂ ಕಾಲಿಮಿರ್ಚಿ, ವೈ.ಎಚ್,ಸಾತೇನಹಳ್ಳಿ,ಸಂತೋಷ ಪವಾರ್,ಮತ್ತು ರಮೇಶ್ ಹೂಗಾರ ಇವರನ್ನೋಳಗೋಂಡ ಟೀಂ ತನಿಖೆ ಮಾಡಿದೆ. ಪಾಪಿ ಭರತ್ ಮಾಡಿದ ಪುತ್ರ ಹತ್ಯೆ ಕಹಾನಿಗೆ ಲಾಜಿಕಲ್ ಎಂಡ್ ಮಾಡಿದ್ದಾರೆ .ಕೇವಲ 24ಗಂಟೆಯಲ್ಲಿ ಆರೋಪಿಗಳನ್ನ ಮತ್ತು ಮೃತ ದೇಹವನ್ನು ಪತ್ತೆ ಮಾಡಿ ಹುಬ್ಬಳ್ಳಿಯ ಪೋಲಿಸರು ಶಬಾಷ್ ಎನಿಸಿಕೊಂಡಿದ್ದಾರೆ..
ದಾರಿ ತಪ್ಪಿದ್ದ ಮಗ
ಇನ್ನೊಂದು ಕಡೆ ಅಖಿಲ್ ಕೊಲೆಗೆ ಕ್ಯಾಸಿನೋ ಕಾರಣ ಎನ್ನಲಾಗಿದೆ. ಕ್ಯಾಸಿನೋದಲ್ಲಿ ಸುಮಾರು ಐದರಿಂದ ಆರು ಕೋಟಿ ರೂ. ದೊಡ್ಡ ಮೊತ್ತವನ್ನು ಅಖಿಲ್ ಸಾಲ ಮಾಡಿದ್ದ. ಸಾಲಗಾರರ ಕಿರಿಕಿರಿ ಜಾಸ್ತಿಯಾಗಿತ್ತು ಎನ್ನುವ ಅನುಮಾನವೂ ಇದೆ. ಇದಲ್ಲದೆ ಅಖಿಲ್ ಡ್ರಗ್ ಅಡಿಕ್ಟ್ ಆಗಿದ್ದ ಎನ್ನುವ ಮಾತುಗಳೂ ಕೇಳಿ ಬರುತ್ತಿದ್ದು, ಮರ್ಯಾದೆಗೆ ಅಂಜಿ ಭರತ್ ಜೈನ್ ಮುಂದೆ ನಿಂತು ಮಗನನ್ನ ಕೊಲೆ ಮಾಡಿಸಿದ್ದಾನೆ ಎನ್ನಲಾಗಿದೆ.
50 ಸಾವಿರ ರೂ. ಬಹುಮಾನ
ಭರತ ನ ಹೇಳಿಕೆಯಿಂದ ನಮಗೆ ಸಂಶಯ ಮೂಡಿತ್ತು..ಹೀಗಾಗಿ 5 ವಿಶೇಷ ತಂಡಗಳನ್ನು ರಚಿಸಿ ತನಿಖೆಗೆ ಆದೇಶಿಸಲಾಗಿತ್ತು.ಕೊನೆಗೂ ಸತ್ಯ ಹೊರಬಿದ್ದಿದೆ..ನಮ್ಮ ಪೊಲೀಸ್ ಅಧಿಕಾರಿಗಳು ಚಾಣಾಕ್ಷತನದಿಂದ ಕಾರ್ಯನಿರ್ವಹಣೆ ಮಾಡಿದ್ದಾರೆ. ನಮ್ಮ ತಂಡಕ್ಕೆ 50 ಸಾವಿರ ರೂ. ಬಹುಮಾನ ಘೋಷಣೆ ಮಾಡಲಾಗಿದೆ ಎಂದು ಪೋಲಿಸ್ ಆಯುಕ್ತ ಲಾಭುರಾಮ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಈ ರೀತಿಯ ದುರ್ಘಟನೆ ನಡೆದಿದ್ದು ಅಕ್ಷಮ್ಯ..ನಮ್ಮ ಹುಬ್ಬಳ್ಳಿಯಲ್ಲಿ ಬಿಹಾರ್ ಸಂಸ್ಕೃತಿ ನೇಲೆಯುರುತ್ತಿರುವುದು ಶಾಂತಿಗೆ ಭಂಗ ತಂದಿದೆ..ಪೊಲೀಸ್ ಇಂತಹ ಘಟನೆ ಮರುಕಳಿಸಿದಂತೆ ಎಚ್ಚರ ವಹಿಸಬೇಕಾಗಿದೆ ಎಂದು ಉದ್ಯಮಿ ಮಹೇಂದ್ರ ಸಿಂಘ್ವಿ ತಿಳಿಸಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 3:33 pm, Mon, 5 December 22