ಬೆಳೆಹಾನಿಗೆ ಪರಿಹಾರ ಬೇಕೇ? ಹಾಗಿದ್ದರೆ ರೈತರು ಈ ಪಟ್ಟಿಯನ್ನು ಪರಿಶೀಲಿಸಲೇಬೇಕು
ಧಾರವಾಡ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾದ ಬೆಳೆ ಹಾನಿಯ ಕರಡು ಪಟ್ಟಿ ಪ್ರಕಟವಾಗಿದೆ. ಒಟ್ಟು 90,473 ರೈತರಿಗೆ ಸಂಬಂಧಿಸಿದ 82,448.88 ಹೆಕ್ಟೇರ್ ಪ್ರದೇಶದ ವಿವರಗಳಿವೆ. ರೈತರು ತಮ್ಮ ಹೆಸರು ಮತ್ತು ಹಾನಿ ವಿವರಗಳನ್ನು ಪರಿಶೀಲಿಸಿ, ಯಾವುದೇ ತಿದ್ದುಪಡಿ ಅಥವಾ ಆಕ್ಷೇಪಣೆಗಳಿದ್ದರೆ ಅಕ್ಟೋಬರ್ 10ರ ಸಂಜೆ 5 ಗಂಟೆಯೊಳಗೆ ಸಂಬಂಧಪಟ್ಟ ಕಚೇರಿಗಳಲ್ಲಿ ಸಲ್ಲಿಸಬೇಕು. ಇದು ಪರಿಹಾರ ಪಡೆಯಲು ನಿರ್ಣಾಯಕವಾಗಿದೆ.

ಹುಬ್ಬಳ್ಳಿ, ಅಕ್ಟೋಬರ್ 7: ಅತಿಯಾದ ಮಳೆಯಿಂದ ಆಗಿರುವ ಬೆಳೆ ಹಾನಿಯಾದ (Crop loss) ಕ್ಷೇತ್ರ ಮತ್ತು ರೈತರ ಕರಡು ಪಟ್ಟಿಯನ್ನು ಧಾರವಾಡ (Dharawad) ಜಿಲ್ಲಾಡಳಿತ ಪ್ರಕಟಿಸಿದ್ದು ಆಕ್ಷೇಪಣೆ ಸಲ್ಲಿಸಲು ಅಕ್ಟೋಬರ 10 ಕೊನೆಯ ದಿನವಾಗಿದೆ. ಹೀಗಾಗಿ ರೈತರು ಈಗಿನಿಂದಲೇ ಪಟ್ಟಿ ಪರಿಶೀಲನೆ ನಡೆಸಿ ಆಕ್ಷೇಪಣೆಗಳಿದ್ದರೆ ಸಲ್ಲಿಸಬೇಕಾಗಿದೆ. 2025ರ ಸಾಲಿನ ಅಗಸ್ಟ್ ತಿಂಗಳಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದ ಉಂಟಾದ ಬೆಳೆಹಾನಿಗೆ ಸಂಬಂಧಿಸಿದಂತೆ ಪರಿಹಾರವನ್ನು ಪಾವತಿಸುವ ಕುರಿತು ಜಂಟಿ ಸಮೀಕ್ಷೆಯನ್ನು ನಡೆಸಲಾಗಿದೆ. ಸಮೀಕ್ಷಾ ವರದಿಯನ್ನು ಅಂತಿಮಗೊಳಿಸಲಾಗಿದ್ದು, ತಾಲ್ಲೂಕುವಾರು ಎಫ್ಐಡಿ ಹೊಂದಿದ ರೈತರ ಬೆಳೆಹಾನಿ ಕ್ಷೇತ್ರದ ವಿವರಗಳನ್ನು ಭೂಮಿ ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲಾಗಿದೆ.
ಬೆಳೆಹಾನಿ ಸಮೀಕ್ಷೆಯ ಕ್ಷೇತ್ರ ವಿವರ
ಧಾರವಾಡ ತಾಲೂಕಿನಲ್ಲಿ 17,932 ರೈತರು ಮತ್ತು ಒಟ್ಟು 14,302.51 ಹೆಕ್ಟೇರ್ ಕ್ಷೇತ್ರ, ನವಲಗುಂದ ತಾಲೂಕಿನಲ್ಲಿ 25,890 ರೈತರು ಒಟ್ಟು 23,627.13 ಹೆಕ್ಟೇರ್ ಕ್ಷೇತ್ರ, ಹುಬ್ಬಳ್ಳಿ ತಾಲೂಕಿನಲ್ಲಿ 14,455 ರೈತರು ಒಟ್ಟು 15,858 ಹೆಕ್ಟೇರ್ ಕ್ಷೇತ್ರ, ಕುಂದಗೋಳ ತಾಲೂಕಿನಲ್ಲಿ 14,854 ರೈತರು ಒಟ್ಟು 12,847.34 ಹೆಕ್ಟೇರ್ ಕ್ಷೇತ್ರ, ಹುಬ್ಬಳ್ಳಿ ನಗರ 1,109 ರೈತರು ಒಟ್ಟು 881.91 ಹೆಕ್ಟೇರ್ ಕ್ಷೇತ್ರ, ಅಣ್ಣಿಗೇರಿ ತಾಲೂಕಿನಲ್ಲಿ 16,233 ರೈತರು ಒಟ್ಟು 14,931.99 ಹೆಕ್ಟೇರ್ ಕ್ಷೇತ್ರದಲ್ಲಿ ಬೆಳೆಹಾನಿಯಾಗಿರುತ್ತದೆ. ಭೂಮಿ ಪರಿಹಾರ ತಂತ್ರಾಂಶದಲ್ಲಿ ದಾಖಲಿಸಿದ ವರದಿಯಂತೆ ಒಟ್ಟು ರೈತರ ಸಂಖ್ಯೆ 90,473 ಆಗಿದ್ದು, ಒಟ್ಟು 82,448.88 ಹೆಕ್ಟೆರ್ ಕ್ಷೇತ್ರಗಳಲ್ಲಿ ಬೆಳೆ ಹಾನಿಯಾಗಿದೆ.
ರೈತರು ಮಾಡಬೇಕಾಗಿದ್ದು ಏನು?
ಬೆಳೆಹಾನಿಯಾದ ರೈತರ ಕರಡು ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಛೇರಿ, ಉಪವಿಭಾಧಿಕಾರಿಗಳ ಕಛೇರಿ, ಸಂಬಂಧಿಸಿದ ತಹಶೀಲ್ದಾರರ ಕಛೇರಿ, ಸಂಬಂಧಿಸಿದ ಗ್ರಾಮ ಪಂಚಾಯತ್ ಕಛೇರಿ, ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಅಂತರಜಾಲದಲ್ಲಿ (ಈ ಲಿಂಕ್ ಮೂಲಕ ನೋಡಬಹುದಾಗಿದೆ – https://dharwad.nic.in/en/document-category/disaster-management/) ಈಗಾಗಲೇ ಪ್ರಕಟಿಸಲಾಗಿದೆ. ಈ ಕುರಿತು ಭೂಮಿ ಪರಿಹಾರ ತಂತ್ರಾಂಶದಲ್ಲಿ ದಾಖಲಿಸಿದ ರೈತರ ಬೆಳೆ ಹಾನಿ ಕ್ಷೇತ್ರದಲ್ಲಿ ಮಾತ್ರ ಯಾವುದಾದರೂ ತಿದ್ದುಪಡಿ ಬಗ್ಗೆ, ಆಕ್ಷೇಪಣೆಗಳಿದ್ದಲ್ಲಿ ತಮ್ಮ ಲಿಖಿತ ಆಕ್ಷೇಪಣೆಗಳನ್ನು ಸಂಬಂಧಿಸಿದ ತಾಲ್ಲೂಕಿನ ತಹಶೀಲ್ದಾರ, ಕೃಷಿ, ತೋಟಗಾರಿಕಾ ಕಛೇರಿಗಳಲ್ಲಿ ಹಾಗೂ ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಲ್ಲಿ ಅಕ್ಟೋಬರ್ 10 ರಂದು ಸಂಜೆ 5 ಗಂಟೆಯೊಳಗಾಗಿ ಸಲ್ಲಿಸುವಂತೆ ಕೋರಲಾಗಿದೆ.
ಇದನ್ನೂ ಓದಿ: ಬೀದರ್ನಲ್ಲಿ ಭಾರಿ ಮಳೆಗೆ ವ್ಯಾಪಕ ಬೆಳೆ ಹಾನಿ: ಪರಿಶೀಲನೆಗೆ ಪ್ರವಾಹದ ನೀರಿಗೆ ಇಳಿದೇ ಬಿಟ್ಟ ಶಾಸಕ ಶರಣು ಸಲಗರ!
ಸಂಜೆ 5 ಗಂಟೆವರೆಗೆ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ನಿಯಮಾನುಸಾರ ಪರಿಶೀಲಿಸಿ ಕ್ರಮವಹಿಸಿ, ಪಟ್ಟಿಯನ್ನು ಅಂತಿಮಗೊಳಿಸಲಾಗುವುದು. ನಿಗದಿಪಡಿಸಿದ ಅವಧಿಯ ನಂತರ ಸ್ವೀಕೃತವಾಗುವ ಆಕ್ಷೇವಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



