ಹುಬ್ಬಳ್ಳಿ, ಡಿಸೆಂಬರ್ 24: ಮಾಜಿ ಸಚಿವ, ಎಂಎಲ್ಸಿ ಸಿ.ಟಿ.ರವಿ (CT Ravi) ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Laxmi Hebbalkar) ಅವರ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಪ್ರಕರಣ ದೇಶಾದ್ಯಂತ ಸದ್ದು ಮಾಡಿದೆ. ಪ್ರಕರಣದ ತನಿಖೆಯನ್ನು ಸಿಐಡಿಗೆ (CID) ವಹಿಸಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ (G Parameshwara) ಹೇಳಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಟಿ ರವಿ ಅವರು ಅಶ್ಲೀಲ ಪದ ಬಳಸಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಇನ್ನೂ ಕೆಲವರು ಸಿಟಿ ರವಿ ಅವರು ಅಶ್ಲೀಲ ಪದ ಬಳಸಿಲ್ಲ ಅಂತ ಹೇಳಿದ್ದಾರೆ. ಹೀಗಾಗಿ, ಸತ್ಯಾಸತ್ಯತೆ ತಿಳಿಯಲು ಸಿಐಡಿ ತನಿಖೆಗೆ ಆದೇಶ ಮಾಡಿದ್ದೇನೆ. ಸಭಾಪತಿ ತಮ್ಮ ಕೆಲಸ ಮಾಡಿದ್ದಾರೆ, ಪೊಲೀಸರು ತನಿಖೆ ಮಾಡಬೇಕು ಎಂದರು.
ಹಳೇಹುಬ್ಬಳ್ಳಿ ಠಾಣೆ ಇನ್ಸ್ಪೆಕ್ಟರ್ ವಿರುದ್ಧ ಮಹಿಳಾ ಸಿಬ್ಬಂದಿ ಪತ್ರ ಬರೆದ ವಿಚಾರವಾಗಿ ಮಾತನಾಡಿದ ಅವರು, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳ ಬಳಿ ವರದಿ ತರಸಿಕೊಳ್ಳುತ್ತೇನೆ. ತಪ್ಪು ಮಾಡಿದ್ದೇರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಸಿಟಿ ರವಿ ಕೇಸ್ ಬೆಳೆಸುವುದು ಬೇಡವೆಂದು ಸಿಎಂ, ಗೃಹ ಸಚಿವರು ಹೇಳಿಲ್ವಾ? ವಿ ಸೋಮಣ್ಣ ಹೊಸ ಬಾಂಬ್
ಅಸಮರ್ಥ ಗೃಹ ಸಚಿವ ಎಂಬ ಪ್ರಹ್ಲಾದ್ ಜೋಶಿ ಹೇಳಿಕೆಗೆ ಡಾ.ಜಿ.ಪರಮೇಶ್ವರ್ ತಿರುಗೇಟು ನೀಡಿದರು. ಪ್ರಹ್ಲಾದ್ ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ. ನಾನು ಜೋಶಿ ಅವರನ್ನು ಅಸಮರ್ಥ ಕೇಂದ್ರ ಸಚಿವ ಎಂದು ಹೇಳಬಹುದು. ಆದರೆ, ಅದು ಎಷ್ಟು ಸಮಂಜಸ ಹೇಳಿ? ಎಂದರು.
ಬೆಳಗಾವಿಯಲ್ಲಿ ಎಐಸಿಸಿ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ಮಾಡುತ್ತಿದ್ದೇವೆ. ಗಾಂಧೀಜಿ ಮೊದಲ ಬಾರಿಗೆ ಎಐಸಿಸಿ ಅಧ್ಯಕ್ಷರಾಗಿ ನೂರು ವರ್ಷ ಕಳೆದಿದೆ. ಕಾರ್ಯಕ್ರಮದಲ್ಲಿ ಇಡೀ ಕಾಂಗ್ರೆಸ್ ಸಮುದಾಯ ಭಾಗಿಯಾಗುತ್ತೆ. ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಭಾಗಿಯಾಗಲಿದ್ದಾರೆ. ಇದೊಂದು ಐತಿಹಾಸಿಕ ಕಾರ್ಯಕ್ರಮ ಎಂದ ಹೇಳಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದ ಕೊನೆಯ ದಿನ ಗುರುವಾರ (ಡಿ.19) ರಂದು ವಿಧಾನ ಪರಿಷತ್ನಲ್ಲಿ ಎಂಎಲ್ಸಿ ಸಿಟಿ ರವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರ ಸದ್ಯ ದೇಶಾದ್ಯಂತ ಚರ್ಚೆಯಾಗುತ್ತಿದೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ