ಧಾರವಾಡ, ಅಕ್ಟೋಬರ್ 13: ನವಲಗುಂದ (Navalagund) ತಾಲೂಕಿನಲ್ಲಿ ಹರಿಯುವ ಬೆಣ್ಣೆ ಹಳ್ಳ (Bennihalla) ನದಿಯಂತೆಯೇ ಭೋರ್ಗರೆಯುತ್ತೆ. ಪ್ರತಿವರ್ಷ ಮಳೆಗಾಲದಲ್ಲಿ ಈ ಹಳ್ಳ ಉಂಟು ಮಾಡುವ ಅವಾಂತರಗಳು ಒಂದೆರಡಲ್ಲ. ಬೆಣ್ಣೆ ಹಳ್ಳ ಹಲವಾರು ಗ್ರಾಮಗಳ ಪಕ್ಕದಲ್ಲಿ ಹರಿದು ಹೋಗುತ್ತೆ. ನವಲಗುಂದ ತಾಲೂಕಿನ ಕಾಲವಾಡ ಗ್ರಾಮದ ಬಳಿಯೂ ಹರಿಯುತ್ತೆ. ಇಲ್ಲಿ ಈ ಹಳ್ಳಕ್ಕೆ ಯಮನಿ ಹಳ್ಳವೂ ಬಂದು ಸೇರುತ್ತೆ.
ಸಂಗಮ ಸ್ಥಳದಲ್ಲಿ ಕಳ್ಳಿ ಬಸವೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನಕ್ಕೆ ಎಂದಿನಂತೆ ಗ್ರಾಮದ ಲಕ್ಷ್ಮಣ ಬಾರಕೇರ್ ಎಂಬುವರು ಎರಡು ದಿನಗಳ ಹಿಂದೆ ಹೋಗಿದ್ದರು. ಲಕ್ಷ್ಮಣ ಅವರು ದೇವಸ್ಥಾನಕ್ಕೆ ಹೋಗುವಾಗ ಬುತ್ತಿ ಕಟ್ಟಿಕೊಂಡು ಹೋಗಿದ್ದರು. ಲಕ್ಷ್ಮಣ ಅವರು ದೇವಸ್ಥಾನಕ್ಕೆ ಹೋಗುತ್ತಲೇ ಮಳೆಯ ಪ್ರಮಾಣ ಹೆಚ್ಚಾಗಿ, ಹಳ್ಳ ದೇವಸ್ಥಾನವನ್ನು ಸುತ್ತುವರೆದಿದೆ.
ಲಕ್ಷ್ಮಣ ಅವರು ದೇವಸ್ಥಾನಕ್ಕೆ ಹೋಗಿದ್ದು ಯಾರಿಗೂ ಗೊತ್ತಿರಲಿಲ್ಲ. ಲಕ್ಷ್ಮಣ ಅವರು ಮಾನಸಿಕ ಅಸ್ವಸ್ಥನಾಗಿದ್ದರಿಂದ ಮನೆಯವರು ಮತ್ತು ಗ್ರಾಮಸ್ಥರು ಅವರ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ. ಎರಡು ದಿನಗಳ ಬಳಿಕ ಶನಿವಾರ ಬೆಳಗ್ಗೆ ಹಳ್ಳದ ನೀರು ಸಲ್ಪ ಕಡಿಮೆಯಾಗಿದೆ. ಲಕ್ಷ್ಮಣ ಅವರು ದೇವಸ್ಥಾನದ ಬಳಿ ಕಾಣಿಸಿಕೊಂಡಿದ್ದಾರೆ. ಲಕ್ಷ್ಮಣ ಅವರನ್ನು ಕಂಡ ಗ್ರಾಮಸ್ಥರು, ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ.
ವಿಚಾರ ತಿಳಿದು ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದರು. ಆದರೆ ರಕ್ಷಣಾ ಕಾರ್ಯಕ್ಕೆ ಹಳ್ಳದಲ್ಲಿನ ಮುಳ್ಳು-ಕಂಟಿ ಅಡ್ಡಿಯಾದವು. ಅಗ್ನಿಶಾಮಕ ದಳ ಸಿಬ್ಬಂದಿ ಬಳಿ ಇರುವ ಬಲೂನು ಹಡಗುಗಳು ಹಳ್ಳದಲ್ಲಿರುವ ಮುಳ್ಳಿಗೆ ತಾಗಿದರೆ ಪಂಕ್ಚರ್ ಆಗುವ ಸಾಧ್ಯತೆ ಇತ್ತು. ಹೀಗಾಗಿ ಕಾರ್ಯಾಚರಣೆ ವಿಧಾನವನ್ನು ಕೊಂಚ ಬದಲಾಯಿಸಿ, ನುರಿತ ಈಜುಗಾರರನ್ನು ಕರೆಯಿಸಿ ಕಾರ್ಯಾಚರಣೆ ಮುಂದುವರೆಸಲಾಯಿತು.
ಇದನ್ನೂ ಓದಿ: ಬೆಣ್ಣೆಹಳ್ಳದಲ್ಲಿ ನೋಡ ನೋಡುತ್ತಲೇ ಕೊಚ್ಚಿ ಹೋದ ಸಾಕುನಾಯಿಗಳು; ಹೂಳು ಎತ್ತದ ಕಾರಣ ಹೆಚ್ಚುತ್ತಿದೆ ಅನಾಹುತ
ಆದರೆ ಅವರಿಗೂ ದೇವಸ್ಥಾನದ ಬಳಿಗೆ ಮುಟ್ಟಲು ಸಾಧ್ಯವಾಗಲಿಲ್ಲ. ಕೊನೆಗೆ ಬೋಟ್ ಮೂಲಕ ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಯಿತು. ಆದರೆ ಮೊದಲಿಗೆ ತಂದ ಸಣ್ಣ ಬೋಟ್ನಿಂದಲೂ ಲಕ್ಷ್ಮಣ ಅವರ ಬಳಿ ತಲುಪಲು ಸಾಧ್ಯವಾಗಲಿಲ್ಲ. ಹೀಗಾಗಿ ನವಲಗುಂದದಿಂದ ದೊಡ್ಡ ಬೋಟ್ ತರಿಸಿ, ಕೊನೆಗೂ ಲಕ್ಷ್ಮಣ ಅವರನ್ನು ರಕ್ಷಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾದರು.
ಪ್ರತಿವರ್ಷ ಈ ಗ್ರಾಮದ ಬಳಿಯೇ ಇಂಥ ಅನಾಹುತಗಳು ಆಗುತ್ತವೆ. ಕೆಲ ವರ್ಷಗಳ ಹಿಂದೆ ಇದೇ ಪ್ರದೇಶದಲ್ಲಿ ಎಂಟು ಜನರು ಸಿಲುಕಿಕೊಂಡಿದ್ದರು. ಆಗಲೂ ಇಂಥದ್ದೇ ಕಾರ್ಯಾಚರಣೆ ಮೂಲಕ ಅವರನ್ನು ರಕ್ಷಿಸಲಾಗಿತ್ತು. ಇದೀಗ ಮತ್ತೊಮ್ಮೆ ಅದೇ ರೀತಿಯ ಘಟನೆ ನಡೆದಿದೆ. ಒಟ್ಟಿನಲ್ಲಿ ಬೆಣ್ಣಿಹಳ್ಳದಿಂದ ಇಂಥ ಘಟನೆಗಳು ನಡೆಯುತ್ತಲೇ ಇದ್ದು, ಇಂಥ ಘಟನೆಗಳು ಮರುಕಳಿಸದಂತೆ ಜಿಲ್ಲಾಡಳಿತ ಯಾವುದಾದರೂ ಒಂದು ವ್ಯವಸ್ಥೆ ಮಾಡಬೇಕಾದ ಅವಶ್ಯಕತೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ