ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆದಿರುವುದಕ್ಕೆ ಸ್ಪಷ್ಟ ಕಾರಣ ಕೊಟ್ಟ ಸಿಎಂ
ಬಿಜೆಪಿ ಕಾಂಗ್ರೆಸ್ ಮಧ್ಯೆ ಮತ್ತೊಂದು ಯುದ್ಧ ಶುರುವಾಗುತ್ತಿದೆ. ಮುಡಾ ಅಕ್ರಮ, ವಾಲ್ಮೀಕಿ ನಿಗಮ ಹಗರಣದ ಬಳಿಕ ಸರ್ಕಾರ ತೆಗೆದುಕೊಂಡು ಒಂದು ನಿರ್ಧಾರ ಬಿಜೆಪಿಗರನ್ನ ಕೆರಳಿಸಿದೆ. ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆದಿದ್ದಕ್ಕೆ ಸಿಡಿದೆದ್ದಿರುವ ಕೇಸರಿ ಪಡೆ, ಬೃಹತ್ ಹೋರಾಟಕ್ಕೆ ಪ್ಲ್ಯಾನ್ ಮಾಡುತ್ತಿದೆ. ಇವತ್ತು ಕೂಡಾ ಕಾಂಗ್ರೆಸ್ ನಾಯಕರ ಮೇಲೆ ಬೆಂಕಿಯುಗುಳಿದ ಬಿಜೆಪಿ ನಾಯಕರು, ವಾಗ್ದಾಳಿ ನಡೆಸಿದ್ದಾರೆ. ಮತ್ತೊಂದೆಡೆ ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆದಿರುವುದಕ್ಕೆ ಸ್ಪಷ್ಟ ಕಾರಣದೊಂದಿಗೆ ಬಿಜೆಪಿಗರಿಗೆ ತಿರುಗೇಟು ನೀಡಿದ್ದಾರೆ.
ಹುಬ್ಬಳ್ಳಿ, (ಅಕ್ಟೋಬರ್ 13): ಸಿದ್ದರಾಮಯ್ಯ ಸರ್ಕಾರ ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆಯಲು ತೀರ್ಮಾನಿಸಿದೆ. ಇದರ ಬೆನ್ನಲ್ಲೇ ಇದಕ್ಕೆ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದು, ಸರ್ಕಾರದ ನಡೆ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ಮಾಡಲು ಚಿಂತನೆ ನಡೆಸಿದೆ. ಇನ್ನು ಬಿಜೆಪಿ ನಾಯಕರ ಟೀಕೆಗಳಿಗೆ ಇಂದು(ಅಕ್ಟೋಬರ್ 13) ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಸುಳ್ಳು ಕೇಸ್ ಇದ್ದಿದ್ದರಿಂದ ಉದ್ದೇಶಪೂರ್ವಕವಾಗಿ ಮೊಕದ್ದಮೆ ಹಾಕಿದ್ದಾರೆ. ಹೋರಾಟ ಮಾಡಿದಾಗ ಕೇಸ್ ಹಾಕಿದ್ದರೆ ವಾಪಸ್ ತೆಗೆದುಕೊಳ್ಳುವ ಅವಕಾಶವಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರ ಹಳೆ ಹುಬ್ಬಳ್ಳಿ ಗಲಭೆ ಕೇಸ್ ಹಿಂಪಡೆದ ವಿಚಾರವಾಗಿ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುಳ್ಳು ಕೇಸ್ ಇದ್ದಿದ್ದರಿಂದ ಉದ್ದೇಶಪೂರ್ವಕವಾಗಿ ಮೊಕದ್ದಮೆ ಹಾಕಿದ್ದಾರೆ. ಹೋರಾಟ ಮಾಡಿದಾಗ ಕೇಸ್ ಹಾಕಿದ್ದರೆ ವಾಪಸ್ ತೆಗೆದುಕೊಳ್ಳುವ ಅವಕಾಶವಿದೆ. ಎಲ್ಲರ ಕಾಲದಲ್ಲೂ ಪ್ರಕರಣ ವಾಪಸ್ ಪಡೆದ ಉದಾಹರಣೆಗಳಿವೆ. ಸುಳ್ಳು ಕೇಸ್ ಇದೆ ಎಂಬ ಕಾರಣಕ್ಕೆ ವಾಪಸ್ ಪಡೆಯಲಾಗಿದೆ. ಕೋರ್ಟ್ ಅವಕಾಶ ಕೊಟ್ಟರೆ ಮಾತ್ರ ಕೇಸ್ ಹಿಂಪಡೆಯುತ್ತೇವೆ. ನಮ್ಮ ಕ್ಯಾಬಿನೆಟ್ ನಿರ್ಧಾರವನ್ನು ನ್ಯಾಯಾಲಯಕ್ಕೆ ತಿಳಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದ ಕಾಂಗ್ರೆಸ್ ಸರ್ಕಾರ; ಕಿಡಿಕಾರಿದ ಬಿಜೆಪಿ ನಾಯಕರು
ನ್ಯಾಯಾಲಯ ಒಪ್ಪಿದರೆ ಮಾತ್ರ ಕೇಸ್ ವಾಪಸ್ ಆಗುತ್ತದೆ. ಸುಖಾ ಸುಮ್ಮನೆ ಬಿಜೆಪಿಯವರು ಪ್ರತಿಭಟನೆ ಮಾಡುತ್ತಾರೆ. ಸಂಪುಟ ಸಭೆಯಲ್ಲಿ ಹುಬ್ಬಳ್ಳಿ ಗಲಭೆ ಕೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 43 ಕೇಸ್ ಗಳನ್ನು ಹಿಂಪಡೆಯಲಾಗಿದೆ.ಆದರೆ ಬಿಜೆಪಿ ಸುಮ್ಮನೆ ಪ್ರತಿಭಟನೆ ಮಾಡುತ್ತಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಸಿಎಂಗೆ ‘ಕಪ್ಪುಪಟ್ಟಿ’ ಪ್ರದರ್ಶನ
ರಾಜ್ಯ ಸರ್ಕಾರ ಹಳೆ ಹುಬ್ಬಳ್ಳಿ ಗಲಭೆ ಕೇಸ್ ಹಿಂಪಡೆದ ವಿಚಾರವಾಗಿ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಇಂದು ಸಿಎಂ ಸಿದ್ದರಾಮಯ್ಯ ಕಾರಿಗೆ ಬಿಜೆಪಿ ಕಾರ್ಯಕರ್ತರು ಕಪ್ಪು ಬಟ್ಟೆ ಪ್ರದರ್ಶಿಸಿದರು. ಹುಬ್ಬಳ್ಳಿಯ ಗೋಕುಲ್ ರೋಡ್ ನಲ್ಲಿ ಕಪ್ಪು ಬಟ್ಟೆ ಪ್ರದರ್ಶಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಿಜೆಪಿ ಕಾರ್ಯಕರ್ತರಾದ ಜಗದೀಶ್ ಕಂಬಳಿ, ಮಂಜುನಾಥ್ ಮತ್ತು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ