AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವಲಗುಂದದ ಬಹುತೇಕ ಕೆರೆಗಳ ನೀರು ಕುಡಿಯಲು ಯೋಗ್ಯವಲ್ಲ: ವರದಿಯಲ್ಲಿ ಬಹಿರಂಗ

ಎಲ್ಲ ಜೀವಿಗಳಿಗೂ ನೀರು ಬೇಕು. ಅದರಲ್ಲೂ ಮನುಷ್ಯನಿಗೆ ಕುಡಿಯುವ ನೀರು ಶುದ್ಧವಾಗಿರಲೇಬೇಕು. ಆದರೆ ಇದೀಗ ಧಾರವಾಡ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಸಿಗುತ್ತಿರುವ ನೀರು ಕುಡಿಯಲು ಯೋಗ್ಯವಿಲ್ಲ ಅಂತ ತಿಳಿದುಬಂದಿದೆ. ಇದರಿಂದಾಗಿ ಕುಡಿಯುವ ನೀರು ಗ್ರಾಮೀಣ ಭಾಗದ ಜನರ ಜೀವದ ಜೊತೆಗೆ ಚೆಲ್ಲಾಟವಾಡುತ್ತಿದೆ. ಈ ಬಗ್ಗೆ ವರದಿ ಇಲ್ಲಿದೆ.

ನವಲಗುಂದದ ಬಹುತೇಕ ಕೆರೆಗಳ ನೀರು ಕುಡಿಯಲು ಯೋಗ್ಯವಲ್ಲ: ವರದಿಯಲ್ಲಿ ಬಹಿರಂಗ
ಕಲುಷಿತಗೊಂಡ ಕೆರೆ ನೀರನ್ನೇ ತೆಗೆದುಕೊಂಡು ಹೋಗುತ್ತಿರುವ ಯುವಕ
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Edited By: |

Updated on:Aug 14, 2025 | 7:44 PM

Share

ಧಾರವಾಡ, ಆಗಸ್ಟ್​ 14: ನವಲಗುಂದ (Navalgund) ತಾಲೂಕಿನ ಅನೇಕ ಗ್ರಾಮಗಳ ಕೆರೆಗಳ ನೀರು ಕುಡಿಯಲು ಯೋಗ್ಯವಲ್ಲ ಎಂದು ಆರೋಗ್ಯ ಇಲಾಖೆ (Health Department) ವರದಿ ನೀಡಿದೆ. ಇದರಿಂದಾಗಿ ಜನರು ಆತಂಕಗೊಂಡಿದ್ದಾರೆ. ನವಲಗುಂದ ತಾಲೂಕಿನ ತಡಹಾಳ ಗ್ರಾಮದಲ್ಲಿರುವ ಕೆರೆಗೆ ಸುತ್ತಮುತ್ತಲಿನ ತಾಜ್ಯ ನೀರು ಸೇರುತ್ತದೆ. ಇದರಿಂದ ಕೆರೆ ಕಲುಷಿತಗೊಂಡಿದೆ. ಈ ಗ್ರಾಮದ ಕೆರೆ ನೀರು ಶುದ್ಧಗೊಳಿಸಲು ಫಿಲ್ಟರ್ ಇದ್ದರೂ ಅದು ಕೆಲಸ ಮಾಡುತ್ತಿಲ್ಲ. ಪಕ್ಕದ ಗ್ರಾಮಕ್ಕೆ ಹೋಗಿ ನೀರು ತರಬೇಕೆಂದರೆ ಅಲ್ಲಿನ ಸೇತುವೆ ಕುಸಿದು ಹೋಗಿದೆ. ಇದರಿಂದಾಗಿ ಜನರು ಇದೇ ನೀರನ್ನು ಅನಿವಾರ್ಯವಾಗಿ ಕುಡಿಯುವ ಸ್ಥಿತಿ ನಿರ್ಮಾಣವಾಗಿದೆ.

ಇತ್ತೀಚಿಗಷ್ಟೇ ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗನೂರ ಹಾಗೂ ಗುಡಿಸಾಗರ ಗ್ರಾಮದ ಕೆರೆ ನೀರನ್ನು ಧಾರವಾಡದ ಸರ್ವೇಕ್ಷಣಾ ಘಟಕದ ಜಿಲ್ಲಾ ಪ್ರಯೋಗಾಲಯ ಪರೀಕ್ಷಿಸಿತ್ತು.  ಈ ಗ್ರಾಮಗಳ ಕೆರೆಗಳ ನೀರು ಕುಡಿಯಲು ಯೋಗ್ಯವಿಲ್ಲ ಎಂದು ವರದಿ ಬಂದಿತ್ತು. ಆದರೂ ಗ್ರಾಮ ಪಂಚಾಯತಿ ಇದೇ ಕೆರೆಗಳ ನೀರನ್ನು ಪೂರೈಕೆ ಮಾಡಿ, ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.

“ಇಂತಹ ಕೆರೆಗಳ ನೀರಿನ್ನು ಶುದ್ಧೀಕರಣ ಮಾಡುವ ಘಟಕಗಳನ್ನು ಸರಿಪಡಿಸಿ, ಮತ್ತೆ ನೀರನ್ನು ಪರೀಕ್ಷಿಸಲಾಗಿದೆ. ಇದೀಗ ಆ ಗ್ರಾಮಗಳ ಕೆರೆಗಳ ನೀರು ಕುಡಿಯಲು ಯೋಗ್ಯವಾಗಿವೆ ಎಂದು ವರದಿ ಬಂದಿದೆ. ಇದೀಗ ಕೆರೆಗಳ ನೀರಿನ ಬಗ್ಗೆ ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಪ್ರತಿ ತಿಂಗಳು ಕನಿಷ್ಠ 1300 ನೀರಿನ ಮಾದರಿಗಳನ್ನು ಪರೀಕ್ಷೆ ಮಾಡಲಾಗುತ್ತಿದೆ. ಪರೀಕ್ಷೆಯಲ್ಲಿ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದ ಕೂಡಲೇ ಆಯಾ ಗ್ರಾಮ ಪಂಚಾಯತಿಗಳ ಅಧಿಕಾರಿಗಳಿಗೆ ವಿಷಯ ತಿಳಿಸಲಾಗುತ್ತದೆ. ಈ ಬಗ್ಗೆ ಜಲಮಂಡಳಿ ಅಧಿಕಾರಿಗಳಿಗೂ ಮಾಹಿತಿ ನೀಡಲಾಗುತ್ತಿದೆ” ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಸ್. ಎಂ. ಹೊನಕೇರಿ ಹೇಳಿದರು.

ಇದನ್ನೂ ಓದಿ: ಬೆಂಗಳೂರು ಟು ಗೋವಾ: ಮಧುಚಂದ್ರಕ್ಕೆ ಕರೆದೊಯ್ದು ಪ್ರೇಯಿಸಿ ಹತ್ಯೆಗೈದ ಪ್ರಿಯಕರ

ಕುಡಿಯುವ ನೀರು ಶುದ್ಧವಾಗಿದ್ದರೆ ಅದರಿಂದ ಸಾಕಷ್ಟು ರೋಗ ರುಜಿನಗಳನ್ನು ತಡೆಯಬಹುದು. ಆದರೆ ಅದೇ ಅಶುದ್ಧವಾದರೆ ಜನರ ಗತಿಯೇನು ಅನ್ನೋ ಪ್ರಶ್ನೆ ಎದುರಾಗಿದೆ. ಇದೀಗ ಜಿಲ್ಲೆಯಾದ್ಯಂತ ಮಳೆ ನಿರಂತರವಾಗಿ ಸುರಿಯುತ್ತಲೇ ಇದೆ. ಇದರಿಂದಾಗಿ ಕೆರೆಗಳಿಗೆ ಅಕ್ಕಪಕ್ಕದ ನೀರು ಹರಿದು ಬಂದು, ಅವು ಕಲುಷಿತಗೊಳ್ಳುತ್ತಿವೆ. ಇಂಥ ವೇಳೆ ಜಿಲ್ಲಾಡಳಿತ ಶುದ್ಧ ಕುಡಿಯುವಿ ನೀರು ಪೂರೈಸುವತ್ತ ಗಮನ ಹರಿಸಬೇಕು. ಇಲ್ಲವಾದರೆ ಜನರು ಅನಾರೋಗ್ಯದಿಂದ ಬಳಲಿ, ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇದೆ. ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಗಮನ ಹರಿಸಲಿ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:41 pm, Thu, 14 August 25