ಹಣ ತೋರಿಸಿ ಬಳಿಕ ಪೇಪರ್ ಬಂಡಲ್ ಕೊಟ್ಟು ಮಾಜಿ ಯೋಧನಿಗೆ ಪಂಗನಾಮ

ಜಮೀನು ವ್ಯವಹಾರಕ್ಕೆ ಸಂಬಂಧಿಸಿದಂತೆ ಕೊಡಬೇಕಿದ್ದ ಹಣದ ಕಂತೆಯನ್ನು ಮೊದಲು ತೋರಿಸಿ, ಆ ಬಳಿಕ ಪೇಪರ್​ಗಳಿರುವ ಬಂಡಲ್​ನ್ನೇ ಹಣ ಅಂತ ಕೊಟ್ಟು ಮಾಜಿ ಯೋಧ ಸೇರಿದಂತೆ ಐವರಿಗೆ ವಂಚಿಸಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ಉಪನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಹಣ ತೋರಿಸಿ ಬಳಿಕ ಪೇಪರ್ ಬಂಡಲ್ ಕೊಟ್ಟು ಮಾಜಿ ಯೋಧನಿಗೆ ಪಂಗನಾಮ
ಉಪ ನೋಂದಣಿ ಕಚೇರಿ
Updated By: ವಿವೇಕ ಬಿರಾದಾರ

Updated on: Jun 20, 2025 | 10:26 PM

ಧಾರವಾಡ, ಜೂನ್​ 20: ಹಣ ಎಂದು ಪೇಪರ್ ಬಂಡಲ್ ಕೊಟ್ಟು ಮಾಜಿ ಯೋಧ (Former Soldier) ಸೇರಿದಂತೆ ಐವರಿಗೆ ವಂಚಿಸಿರುವ ಘಟನೆ ಧಾರವಾಡ (Dharwad) ಉಪ ನೋಂದಣಿ ಕಚೇರಿ ಆವರಣದಲ್ಲಿ ನಡೆದಿದೆ. ಮಾಜಿ ಯೋಧ ಸುರೇಶ ತಡಕೋಡ, ಧರ್ಮೇಂದ್ರ ರಾಯನಗೌಡರ ಹಾಗೂ ಸುರೇಶ ಬಳಗೇರ ವಂಚನೆಗೆ ಒಳಗಾದವರು. ಇವರು ಧಾರವಾಡ ತಾಲೂಕಿನ ಶಿವಳ್ಳಿಯ ಸುವರ್ಣಾ ಮುದ್ದಿ ಎಂಬುವವರಿಂದ 6 ಎಕರೆ ಜಮೀನು ಖರೀದಿಗೆ ಮುಂದಾಗಿ, 2023ರಲ್ಲಿ ಇದಕ್ಕೆ ಸಂಬಂಧಿಸಿದಂತೆ ಖರೀದಿ ಒಪ್ಪಂದ ಕೂಡ ಮಾಡಿಕೊಂಡು 24 ಲಕ್ಷ ರೂಪಾಯಿ ಕೊಟ್ಟಿದ್ದರು. ಆದರೆ, ಜಮೀನು ದರ ಹೆಚ್ಚಾಗಿದ್ದರಿಂದ ಸುವರ್ಣಾ ಮುದ್ದಿ ಜಮೀನು ಮಾರಲು ಹಿಂದೇಟು ಹಾಕಿದ್ದು, ಖರೀದಿ ಒಪ್ಪಂದ ರದ್ದು ಮಾಡಿಕೊಳ್ಳೋಣ ಎಂದಿದ್ದರು.

ಹೀಗಾಗಿ, ಐದು ಲಕ್ಷ ರೂಪಾಯಿ ಸಹ ಮರಳಿ ಕೊಟ್ಟು, ಉಳಿದ 19 ಲಕ್ಷ ರೂಪಾಯಿ ಒಪ್ಪಂದ ರದ್ದತಿಗೆ ಸಹಿಯಾದ ಬಳಿಕ ಕೊಡುವ ಮಾತಾಗಿತ್ತು. ಅದರಂತೆ ಇವತ್ತು ಸುವರ್ಣಾ ಮುದ್ದಿ, ಮಗಳು ದಾನೇಶ್ವರಿ ಧಾರವಾಡ ಉಪನೋಂದಣಿ ಕಚೇರಿಗೆ ಬಂದಿದ್ದರು. ಈ ವೇಳೆ ಇವರಿಗೆ ಹಣ ತೋರಿಸಿ, ಸಹಿ ಮಾಡಿದ ಮೇಲೆ ಹಣದ ಬಂಡಲ್ ಕೊಡುವುದಾಗಿ ಹೇಳಿದ್ದಾರೆ.

ಅದರಂತೆ ಸಹಿ ಮಾಡಿ ಹೊರಗೆ ಬಂದಾಗ, ಹಣದ ಬಂಡಲ್ ಸಹ ಕೊಟ್ಟಿದ್ದಾರೆ. ಆದರೆ ಕಾರಿನಲ್ಲಿ ಬಂದು ಹಣದ ಬಂಡಲ್ ತೆಗೆದು ನೋಡಿದಾಗ ಶಾಕ್ ಆಗಿದೆ. ಏಕೆಂದರೆ 1 ಲಕ್ಷ 20 ಸಾವಿರ ಹಣ ಮಾತ್ರ ಕರೆನ್ಸಿ ಇದ್ದರೇ ಉಳಿದೆಲ್ಲವೂ ಹಾಳೆಗಳನ್ನು ನೋಟಿನಂತೆ ಕಟ್ ಮಾಡಿ ಬಂಡಲ್ ನೀಡಿ ಮೋಸ ಮಾಡಿದ್ದಾರೆ ಎಂಬುವುದು ಸುರೇಶ ತಡಕೋಡ ಮತ್ತು ತಂಡದ ಆರೋಪವಾಗಿದೆ.

ಇದನ್ನೂ ಓದಿ
ಹಠ ಮಾಡುತ್ತೆಂದು ಮಗುವಿನ ಮುಖ,ಅಂಗಾಲಿಗೆ ಬರೆ: ಹೆತ್ತವಳಿಂದ ಇದೆಂಥಾ ಕೃತ್ಯ
ಕೊನೆಗೂ ಹುಬ್ಬಳ್ಳಿ ವಿವಾದಿತ ಈದ್ಗಾ ಮೈದಾನದ ಕಂಪೌಂಡ್ ತೆರವು
ಪತಿ ಮನೆಯಿಂದ ಮಗಳನ್ನು ಎತ್ತಿಕೊಂಡು ಹೋದ ಹೆತ್ತವರು, ಮುಂದೇನಾಯ್ತು?
ಗಂಡನ ಮನೆಯಿಂದ ಮಗಳನ್ನ ಹೊತ್ತೊಯ್ದ ಪೋಷಕರು, ಮುಂದೇನಾಯ್ತು?

ಎರಡು ಕಡೆಯ ಪಾರ್ಟಿಗಳು ಉಪ ನೋಂದಣಿ ಕಚೇರಿಗೆ ಬಂದಾಗ, ಮುದ್ದಿ ಮನೆಯವರು ಹಣದ ಬಂಡಲ್ ಗಳನ್ನು ಇವರಿಗೆ ತೋರಿಸಿದ್ದಾರೆ. ಅದರಲ್ಲಿ ಒಂದಷ್ಟು ಹಣ ಇರೋದನ್ನೇ ತೋರಿಸಿದ್ದಾರೆ. ಮೊದಲು ಸಹಿ ಮಾಡಿ ಬರೋಣ. ಆ ಬಳಿಕ ಹಣವನ್ನು ಕೊಡುತ್ತೇವೆ ಅಂತಾನೂ ಹೇಳಿದ್ದಾರೆ. ಹೀಗಾಗಿ, ಖರೀದಿ ಒಪ್ಪಂದ ರದ್ದತಿ ದಾಖಲೆಗಳಿಗೆ ಸಹಿ ಮಾಡಿ ಹೊರಗೆ ಬಂದಿದ್ದಾರೆ. ಆಗ ದಾನೇಶ್ವರಿ ಮುದ್ದಿ, ವಾಶ್ ರೂಮ್​ಗೆ ಹೋಗಿ ಬರುವುದಾಗಿ ಕೆಲ ಹೊತ್ತು ಹೋಗಿ ಮರಳಿ ಬಂದಿದ್ದಾರೆ. ಮೊದಲು ತೋರಿಸಿದ್ದ ಬ್ಯಾಗ್​ನಿಂದಲೇ ಹಣದ ಬಂಡಲ್​ಗಳನ್ನು ತೆಗೆದು ಕೊಟ್ಟಿದ್ದಾರೆ. ಇವರು ಅವುಗಳನ್ನು ಕಾರಿನಲ್ಲಿ ಇಟ್ಟು, ಓಪನ್ ಮಾಡಿ ನೋಡುತ್ತಿದ್ದಂತೆಯೇ ಹಣದ ಬದಲಿಗೆ ಪೇಪರ್ ಹಾಳೆಗಳು ಇರುವುದು ಗೊತ್ತಾಗಿದೆ. ಆ ಕ್ಷಣವೇ ಮುದ್ದಿ ಕುಟುಂಬದವರು ಅಲ್ಲಿಂದ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಹತ್ತಾರು ದೇವರಿಗೆ ಹರಕೆ ಹೊತ್ತ ಬಳಿಕ ಹುಟ್ಟಿದ ಮಗಳ ಸಾವು: ಮದ್ವೆ ಮನೆಯಲ್ಲಿ ಆಗಿದ್ದೇನು?​

ಸದ್ಯ ಹಣದ ಬಂಡಲ್ ಎಂದು ನಂಬಿ ಮೋಸ ಹೋಗಿರುವ ಈ ಮೂವರೂ ಈಗ ಧಾರವಾಡ ಉಪನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಕಾರಿನಲ್ಲಿರುವ ಪೇಪರ್ ಹಾಳೆಯ ಬಂಡಲ್​ಗಳನ್ನು ಪರಿಶೀಲನೆ ಸಹ ಮಾಡಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದಂತೆ ಉಪನಗರ ಠಾಣೆಯಲ್ಲಿ ವಂಚನೆಯ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ